80 ದಿನಗಳಲ್ಲಿ ಭೂಪ್ರದಕ್ಷಿಣೆ

80 ದಿನಗಳಲ್ಲಿ ಭೂಪ್ರದಕ್ಷಿಣೆ

ಪುಸ್ತಕದ ಲೇಖಕ/ಕವಿಯ ಹೆಸರು
ಜೂಲ್ಸ್ ವರ್ನ್
ಪ್ರಕಾಶಕರು
ವಸಂತ ಪ್ರಕಾಶನ, ಬೆಂಗಳೂರು
ಪುಸ್ತಕದ ಬೆಲೆ
ರೂ. 95/-

ಜೂಲ್ಸ್ ವರ್ನ್ (1828 - 1905)  ಆಧುನಿಕ ವೈಜ್ನಾನಿಕ ಕತೆಗಳ ಜನಕ ಎಂದೇ ಪ್ರಸಿದ್ಧರು. ವಿಜ್ನಾನದ ಆಧಾರವಿರುವ ಕಾಲ್ಪನಿಕ ಘಟನೆಗಳನ್ನು ಪೋಣಿಸಿ, ಅದ್ಭುತರಮ್ಯವಾದ ಕಾದಂಬರಿಗಳನ್ನು ಬರೆದು ಹೆಸರು ಗಳಿಸಿದವರು. ಹಲವಾರು ವೈಜ್ನಾನಿಕ ಅನ್ವೇಷಣೆಗಳು ಬೆಳಕಿಗೆ ಬಂದ 19ನೇ ಶತಮಾನದಲ್ಲಿ ಅಂತಹ ಕತೆಗಳೂ ಕಾದಂಬರಿಗಳೂ ಜನಪ್ರಿಯವಾದದ್ದು ಅಚ್ಚರಿಯ ಸಂಗತಿಯೇನಲ್ಲ. ಒಂದು ನೂರು ವರುಷಗಳ ಮುಂಚೆಯೇ ಜೂಲ್ಸ್ ವರ್ನ್ ಫ್ಯಾಕ್ಸ್ ಯಂತ್ರ, ಜಲಾಂತರ್ಗಾಮಿ ಇತ್ಯಾದಿಗಳ ಬಗ್ಗೆ ಕಲ್ಪಿಸಿ ಬರೆದಿದ್ದರು.

 ಇದು 1873ರಲ್ಲಿ ರಚಿಸಲಾದ ಕಾದಂಬರಿ. ಫಿಲಿಯಾಸ್ ಫಾಗ್ ಎಂಬವರು ತನ್ನ ಸ್ನೇಹಿತರೊಂದಿಗೆ 20,000 ಪೌಂಡುಗಳ ಮೊತ್ತಕ್ಕೆ ಪಂಥ ಕಟ್ಟುತ್ತಾರೆ: ಕೇವಲ 80 ದಿನಗಳಲ್ಲಿ ಭೂಮಿಯನ್ನು ಸುತ್ತಿ ಬರುತ್ತೇನೆ ಎಂದು! ಲಂಡನಿನಿಂದ ಅಕ್ಟೋಬರ್ 2ರಂದು ರಾತ್ರಿ 8.45 ಗಂಟೆಗೆ ಹೊರಟಿದ್ದ ಫಾಗ್ ಡಿಸೆಂಬರ್ 21ರಂದು ರಾತ್ರಿ 8.45 ಗಂಟೆಯೊಳಗೆ ಇಡೀ ಭೂಗೋಲ ಸುತ್ತಿ ಲಂಡನಿಗೆ ವಾಪಾಸು ಬರುತ್ತೇನೆಂದು ಪಣ ತೊಟ್ಟಿದ್ದರು. ದೂರ ಪ್ರಯಾಣಕ್ಕಾಗಿ ವಿಮಾನ ಹಾಗೂ ಆಧುನಿಕ ವಾಹನ ಸೇವೆಗಳು ಲಭ್ಯವಿಲ್ಲದಿದ್ದ ಆ ಕಾಲದಲ್ಲಿ ಇದೊಂದು ರೋಮಾಂಚಕಾರಿ ಕಲ್ಪನೆಯಾಗಿತ್ತು.

ಫಿಲಿಯಾಸ್ ಫಾಗ್ ನಿಗದಿತ ದಿನ/ ಸಮಯದಲ್ಲಿ ಲಂಡನಿನಿಂದ ಭೂಪ್ರದಕ್ಷಿಣೆಗೆ ಹೊರಟೇ ಬಿಟ್ಟರು - ಕೆಲವೇ ದಿನಗಳ ಮುಂಚೆ ಮನೆಗೆಲಸದ ಸೇವಕನಾಗಿ ಸೇರಿಕೊಂಡಿದ್ದ ಪಾಸ್ ಪರತೋ ಎಂಬ ಫ್ರೆಂಚ್ ವ್ಯಕ್ತಿಯ ಜೊತೆ. ಅದಲ್ಲದೆ, ಫಿಕ್ಸ್ ಎಂಬ ಪತ್ತೇದಾರನೊಬ್ಬ ಇವರಿಬ್ಬರನ್ನು ಹಿಂಬಾಲಿಸುತ್ತಾನೆ. ಆತನಿಗೆ ಲಂಡನಿನಲ್ಲಿ ಭಾರೀ ಬ್ಯಾಂಕ್ ದರೋಡೆ ಮಾಡಿದ್ದು ಫಿಲಿಯಾಸ್ ಫಾಗ್ ಎಂಬ ಗಾಢ ಅನುಮಾನ; ಹೇಗಾದರೂ ಮಾಡಿ ಅವರನ್ನು ಬಂಧಿಸಿ, ಪೊಲೀಸರಿಗೊಪ್ಪಿಸಿ ಭಾರೀ ಬಹುಮಾನ ಪಡೆಯಬೇಕೆಂಬುದು ಅವನ ಹುನ್ನಾರ. ಸಮುದ್ರಯಾನ ಮತ್ತು ರೈಲು ಯಾನಗಳ ಮೂಲಕ ಅವರ ಭೂಪ್ರದಕ್ಷಿಣೆ ಮುಂದುವರಿಯುತ್ತದೆ.

ಈ ಭೂಪ್ರದಕ್ಷಿಣೆಯಲ್ಲಿ ಜರಗುವ ಅನಿರೀಕ್ಷಿತ ಘಟನೆಗಳು ಓದುಗರ ಕುತೂಹಲವನ್ನು ಕಾಯ್ದುಕೊಳ್ಳುತ್ತವೆ. ಅದರೊಂದಿಗೆ, ಪತ್ತೇದಾರನ ದುರುಳ ಯೋಜನೆಗಳು ಕೊನೆಯ ವರೆಗೂ ಕತೆಗೆ ನಿಗೂಢತೆಯ ಮೆರುಗು ನೀಡುತ್ತವೆ. ಫಿಲಿಯಾಸ್ ಫಾಗ್ ಭಾರತವನ್ನೂ ಹಾದು ಹೋಗಬೇಕಾಗುತ್ತದೆ. ಆಗ ಜರಗುವ ಘಟನೆಯಂತೂ ಲೇಖಕರ ಕಲ್ಪನಾ ವಿಲಾಸಕ್ಕೆ ಉತ್ತಮ ಪುರಾವೆ.

ತನ್ನ ರೋಚಕ ಭೂಯಾನದಲ್ಲಿ ಫಿಲಿಯಾಸ್ ಫಾಗ್ ಆನೆ, ಸಾರೋಟು, ನೌಕೆ ಇವನ್ನೆಲ್ಲ ಖರೀದಿಸಬೇಕಾಗುತ್ತದೆ. ದರೋಡೆಗಾರರಿಂದ ತನ್ನ ಸೇವಕನ ಪ್ರಾಣ ರಕ್ಷಿಸುವ ಅವರ ದಿಟ್ಟ ಕೆಲಸವು, ಅವರ ವ್ಯಕ್ತಿತ್ವದ ಇನ್ನೊಂದು ಮುಖವನ್ನು ನಮಗೆ ಪರಿಚಯಿಸುತ್ತವೆ. ಭೂಪ್ರದಕ್ಷಿಣೆಯ ಕೊನೆಯ ಹಂತದಲ್ಲಿ ನೌಕೆಯ ಕಲ್ಲಿದ್ದಲು ಮುಗಿದು, ಯಾನ ಮುಂದುವರಿಸಲು ಅಸಾಧ್ಯವಾದಾಗ ಅವರು ಕೃತಿಗಿಳಿಸಿದ ಪರಿಹಾರವಂತೂ ಅವರ ಅನ್ವೇಷಕ ಮನಸ್ಸಿನ ದ್ಯೋತಕ.

ಫಿಲಿಯಾಸ್ ಫಾಗ್ ತನ್ನ ಪಂಥದಲ್ಲಿ ಕೇವಲ ಐದು ನಿಮಿಷಗಳಿಂದ ಸೋತೆನೆಂದು ಅಂದುಕೊಳ್ಳುತ್ತಾರೆ. ಅದಾಗಿ ಒಂದು ದಿನವಿಡೀ ಎಲ್ಲವೂ ಮುಗಿದು ಹೋಯಿತು ಎಂಬ ನಿರಾಶೆಯ ಭಾವದಲ್ಲಿ ಮುಳುಗುತ್ತಾರೆ. ಅಷ್ಟರಲ್ಲಿ ಮತ್ತೊಂದು ಅನಿರೀಕ್ಷಿತ ತಿರುವು. ಮುಂದೇನಾಯಿತೆಂಬುದು ಜೂಲ್ಸ್ ವರ್ನ್ ಅವರ ಪ್ರತಿಭೆಗೆ ಜ್ವಲಂತ ಸಾಕ್ಷಿ.

ಕಾದಂಬರಿಯ ಉದ್ದಕ್ಕೂ ವಿವಿಧ ಭೂಪ್ರದೇಶಗಳ ಚಂದದ ವರ್ಣನೆ ಮತ್ತು ರೋಮಾಂಚನಗೊಳಿಸುವ ವಿದ್ಯಮಾನಗಳ ಸರಣಿ ಇದನ್ನು ಓದಲೇ ಬೇಕಾದ ಪುಸ್ತಕಗಳಲ್ಲಿ ಒಂದಾಗಿಸಿದೆ. ಬಿ.ಎಸ್. ವಿದ್ಯಾರಣ್ಯ ಕಾದಂಬರಿಯನ್ನು ಸೊಗಸಾಗಿ ಕನ್ನಡಕ್ಕೆ ಅನುವಾದಿಸಿದ್ದಾರೆ.