68. ಹಾಡು ಹಾಡುವ ಇಬ್ಬರು ಸೋದರಿಯರು

68. ಹಾಡು ಹಾಡುವ ಇಬ್ಬರು ಸೋದರಿಯರು

ಅರ್ಪಿತಾ ಮತ್ತು ದೀಪಿಕಾ ಅಕ್ಕತಂಗಿಯರು. ಅರ್ಪಿತಾ ಚೆನ್ನಾಗಿ ಹಾಡುತ್ತಿದ್ದಳು. ಅವಳು ಹಾಡುವಾಗ ಸಭಾಭವನದಲ್ಲಿ ಸೂಜಿ ಬಿದ್ದರೂ ಕೇಳುವಂತಹ ಮೌನ. ಎಲ್ಲರೂ ತದೇಕಚಿತ್ತದಿಂದ ಅವಳು ಮಧುರ ಧ್ವನಿಯಿಂದ ಹಾಡುವುದನ್ನು ಕೇಳುತ್ತಿದ್ದರು.

ಆದರೆ, ತಂಗಿ ದೀಪಿಕಾಳಿಗೆ ಚೆನ್ನಾಗಿ ಹಾಡಲು ಆಗುತ್ತಿರಲಿಲ್ಲ. "ನಾನೂ ಅಕ್ಕನಂತೆ ಹಾಡಲು ಸಾಧ್ಯವಿದ್ದರೆ …" ಎಂದು ದೀಪಿಕಾ ಆಗಾಗ ಚಿಂತಿಸುತ್ತಿದ್ದಳು. ಅದೊಂದು ದಿನ ಅಕ್ಕ ಅರ್ಪಿತಾ ತಂಗಿಯ ಬಳಿ ಬಂದು ಹೇಳಿದರು, “ಇನ್ನು ಮುಂದೆ ನಾವಿಬ್ಬರೂ ಜೊತೆಯಾಗಿ ಹಾಡೋಣ. ಹಾಗೆ ಮಾಡಿದರೆ ನೀನು ಬೇಗನೇ ಚೆನ್ನಾಗಿ ಹಾಡಲು ಕಲಿಯಬಹುದು.”

ಮೊದಲ ಕೆಲವು ದಿನಗಳಲ್ಲಿ ದೀಪಿಕಾಳಿಗೆ ಚೆನ್ನಾಗಿ ಹಾಡಲು ಸಾಧ್ಯವಾಗಲಿಲ್ಲ. ಆದರೆ ಅಕ್ಕನಾಗಲೀ ತಂಗಿಯಾಗಲೀ ವಿಚಲಿತರಾಗಲಿಲ್ಲ. ಅರ್ಪಿತಾ ತಾಳ್ಮೆಯಿಂದ ತಂಗಿಗೆ ಕಲಿಸುತ್ತಿದ್ದಳು ಮತ್ತು ದೀಪಿಕಾ ಶ್ರದ್ಧೆಯಿಂದ ಅಭ್ಯಾಸ ಮಾಡುತ್ತಿದ್ದಳು.

ಅವರ ಶಾಲೆಯ ವಾರ್ಷಿಕೋತ್ಸವದ ದಿನ ಅವರಿಬ್ಬರೂ ಹಾಡಬೇಕೆಂದು ಅವರನ್ನು ಆಹ್ವಾನಿಸಿದರು. ದೀಪಿಕಾಳಿಗೆ ಆತಂಕವಾಯಿತು. ಆದರೆ ಅವಳು ಛಲದಿಂದ ದಿನದಿನವೂ ಹಾಡುತ್ತಾ ಅಭ್ಯಾಸ ಮಾಡಿದಳು. ವಾರ್ಷಿಕೋತ್ಸವದ ದಿನ ಅರ್ಪಿತಾಳ ಆರೋಗ್ಯ ಹದಗೆಟ್ಟಿತು; ಅವಳು ಹಾಡುವ ಸ್ಥಿತಿಯಲ್ಲಿ ಇರಲಿಲ್ಲ. ಕೊನೆಗೆ ದೀಪಿಕಾ ಒಬ್ಬಳೇ ಹಾಡಬೇಕಾಯಿತು. ಅವಳು ಆತ್ಮವಿಶ್ವಾಸದಿಂದ ವೇದಿಕೆಯನ್ನೇರಿ ಹಾಡಲು ಶುರುವಿಟ್ಟಳು. ಯಾಕೆಂದರೆ ಅವಳು ಸತತ ಸಾಧನೆ ಮಾಡಿದ್ದಳು. ಆ ದಿನ ದೀಪಿಕಾ ಅಮೋಘವಾಗಿ ಹಾಡಿದಳು. ಕೊನೆಗೆ ಸಭಿಕರೆಲ್ಲರೂ ಎದ್ದು ನಿಂತು ಚಪ್ಪಾಳೆ ತಟ್ಟಿ ಅಭಿನಂದಿಸಿದರು. ಅದು ಅವಳ ಜೀವನದ ಅತ್ಯಂತ ಅಭಿಮಾನದ ದಿನವಾಯಿತು.