black & decker

black & decker

ಬರಹ

ಆಸ್ಟ್ರೇಲಿಯದಲ್ಲೊಂದು ವಿಸ್ಮಯಕಾರಿ, ನಂಬಲಸಾಧ್ಯವಾದ ಶಸ್ತ್ರ ಚಿಕಿತ್ಸೆ. ೧೨ ವರ್ಷ ಪ್ರಾಯದ ನಿಕೊಲಸ್ ರೊಸ್ಸಿ ಸೈಕಲ್ ನಿಂದ ಬಿದ್ದು ತಲೆಗೆ ಪೆಟ್ಟು ಮಾಡಿಕೊಂಡ. ತಲೆನೋವು ಮತ್ತು ಸ್ನಾಯು ಸೆಳೆತ ಬಿಟ್ಟರೆ ಮೇಲ್ಮೆಯಲ್ಲಿ ಯಾವುದೇ ಗುರುತರವಾದ ಗಾಯ ಕಾಣದಿದ್ದರೂ ಅವನ ತಾಯಿಗೆ ಕಂಡಿತು ಮಗನ ಕಿವಿಯ ಹಿಂದೆ ಸಣ್ಣ ಊತ. ಕೂಡಲೇ ಮಗನನ್ನು ಆಸ್ಪತ್ರೆಗೆ ಕೊಂಡೊಯ್ದಾಗ ಹುಡುಗನನ್ನು ಪರೀಕ್ಷಿಸಿದ ವೈದ್ಯರಿಗೆ ಮೆದುಳಿನಲ್ಲಿ ರಕ್ತ ಹೆಪ್ಪುಗಟ್ಟಿರುವುದು ಕಂಡು ಬಂತು. ಮೇರಿಬರೋ ಚಿಕ್ಕ ಊರು. ಈ ಶಸ್ತ್ರ ಚಿಕಿತ್ಸೆಗೆ ಬೇಕಾದ ಸೌಲಭ್ಯ ಆಸ್ಪತ್ರೆಯಲ್ಲಿಲ್ಲದಿದ್ದರೂ ತುರ್ತು ಚಿಕಿತ್ಸಾ ವಿಭಾಗವನ್ನೇ ಶಸ್ತ್ರಕ್ರಿಯೆಗೆ ಸಜ್ಜುಗೊಳಿಸಿದ ವೈದ್ಯರಿಬ್ಬರು ಹುಡುಗನನ್ನು ಉಳಿಸುವ ಕಾರ್ಯ ಆರಂಭಿಸಿದರು. ಆಸ್ಪತ್ರೆಯ ನಿರ್ವಹಣೆಯ ಸಿಬ್ಬಂದಿಯವರಿಂದ 'black and decker" ಡ್ರಿಲ್ಲಿಂಗ್ ಮೆಶಿನ್ ಪಡೆದು ಅದಕ್ಕೆ ೧೦ ಮಿ.ಮಿ. ಬಿಟ್ ಅಳವಡಿಸಿ ಆರಂಭಿಸಿಯೇ ಬಿಟ್ಟರು ಶಸ್ತ್ರ ಚಿಕಿತ್ಸೆ. ಪೆಟ್ಟಾದ ಕಿವಿಯ ಮೇಲ್ಭಾಗಕ್ಕೆ ಡ್ರಿಲ್ ನಿಂದ ತೂತು ಮಾಡಿ ಹೆಪ್ಪು ಗಟ್ಟಿದ ರಕ್ತವನ್ನು ತೆಗೆದು ಅದೇ ಸಮಯ ರಕ್ತವನ್ನು ಸರಬರಾಜು ಮಾಡಿದರು. ಈ ವೇಳೆಯಲ್ಲಿ ಮೆಲ್ಬೋರ್ನ್ ನಗರದ ನರತಜ್ಞರು ಈ ವೈದ್ಯರಿಗೆ ಫೋನ್ ಮೂಲಕ ನಿರ್ದೇಶನ ಕೊಡುತ್ತಿದ್ದರು. ನರತಜ್ಞ ರ ಪ್ರಕಾರ ಹುಡುಗ ಉಳಿಯುವ ಯಾವುದೇ ಸಾಧ್ಯತೆ ಇರಲಿಲ್ಲ. ಆದರೂ ಹುಡುಗನನ್ನು ಹೆಲಿಕಾಪ್ಟರಿನಲ್ಲಿ ನಗರಕ್ಕೆ ಕರೆತಂದರೂ ಆತ ಬದುಕುಳಿಯುವ ಸ್ಥಿತಿಯಲ್ಲಿರಲಿಲ್ಲ. ಹೀಗೆ ಒಂದು ಸೆ. ಮಿ. ಅಗಲ ಡ್ರಿಲ್ ಮಾಡಿದ ನಂತರ ಮೆದುಳಿನ ಮೇಲಿನ ಒತ್ತಡ ಕಡಿಮೆಯಾದ ಕೂಡಲೇ ಬಾಲಕ ಚೇತರಿಸಿಕೊಂಡ. ಅತ್ಯಂತ ವಿಸ್ಮಯಕಾರಿಯಾಗಿ ಹುಡುಗ ಬದುಕುಳಿದ.

ಯಶಸ್ವೀ ಶಸ್ತ್ರ ಕ್ರಿಯೆ ನಂತರ ಮಾತನಾಡಿದ ವೈದ್ಯರುಗಳು ಡ್ರಿಲ್ ಮಾಡುವ ಕೆಲಸ ಸುಲಭದ್ದಲ್ಲ, ಯಾವಾಗ ಎಲ್ಲಿ ಡ್ರಿಲ್ ಮಾಡಬೇಕು ಮತ್ತು ಯಾವಾಗ ನಿಲ್ಲಿಸಬೇಕೆಂದು ತಿಳಿದಿರಬೇಕು ಮತ್ತು ಸಾವು ಬದುಕಿನ ನಡುವೆ ಓಲಾಡುತ್ತಿದ್ದ ಹುಡುಗನನ್ನು ಬದುಕಿಸುವುದೇ ನನ್ನ ತಲೆಯಲ್ಲಿ ಇದ್ದದ್ದು ಎಂದು ಹೇಳಿದರು. ಅತ್ಯಂತ ವಿಶ್ವಾಸದಿಂದ, ಸಮಪ್ರಜ್ಞೆಯಿಂದ ಕಾರ್ಯ ನಿರ್ವಹಿಸಿದ ವೈದ್ಯರಾದ ಕಾರ್ಸೆನ್ ಮತ್ತು ಡೇವಿಡ್ ತೈನನ್ ಎಲ್ಲರ ಪ್ರಶಂಸೆಗೆ ಪಾತ್ರರಾದರು.