ಅಂಬಾರಿ ದಿನಚರಿ

ಅಂಬಾರಿ ದಿನಚರಿ

ಆ ಇಂಜಿನೀಯರಿಂಗ್ ಕಾಲೇಜಿನ ಕಾರ್ಯಕ್ರಮ ಹೋದವರ್ಷ ತಪ್ಪಿಸಿಕೊಂಡಿದ್ದೆ. ಕೊನೆಯ ಘಳಿಗೆಯಲ್ಲಿ ಬರಲಾಗದು ಎಂದು ಹೇಳಿದ್ದರ ಅಳುಕು ಮನಸ್ಸಿನಲ್ಲಿತ್ತು. ಹೀಗಾಗಿ ಈ ಬಾರಿ ಅಲ್ಲಿಯ ಹುಡುಗರು ಎಂದಿನ enthusiasmನಲ್ಲಿಯೇ ಕರೆದಾಗ ಬರುತ್ತೇನೆ ಎಂದು ಒಪ್ಪಿಕೊಂಡದ್ದು. ಹೆಚ್ಚಿನಂತೆ ನಾನು ಕಾರ್ಯಕ್ರಮಗಳಿಗೆ ಏನಾದರೂ ಸಬೂಬು ಹೇಳಿ ಚಕ್ಕರ್ ಹೊಡೆಯೋದೇ ಹೆಚ್ಚು.

ಕಾರ್ಯಕ್ರಮ ಎಂದಿನಂತೆ ದೀಪ ಹಚ್ಚುವುದರ ಜೊತೆಗೆ ಪ್ರಾರಂಭವಾದದ್ದು ಸ್ವಲ್ಪ ಇರುಸುಮುರುಸಾದದ್ದು, ಕಾರ್ಯಕ್ರಮದ "ಮುಖ್ಯ ಅತಿಥಿ"ಯಾದದ್ದು ನನಗೆ ಹೊಸತು. ತದನಂತರ ನಾನು ಎಂದಿನಂತೆ ಬಡಬಡನೆ ಮಾತನಾಡಿದ್ದು. ವಿದ್ಯಾರ್ಥಿಗಳು ಕೇಳಿದ ಕೆಲವು ಪ್ರಶ್ನೆಗಳು ಬಹಳ ಚೆನ್ನಾಗಿದ್ದವು. ಇದೆಲ್ಲ ಮುಗಿದ ನಂತರ ಅವರೊಡನೆ ಹಾಗೂ ಉಳಿದ ಅತಿಥಿಗಳೊಡನೆ ಮಾತುಕತೆ ಖುಷಿ ತಂದಿತು.

ಮೈಸೂರಿನಲ್ಲಿದ್ದಾಗ "ಇದು posh ಏರಿಯ" ಎನ್ನುತ್ತ ಕಾಲಿಡದ ಏರಿಯದಲ್ಲಿನ ಒಂದು ಚೆಂದದ ಹೋಟೆಲಿನಲ್ಲಿ ರಘು ಜೊತೆಗೆ ಅದೇ ಎಂದಿನ ನಾನ್, ರೋಟಿ ತಿಂದು ಶಶಿ ಮನೆಗೊಂದು ಭೇಟಿ ಕೊಟ್ಟು ಹೊರಟಾಗ ಹತ್ತೂವರೆಯಾಗಿತ್ತು. ಬಸ್ ಸಿಗುತ್ತೋ ಇಲ್ಲವೋ ಎಂದು ಆಲೋಚಿಸುತ್ತಿರುವಂತೆಯೇ "ಅಂಬಾರಿ" ಅಂತ ಬೋರ್ಡ್ ಕಂಡದ್ದು.

ಅಂಬಾರಿಯಲ್ಲಿ ಭೀಮಾರಿಯಾಗುವಷ್ಟು AC. ಅಲ್ಲೊಂದು ಕಡೆ AC ನೀರು ಲೀಕ್ ಆಗುತ್ತಿದುದನ್ನು ನೋಡಿ "ಅಂಬಾರಿಯಲ್ಲಿ ಗಾಳಿ ಆಡುತ್ತಿದೆ, ಆದರೆ ನೀರೂ ಸೋರುತ್ತಿದೆ" ಎಂದು ಯಾರೋ ಮಾತನಾಡುತ್ತಿದ್ದುದು ಜೋರಾಗಿ ಕೇಳಿಸಿದಾಗ ಕಂಡಕ್ಟರು ಇರುಸುಮುರುಸಾದ. ಆದರೆ ಹೋದ ಸಾರಿ ಹತ್ತಿದ ಬಸ್ಸಿಗಿಂತ ಇದರಲ್ಲಿ ಬೆಲೆ ಕಡಿಮೆ ಇದ್ದದ್ದು ಗಮನಕ್ಕೆ ಬಂತು.

ಬೆಂಗಳೂರು ತಲುಪಿದಾಗ ಸುಮಾರು ಒಂದು ಗಂಟೆ. ಸೆಟಲೈಟ್ ಟೌನಿನಲ್ಲಿ ಬಿಕೋ ಎನ್ನುವಷ್ಟು. ಕ್ಲೋಕ್ ರೂಂ ಹುಡುಗನನ್ನು ಬಡಿದೆಬ್ಬಿಸಿ ಹೆಲ್ಮೆಟ್ ತೆಗೆದುಕೊಂಡು ಬಂದು ಚಳಿಯಲ್ಲಿ ಮುಸುಕ ಹೊದ್ದು ಕುಳಿತಿದ್ದ ಗಾಡಿ ಸ್ಟಾಂಡಿನವರ ಕಷ್ಟ ಸುಖ ವಿಚಾರಿಸಿ ಹೊರಟರೆ ರೋಡು ಖಾಲಿ ಖಾಲಿ. ಅಲ್ಲೊಂದು ಕಡೆ ಯಾರದೋ ಹೆಲ್ಮೆಟ್ಟು ತುಂಡಾಗಿ ಪುಡಿಪುಡಿಯಾಗಿ ಬಿದ್ದಿತ್ತು. ಯಾವುದೋ accident ಆಗಿರಬೇಕು. ಶೆಲ್ ಪೆಟ್ರೋಲು ಬಂಕು ಬಾಗಿಲು ಹಾಕಿತ್ತು! ನಾಳೆ ಪೆಟ್ರೋಲ್ ಸ್ಟಾಕ್ ಇಲ್ಲ ಎಂಬ ಬೋರ್ಡು ನೋಡಬೇಕು ಇನ್ನು.

ಅಲ್ಲಿಲ್ಲಿ ಹಲವೆಡೆ ಮರಗಳಿಗೆ ಕತ್ತರಿ ಬಿದ್ದಿತ್ತು. ಬಹುಶಃ ರಾತ್ರೋ ರಾತ್ರಿ ಸಾಗಿಸುವ ಪ್ಲಾನ್ ಇರಬಹುದು. ಅಲ್ಲೆಲ್ಲೋ ("ಗಣೇಸ"ನ ಪೆಂಡಾಲ್?) ಜಗಮಗ ಲೈಟು ಇನ್ನೂ ರೋಡು ತುಂಬ ಉರಿಯುತ್ತಿದ್ದು ಯಾರೂ ಕೇಳದಂತೆ ಅದು. ಮತ್ತಷ್ಟು ದೂರ ಹೋದ ಮೇಲೆ ನಿರ್ಜನ ರೋಡಿನಲ್ಲಿ ಪೂರ್ಣ ಕತ್ತಲೆ! ಎಂತಹ irony! ಆದರೆ ಬೈಕಿನಲ್ಲಿ ಅರ್ಧ ನಿಮಿಷ ಕತ್ತಲೆ. ದೂರದ ಸಿಗ್ನಲ್ ಕಾಣುತ್ತಲೇ ಇತ್ತು.

ಬೆಂಗಳೂರಲ್ಲಿ ರಾತ್ರಿ ಹೊತ್ತು ಬೈಕು ಅಥವ ಕಾರು ತೆಗೆದರೆ ಅತ್ತಿತ್ತ ಕಾಣುವ ಶ್ವಾನಗಳ ಮೇಲೂ ಕಣ್ಣಿಟ್ಟಿರಬೇಕು! ಯಾವಾಗ ಅವುಗಳಿಗೆ ಕಾರು ಬೈಕುಗಳ ಮೇಲೆ ಇದ್ದಕ್ಕಿದ್ದ ಹಾಗೆ ಸಿಟ್ಟು ಬಂದು "chase" ಮಾಡುತ್ತವೆಯೋ ಗೊತ್ತಾಗುವುದಿಲ್ಲ.

ಇಷ್ಟೆಲ್ಲ ಗಮನಿಸುತ್ತ ಮನೆಗೆ ಬಂದಾಗ ಎರಡು ಗಂಟೆ. ನೋಡಿದರೆ "ಇಷ್ಟೊತ್ತಾದರೂ ಬರಲಿಲ್ಲ" ಎನ್ನುತ್ತ ಅಮ್ಮ ನಿದ್ರೆ ಮಾಡದೆ ಮಹಡಿಯ ಮೇಲೆ ಕಾಯುತ್ತ ನಿಂತಿದ್ದಾರೆ! ಏನೂ ಮಾತು ಹೊರಡದೆ "ಯಾಕೆ ಮಲಗಲಿಲ್ಲ ಇಷ್ಟೊತ್ತಾದರೂ" ಎಂದಷ್ಟೆ ಕೇಳಿ ಒಳನಡೆದೆ.

Rating
No votes yet

Comments