37. ಕರ್ನಲ್ ಸ್ಯಾಂಡರ್ಸ್ನ ಕೆ.ಎಫ್.ಸಿ. ಯಶೋಗಾಥೆ
ಬಾಲಕ ಹರ್ಲಾಂಡ್ ಸ್ಯಾಂಡರ್ಸ್ನ ತಂದೆ ತೀರಿಕೊಂಡಾಗ ಅವನಿಗೆ ಕೇವಲ ಆರು ವರುಷ ವಯಸ್ಸು. ಅವನ ತಾಯಿ ಕೆಲಸಕ್ಕೆ ಹೋಗುತ್ತಿದ್ದಳು. ಆಗ ಮೂರು ವರುಷದ ತಮ್ಮ ಮತ್ತು ಪುಟ್ಟ ತಂಗಿಯನ್ನು ಹರ್ಲಾಂಡ್ ಸ್ಯಾಂಡರ್ಸ್ ನೋಡಿಕೊಳ್ಳುತ್ತದ್ದ. ಆ ಸಮಯದಲ್ಲಿಯೇ ಅವನು ಚೆನ್ನಾಗಿ ಅಡುಗೆ ಮಾಡಲು ಕಲಿತುಕೊಂಡ. ಯೌವನದಲ್ಲಿ ಸಣ್ಣಪುಟ್ಟ ಕೆಲಸಗಳನ್ನು ಮಾಡಿದ ಸ್ಯಾಂಡರ್ಸ್, ಅನಂತರ ಸೈನ್ಯ ಸೇರಿದ. ಅಲ್ಲಿ ಶ್ರದ್ಧೆಯಿಂದ ಸೇವೆ ಸಲ್ಲಿಸಿ ಕರ್ನಲ್ ಹುದ್ದೇಗೇರಿದ.
ತದನಂತರ ಸೈನ್ಯ ತೊರೆದ ಕರ್ನಲ್ ಸ್ಯಾಂಡರ್ಸ್ ತನ್ನ 40ನೆಯ ವಯಸ್ಸಿನಲ್ಲಿ ಹೆದ್ದಾರಿಯ ಪಕ್ಕದಲ್ಲಿ ಹೋಟೆಲ್ ತೆರೆದು ಪ್ರಯಾಣಿಕರಿಗೆ ಆಹಾರ ಮಾರತೊಡಗಿದ. ಹೆಚ್ಚೆಚ್ಚು ಗ್ರಾಹಕರು ಅವನ ಹೋಟೆಲಿಗೆ ಬರತೊಡಗಿದಾಗ, ತನ್ನ ವ್ಯವಹಾರ ವಿಸ್ತರಿಸಿದ. ಮುಂದಿನ ಒಂಭತ್ತು ವರುಷ ಅವನ ವ್ಯವಹಾರ ಚೆನ್ನಾಗಿ ನಡೆಯಿತು. ಯಾಕೆಂದರೆ, ಅವನು ಹನ್ನೊಂದು ಮೂಲಿಕೆಗಳು ಮತ್ತು ಸಾಂಬಾರಪದಾರ್ಥಗಳನ್ನು ಬಳಸಿ ತಯಾರಿಸಿದ ಆಹಾರ ಬಹಳ ರುಚಿಯಾಗಿದ್ದು, ಜನಪ್ರಿಯವಾಯಿತು.
ಆದರೆ, ಹೊಸ ಹೆದ್ದಾರಿ ನಿರ್ಮಾಣದ ಕೆಲಸ ಶುರುವಾದ ಕಾರಣ ಕರ್ನಲ್ ಸ್ಯಾಂಡರ್ಸ್ ತನ್ನ ಹೋಟೆಲನ್ನು ಮುಚ್ಚಬೇಕಾಯಿತು. ತನ್ನ ಸಾಲವನ್ನೆಲ್ಲ ಮರುಪಾವತಿಸಿದಾಗ ಅವನ ಕೈಯಲ್ಲಿ ಉಳಿದ ಹಣ ಕೇವಲ 104 ಡಾಲರ್. ಇಷ್ಟಾದರೂ ಕರ್ನಲ್ ಸ್ಯಾಂಡರ್ಸ್ ಧೃತಿಗೆಡಲಿಲ್ಲ. ಅವನು, ಯು.ಎಸ್.ಎ. ದೇಶದ ಉದ್ದಗಲದಲ್ಲಿ ಸಂಚರಿಸಿದ; ಹಲವಾರು ರೆಸ್ಟೊರೆಂಟುಗಳಿಗೆ ಭೇಟಿಯಿತ್ತು ತನ್ನ ಫ್ರೈಡ್ ಚಿಕನ್ ಅನ್ನು ಅಲ್ಲೇ ತಯಾರಿಸಿ ಗ್ರಾಹಕರಿಗೆ ಒದಗಿಸಿದ. ಅನಂತರ, ಅನೇಕ ರೆಸ್ಟೊರೆಂಟ್ಗಳ ಜೊತೆ ಅವನೊಂದು ಒಪ್ಪಂದ ಮಾಡಿಕೊಂಡ - ಅವರು ಮಾರಾಟ ಮಾಡಿದ ಪ್ರತಿಯೊಂದು ಪ್ಲೇಟ್ ಚಿಕನ್ಗಾಗಿ ತನಗೆ ಒಂದು ನಿಕ್ಕಲ್ ಪಾವತಿಸಬೇಕೆಂದು. ಹೀಗೆ ಶುರುವಾಯಿತು ಕೆ.ಎಫ್.ಸಿ. ಅಂದರೆ ಕೆಂಚುಕಿ ಫ್ರೈಡ್ ಚಿಕನ್ ಎಂಬ ಉದ್ಯಮ. ಕೆಲವೇ ವರುಷಗಳಲ್ಲಿ ಕರ್ನಲ್ ಸ್ಯಾಂಡರ್ಸಿನ ಕೆ.ಎಫ್.ಸಿ. ಜಗತ್ತಿನ ಉದ್ದಗಲದಲ್ಲಿ ಪ್ರಸಿದ್ಧ ಬ್ರಾಂಡ್ ಆಗಿ ಮೆರೆಯಿತು.