ಅಜ್ಜನ ಫೋಟೊ ( ಕಥೆ ) ಭಾಗ 2

ಅಜ್ಜನ ಫೋಟೊ ( ಕಥೆ ) ಭಾಗ 2

                       


                                                                               4
     ಅದು ಬಹುಶಃ ಸನ್ 1958 ನೇ ಇಸವಿಯ ಸಮಯ, ದೊಡ್ಡಪ್ಪ ಗಿರಿನಾಥರ ಹಿರಿಯ ಮಗ ಶ್ರೀರಂಗ ಅವನ ಅಜ್ಜನ ( ತಾಯಿಯ ತಂದೆ ) ಆಸ್ತಿಗೆ ದತ್ತಕ ಹೋದಾಗ ನನ್ನ ದೊಡ್ಡಪ್ಪ ತನ್ನ ಹೆಂಡತಿ ಮಕ್ಕಳೊಂದಿಗೆ ಕಳಸೂರಿಗೆ ಹೋಗಿ ನೆಲೆ ನಿಂತರು. ಬೈಲಮಲ್ಲಾಪುರದಲ್ಲಿ ಎಲ್ಲರೂ ವಾಸವಾಗಿದ್ದ ಮನೆ ನಮ್ಮ ಸ್ವಂತದ ಮನೆಯಾಗಿರಲಿಲ್ಲ. ಅದು ಆ ಗ್ರಾಮದ ಜಹಗೀರದಾರರ ವಂಶಸ್ಥರೊಬ್ಬರ ಮನೆಯಾಗಿತ್ತು. ಅವರು ವೃತ್ತಿಯನ್ನರಸಿ ಮುಂಬೈಗೆ ಹೋಗಿದ್ದ ವರು ಅಲ್ಲಿಯೇ ನೆಲೆ ನಿಂತರು. ಅವರು ಬೈಲಮಲ್ಲಾಪುರದ ಮನೆಯನ್ನು ಮಾರಾಟ ಮಾಡುವ ವಿಚಾರ ಹೊಂದಿದ್ದು, ಅವರು ನನ್ನ ದೊಡ್ಡಪ್ಪನಿಗೆ ಇಲ್ಲಿಯ ವರೆಗೂ ನೀವೆ ಈ ಮನೆಯಲ್ಲಿ ವಾಸಮಾಡಿಕೊಂಡು ಬಂದಿದ್ದೀರಿ ನೀವೆ ಇದನ್ನು ಖರೀದಿಸಿ ಎಂದು ಹೇಳಿದಾಗ, ಅವರು ಅದಕ್ಕೆ ಈ ಮನೆ ಐಮೂಲಿ ಮನೆ ಉದ್ಧಾರ ವಾಗುವ ಮನೆಯಲ್ಲ ಎಂದು ಗುರುಸಿದ್ಧ ಮಠದ ಗುರುಗಳು ಹೇಳಿದ್ದಾರೆ, ಬೇಕೆಂದರೆ ನಮ್ಮ ಸ್ವಂತ ಜಾಗದಲ್ಲಿಯೇ ಮನೆ ಕಟ್ಟಿಸಿದ ರಾಯಿತು ಎಂದರು. ಕೆಲವು ದನಕರುಗಳು ಕಳಸೂರಿಗೆ ಹೋದವು, ಉಳಿದ ದನಕರುಗಳು ಮತ್ತು  ವ್ಯವಸಾಯ ಉಪಕರಣಗಳು ನಮ್ಮ ಮನೆಯ ಹಿರೆಯ ಕಮತಿಗ ಗುರುಬಸವನ ಸುಪರ್ದಿಗೆ ಹೋದವು. ನಮ್ಮ ಸ್ವಂತ ಸಾಗುವಳಿಯ ಜಮೀನನ್ನು ಆತನೆ ಕೋರು ಪಾಲಿನ ಮೇಲೆ ತೆಗೆದುಕೊಂಡ. ನನ್ನ ತಂದೆ ನನ್ನ ಅಮ್ಮನೊಡನೆ ತನ್ನ ಹಿರಿಯ ತಮ್ಮ ಹರನಾಥರಲ್ಲಿಗೆ ಮಾಲಿಂಗಪುರಕ್ಕೆ ಹೋಗಿ ನೆಲೆ ನಿಂತರು. ಅಜ್ಜಿ ಸರಸ್ವತಮ್ಮ ಬದುಕಿರುವ ವರೆಗೂ ಹಾಗೂ ಹೀಗೂ ನಡೆಯಿತು. ಅವರ ಕಾಲಾ ನಂತರ ಅಣ್ಣ ತಮ್ಮ ಅತ್ತಿಗೆ ನಾದಿನಿಯರಲ್ಲಿ ಆಗಿ ಬರಲಿಲ್ಲ. ಮತ್ತೆ ನೆಲೆ ಬದಲಿಸ ಬೇಕಾದ ಸಂಧರ್ಭ ನನ್ನ ತಂದೆ ತಾಯಿಯವರಿಗೆ ಬಂತು.


     ನನ್ನ ತಂದೆ ಹೆಚ್ಚು ವಿದ್ಯಾವಂತಗರಲ್ಲ, ಯಾವುದೇ ನೌಕರಿಯ ಅರ್ಹತೆ ಯಿರಲಿಲ್ಲ, ನೌಕರಿಯ ವಯೋಮಿತಿ ಯೂ ಮೀರಿ ಹೋಗಿತ್ತು. ಸ್ವಂತ ಕೆಲಸ ಕಾರ್ಯ ಮಾಡುವಾ ಎಂದರೆ ತಾಂತ್ರಿಕ ಕೌಶಲ್ಯವಿಲ್ಲ ಹಣಕಾಸಿನ ಅನುಕೂಲವಿಲ್ಲ ಮರಳಿ ಮಣ್ಣಿಗೆ ಎನ್ನುವಂತೆ ಮತ್ತೆ ಬೈಲಮಲ್ಲಾಪುರಕ್ಕೆ ಹೋಗಲೇ ಬೇಕಾದ ಅನಿವಾರ್ಯತೆ ಬಂತು. ಮಾಡಲೊಂದಿ ವೃತ್ತಿಯಿಲ್ಲದ ಆರ್ಥಿಕ ಭಂಡವಾಳವಿಲ್ಲದ ಒಬ್ಬ ನಿರುದ್ಯೋಗಿಗೆ ಸಿಗಬೇಕಾದ ಗೌರವ ಅವರಿಗೆ ದೊರೆಯಿತು ಎಂದೇ ಹೇಳಬೇಕು. ಇರಲು ಮನೆಯಿಲ್ಲ ಭಾಡಿಗೆ ಮನೆಯಲ್ಲಿ ವಾಸ ಬೆಳೆಯುತ್ತಿದ್ದ ಸಂಸಾರ ಅವರನ್ನು ಆರ್ಥಿಕ ಸಂಕಷ್ಟಕ್ಕೆ ಗುರಿಮಾಡಿತು. ಸ್ವಂತ ಬೇಸಾಯ ಅವರ ಅಳತೆಗೆ ಮೀರಿದ್ದಾಗಿತ್ತು. ಹೀಗಾಗಿ ಅವರ ಜಮೀನಿನ ಕೋರು ಪಾಲಿನ ಹುಟ್ಟುವಳಿಯಲ್ಲಿಯೇ ಅವರ ಕುಟುಂಬದ ನಿರ್ವಹಣೆ ನಡೆಯ ಬೇಕಿತ್ತು. ಹೀಗಾಗಿ ಅವರ ಬದುಕು ಕಷ್ಟದಲ್ಲಿಯೇ ಸಾಗಿ ಬಂತು. ಹೀಗಾಗಿ ನಾನು ಹಿರೆಕೆರೆಯಲ್ಲಿ ನನ್ನ ಸೋದರ ಮಾವನ ಆಶ್ರ್ರಯ ದಲ್ಲಿಯೇ ಮುಂದುವರಿಯ ಬೇಕಾದ ಪ್ರಸಂಗವೊದಗಿ ಬಂತು. ಇವೆಲ್ಲ ನನಗೆ ಆಗ ಅರ್ಥವಾಗಿರಲಿಲ್ಲ, ಅರ್ಥವಾಗುವ ವಯಸ್ಸೂ ಅದಾಗಿರಲಿಲ್ಲ. ಎಲ್ಲರೂ ತಮ್ಮ ತಮ್ಮ ತಂದೆ ತಾಯಿಗಳ ಆಶ್ರಯದಲ್ಲಿಯೇ ಇರುತ್ತಿರುವಾಗ ನನ್ನ ಜೀವನ ಹೀಗೇಕೆ ಪರಾಶ್ರಯದಲ್ಲಿ ಕಳೆಯಬೇಕು ಎಂಬ ವ್ಯಾಕುಲತೆ ನನ್ನನ್ನು ಕಾಡುತ್ತಿತ್ತು. ನನ್ನ ಮಾವನದೂ ಸಹ ಕಾರ್ಪಣ್ಯದ ಜೀವನ ವಾಗಿತ್ತು. ಅಂತಹ ಸ್ಥಿತಿಯಲ್ಲಿಯೂ ಮಾವ ಅಜ್ಜಿ ದೊಡ್ಡಮ್ಮ ಎಲ್ಲರೂ ನನ್ನನ್ನು ಚೆನ್ನಾಗಿಯೇ ನೋಡಿಕೊಂಡರೆಂದೇ ಹೇಳಬೇಕು. ಆ ಸಂಧಿಗ್ಧ ಕಾಲ ನನ್ನನ್ನು ಕಷ್ಟ ಕಾರ್ಪಣ್ಯಗಳಿಗೆ ಒಗ್ಗುವ ಸ್ವಭಾವವನ್ನು ರೂಢಿಸಿ ಮೌಲ್ಯಗಳ ಬೆಳವಣಿಗೆಗೆ ಸಹಾಯ ಮಾಡಿತೆಂದೆ ಹೇಳಬೇಕು.


     ಇದಕ್ಕೊಂದು ಘಟನೆಯನ್ನು ಉದಾಹರಣೆಯಾಗಿ ಹೇಳ ಬೇಕೆಂದರೆ, ನಾನು ಮೂರನೆ ತರಗತಿಯಲ್ಲಿ ಓದುತ್ತಿದ್ದೆ. ಆ ವರ್ಷ ನನಗೆ ಗಣೇಶ ಚೌತಿಯಂದು ಗಣಪತಿಗಳನ್ನು ನೋಡಿಕೊಂಡು ಮರಳಿ ಮನೆಗೆ ಬರುವಾಗ ಮಬ್ಬುಗತ್ತಲಾಗುತ್ತಿತ್ತು. ರಾಮ ಭವನದ ಮುಂದೆ ಟಾರ್ ರಸ್ತೆ ಅಂಚಿನಲ್ಲಿ ಮಡಿಚಿದ ಐದು ರೂಪಾಯಿಯ ಒಂದು ನೋಟು ಬಿದ್ದಿತ್ತು. ನನಗೆ ಒಂದು ಕ್ಷಣ ದಿಗ್ಭ್ರಮೆಯಾಯಿತು , ಜೊತೆಗೆ ಅದು ಯಾರ ಹಣವಾಗಿರಬಹುದು ಎಂಬ ಕುತೂಹಲ ಸಹ ಉಂಟಾಯಿತು. ಒಂದು ಕಡೆ ಹಣ ಎತ್ತಿಕೊಳ್ಳಲೆ ಎಂಬ ಆಶೆ ಮತೊಂದು ಕಡೆ ಬೇರೊಬ್ಬರ ಸ್ವತ್ತಿಗೆ ನಾನು ಆಶೆ ಪಡುತ್ತಿರುವೆನೆ ಎಂಬ ಅಪರಾಧ ಪ್ರಜ್ಞೆ. ಆ ಕಾಲಕ್ಕೆ ಅದು ಸಣ್ಣ ಮೊತ್ತವೇನಲ್ಲ, ಅದನ್ನು ಎತ್ತಿಕೊಳ್ಳುವುದೋ ಬಿಡುವುದೋ ಎನ್ನುವ ದ್ವಂದ್ವದಲ್ಲಿ ಮುಳುಗಿದ್ದೆ. ಅದು ಯಾರೋ ಕಳೆದುಕೊಂಡ ಹಣ, ನಾನು ಬಿಟ್ಟು ಹೋದರೆ ಇನ್ನೊಬ್ಬ ನೋಡಿದವ ಎತ್ತಿಕೊಳ್ಳುತ್ತಾನೆ ಅದು ಕಳೆದು ಕೊಂಡವನಿಗೆ ದೊರೆಯಲು ಸಾಧ್ಯವೆ ಎಂದು ಮನಸು ತನ್ನ ಅನುಕೂಲಕ್ಕೆ ತಕ್ಕಂತೆ ತರ್ಕವನ್ನು ಹೆಣೆಯುತ್ತಿತ್ತು. ಕೊನೆಗೆ ಆಶೆಯೇ ಮೇಲಾಗಿ ಆ ಐದು ರೂಪಾಯಿಯ ನೋಟನ್ನು ಎತ್ತಿಕೊಂಡು ಮನೆಗೆ ಬಂದು ದೊಡ್ಡಮ್ಮ ಗಂಗಮ್ಮಳಿಗೆ ವಿಷಯ ತಿಳಿಸಿದೆ.


     ಆಕೆ ' ಆ ಹಣ ಕಳೆದುಕೊಂಡವರು ಯಾರೋ ಏನೋ, ಎಷ್ಟು ಪರಿತಪಿಸುತ್ತಾರೋ ಅದು ಯಾರ ಹಣವೆಂದು ತಿಳಿಯುವುದು ಹೇಗೆ, ಆ ಹಣವನ್ನು ಯಾಕೆ ತಂದೆ ಅದನ್ನು ತರದೆ ಅಲ್ಲಿಯೇ ಬಿಟ್ಟು ಬರ ಬೇಕಿತ್ತು ' ಎಂದು ನನ್ನನ್ನು ಆಕ್ಷೇಪಿಸಿದರು.


     ವಿಷಯ ತಿಳಿದ ಅಜ್ಜಿ ನಾಗಮ್ಮ ನನ್ನನ್ನು ಗ್ರಾಮದ ಹನುಮಂತ ದೇವರ ಗುಡಿಗೆ ಕರೆದುಕೊಂಡು ಹೋಗಿ ಕಾಣಿಕೆ ಡಬ್ಬಕ್ಕೆ ಆ ಹಣವನ್ನು ಹಾಕಿಸಿ ನನ್ನನ್ನು ದೇವರಿಗೆ ಅಡ್ಡ ಬೀಳಿಸಿದಳು. ನನಗೆ ಅವಮಾನ ವಾದಂತಾಗಿತ್ತು. ದಾರಿಯಲ್ಲಿ ಸಿಕ್ಕ ಆ ಹಣವನ್ನು ಎತ್ತಿ ಕೊಂಡದಕ್ಕಾಗಿ ನನಗೆ ವಿಷಾದವೆನಿಸಿತ್ತು, ಆ ಬಗ್ಗೆ ನನಗೆ ಇಂದಿಗೂ ಹಳಹಳಿಯಿದೆ. ಆ ಘಟನೆಯನ್ನು ನೆನಪಿಸಿಕೊಂಡರೆ ಈಗಲೂ ನನಗೆ ಕುಗ್ಗಿ ಹೋಗು ವಂತಾಗುತ್ತದೆ.


     ಮನೆಗೆ ಬರುತ್ತಾ ದಾರಿಯಲ್ಲಿ ಅಜ್ಜಿ ನಾಗಮ್ಮ ' ಬೇಸರ ವಾಯಿತೆ ಮಗ ? ಬೇರೆಯವರ ಸ್ವತ್ತು ನನಗೆ ದಕ್ಕುವುದಿಲ್ಲ. ನಿನಗೆ ಸಿಕ್ಕ ಆ ಐದು ರೂಪಾಯಿ ಹಣವನ್ನು ನಾವು ಈ ದಿನ ನಮ್ಮ ಸ್ವಂತಕ್ಕೆ ಬಳಸಿ ಕೊಂಡಿ ದ್ದರೆ, ಅದರ ದುಪ್ಪಟ್ಟು ಹಣ ಬೇರೆ ರೂಪದಲ್ಲಿ ನಮ್ಮಿಂದ ಹೋಗುತ್ತಿತ್ತು. ನೀನಿನ್ನೂ ಸಣ್ಣವ ಈ ಧರ್ಮ ಸೂಕ್ಷ್ಮ ನಿನಗೆ ಈಗ ಅರ್ಥವಾಗುವುದಿಲ್ಲ ದೊಡ್ಡವನಾದ ಮೇಲೆ ಅರ್ಥವಾಗುತ್ತದೆ. ಆಗ ನಿನಗೆ ನಾನು ಈಗ ತೆಗೆದುಕೊಂಡ ನಿರ್ಣಯ ಸರಿ ಎನ್ನಿಸುತ್ತೆ. ಮನದಲ್ಲಿ ತಪ್ಪು ಮಾಡಿದೆನೆಂದು ಹಳಹಳಿಕೆ ಇಟ್ಟು ಕೊಳ್ಳಬೇಡ, ಆ ಬಗ್ಗೆ ಪಶ್ಚಾತಾಪ ಪಟ್ಟಿದ್ದೀಯಾ ಇದಕ್ಲಿಂತ ಮಿಗಿಲಾದ ಪ್ರಾಯಶ್ಚಿತ್ತವಿಲ್ಲ, ದೇವರು ಹನುಮಪ್ಪ ನಿನ್ನನ್ನು ಕ್ಷಮಿಸಿದ್ದಾನೆ ' ಎಂದು ಬುದ್ಧಿವಾದ ಹೇಳಿದ್ದರು.


     ಮನೆಯಲ್ಲಿ ಕಿತ್ತು ತಿನ್ನುವ ಬಡತನವಿದ್ದರೂ ಪರರ ಹಣಕ್ಕೆ ಆಶೆ ಪಡದ ಆ ನನ್ನ ಅಜ್ಜಿ ದೊಡ್ಡಮ್ಮ ಮತ್ತು ಮಾವ ಎಲ್ಲರೂ ನನಗೆ ಈಗ ಅದ್ಭುತ ವ್ಯಕ್ತಿಗಳಾಗಿ ಕಂಡು ಬರುತ್ತಾರೆ. ಆ ಘಟನೆ ಇಂದೂ ಮನದಲ್ಲಿ ಅಚ್ಚಳಿಯದೆ ಉಳಿದಿದೆ. ಈಗ ಅವರೆಲ್ಲ ಗತಿಸಿ ಹೋಗಿದ್ದಾರೆ, ಪರರ ಸ್ವತ್ತಿಗೆ ಆಶೆಪಡದ ಆ ಗುಣ ಅವರಿಗೆ ಹೇಗೆ ಬಂತು, ಅವರೆಲ್ಲ ಯಾವ ಲೋಕದ ಜೀವಗಳು, ಎಲ್ಲಿಗೆ ಹೋದರು ? ಇಂದು ನಾನು ಬದುಕಿನಲ್ಲಿ ಹಲ ವಷ್ಟಾದರೂ ಮೌಲ್ಯಗಳನ್ನು ಉಳಿಸಿಕೊಂಡಿದ್ದರೆ ಅದಕ್ಕೆ ಅವರುಗಳೆ ಕಾರಣಕರ್ತರು. ಅವರು ಇಂದಿಗೂ ನನ್ನ ನೆನಪುಗಳ ಕೋಶದಲ್ಲಿ ಅಚ್ಚಳಿಯದೆ ಉಳಿದಿದ್ದಾರೆ.


                                                                        5


     1962 ನೇ ಇಸವಿ ನಾನು ಮುಲ್ಕಿ ಪರೀಕ್ಷೆಗೆ ಓದುತ್ತಿದ್ದೆ, ಮೇಗುಂಡಿ ಚನ್ನಪ್ಪ ಎನ್ನುವವರು ನಮಗೆ ಗುರುಗಳಾಗಿದ್ದರು. ಅವರು ಕನ್ನಡ ಭಾಷೆಯ ಬಗ್ಗೆ ಮತ್ತು ಸಾಹಿತ್ಯದ ಬಗ್ಗೆ ವಿಶೇಷವಾದ ಒಲವನ್ನು ಹೊಂದಿದವರಾಗಿದ್ದರು. ಸವರ ಓದು ಮುಲ್ಕಿಯಷ್ಟೆ ಆಗಿದ್ದರೂ ಅವರು ಒಬ್ಬ ಮೇಧಾವಿ ಗುರುವಾಗಿದ್ದ ರೆಂಬುದರಲ್ಲಿ ಸಂಶಯವೆ ಇಲ್ಲ. ನಮಗೆ ಪಠ್ಯವಾಗಿರುತ್ತಿದ್ದ ಕುವೆಂಪು, ಬೇಂದ್ರೆ, ರಾಜರತ್ನಂ, ಪಂಜೆ ಯವರು, ಗೋಕಾಕ, ಮಧುರಚೆನ್ನ, ವಾಲಿಕಾರ ಮುತಾದವರ ಕವನಗಳನ್ನು ನಮಗೆ ಪಾಠ ಮಾಡುವ ಮೊದಲು ಆ ಕವಿಗಳ ಮತ್ತು ಅವರ ಕಾವ್ಯ ಕೃತಿಗಳ ಪರಿಚಯವನ್ನು ಸಮಗ್ರವಾಗಿ ನೀಡಿ ಆ ಬಗ್ಗೆ ನಮಗೆ ಆಸಕ್ತಿ ಬರುವಂತೆ ಮತ್ತು ಕನ್ನಡ ಸಾಹಿತ್ಯದ ಬಗೆಗೆ ಒಲವು ಮೂಡುವಂತೆ ಮಾಡಿದ ಅವರ ಪರಿಶ್ರಮ ದೊಡ್ಡದು. ಶಿಕ್ಷಣ ಕೊಡುವಂತೆಯೇ ಶಿಕ್ಷೆ ಕೊಡುವುದರಲ್ಲಿಯೂ ಅವರದು ಎತ್ತಿದ ಕೈ. ಆ ಕಾಲದಲ್ಲಿ ನಮಗೆ ಗಣಿತ ವೆಂದರೆ ಅಲರ್ಜಿ ಸರಳಬಡ್ಡಿ ಚಕ್ರಬಡ್ಡಿಯ ಮೂವತ್ತು ನಾಲ್ವತ್ತು ಲೆಖ್ಖಗಳನ್ನು ಮಾಡಿ ಕೊಂಡು ಬರುವಂತೆ ನಮಗೆ ಹೋಮ್ ವರ್ಕ ಕೊಡುತ್ತಿದ್ದರು. ಎಷ್ಟೆ ಕಷ್ಟಪಟ್ಟು ಮಾಡಿದರೂ ಒಂದೆರಡು ಲೆಖ್ಖಗಳು ಕೈಕೊಡುತ್ತಿದ್ದವು. ಅದು ಅವರಿಗೆ ಹೇಗೆ ಗೊತ್ತಾಗುತ್ತಿತ್ತೊ ಏನೋ ನಾವು ತಪ್ಪಿದ ಆ ಲೇಖ್ಖಗಳನ್ನೆ ಕೇಳಿ ಅವರ ತಪ್ಪಿಗನುಗುಣವಾಗಿ ಶಿಕ್ಷೆ ಸಿದ್ಧವಾಗಿರು ತ್ತಿತ್ತು. ಅದರಲ್ಲಿಯೂ ಅನೇಕ ವಿಧಗಳುಒಬ್ಬರ ಅಂಗೈಗೆ ನಾಲ್ಕೈದು ಛಡಿಯೇಟು, ಇನ್ನೊಬ್ಬರಿಗೆ ಎರಡೂ ಕೈಗಳಿಗೆ ಏಟು, ಮತ್ತೊಬ್ಬರಿಗೆ ಪೃಷ್ಟಭಾಗ ಮತ್ತು ಕಾಲು ಗಳಿಗೆ ಛಡಿಯೇಟು. ಒಮ್ಮೊಮ್ಮೆ ಬಗ್ಗಿನಿಂತು ಮೊಣಕಾಲ ಸಂದಿಯಲ್ಲಿ ಎರಡೂ ಕೈಗಳನ್ನು ತೂರಿಸಿ ಎರಡೂ ಕಿವಿಗಳನ್ನು ಹಿಡಿದುಕೊಂಡು ನಿಲ್ಲಬೇಕು. ಆ ಸ್ಥಿತಿಯಲ್ಲಿ ಬಹಳ ಹೊತ್ತು ನಿಲ್ಲಲು ಆಗುತ್ತಿರಲಿಲ್ಲೊ. ಸ್ವಲ್ಪ ಅಲುಗಾಡಿದರೂ ಸಾಕು, ಪೃಷ್ಟಭಾಗ ಮತ್ತು ಕಾಲುಗಳಿಗೆ ಛಡಿಯೇಟುಗಳು ಬೀಳುತ್ತಿದ್ದವು. ಈ ಶಿಕ್ಷಾ ಕ್ರಮಕ್ಕೆ ಹೆದರಿಯೇ ನೇಕ ವಿದ್ಯಾರ್ಥಿಗಳು ಶಾಲೆ ಬಿಟ್ಟರು. ತೃತಿಯ ಷಾಣ್ಮಾಸಿಕ ಪರೀಕ್ಷೆ ಬರುವ ವೇಳೆಗೆ ಉಳಿದವರು ಕೇವಲ ಹನ್ನೆರಡು ಜನ. ಮುಖ್ಯ ಶಿಕ್ಷಕ ಗಿರೆಡ್ಡಿಯವರು ಈ ಬಗ್ಗೆ ತಿಳಿ ಹೇಳಿದ್ದಕ್ಕೆ ಮುನಿಸಿ ಕೊಂಡು ಅವರ ಕಾಟವೇ ಬೇಡವೆಂದು ಏಳನೆಯ ತರಗತಿಯ ಕ್ಲಾಸನ್ನು ಊರ ಹೊರಗಿನ ಧರ್ಮಶಾಲೆಗೆ ಸ್ಥಳಾಂತರಿಸಿದರು. ನಮಗೂ ಸಹ ಮನೆಯಲ್ಲಿ ಶಾಲೆಯನ್ನು ಬಿಡು ಎಂದು ಹೇಳಿದರೆ ಎಷ್ಟು ಚೆನ್ನ ಎಂದು ಹಲವು ಬಾರಿ ಅನ್ನಿಸಿದ್ದುಂಟು. ಆದರೆ ಅದಕ್ಕೆ ಪುಷ್ಟಿ ಕೊಡುವವರು ಯಾರು ? ಮನೆಯಲ್ಲಿ ಮಾವ ಮತ್ತು ದೊಡ್ಡಮ್ಮ ಶಿಕ್ಷೆಯಿಲ್ಲದೆ ವಿದ್ಯೆ ಬಾರದು ಎಂಬ ಧೃಢವಾದ ನಂಬಿಕೆಗೆ ಅಟಿಕೊಂಡವರು.


     ಆದರೆ ಅಜ್ಜಿ ನಾಗಮ್ಮ ನಮ್ಮ ಗುರುಗಳ ಶಿಕ್ಷಾ ಕ್ರಮವನ್ನು ಕುರಿತು  ' ಏನೂ ಮಾಡಲಾಗುವುದಿಲ್ಲ ಮಗು ಚೆನ್ನಾಗಿ ಮನಗೊಟ್ಟು ಓದು 'ಎಂದು ಆತ್ಮ ವಿಶ್ವಾಸ ತುಂಬುತ್ತಿದ್ದರು. ಅವರ ನಲ್ನುಡಿಗಳೆ ನನ್ನಲ್ಲಿ ಉತ್ಸಾಹ ತುಂಬಿ ಶಿಕ್ಷೆಗೆ ಹೆದರಿ ವಿಮುಖ ನಾಗದೆ ಇನ್ನೂ ತಾದಾತ್ಮತೆಯಿಂದ ಓದಿನಲ್ಲಿ ಮುಂದುವರಿಯಲು ಪ್ರೇರೇಪಿಸುತ್ತಿದ್ದವು. ಕಠಿಣ ಪರಿಶ್ರಮ ನನ್ನ ಕಲಿಕೆಯಲ್ಲಿ ಪ್ರಗತಿಯನ್ನು ತಂದಿತೆಂದೆ ಹೇಳಬೇಕು. ಕ್ರಮೇಣ ನನಗೆ ಗುರುಗಳ ಶಿಕ್ಷೆ ಕಡಿಮೆ ಯಾಗುತ್ತ ಬಂದು ಕೊನೆ ಕೊನೆಗೆ ಶಿಕ್ಷೆ ಅಪರೂಪ ವಾಯಿತೆಂದೆ ಹೇಳಬೇಕು.


     ಆ ವರ್ಷ ದೀಪಾವಳಿ ಹಬ್ಬದ ಸಮಯ ನನ್ನ ತಂದೆ ಹರಿನಾಥ ಹಿರೆಕೆರೆಗೆ ಬಂದರು. ಬಲಿ ಪಾಡ್ಯಮಿಯ ದಿನ ಅವರು ಕಾರ್ಯ ನಿಮಿತ್ತ ಕೆರೆಹಳ್ಳಿಗೆ ಹೋಗುವವರಿದ್ದರು. ವಿಷಯ ತಿಳಿದ ನನ್ನ ಅಜ್ಜಿ ನಾಗಮ್ಮ ಆ ದಿನ ವಿಶೇಷ ವಾಗಿ ಹಬ್ಬದ ಅಡಿಗೆ ಮಾಡಿ ನನ್ನ ಅಜ್ಜ ಮಹದೇವಯ್ಯ ನವರಿಗೆ ಊಟ ಕೊಟ್ಟು ಕಳಿಸಿದಳು. ನನ್ನ ತಂದೆಯೊಟ್ಟಿಗೆ ನಾನೂ ಸಹ ಕೆರೆಹಳ್ಳಿಗೆ ಹೋದೆ. ನನಗೆ ಬುದ್ಧಿ ಬಂದಂದಿನಿಂದ ಒಮ್ಮಯೂ ನಮ್ಮ ತಾಯಿಯ ಊರಿಗೆ ಬಂದರೂ ಮನೆಗೆ ಬಾರದೆ ಇದ್ದ ನನ್ನ ಅಜ್ಜ ಮಹದೇವಯ್ಯ ಒಂದು ಕ್ಷಣವೂ ವ್ಯತಿರಿಕ್ತವಾಗಿ ನಡೆದು ಕೊಳ್ಳಲಿಲ್ಲ. ಸಂತೋಷ ಚಿತ್ತದಿಂದ ಊಟ ಮಾಡಿದರು. ಹಿರೆಕೆರೆ ಮನೆಯ ಎಲ್ಲ ಸದಸ್ಯರ ಯೋಗಕ್ಷೇಮ ವಿಚಾರಿಸಿದರು. ಕೆಲವು ಪ್ರಶ್ನೆಗಳನ್ನು ಕೇಳಿ ನನ್ನನ್ನು ಪರೀಕ್ಷಿಸಿದರು. ಕೆಲವಕ್ಕೆ ಉತ್ತಿರಿಸಿದೆ, ಕೆಲವಕ್ಕೆ ತಡವರಿಸಿದೆ. ಬುದ್ಧಿವಾದ ಹೇಳಿ ಚೆನ್ನಾಗಿ ವಿದ್ಯಾಭ್ಯಾಸ ಮಾಡು ಎಂದು ಹೇಳಿ ಬೀಳ್ಕೊಟ್ಟರು. ನನ್ನ ತಂದೆ ಯೊಂದಿಗೆ ಹಿರೆಕೆರೆಗೆ ಮರಳಿ ಬಂದು ಒಮ್ಮನಸಿ ನಿಂದ ಓದಿನಲ್ಲಿ ತೊಡಗಿಕೊಂಡೆ. ನಮ್ಮ ತರಗತಿಯಲ್ಲಿ ಮೊದಲು ನಾಲ್ವತ್ತು ವಿದ್ಯಾರ್ಥಿಗಳಿದ್ದು ನಂತರ ಉಳಿದವರು ಕೇವಲ ಹದಿನಾಲ್ಕು ಜನ. ಅವರ ಪೈಕಿಯೇ ಮುಲ್ಕಿ ಪರೀಕ್ಷೆಗೆ ಕಟ್ಟಿಸಿದ್ದು ಏಳು ಜನರಿಗೆ ಮಾತ್ರ. ಆ ಪೈಕಿ ನಾನೂ ಒಬ್ಬನಾಗಿದ್ದುದು ನನಗೆ ಖುಷಿ ತಂದಿತ್ತು. ನಾನೂ ಸಹ ಒಬ್ಬ ಬುದ್ಧಿವಂತನೆಂಬ ಹೆಮ್ಮೆ ಅದರಲ್ಲಡಗಿತ್ತೆ ? ಇದ್ದರೂ ಇದ್ದಿರ ಬಹುದು !ಇಮ್ಮಡಿ ಉತ್ಸಾಹ ದಿಂದ ಮುಲ್ಕಿ ಪರೀಕ್ಷೆಯ ತಯಾರಿಯಲ್ಲಿ ತೊಡಗಿದೆ. ಸವಣೂರು ಪರೀಕ್ಷಾ ಕೇಂದ್ರವೆಂದೂ ಅಲ್ಲಿಯ ಮಜೀದ್ ಹೈಸ್ಕೂಲು ಪರೀಕ್ಷಾ ಸ್ಥಳವೆಂದೂ ತಿಳಿದು ಬಂತು. ಅದು ಇಂಗ್ಳೀಷ್ ಪ್ರೊಫೆಸರ್ ಡಾ|| ವಿ.ಕೃ.ಗೋಕಾಕರು ಓದಿದ ಹೈಸ್ಕೂಲು ಎಂಬ ಕಾರಣಕ್ಕೆ ನಮಗೆ ಆಸಕ್ತಿ ಮೂಡವಂತೆ ನಮ್ಮ ಗುರುಗಳು ವರ್ಣಿಸಿದ್ದರು.ಗೋಕಾಕರು ಓದಿದ ಹೈಸ್ಕೂಲಿಗೆ ನಾವು ಪರೀಕ್ಷೆ ಬರೆಯಲು ಹೋಗುತ್ತಿದ್ದೇವೆ ಎಂಬ  ವಿಷಯ ನಮ್ಮನ್ನು ಉಲ್ಲಸಿತರನ್ನಾಗಿ ಮಾಡಿತ್ತು.


     ಆ ವರ್ಷದ ಮಾರ್ಚ ತಿಂಗಳನ ಕೊನೆಯ ದಿನಗಳು. ಒಂದು ದಿನ ನನ್ನ ಅಜ್ಜ ಮಹದೇವಯುಯ ನವರಿಂದ ನನ್ನ ಹೆಸರಿಗೆ ಇಪ್ಪತ್ತು ರೂಪಾಯಿಗಳ ಮನಿಯಾರ್ಡರ್ ಬಂದಿತ್ತು. ಶಾಲೆಯಿಂದ ನಾನು ಬರುತ್ತಿದ್ದಂತೆ ನನ್ನ ಅಜ್ಜಿ ನನಗೆ ವಿಷಯ ತಿಳಿಸಿದಳು. ಪೋಸ್ಟ್ ಮನ್ ಮೆಹಬೂಬ ಸಾಬ್ ಗಿಡ್ಡೂನವರರವರ ಪರಿಚಯ ನನಗೆ ಇತ್ತು. ಅವರ ಮನೆಗೆ ಹೋಗಿ ಮನಿಯಾರ್ಡರ್ ಹಣ ಪಡೆದು ಬಂದೆ. ಮನಿಯಾರ್ಡರ್ ಕೂಪನ್ನಿನಲ್ಲಿ


     ' ನಮ್ಮ ಮನೆತನದಲ್ಲಿ ಇತ್ತೀಚೆಗಿನ ಪೀಳಿಗೆಯಲ್ಲಿ ಯಾರೂ ಮುಲ್ಕಿ ಪರೀಕ್ಷೆ ಪಾಸು ಮಾಡಿಲ್ಲ. ನೀನು ಚೆನ್ನಾಗಿ ಓದಿ ಪಾಸು ಮಾಡು ಎಂದು ಬರೆದು, ನಿನ್ನ ಪರೀಕ್ಷೆಯ ಖರ್ಚಿಗೆಂದು ಇಪ್ಪತ್ತು ಇಪ್ಪತ್ತು ರೂಪಾಯಿಗಳನ್ನು ಕಳಿಸಿದ್ದೇನೆ. ನಿನ್ನ ಮಾವ ನವರ ಕೈಗೆ ಆ ಹಣವನ್ನು ಕೊಡು, ಅವರು ಉಚಿತ ರೀತಿಯಲ್ಲಿ ಖರ್ಚ ಮಾಡುತ್ತಾರೆ. ಮನೆಯಲ್ಲಿ ಹಿರಿಯರಿಗೆ ನನ್ನ ನಮಸ್ಕಾರಗಳನ್ನು ತಿಳಿಸು ನಿನ್ನ ಯಶಸ್ಸನ್ನು ಹಾರೈಸುವ ನಿನ್ನ ಅಜ್ಜ ' ಎಂದು ಬರೆದಿದ್ದರು.


      ಅವರು ಕಳಿಸಿದ ಹಣಕ್ಕಿಂತ ಹೆಚ್ಚಾಗಿ ಅವರು ಮನಿಯಾರ್ಡರ್ ಕೂಪನ್ನಿನಲ್ಲಿ ಬರೆದ ಒಕ್ಕಣಿಕೆ ಎಲ್ಲರನ್ನು ಆರ್ದಗೊಳಿಸಿತ್ತು. ಆ ಕ್ಷಣಕ್ಕೆ ನಿಜಕ್ಕೂ ನನಗೆ ಸಂತೋಷವೆನಿಸಿತ್ತು. ನನ್ನ ಯಶಸ್ಸನ್ನು ಹಾರೈಸುವವರೊಬ್ಬರು ನನ್ನ ತಂದೆಯ ಮನೆಯ ಕಡೆಯಿಂದ ಇದ್ದಾರೆ ಎಂದು. ಮನಸು ಗರಿಗೆದರಿ ನಲಿದಿತ್ತು, ನನ್ನ ತಂದೆಯ ಊರಾದ ಬೈಲ ಮಲ್ಲಾಪುರದಲ್ಲಿಯಾಗಲಿ, ತಾಯಿಯ ಮನೆ ಹಿರೆಕೆರೆ ಯಲ್ಲಾಗಲಿ ಹೈಸ್ಕೂಲು ಇರಲಿಲ್ಲ. ಕಿತ್ತು ತಿನ್ನುವ ಬಡತನದ ಸ್ಥಿತಿಯಲ್ಲಿರುವ ನನಗೆ ಮಾಧ್ಯಮಿಕ ಶಾಲಾ ಓದು ಸಾಧ್ಯವೆ ಎಂಬ ಬಗ್ಗೆ ಆಗಾಗ್ಗೆ ಯೋಚನೆ ಯಾಗುತ್ತಿತ್ತು. ಅದನ್ನು ನೆನೆಸಿ ಕೊಂಡರೆ ಉತ್ಸಾಹ ಜರ್ರನೆ ಇಳಿದು ಹೋಗುತ್ತಿತ್ತು. ಆದರೂ ಭವಿಷ್ಯದ ಯೋಚ ನೆಯನ್ನು ಬದಿಗಿಟ್ಟು ಏಕಾಗ್ರತೆ ಯಿಂದ ಓದಿನಲ್ಲಿ ತೊಡಗಿಕೊಂಡೆನು.


     ಮುಲ್ಕಿ ಪರೀಕ್ಷಾ ಅವಧಿ ಆರು ದಿನಗಳ ಕಾಲದ್ದಿದ್ದು ಅಷ್ಟು ದಿನಗಳ ಕಾಲ ನಾವು ಅಲ್ಲಿ ಸವಣೂರಿನಲ್ಲಿ ವಾಸ್ತವ್ಯ ಮಾಡಬೇಕಿತ್ತು. ಪರೀಕ್ಷೆಗೆ ಹೋಗಿ ಬರಲು ಬಸ್ ಚಾರ್ಜ ಮತ್ತು ಊಟ ತಿಂಡಿಗಳಿಗೆಂದು ಹದಿನೈದು ರೂಪಾಯಿ ಗಳನ್ನು ನನ್ನ ಮಾವ ನಮ್ಮ ಗುರುಗಳ ಕೈಗೆ ಕೊಟ್ಟರು. ನನ್ನ ಕೈಗೆ ಐದು ರೂಪಾಯಿಗಳನ್ನು ಕೊಟ್ಟರು. ನನ್ನ ವಿದ್ಯಾರ್ಥಿ ಜೀವನದಲ್ಲಿ ಪ್ರಥಮ ಬಾರಿಗೆ ಸ್ವತಂತ್ರವಾಗಿ ಹಿರೆಕೆರೆಯಿಂದ ಹೊರಗಡೆ ಪ್ರಯಾಣ ಹೊರಟಿದ್ದೆ. ಸಂತೋಷದ ಜೊತೆಗೆ ಆತಂಕವೂ ಇತ್ತು ಮತ್ತು ಪರೀಕ್ಷೆಯನ್ನು ಪಾಸು ಮಾಡಲೇ ಬೇಕಾದ ಅನಿವಾರ್ಯತೆ ಇತ್ತು. ಅದಕ್ಕೂ ಮಿಗಿಲಾಗಿ ನನ್ನ ಅಜ್ಜನ ಆಶೆಯನ್ನು ಹುಸಿಗೊಳಿಸ ಬಾರದೆಂಬ ಧೃಢ ನಿರ್ಧಾರವೂ ಇತ್ತು. ಈ ನಿರೀಕ್ಷೆಯ ಎಲ್ಲ ಭಾರ ಮತ್ತು ಒತ್ತಡಗಳಿಂದಾಗಿ ಎಲ್ಲಿ ಫೇಲಾಗಿ ಬಿಡುತ್ತೇನೋ ಎನ್ನುವ ಅವ್ಯಕ್ತ ಭಯವೂ ಇತ್ತು. ಅಂತೂ ಒಂದು ಮುಂಜಾವು ನಮ್ಮೆಲ್ಲರ ಸವಣೂರು ಪ್ರಯಾಣ ಪ್ರಾರಂಭ ವಾಯಿತು. ನಮ್ಮ ತರಗತಿಯ ಗುರುಗಳು ಮುಖ್ಯೋಪಾಧ್ಯಾಯರು ಮತ್ತು ನಾವು ಪರೀಕ್ಷಾರ್ಥಿಗಳು ಏಳು ಜನ ಸವಣೂರಿನ ಉರ್ದುಶಾಲೆಯಲ್ಲಿ ನಮ್ಮ ವಾಸ್ತವ್ಯದ ಏರ್ಪಾಡು ಮಾಡಲಾಗಿತ್ತು. ಅದು ತಾಲೂಕು ಕೇಂದ್ರವಾಗಿದ್ದು ನಮ್ಮ ಹಿರೆಕೆರೆ ಗ್ರಾಮಕ್ಕಿಂತ ದೊಡ್ಡ ದಾಗಿತ್ತು. ಪರೀಕ್ಷಾ ಕೇಂದ್ರವಾಗಿದ್ದ ಮಜೀದ್ ಹೈಸ್ಕೂಲಿಗೆ ಹೋಗಿ ನಮ್ಮ ರಿಜಿಸ್ಟರ್ ನಂಬರುಗಳನ್ನು ಹಾಕಿದ್ದ ಕೊಠಡಿಗಳನ್ನು ನೋಡಿಕೊಂಡು ಬಂದೆವು. ನವ್ಯಕವಿ ಗೋಕಾಕರು ಓದಿದ ಮತ್ತು ಓಡಾಡಿದ ಆ ಹೈಸ್ಕೂಲು ಭಾವ ನಾತ್ಮಕವಾಗಿ ನಮ್ಮನ್ನು ಮೋಡಿ ಮಾಡಿತ್ತು ಹಾಗೆಯೆ ನಮಗೆ ಹೆಮ್ಮೆ ಎನಿಸಿತ್ತು ಕೂಡ. ನಮ್ಮ ಗುರುಗಳು ನಮಗೆ ಒಂದು ಖಾನಾವಳಿಯಲ್ಲಿ ಊಟದ ವ್ಯವಸ್ಥೆಯನ್ನು ಮಾಡಿದ್ದರು. ಪ್ರತಿದಿನ ಬೆಳಿಗ್ಗೆ ಕಪ್ಪಲಿ ಭಾವಿಯೊಂದರಲ್ಲಿ ಸ್ನಾನ ಪರೀಕ್ಷೆ ಖಾನವಳಿ ಊಟ ದೈನಂದಿನ ಕಾರ್ಯಕ್ರಮ ಗಳಾಗಿದ್ದವು. ಪರೀಕ್ಷೆಯನ್ನು ನನ್ನ ಮಿತಿಯಲ್ಲಿ ಚೆನ್ನಾಗಿಯೆ ಮಾಡಿದ್ದೆ. ಪರೀಕ್ಷೆಯ ಕೊನೆಯ ದಿನ ರಾತ್ರಿ ಊಟ ಮುಗಿಸಿದೆವು. ಗುರುಗಳು ನಮ್ಮೆಲ್ಲರನ್ನು ಮಾಗಾವಿ ಟಾಕೀಸ್ ಗೆ ಕೈವಾರ ಮಹಾತ್ಮೆ  ಸಿನೆಮಾ ನೋಡಲು ಕರೆದೊಯ್ದರು. ತಲಾ ಎರಡಾಣೆಯಂತೆ ಟಿಕೀಟು ಹಣವನ್ನು ಅವರೆ ಕೊಟ್ಟರು. ಅದು ನಾನು ನೋಡಿದ ಪ್ರಥಮ ಸಿನೆಮಾ ಆಗಿತ್ತು. ಅದೊಂದು ಭಕ್ತಿ ಪ್ರಧಾನವಾದ ಚಿತ್ರವಾಗಿತ್ತು. ಉಲ್ಲಾಸ ದೊಂದಿಗೆ ಹಿರೆಕೆರೆಗೆ ಮರಳಿದೆವು. ನನಗೆ ಕೊಟ್ಟಿದ್ದ ಐದು ರೂಪಾಯಿ ಖರ್ಚಾಗಿರಲಿಲ್ಲ. ಮರಳಿ ಬಂದವನು ಆ ಹಣವನ್ನು ನನ್ನ ಮಾವನ ಕೈಗೆ ಕೊಟ್ಟೆನು. 


                                                                                                        ( ಮುಂದುವರಿಯುವುದು )


 


                                            


 

Rating
No votes yet

Comments