72. ಅಮ್ಮನ ಬಗ್ಗೆ ಪುಟ್ಟ ಮಗಳಿಗೆ ಅಪ್ಪನ ಪಾಠ
ಅದೊಂದು ದಿನ ಪುಟ್ಟಿ ಸುಜಾತಳ ಅಮ್ಮ ದಣಿದು ಬಂದಿದ್ದು, ಅವಸರದಲ್ಲಿ ಚಪಾತಿ ಮಾಡಿದಳು. ಕೆಲವು ಚಪಾತಿಗಳು ಕರಟಿ ಹೋದವು. ಅವನ್ನೇ ಅವಳು ಮಗಳು ಮತ್ತು ಗಂಡನಿಗೆ ತಿನ್ನಲು ಕೊಟ್ಟಳು. ಸುಜಾತಳ ಅಪ್ಪ ಚಪಾತಿ - ಪಲ್ಯ ತಿನ್ನುತ್ತಾ ಮಗಳ ಬಳಿ ಅವಳ ಶಾಲೆಯಲ್ಲಿ ಅವತ್ತು ಏನೇನು ಆಯಿತೆಂದು ಕೇಳಿದರು.
ಆಗ ಸುಜಾತಳ ಅಮ್ಮ ಚಪಾತಿ ಕರಟಿ ಹೋದದ್ದಕ್ಕಾಗಿ ಬೇಸರಿಸಬಾರದೆಂದು ಹೇಳಿದಳು. "ಛೇ, ಅದಕ್ಕೇನಂತೆ? ಚಪಾತಿ ರುಚಿಯಾಗಿತ್ತು” ಎಂದರು ಸುಜಾತಳ ಅಪ್ಪ.
ಆ ದಿನ ರಾತ್ರಿ ಮಲಗುವ ಮುನ್ನ ಸುಜಾತ ಅಪ್ಪನಿಗೆ ಶುಭರಾತ್ರಿ ಹೇಳಿದಳು. ಅನಂತರ ಮೆದುವಾದ ಧ್ವನಿಯಲ್ಲಿ ಅಪ್ಪನ ಬಳಿ ಕೇಳಿದಳು: “ಅಪ್ಪಾ, ಇವತ್ತಿನ ಚಪಾತಿ ನಿಜವಾಗಲೂ ರುಚಿಯಾಗಿತ್ತಾ?" ಅವಳ ಅಪ್ಪ ಕೆಲವು ಕ್ಷಣ ಯೋಚಿಸಿ, ಉತ್ತರಿಸಿದರು, “ನೋಡು ಸುಜಾತಾ, ನಿನ್ನ ಅಮ್ಮ ಇಡೀ ಕಷ್ಟ ಪಟ್ಟು ಕೆಲಸ ಮಾಡಿ, ಸುಸ್ತಾಗಿ ಮನೆಗೆ ಬರುತ್ತಾಳೆ. ಅನಂತರ ಅವಳು ನಮಗಾಗಿ ಅಡುಗೆ ಮಾಡುತ್ತಾಳೆ. ಅದ್ಯಾಕೋ ಏನೋ ಇವತ್ತು ಚಪಾತಿ ಸುಟ್ಟು ಹೋಯಿತು. ಅದಕ್ಕೇನಂತೆ? ಸುಟ್ಟ ಚಪಾತಿ ತಿಂದರೆ ಏನೂ ತೊಂದರೆ ಆಗೋದಿಲ್ಲ. ನಾವು ಇನ್ನೊಬ್ಬರ ಕಷ್ಟಗಳನ್ನು ತಿಳಿದುಕೊಂಡರೆ, ನಮ್ಮ ಸಂಬಂಧಗಳು ಚೆನ್ನಾಗಿ ಇರುತ್ತವೆ.”