45 ಬಿಲಿಯನ್ "ಕನಸು"ಗಳ ಬಿತ್ತನೆ
45 ಬಿಲಿಯನ್ ಬೀಜಗಳ ಬಿತ್ತನೆ, ಅದೂ ಒಬ್ಬನೇ ಒಬ್ಬ ವ್ಯಕ್ತಿಯ ಛಲದಿಂದ, ಸಾಧ್ಯವೇ? “ಸಾಧ್ಯ" ಎಂದು ತೋರಿಸಿ ಕೊಟ್ಟಿದ್ದಾರೆ, ವಯೊವೃದ್ಧ ಪ್ರೇಮ್ಜಿ ಭಾಯಿ. ೧೯೮೭ರಿಂದೀಚೆಗೆ ಒಂದೊಂದು ಬೀಜ ಬಿತ್ತಿದಾಗಲೂ ಅವರ ಕನಸಿಗೆ ಮರುಜೀವ.
ಕೃಷಿಕ ಕುಟುಂಬದಲ್ಲಿ ಹುಟ್ಟಿದ ಪ್ರೇಮ್ಜಿ ಭಾಯಿ ತೊಡಗಿದ್ದು ವ್ಯಾಪಾರದಲ್ಲಿ. ರಿಲಯನ್ಸ್ ಟೆಕ್ಸ್-ಟೈಲಿನ ವಿತರಣೆಯ ವ್ಯವಹಾರ. ಗುಜರಾತಿನ ರಾಜಕೋಟ್ ಜಿಲ್ಲೆಯ ಉಪ್ಲೇಟಾದಲ್ಲಿ ೧೯೭೫ರ ತನಕ ವ್ಯಾಪಾರಿ ವೃತ್ತಿ. ಅನಂತರ ಮುಂಬೈಯಲ್ಲಿ ವ್ಯಾಪಾರ. ಆದರೆ ಪ್ರೇಮ್ಜಿ ಭಾಯಿ ಯಾವತ್ತೂ ಮುಂಬೈ ಬದುಕನ್ನು ಇಷ್ಟ ಪಡಲಿಲ್ಲ.
ಈ ಭೂಮಿಗೆ ಉಪಯೋಗವಾಗುವ ಏನಾದರೊಂದು ಕೆಲಸ ಮಾಡಬೇಕೆಂಬ ತುಡಿತ ಅವರಿಗೆ. ಮನುಭಾಯಿ ಪಾಂಚೋಲಿ ಬರೆದ ನಾಟಕದ ಪರೋಪಕಾರಿ ಪಾತ್ರವೊಂದು ಅವರಲ್ಲಿ ಬೀಜ ಬಿತ್ತುವ ಕನಸೊಂದನ್ನು ಅರಳಿಸಿತು.
ಮೊದಲಾಗಿ ತನ್ನ ಹಳ್ಳಿಯ ದೇವಸ್ಥಾನಗಳ ಸುತ್ತಲೂ ಬೀಜ ಬಿತ್ತುವ ಕಾಯಕಕ್ಕೆ ಕೈಹಾಕಿದರು. ಅಲ್ಲಿ ಮೊಳೆತು ಬೆಳೆದ ಗಿಡಗಳು ದೇವರ ಭಯದಿಂದಲಾದರೂ ಉಳಿಯಲಿ ಎಂಬ ಜಾಣ್ಮೆಯ ಯೋಜನೆ ಅವರದು. ಅನಂತರ, ಈ ಕೆಲಸವನ್ನು ಒಬ್ಬನಿಗೆ ವಹಿಸಿ, ಅವನ ವೆಚ್ಚವನ್ನೆಲ್ಲ ಭರಿಸಿದರು. ತನ್ನ ಹಳ್ಳಿ ಭಾಯಾವದಾರಿನ ದೇವಸ್ಥಾನಗಳ ಸುತ್ತಲೆಲ್ಲ ಗಿಡ ಬೆಳೆಸಿದ ಬಳಿಕ, ಹತ್ತಿರದ ಇನ್ನೆರಡು ಹಳ್ಳಿಗಳಲ್ಲಿ ಇದೇ ಕಾಯಕ. ಕ್ರಮೇಣ ಈ ಕೆಲಸ ಮುಂದುವರಿಸುವ ಜವಾಬ್ದಾರಿಯನ್ನು ಗೋಕುಲ್ ಗೋಶೋಧನ್ ಎಂಬ ಸ್ವಯಂಸೇವಾ ಸಂಸ್ಥೆಗೆ ೧೯೮೪ರಲ್ಲಿ ಒಪ್ಪಿಸಿದರು.
ತಂದೆಯ ಕೆಲಸಕ್ಕೆ ಸದಾ ಬೆಂಬಲ ನೀಡುವ ಅವರ ಮಗ ರಾಯ್ಜಿ ಭಾಯಿ ಪಟೇಲ್ ೧೯೮೭ರಲ್ಲಿ ಲೇಖನವೊಂದನ್ನು ಕಳಿಸಿ ಕೊಟ್ಟರು. ಅದು ಎಲ್ಜಿಯರ್ಡ್ ಬೌಫಿಯರ್ ಎಂಬ ವ್ಯಕ್ತಿಯ ಬದುಕಿನ ಸಾಧನೆಯ ಕತೆ. ಆ ವ್ಯಕ್ತಿ ತನ್ನ ನಿವೃತ್ತ ಜೀವನವನ್ನು ಸಸಿ ನೆಡಲು ಮುಡಿಪಾಗಿಟ್ಟಿದ್ದರು. ಅದರಂತೆ, ೩೫ ವರುಷ ಶ್ರಮ ಪಟ್ಟು ಅವರು ಬೆಳೆಸಿದ್ದು ೫೦ ಕಿಮೀ ಉದ್ದ ಮತ್ತು ೧೦ ಕಿಮೀ ಅಗಲದ ಕಾಡು. ಇದನ್ನೋದಿ ತೀವ್ರ ಪ್ರಭಾವಿತರಾದ ಪ್ರೇಮ್ಜಿ ಭಾಯಿ ಸಂಕಲ್ಪ ಮಾಡಿದರು - ತನ್ನ ಉಳಿದ ಜೀವಮಾನ ಬೀಜ ಬಿತ್ತಲಿಕ್ಕಾಗಿ ಮೀಸಲು ಎಂದು.
ಅದರಂತೆ ೧೯೮೭ರಲ್ಲಿ ತನ್ನ ಹಳ್ಳಿಗೆ ದೊಡ್ಡ ಕನಸಿನೊಂದಿಗೆ ಮರಳಿ ಬಂದರು ಪ್ರೇಮ್ಜಿ ಭಾಯಿ. ಆರಂಭದಲ್ಲಿ ಪ್ರತಿ ದಿನ ಬೆಳಗ್ಗೆ ಒಂದು ಚೀಲ ತುಂಬ ಬೀಜ ಮತ್ತು ಒಂದು ಸಣ್ಣ ಹಾರೆ ಹೊತ್ತು ಹೊರಡುತ್ತಿದ್ದರು. ಹಳ್ಳಿಯಲ್ಲಿ ಅಡ್ಡಾಡುತ್ತಾ ಹೊಲಗಳ ಬದುಗಳಲ್ಲಿ ಹಾಗೂ ರಸ್ತೆಗಳ ಬದಿಗಳಲ್ಲಿ ಬೀಜ ಬಿತ್ತುವುದೇ ಅವರ ಕೆಲಸ. ಈ ಶ್ರೀಮಂತ ವ್ಯಾಪಾರಿ ಏನು ಮಾಡುತ್ತಾರೆಂದು ಹಳ್ಳಿಗರಿಗೆ ಕುತೂಹಲ.
ತನ್ನ ಕೆಲಸವನ್ನು ಬಿರುಸಿನಿಂದ ನಡೆಸುವುದು ಹೇಗೆಂದು ಚಿಂತಿಸಿದರು ಪ್ರೇಮ್ಜಿ ಭಾಯಿ. ಅದಕ್ಕಾಗಿ ಮೋಟರ್ ಸೈಕಲ್ ಖರೀದಿ. ತನ್ನ ೫೫ನೇ ವಯಸ್ಸಿನಲ್ಲಿ ಬೈಕ್ ಓಡಿಸಲು ಕಲಿತರು. ಪ್ರತಿ ದಿನ ಬೈಕೇರಿ ಪ್ರಯಾಣ. ಇಷ್ಟವೆನಿಸಿದಲ್ಲಿ ಬೈಕಿನಿಂದ ಇಳಿದು ಬೀಜ ಬಿತ್ತನೆ. ಕ್ರಮೇಣ ಸ್ವಯಂಸೇವಾ ಸ್ಫೂರ್ತಿಯ ವ್ಯಕ್ತಿಗಳ ಹಾಗೂ ಸಂಸ್ಥೆಗಳ ಸಹಕಾರ ಗಳಿಕೆ. ಆಯಾ ಊರಿನ ಶಾಲೆಗಳ ಸಂಪರ್ಕ. ತನ್ನ ವಿನಂತಿಗೆ ಶಿಕ್ಷಕರು ಸ್ಪಂದಿಸಿದ ಶಾಲೆಗಳಲ್ಲಿ ಬೀಜ ಬಿತ್ತಲು ವಿದ್ಯಾರ್ಥಿಗಳ ಬಳಕೆ. ಈ ರೀತಿಯಲ್ಲಿ ಐದು ವರುಷಗಳಲ್ಲಿ ೧.೫ ಲಕ್ಷ ಕಿಮೀ ಮೋಟರ್ ಸೈಕಲಿನಲ್ಲಿ ಪ್ರಯಾಣ. ಹಾದಿಯುದ್ದಕ್ಕೂ ಬೀಜಗಳ ಬಿತ್ತನೆ.
ಯುವಕನೊಬ್ಬ ಅವರಿಂದ ಬೀಜ ಪಡೆಯಲು ಪುನಃಪುನಃ ಬರುತ್ತಿದ್ದ. ಪ್ರೇಮ್ಜಿ ಭಾಯಿಗೆ ಅವನ ಸಾಚಾತನ ತಿಳಿದಿತ್ತು. ಇನ್ನೂ ೧೦-೧೨ ಗೆಳೆಯರನ್ನು ಕರೆ ತರಲು ವಿನಂತಿಸಿದರು. ಅವರೆಲ್ಲರನ್ನು ಕರೆದುಕೊಂಡು ವಾಹನವನ್ನೇರಿ ತಮ್ಮ ಬೀಜ ಬಿತ್ತುವ ಆಂದೋಲನ ಮುಂದುವರಿಸಿದರು. ಪ್ರತಿಯೊಬ್ಬನಿಗೂ ಒಂದು ಚೀಲ ಬೀಜ ಕೊಟ್ಟು, ಒಂದು ಮೈಲುಕಲ್ಲಿನ ಬಳಿ ಇಳಿಸುತ್ತಿದ್ದರು. ಮುಂದಿನ ಮೈಲುಕಲ್ಲಿನ ತನಕ ರಸ್ತೆಯ ಎರಡೂ ಬದಿಗಳಲ್ಲಿ ಬೀಜ ಬಿತ್ತಬೇಕೆಂದು ಹೇಳುತ್ತಿದ್ದರು. ಈ ರೀತಿ ೧೫೦ ಕಿಮೀ ಉದ್ದಕ್ಕೆ ಅವರಿಂದ ಬೀಜ ಬಿತ್ತನೆ.
ಇನ್ನೂ ವೇಗವಾಗಿ ಮತ್ತು ವ್ಯವಸ್ಥಿತವಾಗಿ ಬೀಜ ಬಿತ್ತುವುದು ಹೇಗೆಂಬುದೇ ಪ್ರೇಮ್ಜಿ ಭಾಯಿ ಅವರಿಗಿದ್ದ ಸವಾಲು. ಅದಕ್ಕಾಗಿ ಅವರು ರೂಪಿಸಿದ್ದು ಬೀಜ ಬಿತ್ತುವ ಯಂತ್ರ. ಅದು ಜೀಪಿನ ಹಿಂಭಾಗದಲ್ಲಿ ಜೋಡಿಸಬಹುದಾದ ಪೆಟ್ರೋಲ್ ಚಾಲಿತ ಬ್ಲೋವರ್. ಇದಕ್ಕೆ ತಗಲಿದ ವೆಚ್ಚ ರೂ.೧೨,೦೦೦. ಇದರಿಂದ ೧೫ ಮೀಟರ್ ದೂರಕ್ಕೆ ಬೀಜಗಳನ್ನು ಸಿಡಿಸಲು ಸಾಧ್ಯ.
ಗುಜರಾತಿನ ಕಚ್, ಭುಜ್ ಮತ್ತು ಸೌರಾಷ್ಟ್ರ ಬರಪೀಡಿತ ಪ್ರದೇಶಗಳು. ಅಲ್ಲಿ ಬಿತ್ತಿದ ಬೀಜಗಳು ಮೊಳೆತು ಗಿಡವಾಗಿ ಬೆಳೆಯಲಿಕ್ಕಾಗಿ ಏನು ಮಾಡಬೇಕು? ಎಂಬುದವರ ಚಿಂತನೆ. ಕೊನೆಗೆ, ಅದಕ್ಕಾಗಿ ೭ ಇಂಚು ವ್ಯಾಸದ, ೧.೫ ಅಡಿ ಎತ್ತರದ ಪ್ಲಾಸ್ಟಿಕ್ ಪೈಪಿನ ಮೂಲಕ ಬೀಜ ಬಿತ್ತುವ ವಿಧಾನ ರೂಪಿಸಿದರು.
ಮುಂದಿನ ಹಂತದಲ್ಲಿ ಪ್ರೇಮ್ಜಿ ಭಾಯಿಯ ಕಾಯಕ ಚೆಕ್ಡ್ಯಾಮುಗಳ ನಿರ್ಮಾಣ - ತಾವೇ ಸ್ಥಾಪಿಸಿದ ವೃಕ್ಷ ಸೇವಾ ಸಂಸ್ಥಾ ಟ್ರಸ್ಟ್ ಮೂಲಕ. ಒಂದು ಸಾವಿರ ಹೆಕ್ಟೇರ್ ಪ್ರದೇಶವನ್ನು ೧೫೦ ಪ್ರಕೃತಿ ಪ್ರೇಮಿ ಕ್ಲಬ್ಗಳ ಮೂಲಕ ಹಸುರಾಗಿಸುವ ಕೆಲಸ ನಿರ್ವಹಣೆ.
ಪ್ರೇಮ್ಜಿ ಭಾಯಿ ೧೯೮೭ರಲ್ಲಿ ಬೀಜ ಬಿತ್ತುವ ಆಂದೋಲನ ಆರಂಭಿಸಿದ್ದು ೧೩೦ ಕಿಲೋ ಬೀಜ ಖರೀದಿಸುವ ಮೂಲಕ. ಅನಂತರ ಪ್ರತಿ ವರುಷವೂ ಹೆಚ್ಚೆಚ್ಚು ಬೀಜ ಖರೀದಿ - ೧೯೮೮ರಲ್ಲಿ ೧೩ ಟನ್, ೧೯೯೦ರಲ್ಲಿ ೯೦ ಟನ್ ಹೀಗೆ. ಕೇವಲ ೧೮ ವರುಷಗಳಲ್ಲೇ ೫೫೦ ಟನ್ ಬೀಜ ಬಿತ್ತಿದರು ಮತ್ತು ಹಂಚಿದರು. ಜೊತೆಗೆ, ತನ್ನದೇ ಹಣದಿಂದ ೧,೫೦೦ ಚೆಕ್ ಡ್ಯಾಮುಗಳ ನಿರ್ಮಾಣ. ಬೇರೆ ೪೦೦ ಚೆಕ್ ಡ್ಯಾಮುಗಳಿಗೆ ಸಿಮೆಂಟ್ ಒದಗಣೆ. ಅದಲ್ಲದೆ, ಬಾವಿಗಳ ಜಲಮರುಪೂರಣಕ್ಕಾಗಿ ೫೦,೦೦೦ ಅಡಿಗಳ ಪೈಪ್ ಜೋಡನೆಗೆ ಕಾರಣರಾಗಿದ್ದಾರೆ. ಇವರ ಕೆಲಸಕ್ಕೆ ಎರಡು ಸಂಘಸಂಸ್ಥೆಗಳಿಂದ ರೂ.೧.೭೫ ಲಕ್ಷ ನೆರವು ಸಿಕ್ಕಿದೆ.
ಪ್ರೇಮ್ ಭಾಯಿ ಅವರಿಗೆ ವಯಸ್ಸಾಗಿದೆ, ನಿಜ. ಆದರೆ ಅವರ ಕನಸಿಗಿನ್ನೂ ವಯಸ್ಸಾಗಿಲ್ಲ. ಅವರದು ಬಹು ದೊಡ್ಡ ಕನಸು - ಬರಡು ನೆಲದಲ್ಲಿ ಹಸುರು ಹಬ್ಬಿಸುವ ಮತ್ತು ಬರಡು ಮನಗಳಲ್ಲಿ ಹಸುರು ಚಿಮ್ಮಿಸುವ ಕನಸು. ನಾವೀಗ ಹಾರೈಸೋಣ: ಇದನ್ನು ಓದಿದವರ ಮನಗಳಲ್ಲಿ ಅರಳಲಿ ಇಂತಹ ಕನಸು ಮತ್ತು ಕನಸು ನನಸಾಗಿಸುವ ಛಲ.