(ಅಕ್ಷರ) ದುಃಖ ನಿವೇದನೆ.

(ಅಕ್ಷರ) ದುಃಖ ನಿವೇದನೆ.

ಮನದೊಳಗೆ ಮೊನೆಯಾಡಿಸುವ ಹಳೆ ನೆನಪಿನ ಮುಳ್ಳಿಗೆ, ಕೇಳುತ್ತಿರುವ ಗಝಲ್ ಭಾವಗಳು ಬಲ ತುಂಬಿ, ಹೀಗೊಂದು (ಅಕ್ಷರ) ದುಃಖ ನಿವೇದನೆ.

ಹಚ್ಚಿದ ದೀಪ ಆರಲೇಬೇಕು,
ಮುಡಿದ ಹೂವು ಬಾಡಲೇಬೇಕು,
ಮತ್ತೆ ಮತ್ತೆ ನೆನಪಾಗಿಯೂ
ನಿನ್ನ ಮರೆಯಲೇಬೇಕು..

ಒಂಟಿ ನಾನು
ನೀನು ಬರುವ ಮುಂಚೆ;
ಒಂಟಿ ನಾನು
ನೀನು ಹೋದ ಮೇಲೆ ಕೂಡಾ;
ನೀನು ಬಂದರೇನು, ಬರದಿದ್ದರೇನು..

ಬಂದರೆ ಅರೆಘಳಿಗೆ ನಲಿವಲ್ಲಿ ಅದ್ದಿ ತೆಗೆದೀತು ಜೀವ,
ಹೊರಟ ಮೇಲೆ ಕೆಲ ದಿನಗಳು ಸವೆಯುತ್ತವೆ-
ಹಸಿ ಗಾಯದಂತೆ,
ಬೇಸರವಿಲ್ಲ, ಉರಿ ಗೊತ್ತಾಗುವುದಿಲ್ಲ
ನಿನ್ನ ಕನಸು ತುಂಬುತ್ತದೆ ಗಾಯಕ್ಕೆ ರಂಗು.

...ಆಮೇಲೆ
ಇದ್ದೇ ಇದೆಯಲ್ಲ,
ದೀಪವಾರಿ, ಹೂಗಳುದುರಿ,
ಮರೆಯಲಿಕ್ಕೆಂದೇ ನೀನು ನೆನಪಾಗುವುದು..

ಇಲ್ಲ ಇದನ್ನು ಬರೆಯುವಾಗ ನಾನು ಅಳುತ್ತಿಲ್ಲ,
ನೀನು ನೆಮ್ಮದಿಯಿಂದ ಮಲಗು.
ಇಷ್ಟಕ್ಕೆಲ್ಲ ಅಳುತ್ತಾರೆಯೇ,
ನಿನ್ನ ಕಳೆದುಕೊಂಡಾಗಲೂ ಕಣ್ಣು ತುಸು ನೆನೆದಿತ್ತಷ್ಟೆ.

Rating
No votes yet

Comments