75. ಮಕ್ಕಳೊಡನೆ ಸಮಯ ಕಳೆಯಿರಿ
ಮಕ್ಕಳ ಆಟದ ಮೈದಾನಕ್ಕೆ ಮಗನೊಂದಿಗೆ ಬಂದ ಪೂರ್ಣಿಮಾ ಅಲ್ಲಿದ್ದ ಸಿಮೆಂಟಿನ ಬೆಂಚಿನಲ್ಲಿ ಕುಳಿತಳು. ಪಕ್ಕದಲ್ಲಿ ಆಟವಾಡುತ್ತಿದ್ದ ಹುಡುಗನನ್ನು ತೋರಿಸುತ್ತಾ, ತನ್ನ ಪಕ್ಕದಲ್ಲಿ ಕುಳಿತಿದ್ದ ವಯಸ್ಸಾದ ಗಂಡಸಿಗೆ ಅವಳು ಹೇಳಿದಳು, "ಅವನು ನನ್ನ ಮಗ.” ಆ ಗಂಡಸು ತಲೆಯಾಡಿಸುತ್ತಾ, ನಿಮ್ಮ ಮಗ ಚುರುಕಾಗಿದ್ದಾನೆ ಎಂದರು.
ಅನಂತರ ಅಲ್ಲೇ ಪುಟ್ಟ ಸೈಕಲನ್ನು ಓಡಿಸುತ್ತಿದ್ದ ಬಾಲಕಿಯನ್ನು ತೋರಿಸುತ್ತಾ, "ಅವಳು ನನ್ನ ಮಗಳು” ಎಂದರು. ಬಳಿಕ ತನ್ನ ವಾಚನ್ನು ನೋಡಿ, ಮಗಳನ್ನು ಕರೆದರು. “ಅಪ್ಪಾ, ಇನ್ನು ಐದು ನಿಮಿಷ ಆಟವಾಡುತ್ತೇನೆ” ಎಂದು ಮಗಳು ಹೇಳಿದಾಗ ತಲೆಯಾಡಿಸುತ್ತಾ ಒಪ್ಪಿಗೆ ಸೂಚಿಸಿದರು. ಐದು ನಿಮಿಷಗಳ ನಂತರ ಅವರು ಮಗಳನ್ನು ಪುನಃ ಕರೆದರು. ಅವಳು ಪುನಃ “ಅಪ್ಪಾ, ಇನ್ನೂ ಐದು ನಿಮಿಷ ಆಟವಾಡುತ್ತೇನೆ” ಎಂದಳು. ಇವರು ಮುಗುಳ್ನಕ್ಕು ಪುನಃ ಒಪ್ಪಿಗೆ ಸೂಚಿಸಿದರು.
ಇದನ್ನೆಲ್ಲ ನೋಡುತ್ತಿದ್ದ ಪೂರ್ಣಿಮಾ ಹೇಳಿದಳು, "ನಿಮಗೆ ಬಹಳ ತಾಳ್ಮೆ ಇದೆ.” ಆಗ ಆ ತಂದೆ ಹೀಗೆಂದರು, “ಈ ಹುಡುಗಿಯ ಅಣ್ಣ ಕಳೆದ ವರುಷ ಇಲ್ಲೇ ಸೈಕಲಿನಲ್ಲಿ ಆಟವಾಡುತ್ತಿದ್ದಾಗ ಅಪಘಾತವಾಗಿ ತೀರಿಕೊಂಡ. ನಾನು ಅವನೊಂದಿಗೆ ಸಮಯ ಕಳೆಯಲೇ ಇಲ್ಲ. ಈಗ ಅವನೊಂದಿಗೆ ಒಂದೈದು ನಿಮಿಷ ಇರಲಿಕ್ಕಾಗಿ ನಾನು ಏನನ್ನು ಬೇಕಾದರೂ ಕೊಡಬಲ್ಲೆ. ಆದರೆ ಅವನೇ ಈಗಿಲ್ಲ. ನನ್ನ ಮಗಳ ವಿಷಯದಲ್ಲಿ ಅಂತಹ ತಪ್ಪು ಮಾಡಬಾರದೆಂದು ನಾನು ಸಂಕಲ್ಪ ಮಾಡಿದ್ದೇನೆ. ಪ್ರತೀ ಸಲ ನನ್ನನ್ನು ಕೇಳಿದಾಗಲೂ ತನಗೆ ಆಟವಾಡಲು ಇನ್ನೂ ಐದು ನಿಮಿಷ ಸಿಕ್ಕಿತೆಂದು ಅವಳು ಸಂತೋಷ ಪಡುತ್ತಾಳೆ. ನಿಜ ಹೇಳಬೇಕೆಂದರೆ, ಪ್ರತೀ ಸಲ ಅವಳ ಆಟ ನೋಡಲು ನನಗೆ ಇನ್ನೂ ಐದು ನಿಮಿಷ ಸಿಗುತ್ತದೆ.”