A5 - ನನ್ನ(ದುರಂತ) ಕಥೆ

A5 - ನನ್ನ(ದುರಂತ) ಕಥೆ

ರಾಮಾಪುರದ ಅರಣ್ಯದಲ್ಲಿ ಗನ್ ಗಳ ಶಬ್ದ ಜೋರಾಗಿ ಕೇಳಿ ಬರುತ್ತಿದೆ. ಅದು ನಕ್ಸಲರ ಹಾಗೂ ವಿಶೇಷ ನಕ್ಸಲ್ ನಿಗ್ರಹ ದಳದ ನಡುವೆ ನಡೆದಿದ್ದ ಗುಂಡಿನ ಕಾಳಗ. ಸುಮಾರು ಮುಕ್ಕಾಲು ಗಂಟೆಗಳ ನಂತರ ಆ ಗುಂಡಿನ ಮೊರೆತ ನಿಂತಿತು. ಈಗಲ್ಲಿ ನೀರವ ಮೌನ ಆವರಿಸಿದೆ. ನಕ್ಸಲ್ ಗುಂಪಿನ ಐದು ಜನರ ಮೈ ತೂತು ತೂತಾಗಿತ್ತು. ಇಬ್ಬರು ಪೋಲೀಸರ ದೇಹವೂ ಅದಕ್ಕೆ ಭಿನ್ನವಾಗಿರಲಿಲ್ಲ. ನಕ್ಸಲ್ ನಿಗ್ರಹ ಪಡೆಯ ಮುಖ್ಯಸ್ಥ ಧೀರಜ್ ಆ ದೇಹಗಳನ್ನು ಪರಿಶೀಲಿಸುತ್ತ ಕೊನೆಯ ನಕ್ಸಲ್ ದೇಹದ ಬಳಿ ಬಂದಾಗ ಕ್ಷಣ ಕಾಲ ಆ ವ್ಯಕ್ತಿಯ ಮುಖ ಎಲ್ಲೋ ತನಗೆ ಪರಿಚಿತ ಮುಖದಂತೆ ಕಂಡುಬಂದಿತು. ಸ್ವಲ್ಪ ಹೊತ್ತು ಯೋಚಿಸಿದಾಗ ತಾನು ಕಳೆದ ಬಾರಿ ರಾಮಾಪುರ ಅರಣ್ಯಕ್ಕೆ ಚಾರಣಕ್ಕೆಂದು ಬಂದಿದ್ದಾಗ ಪರಿಚಯವಾಗಿದ್ದ ವ್ಯಕ್ತಿಯೇ ಈತ ಎಂದು ಗೊತ್ತಾಯಿತು. ಆತ ಸತ್ತು ಬಿದ್ದಿದ್ದ ಟೆಂಟ್ ನ ಒಳಗೆ ಹೋದ ಧೀರಜ್ ಅಲ್ಲಿ ಬಿದ್ದಿದ್ದ ಒಂದು ಡೈರಿಯನ್ನು ತೆಗೆದುಕೊಂಡು ಆಚೆ ಬಂದು ಆ ದೇಹಗಳನ್ನು ಪೋಸ್ಟ್ ಮಾರ್ಟಂಗೆ ಕಳಿಸುವ ವ್ಯವಸ್ಥೆ ಮಾಡಿ ತಾನು ತನ್ನ ಕಚೇರಿಗೆ ಹಿಂದಿರುಗಿದ. ಕಚೇರಿಯಲ್ಲಿ ಇವನಿಗೆ ಅಭೂತಪೂರ್ವ ಸ್ವಾಗತ ದೊರೆಯಿತು. ಯಶಸ್ವಿಯಾಗಿ ಕಾರ್ಯಾಚರಣೆ ಮುಗಿಸಿ ಬಂದ ಧೀರಜ್ ಗೆ ಹಾಗೂ ಅವನ ತಂಡದವರಿಗೆ ಸತ್ಕಾರಗಳು ಮುಗಿಯಿತು. ಅಲ್ಲಿಂದ ಸೀದಾ  ತನ್ನ ರೂಮಿಗೆ ಬಂದ ಧೀರಜ್ ಸ್ವಲ್ಪ ಹೊತ್ತು  ಮಲಗಿಕೊಳ್ಳೋಣ ಎಂದುಕೊಂಡವನೇ ಕೂಡಲೇ ಅವನಿಗೆ  ಅಲ್ಲಿ ಸಿಕ್ಕಿದ್ದ ಡೈರಿ ನೆನಪಿಗೆ ಬಂತು. ತಕ್ಷಣ ಎದ್ದು ಆ ಡೈರಿಯನ್ನು ಓದಲು ಕುಳಿತ.

ಮೊದಲ ಪುಟ ತಿರುಗಿಸಿದ - ಈ ನನ್ನ ಡೈರಿಯನ್ನು ನೀವೀಗ ಓದುತ್ತಿದ್ದೀರ ಎಂದರೆ ನಾನು ಈ ಪ್ರಪಂಚದಿಂದ ವಿದಾಯ ತೆಗೆದುಕೊಂಡಿದ್ದೇನೆ ಎಂದರ್ಥ. ನಾನು ಸತ್ತಿದ್ದೇನೆ ಅಥವಾ ನನ್ನನು ಯಾರಾದರೂ ಕೊಂದಿದ್ದಾರೆ ಎಂದರ್ಥ. ಈ ಡೈರಿಯಲ್ಲಿ ನಿಮಗೆ ಯಾವುದೇ ಕುತೂಹಲಕಾರಿ ಅಂಶಗಳಿರುವುದಿಲ್ಲ. ಬದಲಿಗೆ ನಾನು ನನ್ನ ಜೀವನದಲ್ಲಿ ಅನುಭವಿಸಿದ ಘಟನೆಗಳ ಒಂದು ವಿಹಂಗಮ ನೋಟ ಅಷ್ಟೇ ದಾಖಲಿಸಿದ್ದೇನೆ. ಬಹುಶ ಓದುಗನಿಗೆ ಬೇಜಾರಾದರೆ ಅವನು ಈ ಡೈರಿಯನ್ನು ಏನು ಬೇಕಾದರೂ ಮಾಡಬಹುದು. ಏಕೆಂದರೆ ಇದು ನನ್ನದು, ನನ್ನವರದು ಎಂದು. ಅಥವಾ ಇದು ಅಮೂಲ್ಯವಾದದು ಎಂದು ಹಕ್ಕು ಸಾಧಿಸುವವರು ಯಾರು ಇಲ್ಲ. 

ಇಂತಿ ನಿಮ್ಮ, ಕ್ಷಮಿಸಿ ಯಾರಿಗೂ ಬೇಡವಾದವ

 


A5.  

ನನ್ನ ಹೆಸರು ಕುಬೇರ. ಅಪ್ಪ ಅಮ್ಮ ಇಟ್ಟ ಹೆಸರು ಇದು. ಅದು ಯಾವ ಅರ್ಥದಲ್ಲಿ ನನಗೆ ಅನ್ವಯವೂ ಗೊತ್ತಿಲ್ಲ. ಕುಚೇಲ ಎಂದು ಇಡುವ ಬದಲು ನಮ್ಮಪ್ಪ ಅಮ್ಮ ನನಗೆ ಕುಬೇರ ಎಂದು ಹೆಸರಿಟ್ಟಿದ್ದರು. ನಮ್ಮ ಊರು ರಾಮಾಪುರ. ಅಪ್ಪ ವ್ಯವಸಾಯ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. ಅಮ್ಮ ಮನೆಯಲ್ಲೇ ಇರುತ್ತಿದ್ದರು. ನನಗೊಬ್ಬಳು ಅಕ್ಕ ಇದ್ದಳು. ಅವಳಿಗೆ ನನ್ನ ಕಂಡರೆ ಬಹಳ ಪ್ರೀತಿ. ಬಡತನಕ್ಕೆಂದು ಒಂದು ಅವಾರ್ಡ್ ಇದ್ದಿದ್ದರೆ ಅದಕ್ಕೆ ನಾವು ಅರ್ಜಿ ಸಲ್ಲಿಸಬಹುದಿತ್ತು. ಅಷ್ಟು ಬಡವರು. ಇನ್ನೊಂದು ವಿಷಯ ನಮ್ಮಪ್ಪನ ಹೆಸರು ಲಕ್ಷ್ಮಿಪತಿ,  ನಮ್ಮ ತಾಯಿ ಲಕ್ಷ್ಮೀದೇವಿ ಹಾಗೆ ನಮ್ಮಕ್ಕನ ಹೆಸರು ಐಶ್ವರ್ಯ ಅಂತ. ದಯವಿಟ್ಟು ನಗು ತಡೆಯಕ್ಕೆ ಆಗದಿದ್ದರೆ ನಕ್ಕುಬಿಡಿ. ನಮಗಿದ್ದ ಬಡತನಕ್ಕೆ ನಮ್ಮ ಮನೆಯವರ ಯಾರ ಹೆಸರುಗಳೂ ಸೂಕ್ತವಾಗಿರಲಿಲ್ಲ.

ಹೆಣ್ಣುಮಗಳು ಓದುವುದು ಏನು ಎಂದು ನಮ್ಮಕ್ಕನನ್ನು ಶಾಲೆಗೇ ಕಳಿಸಲಿಲ್ಲ ನಮ್ಮಪ್ಪ. ಇನ್ನು ನನ್ನನ್ನು ಅದೇ ರಾಮಾಪುರದ ಸರ್ಕಾರಿ ಶಾಲೆಗೆ ಸೇರಿಸಿದ್ದ. ಬಹುಶ ಒಂದು ಹೊತ್ತು ಶಾಲೆಯಲ್ಲಿ ಮಗ ಊಟ ಮಾಡಿದರೆ  ಮನೆಯಲ್ಲಿ ಊಟದ ಖರ್ಚು ಮಿಗುತ್ತಿತ್ತು ಎಂದ ದೂರದೃಷ್ಟಿಯಿಂದ ಕಳುಹಿಸುತ್ತಿದ್ದನೋ ಗೊತ್ತಿಲ್ಲ. ನನಗಂತೂ ಓದುವುದೆಂದರೆ ತುಂಬಾ ಆಸೆ ಇತ್ತು. ಅದೇ ರೀತಿ ಓದುತ್ತಿದ್ದೆ ಕೂಡ. ಇಡೀ ಶಾಲೆಗೆ ನಾನೇ ಮೊದಲಿಗ. ಅದನ್ನು ನಮ್ಮ ಮನೆಯಲ್ಲಿ ಹೇಳಿದರೆ ಅಪ್ಪ ಅಮ್ಮನಿಂದ ಯಾವತ್ತೂ ಮೆಚ್ಚುಗೆ ಸಿಗದಿದ್ದರೂ ಅಕ್ಕ ಅಂತೂ ನನ್ನನ್ನು ಪ್ರತಿ ಸಲ ಹುರಿದುಂಬಿಸಿ ಪ್ರೋತ್ಸಾಹಿಸುತ್ತಿದ್ದಳು. ಅಪ್ಪ ಅಮ್ಮ ಮೆಚ್ಚುಗೆ ಸೂಚಿಸದಿದ್ದರೂ ಯಾವತ್ತೂ ನನ್ನ ಓದಿಗೆ ಅಡ್ಡ ಬರುತ್ತಿರಲಿಲ್ಲ. ಅಲ್ಪ ಸ್ವಲ್ಪ ಮಿಗುತ್ತಿದ್ದ ಹಣದಲ್ಲೇ ನನಗೆ ಅಗತ್ಯವಿದ್ದ ಪುಸ್ತಕಗಳನ್ನು ಕೊಡಿಸುತ್ತಿದ್ದ. ಹಾಗೂ ಹೀಗೂ ಹತ್ತನೇ ತರಗತಿಗೆ ಬಂದೆ. ಆಗ ಪರೀಕ್ಷೆಯ ಸಮಯ ನಾನು ರಾತ್ರಿ ಒಬ್ಬನೇ ಕುಳಿತ್ತು ಓದಿಕೊಳ್ಳುತ್ತಿದ್ದೆ. ಇದ್ದಕ್ಕಿದ್ದಂತೆ ನಮ್ಮ ಹಿತ್ತಲ ಬಾಗಿಲನ್ನು ಯಾರೋ ಜೋರಾಗಿ ಬಡಿದ ಹಾಗಾಯಿತು. ಅಪ್ಪನನ್ನು ಎಬ್ಬಿಸೋಣ ಎಂದರೆ ಅವನು ಜೋರಾಗಿ ಗೊರಕೆ ಹೊಡೆಯುತ್ತಾ ಮಲಗಿದ್ದ. ಸರಿ ನಾನೇ ತೆಗೆಯೋಣ ಎಂದುಕೊಂಡು ಧೈರ್ಯ ಮಾಡಿ ಹಿತ್ತಲ ಬಳಿ ಬಂದು ಬಾಗಿಲು ತೆಗೆದೇ.

ಕೂಡಲೇ ನಾಲ್ಕೈದು ಮುಸುಗುಧಾರಿ ವ್ಯಕ್ತಿಗಳು ನನ್ನನ್ನು ತಳ್ಳಿಕೊಂಡು  ಒಳಗೆ ಬಂದು ಹಿತ್ತಲಲ್ಲಿ ಕುಳಿತರು. ಒಬ್ಬ ನನ್ನೆಡೆಗೆ ಗನ್ ಹಿಡಿದು ಜೋರಾಗಿ ಕಿರುಚಿದರೆ ಕೊಂದುಬಿಡುತ್ತೇನೆ ಎಂದು ಹೆದರಿಸಿದ. ಕೂಗಲು ಗಂಟಲಿಗೆ ಬಂದ ಸ್ವರ ಹಾಗೆಯೇ ಒಳಗೆ ಹೋಗಿ ನನ್ನನ್ನು ಮೂಕನನ್ನಾಗಿಸಿತು. ಆ ಗುಂಪಿನಲ್ಲಿ ಇಬ್ಬರು ಮಹಿಳೆಯರು ಇದ್ದರು. ಅವರೆಲ್ಲ ಅದೊಂಥರ ಖಾಖಿಯೂ ಅಲ್ಲದ ಕಂದು ಅಲ್ಲದ ಮಿಶ್ರಿತ ಬಣ್ಣದ ಶರ್ಟು ಮತ್ತು ಪ್ಯಾಂಟು ಹಾಕಿದ್ದರು. ಜೊತೆಗೆ ಕತ್ತಿಗೊಂದು ಕೆಂಪು ಬಟ್ಟೆ ಸುತ್ತಿಕೊಂಡಿದ್ದರು. ಎಲ್ಲರ ಕೈಯಲ್ಲೂ ಬಂದೂಕುಗಳಿದ್ದವು. ನನ್ನನ್ನು ಒಂದು ಮೂಲೆಯಲ್ಲಿ ಕೂರಿಸಿ ಅವರು ಏನೇನೋ ಮಾತಾಡಿಕೊಳ್ಳುತ್ತಿದ್ದರು. ಅವರ ಮಾತುಗಳು ಹೀಗಿತ್ತು " ನಾಳೆ ಆ ಶುಗರ್ ಫ್ಯಾಕ್ಟರಿ ಉದ್ಘಾಟನೆಗೆ ಮಂತ್ರಿಗಳ ಕಾರು ಇದೆ ಕಾಡಿನ ರಸ್ತೆಯ ಪಕ್ಕದಲ್ಲೇ ಹಾದು  ಹೋಗುವುದು, ನಾವೆಷ್ಟೇ ವಿರೋಧಿಸಿದರೂ ಆ ಫ್ಯಾಕ್ಟರಿ ಶುರುಮಾಡಲು ಒಪ್ಪಿಗೆ ನೀಡಿರುವ ಆ ಮಂತ್ರಿಯನ್ನು ನಾಳೆಯೇ ಮುಗಿಸಬೇಕು. A1  ಹಾಗೂ A3 ಲ್ಯಾಂಡ್ ಮೇನ್ ಅನ್ನು ಫಿಕ್ಸ್ ಮಾಡಬೇಕು. A2, A4, A5 ಹಾಗೂ A6 ಅಲ್ಲೇ ಮರಗಳ ಪಕ್ಕದಲ್ಲಿ ಅವಿತುಕೊಂಡಿರಬೇಕು. ಒಂದು ವೇಳೆ ಲ್ಯಾಂಡ್ ಮೇನ್ ವಿಫಲವಾದಲ್ಲಿ ಕೂಡಲೇ ಈ ನಾಲ್ಕು ಜನ ಅಟಾಕ್ ಮಾಡಬೇಕು. ಎಂದು ಮಾತು ನಿಲ್ಲಿಸಿ ನನ್ನ ಕಡೆ ತಿರುಗಿ ನೋಡೋ ಮರಿ ನಾವೆಲ್ಲಾ ಈ ಊರಿಗೆ ಉಪಕಾರ ಮಾಡಲು ಬಂದಿರೋದು. ಬೆಳಿಗ್ಗೆವರೆಗೂ ಇಲ್ಲಿದ್ದು ನಂತರ ಹೊರಟು ಬಿಡುತ್ತೇವೆ. ಯಾರಿಗಾದರೂ ಈ ವಿಷಯ ಹೇಳಿದರೆ ಎಲ್ಲರನ್ನೂ ಸುಟ್ಟು ಬಿಡುತ್ತೇವೆ ಎಂದು ಬೆಳಿಗ್ಗೆವರೆಗೂ ಅಲ್ಲಿದ್ದು ನಂತರ ಹೊರಟು ಹೋದರು. ಅವರು ಹೋದ ಕೂಡಲೇ ಓಡಿ ಬಂದು ಅಪ್ಪನನ್ನು ಎಬ್ಬಿಸಿ ಎದುಸುರಿನಲ್ಲಿ ನಡೆದ ವಿಷಯವನ್ನೆಲ್ಲ ವಿವರಿಸಿದೆ. ಅಪ್ಪ ಕೂಡಲೇ ಗಾಭರಿಯಿಂದ ಒಹ್ " ನಕ್ಸಲರು " ಎಂದು ಉದ್ಘಾರ ತೆಗೆದು, ಇನ್ಯಾರಿಗೂ ಈ ವಿಷಯ ಹೇಳಬೇಡ ನಾನೂ ಯಾರಿಗೂ ಹೇಳುವುದಿಲ್ಲ. ಇನ್ನು ಹೇಳಿದರೆ ನಮ್ಮ ಕಥೆ ಮುಗಿಸಿಬಿಡುತ್ತಾರೆ ಎಂದು ನನ್ನನ್ನು ಶಾಲೆಗೆ ತಯಾರಾಗು ಎಂದು ಕಳಿಸಿದ.

 


ನಾನು ಆ ವಿಷಯ ಸಂಪೂರ್ಣ ಮರೆತು ಪರೀಕ್ಷೆಗೆ ಹೋದೆ. ಆ ಬಾರಿಯ ಹತ್ತನೇ ತರಗತಿ ಫಲಿತಾಂಶ ಹೊರಬಿದ್ದಿತ್ತು. ನಾನು ಆ ಇಡೀ ಜಿಲ್ಲೆಗೆ ಪ್ರಥಮನಾಗಿ ಬಂದಿದ್ದೆ. ಮೊದಲ ಬಾರಿ ಅಪ್ಪ ಅಮ್ಮ ಈ ವಿಷಯ ಕೇಳಿ ಸಂತೋಷ ಪಟ್ಟಿದ್ದನ್ನು ಕಂಡೆ. ಜೊತೆಯಲ್ಲೇ ಅಪ್ಪ ಸಾಕು ಇನ್ನು ನಿನ್ನ ಓದು ಇಲ್ಲೇ ಯಾವುದಾದರೂ ಕೆಲಸ ನೋಡಿಕೋ ಎಂದ. ನಾನು ಸಿಟ್ಟಿನಿಂದ ಇಲ್ಲ ನಾನು ಮುಂದಕ್ಕೆ ಓದಬೇಕು ಎಂದಾಗ ಅಕ್ಕ, ಅಮ್ಮ ಇಬ್ಬರೂ ನನ್ನ ಬೆಂಬಲಕ್ಕೆ ನಿಂತಾಗ ಅಪ್ಪ ಇಲ್ಲ ಎನ್ನಲಾಗದೆ ಒಪ್ಪಿಕೊಂಡ. ನಕ್ಸಲರ ವಿಷಯ ಸಂಪೂರ್ಣ ಮರೆತಿದ್ದ ನನಗೆ ಮರುದಿನ ಪೇಪರ್ನಲ್ಲಿ ರಾಮಾಪುರದ ಅರಣ್ಯದ ಸಮೀಪ ಪೋಲಿಸ್ ಹಾಗೂ ನಕ್ಸಲರ ನಡುವೆ ಗುಂಡಿನ ಕಾಳಗ ,ಮಂತ್ರಿಗಳು ಅಪಾಯದಿಂದ ಪಾರು. ಎಂಬ ಸುದ್ದಿ ಕೇಳಿ ದಿಗ್ಭ್ರಮೆ ಉಂಟಾಯಿತು.

ಅಷ್ಟರಲ್ಲಿ ಗೋಡೆಯ ಗಡಿಯಾರ ಹನ್ನೆರಡು ಬಾರಿ ಸದ್ದು ಮಾಡಿತು. ಧೀರಜ್ ಒಮ್ಮೆ ಗಡಿಯಾರದೆಡೆಗೆ ನೋಡಿ ಡೈರಿ ಯನ್ನು ಬೆಳಿಗ್ಗೆ ಓದೋಣ ಎಂದುಕೊಂಡು ಅಲ್ಲಿಗೆ ಮುಚ್ಚಿಟ್ಟು ಮಲಗಿಕೊಂಡ. ಆದರೆ ತಲೆಯಲ್ಲ ಕುಬೇರನೆ ತುಂಬಿಕೊಂಡಿದ್ದ.  

ಮುಂದುವರೆಯುವುದು....

Comments