ಅಚ್ಚ ಕನ್ನಡ ಪದಗಳ ಬಗ್ಗೆ ನನ್ನ ಕೆಲವು ವಿಚಾರಗಳು

ಅಚ್ಚ ಕನ್ನಡ ಪದಗಳ ಬಗ್ಗೆ ನನ್ನ ಕೆಲವು ವಿಚಾರಗಳು

ಅಚ್ಚ ಕನ್ನಡ ಪದಗಳು

ಈ ಬಗ್ಗೆ ನನ್ನ ಕೆಲವು ವಿಚಾರಗಳಿವೆ .

೧. ಅಚ್ಚ ಕನ್ನಡ ಪದಕೋಶ ಎಂಬ ಪುಸ್ತಕ ಇದೆಯಂತೆ. ಅದನ್ನು, ಅಂಥ ಪುಸ್ತಕಗಳನ್ನು ಹುಡುಕಿ, ನೋಡೋಣ . ಅಂದರೆ ಮತ್ತೆ ಮತ್ತೆ ’ಅದನ್ನೇ ಕಂಡುಹಿಡಿವ’ ಕೆಲಸ ತಪ್ಪುವದು .

೨. ಶಬ್ದಕೋಶದಿಂದಲೋ , ಹಳೆಗನ್ನಡದಿಂದಲೋ , ದ್ರಾವಿಡಿಯನ್ ಎಟಿಮಾಲಾಜಿಕಲ್ ಡಿಕ್ಷನರಿಯಿಂದಲೋ ಶಬ್ದವನ್ನು ಹುಡುಕುವ ಬದಲು , ನಮ್ಮ ಹಿರಿಯರಿಂದ , ಹಳ್ಳಿಗರಿಂದ ಬಳಕೆಯಲ್ಲಿನ ಶಬ್ದಗಳನ್ನು ಹುಡುಕಿ ತೆಗೆಯುವದು ಒಳ್ಳೆಯದು. ಆಗ ಆ ಶಬ್ದಗಳನ್ನು ಬಳಸಿದ ವಾಕ್ಯಪ್ರಯೋಗಗಳನ್ನೂ ತಿಳಿಸಿದರೆ ಅದನ್ನು ನೆನಪಿನಲ್ಲಿಡಲು , ಮರು ಬಳಕೆಗೆ ತರಲು ಆಸಕ್ತರಿಗೆ ಅನುಕೂಲವಾಗುವದು. ( ಅಯ್ಯೋ , ನಾನು ಹಳ್ಳಿಯಲ್ಲಿ ಹುಟ್ಟಿ ಹಳ್ಳಿಗರ ನಡುವೆ ಬೆಳೆಯಲಿಲ್ಲವಲ್ಲ ... ಆಗ ನಿಮಗೆಲ್ಲ ಹೆಚ್ಚು ನೆರವಾಗಬಹುದಿತ್ತು.)

೩. ತೀರ ಅಪರಿಚಿತ ಶಬ್ದವನ್ನು ಬಳಕೆಗೆ ತರಲಾಗದು. ಇನ್ನೊಬ್ಬರನ್ನು ಒಪ್ಪಿಸಲೂ ಆಗದು.

೪. ಉದಾಹರಣೆಗೆ ನಿರಿಗೆ - ಶಬ್ದ ತಗೊಳ್ಳೋಣ - ಮುಖದ ಮೇಲಿನ ನಿರಿಗೆಗಳು , ಸೀರೆಯ/ಧೋತರದ ನಿರಿಗೆಗಳು ಗೊತ್ತು. ಅದನ್ನು ಹೊಸ ಅರ್ಥದಲ್ಲಿ ಟ್ಯಾಬ್‌ಗೋ ಇನ್ನಾವುದಕ್ಕೋ ಬಳಸಲು ಮನಸ್ಸು ಹಿಂಜರಿಯುತ್ತದೆ.

ಅದೇ ಹಣಕ್ಕೆ ಬದಲಾಗಿ ದುಡ್ಡು / ರೊಕ್ಕ ಬಳಸಲು ಹೇಳಬಹುದು . ತಕ್ಕ ಉದಾಹರಣೆಗಳನ್ನೂ ಕೊಡಬಹುದು. - ದಾಸರ ರೊಕ್ಕ ಬಲು ದುಕ್ಕ ಕಾಣಕ್ಕ ಎಂದೋ , ಉತ್ತರ.ಕರ್ನಾಟಕದಲ್ಲಿನ ಬಳಕೆಯನ್ನೋ ತೋರಿಸಬಹುದು.)

ಸಂಸ್ಕೃತದ ಸಿದ್ಧ - ಇಂಗ್ಲೀಷಿನ ರೆಡಿ , ಉರ್ದು/ಪಾರ್ಸಿ ಮೂಲದ ತಯಾರಿ ಬದಲಿಗೆ , ಬದಲಿಗೆ ಕನ್ನಡದ ಸಜ್ಜು ಬಳಸಲು ಸೂಚಿಸುವದಿದ್ದಲ್ಲಿ ..’ಕೊಡಲಿಕ್ಕೆ ರೊಕ್ಕ ಸಜ್ಜು ಮಾಡಬೇಕಲ್ಲಾ ?’ ಎಂಬಂಥ ಪ್ರಯೋಗ ತೋರಿಸಬಹುದು.

Rating
No votes yet

Comments