"ಅಂಬಿಗಾ ! ದಡ ಹಾಯಿಸು", ಕರ್ಣಾಟಕ ಭಾಗವತ !
"ಅಂಬಿಗಾ ! ದಡ ಹಾಯಿಸು" ...
(ಭೌತವಿಜ್ಞಾನದ ಪ್ರಾಧ್ಯಾಪಕ, ಎಚ್. ಆರ್. ರಾಮಕೃಷ್ಣರಾವ್ ಅವರ ಆತ್ಮಕತೆ)
ನಿರೂಪಣೆ : ಕಲ್ಗುಂಡಿ ನವೀನ್
ಸಂಪಾದಕರು : ಡಾ. ವೈ. ಸಿ. ಕಮಲ, ಸುಮಂಗಲಾ ಎಸ್. ಮುಮ್ಮಿಗಟ್ಟಿ
ಉದಯಭಾನು ಕಲಾಸಂಘ
ಉದಯಭಾನು ಉನ್ನತ ಅಧ್ಯಯನ ಕೇಂದ್ರ
ವಿಜ್ಞಾನ-ತಂತ್ರಜ್ಞಾನ ಅಧ್ಯಯನಾಂಗ
ಬೆಂಗಳೂರು -೫೬೦ ೦೧೯
ಕೃತಜ್ಞತೆ :
ಪ್ರೊ. ಎಚ್. ಆರ್. ರಾಮಕೃಷ್ಣರಾಯರ 'ಅಂಬಿಗ ದಡ ಹಾಯಿಸು' ಎನ್ನುವ ಅವರ ಆತ್ಮಕತೆಯಿಂದ ಆಧರಿಸಿದ ಅನೇಕ ಪ್ರಸಂಗಗಳಲ್ಲಿ ಸುಮಾರು ಇನ್ನೂರು ವರ್ಷಗಳ ಕಾಲ ತಾಳೆಗರಿಯ ಲಿಪಿಯಲ್ಲಿ ಅಡಗಿ ದೇವರಮನೆಯ ಮಂಕು ದೀಪದ ಬೆಳಕಿನಲ್ಲಿ ತೂಕಡಿಸುತ್ತಿದ್ದ ಕರ್ಣಾಟಕ ಭಾಗವತವನ್ನು ಹುಡುಕಿ ಮರುರೂಪ ಕೊಟ್ಟ ಮಹತ್ವದ ಪ್ರಸಂಗಗಳನ್ನು ಇಲ್ಲಿ ದಾಖಲಿಸಲು ಇಚ್ಛಿಸುತ್ತೇನೆ.
-ಎಚ್ಚಾರೆಲ್
ಕರ್ಣಾಟಕ ಭಾಗವತ ೧೬, ಪುಟ ೧೩೦
'ಶ್ರೀಯುತ ರಾಮಣ್ಣಯ್ಯ' ಎಂಬುವರು ನಮ್ಮ ವಂಶದ ಹಿರಿಯರು. ಇದು ಇನ್ನೂರು ವರ್ಷಗಳಿಗಿಂತಲೂ ಹಿಂದಿನ ಮಾತು. ಅವರು ಕರ್ಣಾಟಕ ಭಾಗವತವನ್ನು ಲಿಪಿಮಾಡಿ,ಇಟ್ಟುಕೊಂಡಿದ್ದರು ಎಂಬ ಮಾಹಿತಿ ಸಿಕ್ಕಿತು. ಹೀಗೆ ಪ್ರತಿ ಮಾಡಿಟ್ಟುಕೊಳ್ಳುವ ನೈಪುಣ್ಯತೆ ಕೆಲವರಲ್ಲಿ ಮಾತ್ರ ಇತ್ತು. ನಮ್ಮ ನಮ್ಮ ಮನೆಗಳಲ್ಲಿ ಹುಡುಕಿದೆವು. ಪರಿಚಿತರು, ಬಂಧುಗಳಲ್ಲಿ ವಿಚಾರಿಸಿದೆವು. ಎಲ್ಲಿಯೂ ಸಿಗಲಿಲ್ಲ. ಒಮ್ಮೆ ನಾನೂ ನನ್ನ ತಮ್ಮ ಚಂದ್ರಣ್ಣ ಚಿತ್ರದುರ್ಗಕ್ಕೆ ಹೋಗಿ ಹಿರಿಯ ವಿದ್ವಾಂಸರಾದ ಹುಲ್ಲೂರು ಶ್ರೀನಿವಾಸ ಜೋಯೀಸರನ್ನು ಕೇಳಿದೆವು. ಅವರು ನಕ್ಕು "ರಾಮಣ್ಣಯ್ಯ ನವರು ನಿಮ್ಮ ವಂಶದ ಹಿರಿಯರಪ್ಪ. ಅವರ ಕೃತಿ ಇದ್ದರೆ ನಿಮ್ಮಲ್ಲೇ ಎಲ್ಲೋ ಇರುತ್ತದೆ ಹುಡುಕಿ ನೋಡಿ". ನಾವು "ಇಲ್ಲ ಜೋಯಿಸರೇ ನಾವು ನಮ್ಮ ಮನೆಗಳಲ್ಲಿ ನೋಡಿದೆವು, ಪರಿಚಿತರಲ್ಲಿಯೂ ವಿಚಾರಿಸಿದೆವು. ಸಿಗಲಿಲ್ಲ" ಎಂದೆವು. ಅವರು "ಅಲ್ಲ ನಿಮ್ಮ ತಂದೆಗೆ ಮೂರು ಜನ ಅಣ್ಣತಮ್ಮಂದಿರು ಅವರೆಲ್ಲರ ಮನೆಯಲ್ಲಿ ಹುಡುಕಿದಿರಾ ? ಹಾಗೆ ಹುಡುಕಬೇಕು" ಎಂದರು.
ಇದಾದ ಸ್ವಲ್ಪ ಸಮಯದಲ್ಲಿ ನವರಾತ್ರಿಯ ಸಂದರ್ಭ. ನಮ್ಮ ದೊಡ್ಡಪ್ಪನ ಮಗ, ಎಚ್. ಆರ್. ಶೇಷಗಿರಿ ರಾವ್ ಅವರ ಮನೆಗೆ ಹೋದಾಗ ಅವರ ಬಳಿ ವಿಷಯ ಪ್ರಸ್ತಾಪಿಸಿದೆ. ಶೇಷಣ್ಣ ಹೀಗೆ, ಎಂದು. ಅವರು "ನನಗೆ ಗೊತ್ತಿಲ್ಲಪ್ಪ ; ಅಣ್ಣ, ಒಂದು ದೊಡ್ಡ ತೇಗದಮರದ ಪೆಟ್ಟಿಗೆಯಲ್ಲಿ ಏನೋ ಇಟ್ಟಿದ್ದರು. ಮನೆಗೆ ಯಾರಾದರೂ ಬಂದಾಗ ಆದರೆ ಮೇಲೆ ಅಕ್ಷತೆ ಹಾಕಿ ಅದನ್ನು ಕೊಟ್ಟು ಒಳ್ಳೆಯದಾಗುತ್ತದೆ ಎನ್ನುತ್ತಿದ್ದರು. ಅದನ್ನು ಅವರೂ ತೆಗೆದು ನೋಡುತ್ತಿರಲಿಲ್ಲ. ನಾವೂ ತೆಗೆದು ನೋಡಲಿಲ್ಲ. ಈಗ ಅದು ದೇವರ ಮುಂದಿದೆ" ಎಂದರು. ಅದರಲ್ಲೇ ಇದ್ದರೆ ಎಂಬ ಆಸೆ ನನ್ನದು. ಅದನ್ನು ಗೆಗೆಯಬಹುದೋ ಬೇಡವೋ ಎಂಬ ಜಿಜ್ಞಾಸೆ ಉಂಟಾಗಿ, ಕೊನೆಗೆ ನಾನೇ ಹಿಂದಿನ ದಿನ ರಾತ್ರಿ ಉಪವಾಸವಿದ್ದು, ಮಾರನೆಯ ದಿನ ಮಡಿಯುಟ್ಟು ಪೂಜೆಮಾಡಿ ಪೆಟ್ಟಿಗೆಯನ್ನು ತೆಗೆದು ನೋಡುವುದು ಎಂದಾಯಿತು. ಹಾಗೆಯೇ ಮಾಡಿ ಪೆಟ್ಟಿಗೆಯನ್ನು ತೆರೆದು ನೋಡಿದಾಗ ಅದರಲ್ಲಿದ್ದುದು ಒಂದು ತಾಳೆಗರಿಯ ಪುಸ್ತಕ ! ಅದೇ ನಾವು ಹುಡುಕುತ್ತಿದ್ದ ನಮ್ಮ ವಂಶದ ಹಿರಿಯರು ಪ್ರತಿಮಾಡಿಟ್ಟುಕೊಂಡಿದ್ದ ಕರ್ಣಾಟಕ ಭಾಗವತದ ಪ್ರತಿ. ನಮ್ಮ ಸಂತೋಷಕ್ಕೆ ಮಿತಿಯೇ ಇರಲಿಲ್ಲ ! ಅದು ೫೦೦ ವರ್ಷಗಳ ಹಿಂದೆ ನಿತ್ಯಾತ್ಮ ಶುಕ ಯೋಗಿಗಳು ಭಾಮಿನಿ ಷಟ್ಪದಿಯಲ್ಲಿ ರಚಿಸಿದ್ದ "ಕರ್ಣಾಟಕ ಭಾಗವತ"ಎಂಬ ಮಹಾಕಾವ್ಯ ! ಇದನ್ನು ನಮ್ಮ ವಂಶದ ಏಳು ತಲೆಮಾರುಗಳಿಗೆ ಹಿರಿಯರಾದ ಶ್ರೀ ರಾಮಣ್ಣಯ್ಯನವರು ಸಾ. ಶ. ೧೭೫೫ ರಲ್ಲಿ ತಾಳೆಗರಿಯಮೇಲೆ ಪ್ರತಿಮಾಡಿ ಇಟ್ಟುಕೊಂಡಿದ್ದರು. ಎಂತಹ ತವನಿಧಿ ಸಿಕ್ಕಿತೆಂದು ಪರಮ ಸಂತೋಷವಾಯಿತು.
ತಾಳೇಗರಿಯನ್ನು ತೆರೆಯಹೋದರೆ ಮುರುಯುವಂತಿತ್ತು. ಮುಟ್ಟಿದರೆ ಪುಡಿಪುಡಿಯಾಗುವಷ್ಟು ಶಿಥಿಲವಾಗಿ ಹೋಗಿತ್ತು. ಈಗ ಇದರ ಚಿತ್ರ ತೆಗೆಸಿ ಓದುವುದೊಂದೇ ದಾರಿ ಎಂದು ಆ ಕುರಿತು ಕೆಲಸ ಆರಂಭಿಸಿದೆ. ಇದರ ಛಾಯಾ ಚಿತ್ರ ತೆಗೆಯಲು ಪ್ರಸಿದ್ಧ ಛಾಯಾಗ್ರಾಹಕ ಸಂಸ್ಥೆ ಜಿ. ಕೆ. ವೇಲ್ ಅವರಿಗೆ ತೋರಿಸಿದೆ. ಅವರು ಇದು ತುಂಬಾ ಶಿಥಿಲವಾಗಿದೆ ಚಿತ್ರ ತೆಗೆಯಲು ಪ್ರಯತ್ನಿಸಿದರೆ ಇನ್ನಷ್ಟು ಹಾಳಾಗುವ ಸಾಧ್ಯತೆಯಿದೆ. ಮಹತ್ವದ ಗ್ರಂಥ. ಇದನ್ನು ಅಮೆರಿಕಾಗೆ ಕಳಿಸಿಬಿಡಿ. ಅವರು 'ಮೈಕ್ರೋ ಫಿಲ್ಮ್' ಮಾಡುತ್ತಾರೆ ಎಂದರು. ತಮ್ಮ ಚಂದ್ರಣ್ಣ ಹೇಗೂ ಅಮೇರಿಕಾದಲ್ಲೇ ಇದ್ದದ್ದರಿಂದ ಈ ಕೆಲಸ ಸುಲಭವಾಯಿತು. ತಾಳೆಗರಿಯ ಮೈಕ್ರೋ ಫಿಲ್ಮ್ ಸಿದ್ಧವಾಯಿತು.
ಒಟ್ಟು ಇನ್ನೂರು ಮೂವತ್ತೆರಡು ತಾಳೇಗರಿಗಳಮೇಲೆ ಹನ್ನೆರಡು ಸಾವಿರ ಪದ್ಯಗಳಿದ್ದವು. ೨೬ ಇಂಚು ಉದ್ದದ ೨.೨೫ ಅಗಲದ ತಾಳೇಗರಿಗಳು. ಪೂರ್ತಿ ತಾಳೆಗರಿಗಳ ಕಟ್ಟು ೨. ೨೫ ಇಂಚುಗಳಷು ದಪ್ಪವಿತ್ತು. ಎರಡೂ ಬದಿಗಳಲ್ಲಿ ಸಣ್ಣ ಅಕ್ಷರಗಳಲ್ಲಿ ಸ್ವಲ್ಪವೂ ಜಾಗ ಬಿಡದಂತೆ ಬರೆಯಲಾಗಿದ್ದು ಸ್ಕಂಧಗಳ ಮೊದಲಿನ ಭಾಗಗಳನ್ನು ಬರೆದ ಗರಿಗಳ ಎಡ ಮತ್ತು ಬಲ ಭಾಗಗಳಲ್ಲಿ ಸುಂದರವಾದ ರೇಖಾಚಿತ್ರಗಳಿವೆ.
ಇನ್ನು ಮುಂದಿನ ಕೆಲಸವೆಂದರೆ ಈ ಮೈಕ್ರೋ ಫಿಲ್ಮ್ ನಿಂದ ಹಸ್ತಪ್ರತಿ ತಯಾರಾಗಬೇಕು. ಪರಿಷ್ಕಾರವಾಗಬೇಕು ಮತ್ತು ಪ್ರಕಟವಾಗಿ ಜನರ ಕೈಸೇರಬೇಕು. ಈ ಹಸ್ತಪ್ರತಿಯ ತಯಾರಿ ಕೆಲಸ ಆರಂಭವಾಯಿತು. ಇದಕ್ಕೆ ಬೇಕಾಗಿದ್ದ ತಂತ್ರಾಂಶವೇ ಆಗ ಇರಲಿಲ್ಲ. ಅದನ್ನು ನನ್ನ ತಮ್ಮನೇ ಸಿದ್ಧಪಡಿಸಿಕೊಂಡ. ಇಂದಿನಂತಹ ಗಣಕಗಳೂ (ಕಂಪ್ಯೂಟರ್) ಇರಲಿಲ್ಲ. ಮ್ಯಾಕಿಂಟಾಶ್ ಗಣಕದಲ್ಲಿ ಕೆಲಸಮಾಡಿ ಒಂದೊಂದೇ ಪುಟ ಸಿದ್ಧಪಡಿಸಿ ನನಗೆ ಕಳಿಸುತ್ತಿದ್ದ. ನಾನು ಅದನ್ನು ನೋಡಿ ಅಸ್ಪಷ್ಟವಾಗಿದ್ದೆಡೆ ಯಾವ ಪದವಿರಬಹುದೆಂದು ಊಹೆಮಾಡಿ ಸೇರಿಸುತ್ತಿದ್ದೆ. ಆಗ ಚಂದ್ರಣ್ಣ ಸಬ್ಬತ್ತಿನ (ಶೈಕ್ಷಣಿಕ) ರಜೆ ('ಸಬಾಟಿಕಲ್') ತೆಗೆದುಕೊಳ್ಳುತ್ತಿದ್ದ. ಆಗ ಭಾರತಕ್ಕೆ ಬರುತ್ತಿದ್ದ ಇಲ್ಲವೇ ನಾನು ಬಿಡುವು ಮಾಡಿಕೊಂಡು ಅಮೆರಿಕಾಗೆ ಹೋಗುತ್ತಿದ್ದೆ. ನಾವಿಬ್ಬರೂ ಅಲ್ಲಿನ ಹರೇ ಕೃಷ್ಣಾ ಮಂದಿರಕ್ಕೆ ಸೇರಿದ ಒಂದು ಕೊಠಡಿಯನ್ನು ಬಾಡಿಗೆಗೆ ಪಡೆದು ಕೆಲಸ ಮಾಡುತ್ತಿದ್ದೆವು. ಅಲ್ಲಿನ ಪ್ರಶಾಂತ ವಾತಾವರಣದಲ್ಲಿ ಕೆಲಸ ಮಾಡುತ್ತಿದ್ದೆವು. ಅಲ್ಲಿ ಹಣ ಕೊಟ್ಟರೆ ಆಹಾರದ ವ್ಯವಸ್ಥೆಯೂ ಆಗುತ್ತಿತ್ತಾಗಿ ಕಾರ್ಯ ತಡೆಯಿಲ್ಲದೆ ಸಾಗಿತು. ಇಬ್ಬರೂ ಕೆಲಸದಲ್ಲಿದ್ದದ್ದರಿಂದ ಹಸ್ತಿಪ್ರತಿ ಕಾರ್ಯ ಒಟ್ಟು ಹದಿನೈದು ವರ್ಷ ಹಿಡಿಯಿತು. ಕರಡು ಸಿದ್ಧಪಡಿಸಿ, ಅದನ್ನು ಐದಾರು ಪ್ರತಿಮಾಡಿಸಿ, ಬೈಂಡ್ ಮಾಡಿಸಿಕೊಂಡು ಚಂದ್ರಣ್ಣ ಭಾರತಕ್ಕೆ ಬಂದ.
ಆಗ ನಾನು ಯೋಚಿಸಿದೆ. ಯಾರಾದರೂ ಸಾಹಿತಿಗಳು ಇದನ್ನು ಪರಿಷ್ಕಾರ ಮಾಡಿದರೆ ಇದ್ಕಕೊಂಡು ಅಧಿಕೃತತೆ ಬರುತ್ತದೆ ಎಂದು. ಆಗ ಹಿರಿಯ ವಿದ್ವಾಂಸರಾದ ಪ್ರೊ. ಟಿ. ವಿ. ವೆಂಕಟೇಶ ಶಾಸ್ತ್ರಿ ಯವರೊಂದಿಗೆ ಚರ್ಚಿಸಿ ಅವರ ನೇತೃತ್ವದಲ್ಲಿ ಒಂದು ಸಮಿತಿಯನ್ನು ರಚಿಸಲಾಯಿತು. ಒಟ್ಟು ಆರು ಮಂದಿ ಸದಸ್ಯರ ಸಮಿತಿಯಾಯಿತು. (ಪ್ರೊ. ವೆಂಕಟಾಚಲ ಶಾಸ್ತ್ರಿ ಅಧ್ಯಕ್ಷರು, ಪ್ರೊ. ಜಿ. ಜಿ. ಮಂಜುನಾಥನ್, ಪ್ರೊ. ಎಚ್. ಎಸ್. ಹರಿಶಂಕರ್, ಡಾ. ಟಿ. ಏನ್ ನಾಗರತ್ನ, ಡಾ. ವೈ. ಸಿ. ಭಾನುಮತಿ, ಶ್ರೀ. ಶಿಕಾರಿಪುರ ಹರಿಹರೇಶ್ವರ ಮತ್ತು ಪ್ರೊ. ಎಚ್. ಆರ್. ರಾಮಕೃಷ್ಣರಾವ್) ಸಭೆಗಳು ಹರಿಹರೇಶ್ವರ ಅವರ ಮನೆಯಲ್ಲೇ ನಡೆದವು. ಇಪ್ಪತ್ಮೂರು ತಿಂಗಳುಗಳಲ್ಲಿ ಪಠ್ಯದ ಪರಿಷ್ಕಾರ ಕಾರ್ಯ ಮುಗಿಯಿತು.
ಪುಸ್ತಕದ ಮಧ್ಯ ಮಧ್ಯ ಸ್ಕಂದಗಳಲ್ಲಿ ಬರುವಪೌರಾಣಿಕ ಘಟನೆಗಳಿಗನುಸಾರವಾಗಿ ಚಿತ್ರಗಳು ಬೇಕಾದವು. ಅದಕ್ಕಾಗಿ ಸೂರಜ್ ವಲ್ಲೂರಿ ಯವರ ಚಿತ್ರಗಳನ್ನು ಬಳಸಿಕೊಳ್ಳಲಾಯಿತು.
ಇಷ್ಟಾದರೂ ಅಲ್ಲಲ್ಲಿ ಬದಲಾವಣೆಗಳನ್ನು ಮಾಡಬೇಕಾದ ಅವಶ್ಯಕತೆಯಿತ್ತು. ಕರಡು ತಿದ್ದುವ ಕಾರ್ಯವೂ ಇತ್ತು. ಆದರೆ ಚಂದ್ರಣ್ಣ ಅಮೇರಿಕಾದಲ್ಲಿ, ನಾನು ಇಲ್ಲಿ, ಭಾರತದಲ್ಲಿ. ಇದಕ್ಕೆ ಚಂದ್ರಣ್ಣನೇ ಒಂದು ಉಪಾಯ ಮಾಡಿದ. ಅಲ್ಲಿನ ದೂರವಾಣಿ ಇಲಾಖೆಯೊಂದಿಗೆ ಒಂದು ಒಪ್ಪಂದ ಮಾಡಿಕೊಂಡಿದ್ದ. ಅದರ ಪ್ರಕಾರ ನಾನು ಭಾರತದಿಂದ ಬೆಳಗಿನ ಜಾವ ಎರಡು ಗಂಟೆಗೆ ಕರೆಮಾಡುವುದು ಹಾಗೂ ತಿದ್ದುಪಡಿಗಳನ್ನು, ಬಿಟ್ಟುಹೋಗಿರುವುದನ್ನು ಹೇಳುವುದು, ಅವನು ಅದನ್ನು ಅಲ್ಲಿನ ಗಣಕದಲ್ಲಿ ತಿದ್ದುವುದು. ಹೀಗೆ ಕಾರ್ಯ ನಡೆದು 'ಶುದ್ಧ ಹಸ್ತಪ್ರತಿ' ಸಿದ್ಧವಾಯಿತು. ತಿದ್ದುಪಡಿಗಳು ಸಾಕಷ್ಟು ಇದ್ದವು. ನನ್ನ ಶ್ರಮ ಹಾಗೂ ಕನ್ನಡ ಪ್ರೌಢಿಮೆ ಕುರಿತಾಗಿ ತುಂಬ ಹೆಮ್ಮೆ, ಚಂದ್ರಣ್ಣನಿಗೆ.
ಅದನ್ನು 'ಲಕ್ಷ್ಮೀ ಮುದ್ರಣಾಲಯ'ಕ್ಕೆ ಗುತ್ತಿಗೆ ಕೊಟ್ಟೆವು. ಅವರಿಗೆ ಪ್ರತಿ ಅಧ್ಯಾಯದ ಗಣಕ ಪ್ರತಿಯನ್ನು ಕಳಿಸುವುದು. ಅದನ್ನು ತೆಗೆದುಕೊಂಡು ಮುದ್ರಿಸುವುದಷ್ಟೇ ಅವರ ಕೆಲಸ. ಉಳಿದಿದ್ದೆಲ್ಲ ಕೆಲಸಗಳನ್ನು ಪುಟವಿನ್ಯಾಸದ ಕಾರ್ಯವನ್ನೂ ಸಹ ನಾವೇ ಮಾಡಿದ್ದೆವು. ಮುದ್ರಣಾಲಯಕ್ಕೆ ಮುದ್ರಿಸುವುದು ಬಿಟ್ಟರೆ ಬೇರೇನೂ ಕೆಲಸವಿಲ್ಲದಂತೆ ನೋಡಿಕೊಂಡೆವು. ಏನೂ ಬದಲಿಸಬಾರದೆಂದೂ, ನಾವು ಹೇಳಿದ ದರ್ಜೆಯ ಕಾಗದ ಬಳಸಬೇಕೆಂದೂ ತಾಕೀತು ಮಾಡಿದ್ದೆವು. ಅವರೂ ಹಾಗೇ ಮಾಡಿ ಅತ್ಯುತ್ತಮವಾಗಿ ಮುದ್ರಿಸಿಕೊಟ್ಟರು. ಅವರು ಕೇಳಿದ ಬೆಳೆಯನ್ನು ನಾವು ಯಾವ ಪ್ರಶ್ನೆನೂ ಕೇಳದೆ ಕೊಡುವೆವು ಎಂದು ಹೇಳಿದ್ದೆವು. ಹಾಗೆಯೇ ಪಾವತಿಸಿದೆವು.
ಕರ್ಣಾಟಕ ಭಾಗವತ ಇಂದಿನ ತಂತ್ರಜ್ಞಾನದಲ್ಲಿ ಮರುಹುಟ್ಟು ಪಡೆದು ಮುದ್ರಣವಾಗಿ ಪುಸ್ತಕ ರೂಪದಲ್ಲಿ ಕೈಗೆ ಬಂತು. ಇದರಲ್ಲಿ ಒಟ್ಟು ಹನ್ನೆರಡು ಸ್ಕಂದಗಳಿದ್ದು ಒಟ್ಟು ಸಾವಿರದ ಆರನೂರು ಪುಟಗಳಷ್ಟು ವಿಸ್ತಾರವಾಯಿತು. ಹನ್ನೆರಡು ಸಾವಿರ ಪದ್ಯಗಳು ಇದರಲ್ಲಿವೆ. ಮೊದಲ ಸಂಪುಟದಲ್ಲಿ ಒಂದರಿಂದ ಒಂಬತ್ತರವರೆಗೆ ಸ್ಕಂಧಗಳು ಎರಡನೆಯ ಸಂಪುಟದಲ್ಲಿ ಹತ್ತರಿಂದ ಹನ್ನೆರಡರವರೆಗಿನ ಸಂಪುಟಗಳು. ಹೀಗೆ ಎರಡು ಬೃಹತ್ ಸಂಪುಟಗಳು ಸಿದ್ಧವಾದವು. ಇಂಗ್ಲೀಷಿನಲ್ಲಿ ಸಂಕ್ಷಿಪ್ತ ಕಥಾಸಾರ, ಕಠಿಣ ಪದಗಳ ಅರ್ಥ, ಮತ್ತು ಅಗತ್ಯವಾಗಿದ್ದ ಅನುಬಂಧಗಳನ್ನು ಸಿದ್ಧಪಡಿಸಿ ಸೇರಿಸಿದೆವು. ಇದನ್ನು ಮೈಸೂರಿನಲ್ಲಿ ಪ್ರೊ. ದೇ. ಜವರೇಗೌಡರು ಮೊದಲ ಕರಡು ಪ್ರತಿಗಳನ್ನು ಬಿಡುಗಡೆ ಮಾಡಿದರು. ಅನಂತರ ಸಂಪುಟಗಳ ಲೋಕಾರ್ಪಣೆಯನ್ನು ಮೈಸೂರಿನ ಜೆ. ಎಸ್ ಎಸ್ ಸಂಸ್ಥೆಯ ಸಭಾಂಗಣದಲ್ಲಿ ಸುತ್ತೂರು ಶ್ರೀಗಳು ನೆರೆವೇರಿಸಿದರು. ಅನಂತರ ಇದನ್ನು ಬೆಂಗಳೂರಿನ ಜಯನಗರ ನ್ಯಾಷನಲ್ ಕಾಲೇಜಿನಲ್ಲಿ ಒಂದು ಬಿಡುಗಡೆ ಸಮಾರಂಭ ನಡೆಯಿತು. ಅನಂತರ ಧಾರವಾಡದಲ್ಲಿ ಷ ಶೆಟ್ಟರ್ ಹಾಗೂ ಇದಾದಮೇಲೆ ಗಿರಡ್ಡಿ ಗೋವಿಂದರಾಜ ಅವರ ಉಪಸ್ಥಿತಿಯಲ್ಲಿ ಬಿಡುಗಡೆಯಾಯಿತು. ಹಾಗೆಯೇ, ಶಿವಮೊಗ್ಗ, ಉಡುಪಿ ಇನ್ನು ಅನೇಕ ಸ್ಥಳಗಳಲ್ಲಿ ಲೋಕಾರ್ಪಣೆ ಕಾರ್ಯಕ್ರಮ ನಡೆಯಿತು.
ಈ ಕಾರ್ಯಕ್ಕೆ ಅಮೆರಿಕದಲ್ಲಿಯೂ ಮೆಚ್ಚುಗೆ ವ್ಯಕ್ತವಾಯಿತು. 'ಸ್ಟೋರೀಸ್ ಫ್ರಮ್ ಇಂಡಿಯನ್ ಎಪಿಕ್' ಎಂದು ಇಪ್ಪತ್ತೆಂಟು ಕತೆಗಳನ್ನು ಪ್ರಕಟಿಸಿದೆವು. ಅವೆಲ್ಲವೂ ಮಾರಾಟವಾದವು. ಭಾಗವತದ ಪ್ರಕಟಣೆಗೆ ಎಂದು ಕೆಲವು ಸಂಸ್ಥೆಗಳಿಂದ ಹಣದ ಸಹಾಯ ಸಿಕ್ಕಿತು. 'ಹೂಸ್ಟನ್ ಕನ್ನಡ ಸಂಘ' ಈ ಯೋಜನೆಗೆ ಆರ್ಥಿಕ ಸಹಾಯ ನೀಡಿದ್ದರಿಂದ ಖರ್ಚು ಮಾಡಿದ್ದರಲ್ಲಿ ಸ್ವಲ್ಪ ಹಣ ಹಿಂದಿರುಗಿ ಬಂದಿತು.
ಪುಸ್ತಕವನ್ನು ಕನ್ನಡದ ಅನೇಕ ವಿದ್ವಾಂಸರು, ಸಾಹಿತಿಗಳಿಗೆ ನಾನೇ ಖುದ್ದಾಗಿ ಹೋಗಿ ತಲುಪಿಸಿದೆ. ಹಾಗೆಯೇ ನೂರಾರು ಶಾಲೆ ಕಾಲೇಜುಗಳಿಗೆ ತಲುಪಿಸಿದೆ. ಭಾನುವಾರ ಬಂದರೆ ಇದೇ ನನ್ನ ಕೆಲಸವಾಗುತ್ತಿತ್ತು. ಕೆಲವರು ಮೆಚ್ಚಿ ಪತ್ರಬರೆದರು. ಷ ಶೆಟ್ಟರ್ ನಮ್ಮ ಇಡೀ ಕಾರ್ಯಕ್ರಮವನ್ನು ಬಾಯಿತುಂಬ ಹೊಗಳಿದರು. ಮುದ್ರಣ ಹಾಗೂ ವಿನ್ಯಾಸವನ್ನು ಕುರಿತೂ ಬಹಳ ಮೆಚ್ಚುಗೆ ವ್ಯಕ್ತಪಡಿಸಿದರು. ಒಟ್ಟಾರೆ ನಾವು ಹಿಡಿದ ಕಾರ್ಯ ಅಮೋಘವಾಗಿ ಕಾರ್ಯಗತವಾಗಿ ತೃಪ್ತಿ ತಂದಿತು. ಕನ್ನಡದಲ್ಲಿ ಭಾಗವತ ಕುರಿತಾಗಿ ನಡೆಯುವ ಅಧ್ಯಯನ, ಸಂಶೋಧನೆಗಳಿಗೆ ಈ "ಕರ್ಣಾಟಕ ಭಾಗವತ" ಒಂದು ಆಕರ ಗ್ರಂಥ.