ಅಂಡಿಗೆ ಗುಂಡು

ಅಂಡಿಗೆ ಗುಂಡು

ಕಿತಾಪತಿ ಜಾಸ್ತಿ ಆದಾಗ ಕಿಡಿಗೇಡಿಗಳ ವಿರುದ್ಧ  ಪೊಲೀಸರು ಕಂಡಲ್ಲಿ ಗುಂಡು ಪ್ರಯೋಗಿಸುವುದುಂಟು. ಅಮೆರಿಕೆಯ ನಗರವೊಂದರಲ್ಲಿ ಬೇರೆಯದೇ ಆದ ಘಟನೆ. ಇಲ್ಲಿ ಅಂಡಿಗೆ ಗುಂಡು. ಅಂಡುಗಳ ಪ್ರದರ್ಶನದಿಂದ ರೋಸಿ ಹೋದ ನನಗೆ ಈ ರೋಚಕ ಸುದ್ದಿ ಓದಿ ಒಂದು ರೀತಿಯ ಆನಂದ. ಗುಂಡು ಗಳನ್ನು ಹಾರಿಸಿ ತನ್ನ ಹತಾಶೆ ಹೊರ ಹಾಕಿದ “ಕೆನ್ನೆತ್ ಬಾಂಡ್ಸ್” ಕೊನೆಗೂ ಆದ ಜೇಮ್ಸ್ ಬಾಂಡ್. ಅಂಡುಗಳ ವಿರುದ್ಧ ತನ್ನದೇ ಆದ ಶೈಲಿಯಲ್ಲಿ ಸಮರ ಸಾರಿದ. ಗುಂಡೇಟು ತಿಂದ ಬಡಪಾಯಿ ಹುಡುಗರು ಆಸ್ಪತ್ರೆಯಲ್ಲಿ ಚೇತರಿಸಿ ಕೊಳ್ಳುತ್ತಿದ್ದಾರೆ. ೧೬, ೧೭ ರ ಪ್ರಾಯದ ಹುಡಗರೊಂದಿಗೆ ತಮ್ಮ ಪ್ಯಾಂಟ್ ಸರಿಯಾಗಿ ತೊಟ್ಟು ಕೊಳ್ಳಲು ವಿನತಿಸಿದ ೪೫ ರ ಪ್ರಾಯದ  ಬಾಂಡ್ಸ್. ಮಾಗಿದ ಹದಿಹರೆಯ, ಅದರ ಮೇಲೆ ಮೊಂಡು ಕಿವುಡು ಬೇರೆ. ಹುಡಗರು ಸೊಪ್ಪು ಹಾಕಲಿಲ್ಲ. ಸಿಟ್ಟಿಗೆದ್ದ ಬಾಂಡ್ಸ್ ತನ್ನ ಜೇಬಿನಲ್ಲಿದ್ದ ಆಟೋ ಮ್ಯಾಟಿಕ್ ಗನ್ ಹೊರತೆಗೆದು ನೆಟ್ಟೆ ಬಿಟ್ಟ ಗುರಿಯ, ಚಡ್ಡಿಯೊಳಗಿಂದ ಇಣುಕುತ್ತಿದ್ದ ಗಿರಿಗಳ ಮೇಲೆ. ಎದ್ನೆಪೋ, ಸತ್ನೆಪೋ ಎನ್ನುತ್ತಾ ಹುಡುಗರು ಮೇಲೇರಿಸಿಕೊಳ್ಳಲಾರದ ಪ್ಯಾಂಟು ಗಳನ್ನು ಮೇಲೇರಿಸಿಕೊಳ್ಳಲು ಹೆಣಗುತ್ತಾ. ಬಾಂಡ್ಸ್ ಮತ್ತಷ್ಟು ಗುಂಡುಗಳನ್ನು ಹಾರಿಸಿದ. ನಮಗೆ ಬಾಂಡ್ಸ್ ನ ಈ ಕೃತ್ಯ ಸ್ವಲ್ಪ ಅತಿಯಾಗೇ ತೋರಿದರೂ ಕೆಲವೊಮ್ಮೆ ಅಸಹನೆ ಮೇಲುಗೈ ಸಾಧಿಸುತ್ತದೆ ಅಸಹ್ಯ ಹುಟ್ಟುವ ಫ್ಯಾಶನ್ ಅಂಡನ್ನು ತೋರಿಸುವ ಮಟ್ಟಕ್ಕಿಳಿದಾಗ.  ಭೂಮಿಯ ಗುರುತ್ವಾಕರ್ಷಣ ಶಕ್ತಿಯ ಸಾಮರ್ಥ್ಯವನ್ನು ಪರೀಕ್ಷಿಸಲೆಂದೇ ಈ ಹುಡುಗರು ತೊಡುತ್ತಾರೋ ಏನೋ ಪ್ಯಾಂಟುಗಳನ್ನು. precarious ಆಗಿ ಹಿಂಬದಿಯಿಂದ ನೇತಾಡುವ ಪ್ಯಾಂಟು ಯಾವುದೇ ಕ್ಷಣದಲ್ಲೂ , ನಿಮಿಷದಲ್ಲೂ ಧರೆಗೆ ಶರಣಾಗುವುದು ಎಂದು ತೋರುತ್ತದೆ ನೋಡುಗರ ಕಣ್ಣುಗಳಿಗೆ.     


 


ನನ್ನ ತಂಗಿಯರ ಇಬ್ಬರು ಗಂಡು ಮಕ್ಕಳು ಮತ್ತು ಸೋದರ ಮಾವನ ಮಗನೊಬ್ಬ ಈ ರೀತಿಯ ಅಂಡುಗಳ ಪ್ರದರ್ಶನಕ್ಕೆ ಶರಣಾದ ಯುವ ಸಮೂಹ. ಯಾಕ್ರೋ ಈ ರೀತಿಯ ಹೊಲಸು, ಕಳಪೆ ಫ್ಯಾಶನ್ ಗೆ ಮಾರು ಹೋಗುತ್ತೀರಾ ಎಂದು ಸಿಡುಕಿದಾಗ ಬಹಳ ಕಷ್ಟ ಪಟ್ಟು ಮೇಲೆ ಎಳೆಯಲು ವ್ಯರ್ಥ ಪ್ರಯತ್ನ ನಡೆಸುತ್ತಾರೆ. ಪರಿಚಯಸ್ಥರೊಬ್ಬರು ಹೇಳಿದರು, ಬೈದಾಗ ಪ್ಯಾಂಟ್ ಮೇಲೆರಿಸುವಂತೆ ಅವರು ನಾಟಕ ಮಾತ್ರ ಮಾಡೋದು, ತುದಿಗಾಲಿನಲ್ಲಿ ನಿಂತು ಪ್ಯಾಂಟ್ ಏರಿಸುವಂತೆ ನಮಗೆ ತೋರುತ್ತದೆಯೇ ಹೊರತು ಮೇಲೆ ಏರಿದ್ದು ಅವರ ತುದಿಗಾಲು ಮಾತ್ರ, ಪ್ಯಾಂಟ್ ಅಲ್ಲ ಎಂದು ಉರಿಯುತ್ತಾ ನುಡಿದರು.


 


ಹೆಣ್ಣು ಮೈ ತೋರಿಸಿ ಕಾರಿನ ಟಯರು ಗಳನ್ನೂ, ಪುರುಷರ ಒಳ ಉಡುಪುಗಳನ್ನೂ ಪ್ರೊಮೋಟ್ ಮಾಡಲು ತಯಾರಿರುವಾಗ, ಅದನ್ನು ಮೆಚ್ಚಿ ಚಪ್ಪಾಳೆ ತಟ್ಟುವ ಸಮೂಹವೂ ಇರುವಾಗ ನಮ್ಮ ಹಿಂಬದಿಯ ಪ್ರದರ್ಶನದಿಂದ ಆಗುವ ನಷ್ಟವಾದರೂ ಏನು ಎಂದು ಇವರಿಗೆ ಅನ್ನಿಸಿರಲಿಕ್ಕೂ  ಸಾಕು.   


 


ನಾನು ಫ್ಯಾಶನ್ ವಿರೋಧಿಯಲ್ಲ. ಆದರೆ ಎಲ್ಲಕ್ಕೂ ಒಂದು ಮಿತಿ ಇದ್ದೇ ಇರುತ್ತದೆ. . ಒಂದು ಕಡೆ ಹದಿಹರೆಯದ ಹುಡುಗರ ಕಿರಿಕ್ ಅನ್ನಿಸುವ “ಪಿರ್ರೆ” ಗಳ ಪ್ರದರ್ಶನ, ಮತ್ತೊಂದೆಡೆ “ಚಿಯರ್ ಗರ್ಲ್ಸ್” ಗಳ ಗರಿಷ್ಟ ಅಂಗ ಸೌಷ್ಠವ ಗಳ ಅರೆನಗ್ನ ಪ್ರದರ್ಶನ. ಇವೆರಡರ ಮತ್ತು ಇಂಥವೇ unsolicited ಮೈಮಾಂಸ ತೋರಿಸುವ ಫ್ಯಾಶನ್ ಕಾರಣ ಉಲ್ಲಾಸೀ ಅಥವಾ ದಾಂಪತ್ಯ ಬದುಕಿಗೆ ಬೇಕಾದ ಶೃಂಗಾರ ಭಾವನೆ ಎಲ್ಲಿ ಮಾಯಾವಾಗಿ ಬಿಡುತ್ತೋ ಅನ್ನೋ ಚಿಂತೆ ನಮ್ಮನ್ನು ಕಾಡಿದರೆ ಅಚ್ಚರಿ ಇಲ್ಲ.  

Rating
No votes yet

Comments