5ನೇ ಕ್ಲಾಸ್ ಹುಡುಗ ಮತ್ತು ಬ್ಯಾಂಕ್ ದರೋಡೆ

ಶಿಕ್ಷಕರಿಗೆ ಕೆಲವೊಮ್ಮೆ ತರಗತಿ ಕೋಣೆಯಲ್ಲಿ ಮಕ್ಕಳ ತಂಟೆ, ತಕರಾರು ಅಧಿಕಪ್ರಸಂಗತನ, ಶಿಕ್ಷಕರನ್ನೇ ಬೆರುಗು ಗೊಳಿಸುವಂತಹ ಪ್ರಶ್ನೆಗಳು ಅತ್ಯಂತ ದೊಡ್ಡ ಕಲಿಕಾ ಸನ್ನಿವೇಶವನ್ನೇ ಸೃಷ್ಟಿಸಬಹುದು. ಇಂತಹದ್ದೇ ಒಂದು ಘಟನೆ ನನ್ನ ಗಣಿತ ಪಾಠದ ಸಂದರ್ಭದಲ್ಲಿ ನಡೆದಿದ್ದು, ಅದು ಇವತ್ತಿನ ಲೇಖನದ ಕಥಾ ವಸ್ತು!.
ಅವತ್ತು ನನಗೆ ಐದನೇ ತರಗತಿಗೆ 'ಹಣ - ಸಂಕಲನ ಮತ್ತು ವ್ಯವಕಲನ' ಎಂಬ ಪಾಠ ಇತ್ತು. ನನ್ನಲ್ಲಿದ್ದ ಹಣವನ್ನು ಹಿಡಿದುಕೊಂಡು ತರಗತಿಗೆ ಹೋದೆ, ನನ್ನ ಕೈಯಲ್ಲಿ ದುಡ್ಡು ನೋಡಿದ ಮಕ್ಕಳಿಗೆ ಇವತ್ತು ಯಾವ ಪಾಠ ಮಾಡಲಿದ್ದಾರೆ ಎಂಬುದು ಅರಿವಾಯಿತು. ಆಗ ಕೆಲವು ಮಕ್ಕಳು 'ಮಾಮ್ ಇವತ್ತು ಹೊಸ ಪಾಠ, ಯಾವಾಗ್ಲೂ ಪಾಠದ ಮೊದಲು ಕಥೆ ಹೇಳ್ತಿರಲ್ವಾ? ಈಗ ಕಥೆ ಹೇಳಿ ಎಂದರು!.
ಸಾಮಾನ್ಯವಾಗಿ ನಾನು ಯಾವುದೇ ಒಂದು ಹೊಸ ಪಾಠ ಪ್ರಾರಂಭಿಸುವ ಮೊದಲು ಸಾಧ್ಯವಾದರೆ ಆ ಪಾಠಕ್ಕೆ ಸಂಬಂಧಿಸಿದ ಅಥವಾ ಇನ್ಯಾವುದೋ ನೆನಪಿಗೆ ಬರುವ ಕಥೆಯನ್ನು ಹೇಳುವುದನ್ನು ರೂಢಿಸಿಕೊಂಡಿದ್ದೇನೆ. ಹಾಗಾಗಿ ಈಗ ಕಥೆ ಇಲ್ಲದಿದ್ದರೆ ಮುಂದಿನ ಪಾಠಕ್ಕೆ ಹೋಗುವುದು ಬಹಳ ಕಷ್ಟ ಎoಬುದರ ಅರಿವಾಗಿ 'ಕೌನ್ ಬನೇಗಾ ಕರೋಡ್ ಪತಿ' ಎಂಬ ರಿಯಾಲಿಟಿ ಶೋ ನಲ್ಲಿ 5ಕೋಟಿ ಗೆದ್ದು! 3ವರ್ಷ ದಲ್ಲೇ ಎಲ್ಲವನ್ನೂ ಕಳೆದು ಕೊಂಡ ಲಾರಿ ಕ್ಲೀನರ್ ನ ನಿಜ ಜೀವನದ ಕಥೆಯನ್ನು ಹೇಳಿದೆ.
ಲಾರಿ ಕ್ಲಿನರ್ ಕಥೆ ಕೇಳಿ ನಿಮಗೆ ಏನು ಅನ್ನಿಸಿತು ಅಂತಾ ಕೇಳಿದೆ..."ಅಯ್ಯೋ ಪಾಪ, ಅವನು ಸ್ವಲ್ಪ ಬುದ್ದಿವಂತಿಕೆಯಿಂದ ಹಣ ಬಳಸುತ್ತಿದ್ರೆ ಆತ ಸುಖವಾಗಿ ಬದುಕಬಹುದಿತ್ತು" ಅನ್ನುವ ಅಭಿಪ್ರಾಯ ವ್ಯಕ್ತ ವಾಯಿತು.
ಮಕ್ಕಳೇ, ನಮಗೆ ಹಣ ಎಷ್ಟು ಮುಖ್ಯ? ಹಣದಿಂದ ಏನೆಲ್ಲಾ ಪ್ರಯೋಜನಗಳಿವೆ? ಎಂದು ಕೇಳಿದಾಗ, ಮಕ್ಕಳು ನಾ ಮುಂದು ತಾ ಮುಂದು ಅನ್ನುತ್ತಾ ಹಣ ಯಾಕೆ ಬೇಕು ಅನ್ನುವುದಕ್ಕೆ ಉದಾಹರಣೆಗಳನ್ನು ಕೊಟ್ಟರು. ನಿಮಗೆಲ್ಲಾ ದುಡ್ಡು ಯಾಕೆ ಬೇಕು ಅನ್ನೋದು ಗೊತ್ತು, ಆದರೆ ಹಣ ಸಂಪಾದನೆ ಯ ಕಷ್ಟ ದ ಅರಿವಿರಲಿಕ್ಕಿಲ್ಲ, ಹಾಗಾಗಿ ಹಣವನ್ನು ಜೋಪಾನವಾಗಿ ಖರ್ಚು ಮಾಡೋದು ಹಾಗೂ ಉಳಿತಾಯ ಮಾಡುವುದರ ಬಗ್ಗೆ ಕಲಿಯಬೇಕು ಅಲ್ಲವೇ?
ದುಡ್ಡು ಗಳಿಸುವುದು ಮತ್ತು ಉಳಿಸುವುದು ಅಷ್ಟು ಸುಲಭದ ವಿಷಯ ಅಲ್ಲಾ'! ಎಂದೆ. ನನ್ನ ಮಾತು ಮುಗಿದದ್ದೇ ತಡ, ತರಗತಿಯಲ್ಲಿ ಬಹುತೇಕ ಮೌನ ವಾಗಿಯೇ ಇರುವ, ಕೆಲವೊಮ್ಮೆ ಉಳಿದ ಮಕ್ಕಳಿಗಿಂತ ವಿಭಿನ್ನ ವಾಗಿ ಯೋಚಿಸುವ ಮತ್ತು ಪ್ರಶ್ನೆ ಕೇಳುವ ಹುಡುಗನೊಬ್ಬ ಕುಳಿತಲ್ಲಿಂದಲೇ,
"ಮಾಮ್, ದುಡ್ಡು ಗಳಿಸಲು ಕಷ್ಟ ಪಡಲೇಬೇಕು ಎಂದೇನಿಲ್ಲ, ನಾವು ಬ್ಯಾಂಕ್ ದರೋಡೆ ಮಾಡಿದ್ರೆ ನಮಗೆ ಒಮ್ಮೆಲೇ ತುಂಬಾ ದುಡ್ದು ಸಿಗುತ್ತೆ ಅಲ್ಲವಾ?" ಎಂದು ಹೇಳಿ ತನ್ನ ಮುಖದಲ್ಲಿ ತುಂಟ ನಗುವನ್ನು ಚೆಲ್ಲಿದ.
ಆತನ ಉತ್ತರ ಕೇಳಿದ ಉಳಿದ ಮಕ್ಕಳು ಆಶ್ಚರ್ಯದಿಂದ ಅವನತ್ತಲೇ ನೋಡತೋಡಗಿದರು.
ಈಗ ಇವನಿಗೆ ಟೀಚರ್ ಖಂಡಿತ ಪೆಟ್ಟು ಕೊಡಬಹುದು, ಕಿವಿ ಹಿಂಡಬಹುದು ಅಥವಾ ಜೋರು ಮಾಡಬಹುದು ಎಂದು ಪಿಳಿ ಪಿಳಿ ಕಣ್ಣು ಬಿಟ್ಟುಕೊಂಡು ಒಮ್ಮೆ ನನ್ನನ್ನು, ಮತ್ತೊಮ್ಮೆ ಆ ಹುಡುಗನನ್ನು ನೋಡ ತೊಡಗಿದರು. ಸಾಮಾನ್ಯವಾಗಿ ಅಂತಹ ಉತ್ತರಗಳಿಂದ ಕೋಪಗೊಳ್ಳುವ ಶಿಕ್ಷಕರು "ನೀನು ಇದೇ ಮಾಡು, ಏನು ದೊಡ್ಡವನಾಗಿ ಕಳ್ಳನಾಗುತ್ತೀಯಾ? ನಿನ್ನಿಂದ ಬೇರೆ ಒಳ್ಳೆ ಕೆಲಸ ಇನ್ನೇನು ಮಾಡೋಕೆ ಆಗುತ್ತೆ? ಅಧಿಕ ಪ್ರಸಂಗ ಮಾತಾಡಿದ್ರೆ ಕ್ಲಾಸ್ ನಿಂದ ಹೊರಗೆ ಹಾಕುತ್ತೇನೆ. ನಿನ್ನ ಅಪ್ಪ ಅಮ್ಮ ಇದನ್ನೇ ಕಲಿಸಿದ್ದ ನಿನಗೆ? ಇರು ನಿನ್ನ ಅಪ್ಪ ಸಿಗಲಿ, ಅವರ ಹತ್ರ ಈ ಬಗ್ಗೆ ಮಾತಾಡ್ತೇನೆ," ಇಂತಹದ್ದೇ ಮಾತುಗಳು ನನ್ನಿಂದಲೂ ಬರುತ್ತಿದ್ದವೋ ಏನೋ!,
ಆದರೆ ಪ್ರಸ್ತುತ 'ನೀವು ಮಕ್ಕಳನ್ನು ಬದಲಾಯಿಸಲು ಹೋಗಬೇಡಿ ನೀವೇ ಬದಲಾಗಿ ' ಎಂಬ ಗೋಪಾಡ್ಕರ್ ಅವರ ಮಾತು, ಜೊತೆಗೆ ಪುಸ್ತಕಗಳ ಓದು, ತರಬೇತಿಗಳಲ್ಲಿನ ಭಾಗವಹಿಸುವಿಕೆಗಳಿಂದಾಗಿ ಇಂತಹ ಸನ್ನಿವೇಶ ಬಂದಾಗ ಮಕ್ಕಳ ದಾರಿಗೇ ಹೋಗಿ ಅವರನ್ನು ನಮ್ಮ ದಾರಿಗೆ ತರುವ ಪ್ರಯತ್ನ ಮಾಡುತ್ತಿರುತ್ತೇನೆ. ಹಾಗಾಗಿ, ಆ ಹುಡುಗ ಅಂತಹದ್ದೊಂದು ಪ್ರಶ್ನೆ ಕೇಳಿದಾಗ, ನನ್ನಲ್ಲಿ ಆ ಪ್ರಶ್ನೆ ಕೇಳುವ ಧೈರ್ಯ ವನ್ನು ಆತ ಮಾಡಿದ್ದಕ್ಕೆ ಹಾಗೂ ನಾನು ಆ ಸ್ವಾತಂತ್ರವನ್ನೂ ಮಕ್ಕಳಿಗೆ ನೀಡಿದ್ದಕ್ಕಾಗಿ ಸಂತೋಷ ಪಡುತ್ತಾ, ಮಕ್ಕಳೆಲ್ಲರ ಊಹೆಗಳನ್ನು ಉಲ್ಟಾ ಮಾಡಿ,
"ಓಹ್ ಒಳ್ಳೆ ಉಪಾಯ!! ಆದರೆ ಬ್ಯಾಂಕ್ ದರೋಡೆ ಮಾಡೋದು ಅಷ್ಟು ಸುಲಭನಾ? ಸಿ.ಸಿ ಕ್ಯಾಮೆರಾ ಇರುತ್ತೆ, ಕಾವಲುಗಾರರು ಇರುತ್ತಾರೆ ಅಲ್ವಾ?' ಎಂದೆ.
ಅದು ತುಂಬಾ ಸುಲಭ ಮಾಮ್, ವಾಚ್ ಮಾನ್ ಗೆ ಕಾಫಿಯಲ್ಲಿ ನಿದ್ದೆ ಮಾತ್ರೆ ಹಾಕಿ ಕೊಡ್ಬೇಕು,(ನನ್ನ ಪುಣ್ಯಕ್ಕೆ ಅವನನ್ನು ಸಾಯಿಸಬೇಕು ಅನ್ನಲಿಲ್ಲ!!) ಅವ ನಿದ್ದೆ ಮಾಡಿದ ಮೇಲೆ, ನಾವು ಹೆಲ್ಮೆಟ್ ಹಾಕೊಂಡು ಮೊದಲು ಸಿಸಿ ಕ್ಯಾಮೆರಾ ಒಡೆಯಬೇಕು ಆವಾಗ ಯಾರಿಗೂ ಗೊತ್ತಾಗಲ್ಲ' ಅಂದ.
'ಸರಿ, ಅಷ್ಟೆಲ್ಲಾ ಮಾಡಿದ್ರೂ ಲಾಕರ್ ಗಳು ಗಟ್ಟಿಮುಟ್ಟಾಗಿ ಇರುತ್ತಲ್ಲಾ! ಅದನ್ನು ಹೇಗೆ ಒಡೆಯೋದು?' ಮತ್ತೆ ಅವನನ್ನೇ ಕೇಳಿದೆ.
ಅವನೂ, ಸೋಲೊಪ್ಪಿಕೊಳ್ಳಲು ಸಿದ್ದನಿರಲಿಲ್ಲ! ಈ ಮಧ್ಯೆ ನಮ್ಮಿಬ್ಬರ ಸಂಭಾಷಣೆ, ಉಳಿದ ಮಕ್ಕಳಿಗೆ ಆಸಕ್ತಿಯ ವಿಷಯ ವಾಯಿತು! ಸ್ವತಃ ಶಿಕ್ಷಕಿಯೇ ಬ್ಯಾಂಕ್ ದರೋಡೆ ಬಗ್ಗೆ ಆಸಕ್ತಿ ವಹಿಸಿದ್ದು ವಿಶ್ವದ 9ನೇ ಅದ್ಭುತ!! ಎಂಬಂತೆ ಎಲ್ಲರೂ ನಮ್ಮಿಬ್ಬರನ್ನೇ ನೋಡತೊಡಗಿದರು!.
"ಮಾಮ್, ಲಾಕರ್ ಅನ್ನು ಗ್ಯಾಸ್ ಕಟರ್ ನಿಂದ ಒಡೆಯಬಹುದು!!" ಸ್ವಲ್ಪ ಹೆಚ್ಚೇ ಉತ್ಸಾಹದಿಂದ ಹೇಳಿದ. ಚರ್ಚೆ ಮುಂದುವರೆಯಿತು.
ಶಿಕ್ಷಕಿ : 'ಸರಿ, ಅಷ್ಟು ದುಡ್ಡನ್ನು ಹೇಗೆ ತರುವುದು?'
ವಿದ್ಯಾರ್ಥಿ : 'ದೊಡ್ಡ ಬಾಕ್ಸ್ ನಲ್ಲಿ ಹಾಕಿ ಎಳ್ಕೊಂಡ್ ಬಂದ್ರೆ ಆಯಿತು. ಮತ್ತೆ ಕಾರ್ ನಲ್ಲಿ ಹಿಡ್ಕೊಂಡು ಹೋಗ್ಬಹುದು'.
ಶಿಕ್ಷಕಿ : ಅಷ್ಟು ದುಡ್ಡು ಏನ್ ಮಾಡೋದು? ಖರ್ಚು ಮಾಡಿದ್ರೆ ಪೊಲೀಸರಿಗೆ ಗೊತ್ತಾಗುತ್ತೆ ಅಲ್ವಾ?
ವಿದ್ಯಾರ್ಥಿ : 'ಇಲ್ಲಾ ಮಾಮ್, ಸ್ವಲ್ಪ ದಿನ ಖರ್ಚು ಮಾಡಬಾರ್ದು, ಮತ್ತೆ ಸ್ವಲ್ಪ ದುಡ್ಡು ಬಡವರಿಗೆ ಕೊಡ್ಬೇಕು. ಉಳಿದದ್ದು ನಮಗೆ'.
ಶಿಕ್ಷಕಿ : ಸರಿ ಹಾಗಾದ್ರೆ, ನೀನು ಬ್ಯಾಂಕ್ ದರೋಡೆ ಮಾಡಿ, ಯಾರಿಗೂ ಸಿಗದೇ ತುಂಬಾ ದುಡ್ಡು ನಿನ್ನಲ್ಲಿ ಇದೆ ಅಂತಾನೇ ಇಟ್ಟುಕೊಳ್ಳೋಣ.
ಇವಾಗ ಹೇಳು, ನಿನ್ನ ಅಪ್ಪ, ಅಮ್ಮ ಅಥವಾ ಸ್ನೇಹಿತರು, 'ನೀನು ಇಷ್ಟೊoದು ದುಡ್ಡು ಹೇಗೆ ಸಂಪಾದಿಸಿದೆ?'! ಎಂದು ಕೇಳಿದರೆ, ನಾನು ಬ್ಯಾಂಕ್ ದರೋಡೆ ಮಾಡಿದೆ' ಎಂದು ಧೈರ್ಯ ವಾಗಿ, ಖುಷಿಯಿಂದ, ಹೆಮ್ಮೆಯಿಂದ ಹೇಳಬಲ್ಲೆಯಾ? ಎಂದು ಆತನ ಕಣ್ಣುಗಳನ್ನೇ ನೋಡಿಕೊಂಡು ತೀರಾ ಸಹಜ ಪ್ರಶ್ನೆ ಎಂಬಂತೆ ಕೇಳಿದೆ.
ಹುಡುಗ, ಒಂದು ಕ್ಷಣ ಮೌನಕ್ಕೆ ಜಾರಿದ! ಆತನು 'ಹೌದು ಹೇಳುತ್ತೇನೆ ' ಎನ್ನುವ ಪ್ರತಿಕ್ರಿಯೆ ನೀಡದಿರಲಿ ಎಂದು ನನ್ನ ಮನಸ್ಸು ಪ್ರಾರ್ಥಿಸುತಿತ್ತು. ಉಳಿದ ಮಕ್ಕಳೂ ಆತನ ಉತ್ತರಕ್ಕಾಗಿ ಕಾಯುತ್ತಿದ್ದರು.
ಸ್ವಲ್ಪ ಮೌನ ವಹಿಸಿದ ಆ ಹುಡುಗ ನಂತರ ಏನೂ ನಡೆದೇ ಇಲ್ಲಾ ಎಂಬಂತೆ "ಇಲ್ಲಾ ಮಾಮ್, ನಾನು ಮೊನ್ನೆ ಶನಿವಾರ ಒಂದು ಸಿನಿಮಾ ನೋಡಿದೆ ಸುಮ್ನೆ ಅದರ ಕಥೆ ಹೇಳಿದ್ದು ಅಷ್ಟೇ. ನಾನು ಒಳ್ಳೆ ಕೆಲಸಕ್ಕೆ ಸೇರಿ ತುಂಬಾ ದುಡ್ಡು ಮಾಡುತ್ತೇನೆ, ಬ್ಯಾಂಕ್ ದರೋಡೆ ಎಲ್ಲಾ ಕಿರಿ ಕಿರಿ ಮಾಮ್" ಅಂದ.
ನನ್ನ ಖುಷಿ ಗೆ ಪಾರವೇ ಇಲ್ಲಾ. ನೀವು ಏನಂತೀರಿ ಮಕ್ಕಳಾ? ಉಳಿದ ವಿದ್ಯಾರ್ಥಿ ಗಳನ್ನು ಕೇಳಿದೆ. ಹೌದು ಮಾಮ್, ಕಳ್ಳತನ ಮಾಡಿದ್ರೆ ಯಾರೂ ಜಾಸ್ತಿ ದಿನ ತಪ್ಪಿಸಿಕೊಳ್ಳೋಕೆ ಆಗಲ್ಲ, ಮತ್ತೆ ಅವರು ನಮ್ಮ ಹಾಗೆ ಇಷ್ಟ ಬಂದ ಹಾಗೇ ತಿರುಗಾಡೋಕೆ ಆಗಲ್ಲ, ಕಳ್ಳರನ್ನು ಜೈಲಿಗೆ ಹಾಕ್ತಾರೆ, ಅಪ್ಪ ಅಮ್ಮ ನಿಗೆ ಬೇಜಾರಾಗುತ್ತೆ, ಹೀಗೆ ಮಕ್ಕಳೆಲ್ಲಾ ತಮಗೆ ತೋಚಿದ ಉತ್ತರಗಳನ್ನು ಕೊಟ್ಟು, ಅಂತೂ ಇಂತೂ ಒಳ್ಳೇ ದಾರಿಯಲ್ಲಿಯೇ ಹಣ ಸಂಪಾದನೆ ಮಾಡಬೇಕು ಎಂದು ಸಮರ್ಥಿಸಿ ಕೊಂಡರು.
'ದುಡ್ಡನ್ನು ಕೂಡಿಸುವ ಮತ್ತು ಕಳೆಯುವ' ಬಗ್ಗೆ ಪಠ್ಯ ಪುಸ್ತಕ ಪಾಠ ಮಾಡಿದರೆ, ಆ ಬಾಲಕನ ಒಂದೇ ಒಂದು ಪ್ರಶ್ನೆಯು ಬದುಕಿನ ಕಲಿಕೆಗೆ ದಾರಿ ಮಾಡಿತು.. "ಮಕ್ಕಳೇ, ಹೇಗಿದ್ರೂ ನಿಮಗೆ ಕೂಡಿಸೋದು, ಕಳೆಯೋದು ಗೊತ್ತೇ ಇದೇ. ಹಾಗಾಗಿ ಪಾಠದಲ್ಲಿನ ಯಾವುದಾದ್ರೂ 4 ಪ್ರಶ್ನೆ ಗಳಿಗೆ ನೀವೇ ಉತ್ತರಿಸುವ ಪ್ರಯತ್ನ ಮಾಡಿಕೊಂಡು ಬನ್ನಿ". ಎಂದು ಹೇಳಿ, ತರಗತಿ ಕೋಣೆ ಯಿಂದ ಹೊರಬರುತ್ತಿರಲು, ಮಕ್ಕಳೆಲ್ಲರೂ ನನಗೆ ಎದ್ದು ನಿಂತು 'Thank you ಟೀಚರ್' ಅನ್ನುತ್ತಿದ್ದರೆ, ನನ್ನ ಮನಸ್ಸು ಮಾತ್ರಾ ಆ ಹುಡುಗನಿಗೆ ಧನ್ಯವಾದ ಅರ್ಪಿಸುತಿತ್ತು...
-ಸುಪ್ರಿಯಾ ಮೂಡುಬಿದಿರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ