ಅಂದು-ಇಂದು, ಒಂದು ನೆನಪು !
ಇಂದೂ ಸುರಿಯುವ ಮಳೆ! ಅಂದೂ ಸುರಿಯುವ ಮಳೆ!! ಇಂದು ಪರಮಪೂಜ್ಯ ಗುರೂಜಿಯವರ ಸಂಸ್ಮರಣೆಯು ವೇದಭಾರತಿಯ ವತಿಯಿಂದ ನಮ್ಮ ಮನೆಯಲ್ಲಿ ನಡೆಯುತ್ತಿರುವಾಗ ಮಳೆ ಸುರಿಯುತ್ತಿದೆ. ಆಮಳೆಯಲ್ಲೇ ಮನೆಯೊಳಗೆ ಕಾರ್ಯಕ್ರಮ ನಡೆಯುತ್ತಿದೆ. ಹಾಸನ ನಗರದ ನಮ್ಮ ಮಾನ್ಯ ಸಂಘಚಾಲಕರಾದ ಶ್ರೀ ಪಾರಸ್ ಮಲ್ ಗುರೂಜಿಯವರ ಬಗ್ಗೆ ಮಾತನಾಡುತ್ತಿದ್ದಾರೆ.
ಅಂದು 1973 ಜೂನ್ 5 . RSS ನ ಪ್ರಾಂತ ಮಟ್ಟದ ಒಂದು ತಿಂಗಳ ಸಂಘ ಶಿಕ್ಷಾವರ್ಗ ಹಾಸನದಲ್ಲಿ ನಡೆಯುತ್ತಿತ್ತು.ಜೋರು ಮಳೆ ಸುರಿಯುತ್ತಿತ್ತು. ಎಲ್ಲಾ ಸಂಘ ಶಿಕ್ಷಾವರ್ಗಕ್ಕೂ ಸಾಮಾನ್ಯವಾಗಿ ಪೂಜ್ಯ ಸರಸಂಘಚಾಲಕರು ಬರುವ ಪದ್ದತಿ. ಆದರೆ ಅಂದು ನಾಗಪುರದಿಂದ ಒಂದು ಸಂದೇಶ ಬಂತು. "ಪೂಜ್ಯ ಗುರೂಜಿ ಇನ್ನಿಲ್ಲ". ಒಂದು ತಿಂಗಳು ನಡೆಯಬೇಕಾಗಿದ್ದ ವರ್ಗವನ್ನು 25 ಕ್ಕೆ ಅಂತ್ಯಗೊಳಿಸಲಾಯ್ತು. ಗುರೂಜಿಯವರು ಬರಲಿಲ್ಲ. ಬರಲು ಅವರೇ ಇಲ್ಲ!!
ಆಗಿನ್ನೂ ತಾಂತ್ರಿಕ ತರಬೇತಿ ಪಡೆಯಲು ಹಾಸನಕ್ಕೆ ಕಾಲಿಟ್ಟು ಒಂದು ತಿಂಗಳಾಗಿದ್ದಿರಬಹುದು. RSS ಕಾರ್ಯಾಲದಲ್ಲಿಯೇ ಇದ್ದೆ. ಇಂದೂ ಹಾಸನದಲ್ಲಿ ನನ್ನ ಜೊತೆಗೆ ಇರುವ ಕವಿನಾಗರಾಜ್ ಆಗಿನ್ನೂ ಫುಡ್ ಇನ್ಸೆಕ್ಟರ್. ಹಾಸನದಲ್ಲೇ ಇದ್ದರು. ಶ್ರೀ ಪಾರಸ್ ಮಲ್ ಕೂಡ ಹಾಸನದಲ್ಲಿಯೇ ಕಾಲೇಜಿನಲ್ಲಿ ಓದುತ್ತಿದ್ದರು. ನಾನು ಮತ್ತು ನಾಗರಾಜರು ಸರ್ಕಾರಿ ಸೇವೆಯಿಂದ ನಿವೃತ್ತರಾಗಿ ನಾವಿಬ್ಬರೂ ವೇದಭಾರತಿಯ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದರೆ ಶ್ರೀ ಪಾರಸ್ ಮಲ್ RSS ನಗರ ಸಂಘಚಾಲಕರು.
ಅಂದು ನಾನು ಮತ್ತು ಪಾರಸ್ ಮಲ್ 18-19 ರ ಆಸುಪಾಸಿನವರು. ನಾಗರಾಜ್ ನಮಗಿಂತ ಮೂರು ವರ್ಷ ಹಿರಿಯರು. ಅಂದೂ ಜೊತೆಗಿದ್ದೆವು. ಇಂದೂ ಜೊತೆಗಿದ್ದೇವೆ. ನಡುವೆ ಎಲ್ಲೆಲ್ಲೋ ಇದ್ದೆವು. ಆದರೆ ಸಂಘದ ಜೊತೆಗಿದ್ದೆವು. ಅಬ್ಭಾ! ಸಂಘದ ಶಕ್ತಿ ಅಪಾರ!!! ಇಂದು ಗುರೂಜಿಯವರ ಹಾಡನ್ನು ಹತ್ತಾರು ಭಾರಿ ಕೇಳಿದೆ.ತೃಪ್ತಿಯಾಗಲಿಲ್ಲ! ಇಂತಾ ಮಹಾಮಹಿಮರ ಸ್ಮರಣೆ ಮಾಡುವಾಗಲೆಲ್ಲಾ ಮನದೊಳಗೆ ಅನ್ನಿಸುತ್ತೆ ಸಮಾಜಕ್ಕೆ ಏನಾದರೂ ಕಿಂಚಿತ್ ಮಾಡಬೇಕೆಂದು!!
Comments
ಉ: ಅಂದು-ಇಂದು, ಒಂದು ನೆನಪು !
ಸುಮಧುರ ನೆನಪು!