ಅಕಶೇರುಕ ಚಂಪಾ ಮತ್ತು ಸರೀಸೃಪ ಅನಂತಮೂರ್ತಿ
ಸುದ್ದಿಯಲ್ಲಿ ಕೇಳಿದ್ದು, ವೃತ್ತ ಪತ್ರಿಕೆಯಲ್ಲಿ ಓದಿದ್ದು.
ಸಂದರ್ಭ: ಅನಂತಮೂರ್ತಿಯವರು ರಾಜ್ಯಸಭೆ ಚುನಾವಣೆಗೆ ಸ್ಪರ್ಧಿಸುತ್ತಿರುವುದು.
ಸ್ವಾರಸ್ಯ: ಸ್ವಾರಸ್ಯವೇ ಸ್ವಾರಸ್ಯ.
ಅನಂತಮೂರ್ತಿಯವರು ಪಾಪ ಕುಮಾರಸ್ವಾಮಿಗೆ ಹೇಳದೆ ಕೇಳದೆ ಕಣಕ್ಕಿಳಿದರಂತೆ. ಮಣ್ಣಿನ ಮೊಮ್ಮಗನಿಗೆ ಸಿಟ್ಟು ಬಂದಿರಲಿಕ್ಕೆ ಸಾಕು.
ಕುಮಾರಸ್ವಾಮಿ: "ಯಾರ್ರೀ ಅವರು ಅನಂತಮೂರ್ತಿ?"
ಆ ಮನುಷ್ಯ ಅಜ್ಞ. ಕ್ಷಮಿಸಿಬಿಡೋಣ.
ಇದಾದ ಮೇಲೆ ಕೆಲವರು ಅನಂತಮೂರ್ತಿಯವರ ಪರವಾಗಿಯೂ ಕೆಲವರು ವಿರೋಧಿಸಿಯೂ ಮಾತಾಡಿದರು. ಎಂದಿನಂತೆ ಚಂಪಾ ವಿರೋಧಿಸಿದ್ದರು.
ಅನಂತಮೂರ್ತಿಯವರು ವ್ಯಂಗ್ಯದ ಚತುರೋಕ್ತಿಗಳನ್ನುದುರಿಸಿದರು.
ಅನಂತಮೂರ್ತಿ: "ಚಂಪಾ ಅವರಿಗೆ ಸದಾ ಕುಟುಕುತ್ತಿದ್ದರಷ್ಟೇ ತಾವು ವೃಶ್ಚಿಕ ರಾಶಿಗೆ ಸೇರಿದ ಧೀಮಂತರು ಎಂಬ ಭಾವನೆ ಇರಬೇಕು."
ಚಂಪಾ ಪ್ರತಿಕ್ರಿಯಿಸಿದರು. (ಸುದ್ದಿಯಲ್ಲಿ ಕೇಳಿದ್ದು; ಅಕ್ಷರಶಃ ನೆನಪಿಲ್ಲ.)
ಚಂಪಾ: "ಅನಂತಮೂರ್ತಿಯವರು ನನಗ ಚೇಳು ಅಂತ ಕರದಾರ. ಕುಟುಕಿಸಿಕೊಂಡದ್ದರ ನೆನಪು ಅನುಭವ ಇರಬೇಕು ಅವರಿಗೆ. ಇರಲಿ. ಅವರದ ಆದ ಆ ಪ್ರತೀಕ ಏನು ಇದೆ, metaphor ಅಂತಾರಲ್ಲ.. ಅದನ್ನ ಮುಂದುವರಿಸಿದರ, ನಾನು ಚೇಳಾದರ ಅವರು ಘಟಸರ್ಪ. ಕನ್ನಡದ ಮಟ್ಟಿಗೆ ಕಳೆದ 25 ವರ್ಷಗಳಿಂದ ಅವರು ಹಾವಿನ ಗತೆ ವಿಷ ಕಾರುವ ಕೆಲಸ ಮಾಡ್ಯಾರ. ಹಿಂಗಾಗಿ ಅವರು ಘಟಸರ್ಪ."
----
ಇಂತಿರ್ಪ ಅಜ್ಞಾನಿ ಕುಮಾರಸ್ವಾಮಿಯೂ, ಅಕಶೇರುಕ ಚಂಪಾನೂ ಹಾಗೂ ಸರೀಸೃಪ ಅನಂತಮೂರ್ತಿಯೂ ಎಂಬ ಪ್ರಹಸನ ದಿನನಿತ್ಯವೂ ನವನವೀನ ವರಸೆ ಮಟ್ಟುಗಳೊಂದಿಗೆ ಹಾಸ್ಯರಸಾಸ್ವಾದಕ್ಕಾಗಿ ಚಾತಕ ಪಕ್ಷಿಗಳಂತೆ ಬಾಯ್ದೆರೆದು ಕುಳಿತಿರುವ ವಿಶಾಲ ಕರ್ನಾಟಕದ ಫಾಲ್ತೂ ಮಂದಿಯೆದುರಿಗೆ ಪ್ರಕಾಶಿತವಾಗಲಿ ಎಂದು ಆ ದೊಡ್ಡ ಗಣಪತಿಯಲ್ಲೂ ಮತ್ತು ಅವನ ಬಲಬದಿಗೆ ವಿಶ್ರಮಿಸುತ್ತಿರುವ ದೊಡ್ಡ ಬಸವಣ್ಣನಲ್ಲೂ ಸಲುಗೆಯಿಂದ ಬಿನ್ನಪ ಸಲ್ಲಿಸುತ್ತೇನೆ.
----
(ಯಾರೂ ಉದ್ವಿಗ್ನರಾಗಬೇಡಿ. ಇದು ಕೇವಲ ಹಾಸ್ಯ. :))
Comments
ದೊಡ್ಡವರ ಸಣ್ಣತನ
In reply to ದೊಡ್ಡವರ ಸಣ್ಣತನ by ಶಿವ
ಹಹ್ಹಹ್ಹಾ..