49. ಗೆಳೆತನವೆಂಬ ಬಂಧ

49. ಗೆಳೆತನವೆಂಬ ಬಂಧ

ಹರೀಶ ಮತ್ತು ಮಹೇಶ ಶ್ರೀಮಂತ ವ್ಯಾಪಾರಿಗಳು ಮತ್ತು ಗೆಳೆಯರು. ಒಮ್ಮೆ ಮಹೇಶನಿಗೆ ಹರೀಶ ಹೇಳಿದ, "ಗೆಳೆಯಾ, ನೀನು ಹಣ ಉಳಿಸಬೇಕು. ಬುದ್ಧಿಯಿಲ್ಲದವನಂತೆ ಹಣ ಖರ್ಚು ಮಾಡಬೇಡ.” ಇವನ್ಯಾರು ನನಗೆ ಹೇಳೋದಕ್ಕೆ … ಎಂದು ಸಿಟ್ಟಾದ ಮಹೇಶ ಅನಂತರ ಹರೀಶನ ಜೊತೆ ಮಾತು ಬಿಟ್ಟ.

ಕೆಲವು ವರುಷಗಳ ನಂತರ ಮಹೇಶನಿಗೆ ವ್ಯವಹಾರದಲ್ಲಿ ನಷ್ಟವಾಗಿ ಅವನು ತನ್ನೆಲ್ಲ ಹಣ ಕಳೆದುಕೊಂಡ. ಯಾರೂ ಅವನ ಸಹಾಯಕ್ಕೆ ಬರಲಿಲ್ಲ. ಅದೊಂದು ದಿನ ಗಿರೀಶ ಎಂಬ ವ್ಯಕ್ತಿ ಬಂದು, ಮಹೇಶನಿಗೆ ಒಂದು ಲಕ್ಷ ರೂಪಾಯಿ ಕೊಟ್ಟು ಹೇಳಿದ, "ಮಹೇಶ್, ನನ್ನ ತಂದೆ ನಿಮ್ಮ ತಂದೆಯಿಂದ ಸಾಲ ಪಡೆದಿದ್ದರು. ಇಷ್ಟು ವರುಷ ಅದನ್ನು ಹಿಂತಿರುಗಿಸಲು ಸಾಧ್ಯವಾಗಿರಲಿಲ್ಲ. ಈಗ ನೀವು ಕಷ್ಟದಲ್ಲಿದ್ದೀರಿ. ನಿಮ್ಮ ತಂದೆ ಕೊಟ್ಟಿದ್ದ ಸಾಲದ ಹಣ ಹಿಂತಿರುಗಿಸುತ್ತಿದ್ದೇನೆ. ತೆಗೆದುಕೊಳ್ಳಿ.” ಮಹೇಶ ಆ ಹಣವನ್ನು ಸ್ವೀಕರಿಸಿ, ಪುನಃ ತನ್ನ ವ್ಯವಹಾರ ಶುರು ಮಾಡಿದ.

ಮುಂದೊಮ್ಮೆ ಹರೀಶನ ಮಗ ಆಸ್ಪತ್ರೆಯಲ್ಲಿದ್ದಾನೆ; ಅವನಿಗೆ ರಕ್ತ ಬೇಕಾಗಿದೆ ಎಂದು ಮಹೇಶನಿಗೆ ತಿಳಿಯಿತು. ಅವನು ಕೂಡಲೇ ಆಸ್ಪತ್ರೆಗೆ ಧಾವಿಸಿದ. ಹರೀಶನ ಮಗನಿಗೆ ರಕ್ತ ನೀಡಿದ. ಅವನು ಆಸ್ಪತ್ರೆಯಿಂದ ಹೊರ ಬರುವಾಗ, ಹರೀಶ ಮತ್ತು ಗಿರೀಶ ಎದುರಾದರು. ಆಗ ಗಿರೀಶ ಹೇಳಿದ, “ಗೆಳೆತನವೆಂದರೆ ಇದು ನೋಡಿ. ನೀವಿಬ್ಬರೂ ಮಾತು ಬಿಟ್ಟಿದ್ದೀರಿ. ಆದರೆ, ಮಹೇಶ ಕಷ್ಟದಲ್ಲಿದ್ದಾಗ ಅವನಿಗೆ ಹರೀಶ ಹಣ ಕಳಿಸಿಕೊಟ್ಟ. ಈಗ ಹರೀಶನ ಮಗನಿಗೆ ರಕ್ತ ಬೇಕಾದಾಗ ಮಹೇಶ ಬಂದು ರಕ್ತ ಕೊಟ್ಟಿದ್ದಾನೆ.” ಗೆಳೆಯರಿಬ್ಬರೂ ಒಬ್ಬರನ್ನೊಬ್ಬರು ಅಪ್ಪಿಕೊಂಡರು.