5 ಪೈಸೆ ವರದಕ್ಷಿಣೆ

ಆಕರ್ಷಕವಾದ ಹೆಸರನ್ನು ಹೊಂದಿರುವ ೫ ಪೈಸೆ ವರದಕ್ಷಿಣೆ ಎಂಬ ಪುಸ್ತಕವು ವಸುಧೇಂದ್ರ ಇವರ ಸುಲಲಿತ ಪ್ರಬಂಧಗಳ ಸಂಗ್ರಹ. ಸುಲಲಿತ ಪ್ರಬಂಧಗಳನ್ನು ಬರೆಯುವುದರಲ್ಲಿ ವಸುಧೇಂದ್ರ ಇವರದ್ದು ಎತ್ತಿದ ಕೈ. ಈ ಪುಸ್ತಕದಲ್ಲಿ ೨೪ ಪುಟ್ಟ ಪುಟ್ಟ ಪ್ರಬಂಧಗಳಿವೆ. ಚೆನ್ನಾಗಿ ಓದಿಸಿಕೊಂಡೂ ಹೋಗುತ್ತದೆ. ೫ ಪೈಸೆಯನ್ನು ಒಂದೊಂದು ಪೈಸೆಯಾಗಿ ವಿಂಗಡಿಸಿ ಒಂದೊಂದರ ಅಡಿಯಲ್ಲಿ ೪-೬ ಪ್ರಬಂಧಗಳು ಬರುವಂತೆ ಮಾಡಿದ್ದಾರೆ.
ಪ್ರತಿಯೊಬ್ಬರ ಜೀವನದಲ್ಲಿ ಬರುವ ಘಟನೆಗಳನ್ನೇ ಕೆಲವು ಪ್ರಬಂಧಗಳಾಗಿ ಬರೆದಿದ್ದಾರೆ. 'ಚುಕ್ಕಿ ಬಾಳೆಹಣ್ಣು' ಎಂಬುದು ಮೊದಲ ಪ್ರಬಂಧ. ಮಾಮೂಲಿ ಹಸಿರು ಬಾಳೆಹಣ್ಣು ಅಥವಾ ಕ್ಯಾವಂಡೀಶ್ ಹಣ್ಣು ಸ್ವಲ್ಪ ಅಧಿಕ ಹಣ್ಣಾದ ನಂತರ ಅದರ ಹೊರ ಮೈ ಮೇಲೆ ಕಪ್ಪಾದ ಸಣ್ಣ ಸಣ್ಣ ಚುಕ್ಕಿಗಳು ಕಂಡು ಬರುತ್ತವೆ. ಅವನ್ನೇ ಚುಕ್ಕಿ ಬಾಳೆ ಹಣ್ಣು ಎನ್ನುತ್ತಾರೆ. ಇದರ ಬಗ್ಗೆ ಅವರ ಊರಿನ, ಮನೆಯಲ್ಲಿನ ಅನುಭವಗಳನ್ನು ಬರೆಯುತ್ತಾ ಕೊನೆಗೆ ಅವರು ಇಂಗ್ಲೆಂಡ್ ನಲ್ಲಿರುವಾಗ ಆದ ಅನುಭವದ ಬಗ್ಗೆ ಹೀಗೆ ಬರೆಯುತ್ತಾರೆ.
‘ಇಂಗ್ಲೆಂಡ್ ನಲ್ಲಿ ನನಗೆ ಚುಕ್ಕೆ ಬಾಳೆಹಣ್ಣುಗಳು ಸಿಗುತ್ತಿರಲಿಲ್ಲ. ಎಷ್ಟೇ ಸೂಪರ್ ಮಾರ್ಕೆಟ್ ಸುತ್ತಿದರೂ ಹಳದಿ ಮಿಶ್ರಿತ ಬಾಳೆಹಣ್ಣುಗಳನ್ನೇ ಇಡುತ್ತಿದ್ದರು. ಈ ಚುಕ್ಕಿ ಬಾಳೆಹಣ್ಣಿಗೆ ‘ಡಾಟೆಡ್ ಬನಾನ' ಎಂದು ಇಂಗ್ಲೀಷ್ ನಲ್ಲಿ ಕೇಳಿದರೆ ಅಪಹಾಸ್ಯವಾದೀತೋ ಎಂದು ಸುಮ್ಮನಿಸುತ್ತಿದ್ದೆ. ಅಲ್ಲಿಯ ತಂಪು ವಾತಾವರಣದಿಂದ ಹಣ್ಣನ್ನು ಮನೆಗೆ ತಂದು ಇಟ್ಟರೂ ಕಪ್ಪಾಗುತ್ತಿದ್ದವೋ ವಿನಹ ಚುಕ್ಕೆ ಮೂಡುತ್ತಿರಲಿಲ್ಲ.
ಒಮ್ಮೆ ಅಪರೂಪಕ್ಕೆ ಶೆಲ್ಫಿನ ಮೂಲೆಯಲ್ಲಿ ಯಾರಿಗೂ ಕಾಣದ ಸಂದಿನಲ್ಲಿ ನಾಲ್ಕು ಚುಕ್ಕಿ ಬಾಳೆ ಹಣ್ಣುಗಳು ಕಂಡವು. ತಕ್ಷಣವೇ ನಿಧಿಯೇ ಸಿಕ್ಕಂತೆ ಖುಷಿಯಾಗಿ ಅದನ್ನು ಎತ್ತಿಕೊಂಡು ಕೌಂಟರ್ ನತ್ತ ನಡೆದೆ. ಕೌಂಟರ್ ನ ಹುಡುಗಿ “ಸರ್, ಇದು ಹಾಳಾಗಿದೆ. ಆಗಲೇ ಚುಕ್ಕೆಗಳು ಬಂದಿವೆ ನೋಡಿ. ಬೇರೆ ಹಣ್ಣನ್ನು ತರಿಸಿಕೊಡುವೆ" ಎಂದು ಬೆಲ್ ಬಾರಿಸಿದಳು. ನಾನು ನಕ್ಕು “ಅದೇ ಬೇಕು" ಎಂದು ಹೇಳಿದೆ. ಅವಳು ಖಡಾಖಂಡಿತವಾಗಿ ನಿರಾಕರಿಸಿದಳು. ಇದನ್ನು ಮಾರಾಟ ಮಾಡಲು ಆಗುವುದಿಲ್ಲ ಎಂದಳು. “ಹಾಗಾದರೆ ಪುಕ್ಕಟೆಯಾಗಿ ಕೊಡು” ಎಂದು ಗೋಗರೆದೆ. ಆದರೆ ಆಕೆ ಒಪ್ಪಲಿಲ್ಲ. “ ತಿಂದು ನಿಮಗೇನಾದರೂ ಆದರೆ ಅದರ ಜವಾಬ್ದಾರಿ ನಮ್ಮ ಸೂಪರ್ ಮಾರ್ಕೆಟ್ ಗೇ ಬರುತ್ತೆ. ಆದರಿಂದ ಕೊಡಲಾಗುವುದಿಲ್ಲ" ಎಂದು ತಮ್ಮ ಅಸಹಾಯಕತೆಯನ್ನು ತಿಳಿಸಿದಳು. ಹಾಗಾದರೆ ಇದನ್ನೇನು ಮಾಡುತ್ತೀಯಾ? ಎಂದು ಕೇಳಿದಾಗ “ಡಸ್ಟ್ ಬಿನ್ ಗೆ ಹಾಕಿ ಡಿಸ್ ಪೋಸ್ ಮಾಡಿಸುತ್ತೇನೆ" ಎಂದಳು. ಮತ್ತೆ ಮಾತಾಡುವ ಧೈರ್ಯವಿಲ್ಲದೇ ಭಾರವಾದ ಹೆಜ್ಜೆಗಳನ್ನಿಟ್ಟು ಹೊರಗೆ ಬಂದೆ.’
ಇದು ಸ್ಯಾಂಪಲ್ ಅಷ್ಟೇ. ಇದೇ ರೀತಿಯ ನಮ್ಮ ನಡುವಿನ ಆಗುಹೋಗುವಿನ ರಸ ನಿಮಿಷಗಳು ಸುಲಲಿತ ಪ್ರಬಂಧಗಳಾಗಿ ಹೊರ ಹೊಮ್ಮಿವೆ. ಐದು ಪೈಸೆ ವರದಕ್ಷಿಣೆ, ಕುಡಿಯದ ಕೂಸು, ಮಹಾಭಾರತದ ಕೆಲವು ಪ್ರಸಂಗಗಳು (ವಿರಾಟ ಪರ್ವ, ಶಿಖಂಡಿ)ನೀರಿಲ್ಲದ ಹಾಲಿಲ್ಲ, ಪಹಾಡಿ ಹುಡುಗ ಇವೆಲ್ಲಾ ಮತ್ತೆ ಮತ್ತೆ ಓದುವಂತೆ ಮಾಡುತ್ತವೆ.