ಅಣು ಒಪ್ಪಂದದಿಂದ ನಮಗೇನು ಲಾಭ, ನಿಮಗೇನಾದ್ರೂ ಗೊತ್ತಿದೆಯೇ?

ಅಣು ಒಪ್ಪಂದದಿಂದ ನಮಗೇನು ಲಾಭ, ನಿಮಗೇನಾದ್ರೂ ಗೊತ್ತಿದೆಯೇ?

ಜುಲೈ 22, 2008. ಆಡಳಿತ ಪಕ್ಷ, ವಿರೋಧ ಪಕ್ಷಗಳು ಸೇರಿದಂತೆ ರಾಷ್ಟ್ರದ ಪ್ರಮುಖ ರಾಜಕೀಯ ಪಕ್ಷಗಳು ತಮ್ಮ ಬಲಾಬಲ ಪ್ರದರ್ಶಿಸಲು (ತಿಳಿದುಕೊಳ್ಳಲು), ಮುಂಬರಲಿರುವ ಚುನಾವಣೆಯಲ್ಲಿ ತಮ್ಮ ಹಣೆಬರಹವನ್ನು ಪರೀಕ್ಷಿಸಿಕೊಳ್ಳಲು ಕೆಳಮನೆ ಲೋಕಸಭೆಯಲ್ಲಿ ವೇದಿಕೆ ಸಿದ್ಧವಾಗಿದೆ (ಅಲ್ಲಿಯವರೆಗೆ ಈ ಲೆಕ್ಕಾಚಾರ ತಲೆಕೆಳಗಾಗಬಹುದೇನೋ!). ಹೆಸರೇನೋ ಅಣು ಒಪ್ಪಂದದ್ದೇ ಆದರೂ, ಕೊಸರು ಬೇರೆಯದೇ ಇದೆ!

ಕಳೆದ ಕೆಲದಿನಗಳಿಂದ ಯಾವ ದಿನಪತ್ರಿಕೆಗಳು, ಸುದ್ದಿವಾಹಿನಿಗಳು ಎಲ್ಲಿ ನೋಡಿದರೂ ಇದೇ ಸುದ್ದಿ.

ಭಾರತ-ಅಮೆರಿಕ ಅಣು ಒಪ್ಪಂದವಂತೆ, ಎಡಪಕ್ಷಗಳು ಸರಕಾರಕ್ಕೆ ನೀಡಿದ್ದ ಬೆಂಬಲ ಹಿಂತೆಗೆದುಕೊಂಡಿದ್ದಾವಂತೆ, ಇದರಿಂದಾಗಿ ಆಡಳಿತ ಪಕ್ಷ ಬೇರೆ ಪಕ್ಷಗಳ ಬೆಂಬಲ ಪಡೆಯಬೇಕಂತೆ, 543 ಸದಸ್ಯರ ಲೋಕಸಭೆಯಲ್ಲಿ 271 ಸದಸ್ಯರ ಬೆಂಬಲವಿದ್ದರೆ ಸಾಕಂತೆ, ಹೀಗೇ....!

ನಾವು ದಿನಪತ್ರಿಕೆಗಳು, ಸುದ್ದಿವಾಹಿನಿಗಳಲ್ಲಿ ನೋಡುತ್ತಾ ಇರುವುದಾದರೂ ಏನನ್ನ? ಈ ಒಪ್ಪಂದವನ್ನ ಜಾರಿಗೆ ತರಲು ಬೇಕಾದ ಅಂಕಿಅಂಶಗಳ ಲೆಕ್ಕಾಚಾರ, ಅದಕ್ಕಾಗಿ ರಾಜಕೀಯ ಪಕ್ಷಗಳು ನಡೆಸುತ್ತಿರುವ "ಕುದುರೆ ವ್ಯಾಪಾರ". ಯಾರು ಯಾರನ್ನ ಬೆಂಬಲಿಸಬೇಕು, ಇದರಿಂದ ಅವರಿಗೆ ಏನು ಲಾಭ? ರಾಜಕೀಯ ನೋಡೀ, ಲಾಭವಿಲ್ಲದೆ ಮಾಡೋದನ್ನ ವ್ಯಾಪಾರ ಅಂತಾಗಲೀ, ರಾಜಕೀಯ ಅಂತಾಗಲೀ ಕರೀತಾರೆಯೇ? ನಮ್ಮ ದೇಶದ ದುರಂತ ನೋಡಿ, ಸ್ವಾತಂತ್ರ್ಯ ಬಂದು 60 ವರ್ಷ ಪೂರೈಸಿದ್ದರೂ, ಭಾರತದಂತಹ "ಪ್ರಜಾಪ್ರಭುತ್ವ"ದಲ್ಲಿ ನಡೆಯುತ್ತಿರುವ "ಪ್ರಭುತ್ವ"ವೆಂದರೆ ಇದುವೇ. ಅಂದರೆ ಸಿಂಪಲ್, "ಕುದುರೆ ವ್ಯಾಪಾರ" ಕಣ್ರೀ.

ಇನ್ನು ಈ ರಾಜಕೀಯ ಪಕ್ಷಗಳೂ, ಮುಖಂಡರೂ...
------------------------------------------
ಯುಪಿಎ, ಎನ್ ಡಿಎ, ಯುಎನ್ ಪಿಎ ಹೀಗೇ ಎಲ್ಲಾ ರಾಜಕೀಯ ಗುಂಪುಗಳಿಗೂ ಇರುವ ಗುರಿಯೆಂದರೆ ನಮ್ಮ ದೇಶದ ಹಿತ ಕಾಪಾಡುವುದಕ್ಕೆ ಏನು ಮಾಡಬೇಕು ಎಂಬುದಲ್ಲ, ಬದಲಿಗೆ ತಮ್ಮ ರಾಜಕೀಯ ಬಲಾಬಲ ಏನು ಎಂಬ ದೊಡ್ಡಸ್ತಿಕೆಯ ಪ್ರದರ್ಶನವಷ್ಟೆ. ಅಣು ಒಪ್ಪಂದ ಜಾರಿಗೆ ಬರುವುದರಿಂದ ದೇಶಕ್ಕೆ ಏನು ಲಾಭ ಎನ್ನುವುದಲ್ಲ, ತಮಗೆ ತಮ್ಮ ಪಕ್ಷಕ್ಕೆ ಮುಂದಿನ ಚುನಾವಣೆಯಲ್ಲಿ ಏನು ಲಾಭ ಎನ್ನುವುದಷ್ಟೇ ಇವುಗಳ ಆತಂಕ! ವಿರೋಧ ಪಕ್ಷಗಳ ಕೆಲಸ ಏನಪ್ಪಾ ಎಂದರೆ ಆಡಳಿತ ಪಕ್ಷ ಏನು ಮಾಡುತ್ತೆ ಅದೆಲ್ಲವನ್ನೂ ವಿರೋಧಿಸುವುದು. ಅದು ಜನೋಪಯೋಗಿಯಾಗಿರಲಿ, ಇಲ್ಲದಿರಲಿ ಯಾವುದೂ ಅವಕ್ಕೆ ಬೇಕಾಗಿಲ್ಲ.

ಈ ಹಣಾಹಣಿಯಲ್ಲಿ ಯುಪಿಎ ಗೆದ್ದೇಗೆಲ್ಲುತ್ತದೆ ಎನ್ನುವ ವಿಶ್ವಾಸವನ್ನ ಪ್ರಧಾನಿ ಮನಮೋಹನ್ ಸಿಂಗ್ ವ್ಯಕ್ತಪಡಿಸಿರುವುದೇನೋ ಸರಿ. ಆದರೆ, ಅದನ್ನು ದಿಟವಾಗಿಸುವುದು ಅವರು ಕೇವಲ ಒಬ್ಬ ಪ್ರತಿಭಾವಂತ ಅರ್ಥಶಾಸ್ತ್ರಜ್ಞ ಮಾತ್ರವಲ್ಲ, ತಾನೊಬ್ಬ ಚಾಣಾಕ್ಷ ರಾಜಕಾರಣಿ ಕೂಡ ಹೌದು ಎನ್ನುವುದನ್ನು ಸಾಬೀತುಪಡಿಸಲು ಇದು ಸದಾವಕಾಶ.

ಅತ್ತ ತೃತೀಯ ರಂಗದ ಮಾಯಾವತಿಯವರಿಗೆ ತಾವು ಮುಂದಿನ ಪ್ರಧಾನಮಂತ್ರಿಯಾಗುವುದಕ್ಕೆ ಪೂರ್ವಸಿದ್ಧತೆಯಂತೆ ಈ ಸನ್ನಿವೇಶ ಬಳಸಿಕೊಳ್ಳುವ ತವಕ.

ಹಾಲಿ ಸರಕಾರಕ್ಕೆ ಬೆಂಬಲ ನೀಡಿದ್ದ ಸೋ ಕಾಲ್ಡ್ ಸೋಶಿಯಲಿಸ್ಟ್, ಸೆಕ್ಯುಲರ್ ಎಡಪಕ್ಷಗಳಿಗೆ ತಮ್ಮನ್ನು ಎದುರು ಹಾಕಿಕೊಂಡವರ ಗತಿ ಏನಾಗುತ್ತದೆ ಎಂದು ತೋರಿಸುವ ಹೆಬ್ಬಯಕೆ.

ಇನ್ನು ಎನ್ ಡಿಎಗೆ ಮತ್ತೆ ಅಧಿಕಾರದ ಚುಕ್ಕಾಣಿ ಹಿಡಿಯುವುದಕ್ಕೆ, ತನ್ನ ಪ್ರಭುತ್ವ ಸ್ಥಾಪಿಸೋದಕ್ಕೆ ಇದೊಂದು ಸರಿಯಾದ ವೇದಿಕೆ.

ಈ ಪರಿಸ್ಥಿತಿ ಬಂದದ್ದು ಯಾಕೆ?ಹೇಗೆ?ಅದರ ಪರಿಣಾಮವೇನು?
------------------------------------------------------
ಸುಮಾರು 4 ವರ್ಷಗಳ ಕಾಲ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರಕ್ಕೆ ಹೊರಗಿನಿಂದ ಬೆಂಬಲ ನೀಡಿದ್ದ ಎಡಪಕ್ಷಗಳು ಕಳೆದ 3 ವರ್ಷಗಳಿಂದ ಸುದ್ದಿಯಲ್ಲಿರುವ ಭಾರತ-ಅಮೆರಿಕ ನಡುವಣ ಅಣು ಒಪ್ಪಂದದ ಕುರಿತು ಕಡೆಗೂ ತಮಗಿದ್ದ ಭಿನ್ನಾಭಿಪ್ರಾಯವನ್ನು ಶಮನಗೊಳಿಸಿಕೊಳ್ಳಲಾಗದೆ, ಹೊರನಡೆಯುವುದರೊಂದೆಗೆ ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಸರಕಾರ ವಿಶ್ವಾಸ ಮತ ಯಾಚನೆ ನಡೆಸಲೇಬೇಕಾದ ಅನಿವಾರ್ಯತೆ ಬಂದೊದಗಿದೆ.

ಒಂದು ವೇಳೆ ಯುಪಿಎ ವಿಶ್ವಾಸಮತ ಗಳಿಸುವಲ್ಲಿ ವಿಫಲವಾದ ಪಕ್ಷದಲ್ಲಿ, ನಾವೆಲ್ಲರೂ ಸಧ್ಯದಲ್ಲೇ ಅಂದರೆ ಅಕ್ಟೋಬರ್-ನವೆಂಬರ್ ನಲ್ಲಿ ಚುನಾವಣೆ ಕಾಣಲಿದ್ದೇವೆ.

ದೇಶದ ರಾಜಕೀಯ, ಆರ್ಥಿಕ ಪರಿಸ್ಥಿತಿಗಳು ಆ ಮೂಲಕ ಸಾಮಾಜಿಕ ಪರಿಸ್ಥಿತಿ ಬಿಗಡಾಯಿಸಿರುವಂತಹ ಸನ್ನಿವೇಶದಲ್ಲಿ ಅಕಾಲ ಚುನಾವಣೆ ಪ್ರಸ್ತುತ ಸರಕಾರಕ್ಕೆ ಹಾಗೂ ಸರಕಾರದ ಬೊಕ್ಕಸಕ್ಕೆ ಹೊರೆಯಾಗಲಿದೆ. ಏರುತ್ತಿರುವ ಹಣದುಬ್ಬರ, ಆ ಮೂಲಕ ಗಗನಕ್ಕೇರುತ್ತಿರುವ ಎಲ್ಲಾ ದಿನಬಳಕೆ ವಸ್ತುಗಳ ದರಗಳು ಆರ್ಥಿಕತೆಯ ಕುಸಿತಕ್ಕೆ ಕಾರಣವಾಗಿದೆಯಲ್ಲದೆ, ಜನಸಾಮಾನ್ಯರಲ್ಲಿ ಅತೃಪ್ತಿಯನ್ನು ಮೂಡಿಸಿರುವುದರಿಂದ ಯುಪಿಎ ಸರಕಾರ "ಬೀಸೋ ದೊಣ್ಣೆಯಿಂದ ತಪ್ಪಿಸಿಕೊಂಡ್ರೆ ನೂರು ವರ್ಷ ಆಯಸ್ಸು" ಅನ್ನೋ ಹಾಗೆ, ಈ ಚುನಾವಣೆಯಿಂದ ತಪ್ಪಿಸಿಕೊಳ್ಳಲು ಹರಸಾಹಸ ನಡೆಸಿದೆ.

ಅಷ್ಟಕ್ಕೂ ಈ ಒಪ್ಪಂದದಿಂದ ಆಗೋ ಲಾಭವಾದ್ರೂ ಏನು?
-------------------------------------------------
ಈ ಒಪ್ಪಂದದಡಿಯಲ್ಲಿ ಭಾರತ ಅಮೆರಿಕಾದಿಂದ ಪಡೆಯುವ ಅಣು ಇಂಧನ ಹಾಗೂ ತಂತ್ರಜ್ಞಾನಕ್ಕೆ ಬದಲಾಗಿ ತನ್ನ ನಾಗರಿಕ ರಿಯಾಕ್ಟರ್ಗಳನ್ನು ಅಂತಾರಾಷ್ಟ್ರೀಯ ಪರಿವೀಕ್ಷಣೆಗೆಂದು ತೆರೆದಿರಿಸುವುದು.

ಭಾರತ ತಾನು ಬಳಸುವ ಶೇ.75ರಷ್ಟು ಇಂಧನವನ್ನು ಆಮದು ಮಾಡಿಕೊಳ್ಳುತ್ತಿದ್ದು, ಇಂಧನ ಕೊರತೆಯನ್ನು ಎದುರಿಸುತ್ತಿರುವ ನಮ್ಮ ದೇಶದ ಆರ್ಥಿಕತೆಯನ್ನು ಬಲಪಡಿಸುವುದು - ಪ್ರಧಾನಿ ಮನಮೋಹನ್ ಸಿಂಗ್

ಎಐಸಿಸಿ ಅಧ್ಯಕ್ಷೆ ಶ್ರೀಮತಿ ಸೋನಿಯಾ ಗಾಂಧಿ ಈ ಒಪ್ಪಂದವನ್ನು ನಮ್ಮ ಭವಿಷ್ಯದ ಪೀಳಿಗೆಗೆಳು ಖಂಡಿತ ಗುರುತಿಸುತ್ತವೆ ಎಂಬುದಾಗಿ ಹೇಳಿದ್ದಾರೆ. ಯಾಕೆಂದರೆ, ಈ ಒಪ್ಪಂದದಿಂದಾಗಿ ನಾವು ಹೆಚ್ಚು ಅಣು ಸ್ಥಾವರಗಳನ್ನು ಸ್ಥಾಪಿಸಬಹುದು ಹಾಗೂ ಆ ಮೂಲಕ ಹೆಚ್ಚು ಇಂಧನವನ್ನು ಉತ್ಪಾದಿಸಬಹುದು. ದಿನೇ ದಿನೇ ಹೆಚ್ಚುತ್ತಿರುವ ವಿದ್ಯುತ್ ಬೇಡಿಕೆಗೆ ಈ ಒಪ್ಪಂದ ಉತ್ತರವಾಗಲಿದೆ ಎಂಬುದು ಅವರ ವಾದ.

ಅಣು ಒಪ್ಪಂದಕ್ಕೆ ಸಂಬಂಧಿಸಿದಂತೆ ಕಳೆದ 2-3 ವರ್ಷಗಳಿಂದ ಇಷ್ಟೆಲ್ಲಾ ವಾದವಿವಾದಗಳು, ಭಿನ್ನಾಭಿಪ್ರಾಯಗಳು ನಮ್ಮ ದೇಶದಲ್ಲಿ ನಡೆಯುತ್ತಿದ್ದರೂ ಜನಸಾಮಾನ್ಯನಿಗೆ ಅನಕ್ಷರಸ್ಥ ಜನಸಾಮಾನ್ಯನನ್ನು ಬಿಡಿ, ಅಕ್ಷರಸ್ಥ ಜನಸಾಮಾನ್ಯನಿಗೂ ಈ ಕುರಿತು ಕಿಂಚಿತ್ತೂ ತಿಳುವಳಿಕೆಯಿಲ್ಲ. ನಮ್ಮ ದೇಶದ ಮಾಜಿ ರಾಷ್ಟ್ರಪತಿ, ವಿಜ್ಞಾನಿ ಶ್ರೀ ಎ.ಪಿ.ಜೆ.ಅಬ್ದುಲ್ ಕಲಾಂರಂತಹವರು ಅಣು ಒಪ್ಪಂದವನ್ನ ಸ್ವಾಗತಿಸಿದರೆ, ಪ್ರಗತಿಪರ ಚಿಂತಕರು ಈ ಒಪ್ಪಂದ ಅಮೆರಿಕದ ಮರ್ಜಿಗೆ ಒಳಗಾಗಲು ದಾರಿಯಷ್ಟೆ ಎಂದು ಟೀಕಿಸುತ್ತಾರೆ. ಯಾರು ಸರಿ, ಯಾರು ತಪ್ಪು ಎಂದು ನಮ್ಮೊಳಗೆ ಯಾರಾದರೂ ಬಲ್ಲಿರಾ?

ಇದು ಯಾರ ದೋಷವೋ ಆ ಭಾರತಾಂಬೆಯೇ ಬಲ್ಲಳು!

ಯಥಾಪ್ರಕಾರ ಎಲ್ಲವೂ "ಅನುಕೂಲ ಸಿಂಧು"ರಾಜಕಾರಣ, ಎಲ್ಲದಕ್ಕೂ ಜಾಣಮೌನ. ಅದು ರಾಜಕಾರಣಿಗಳದ್ದಾಗಿರಬಹುದು ಅಥವಾ ಅವರನ್ನು ಆರಿಸಿಕಳಿಸುವ ನಮ್ಮಂತಹ ಪ್ರಜೆಗಳದ್ದಾಗಿರಬಹುದು. ಎಲ್ಲ(ವೂ)(ರೂ) ಮಾರಾಟಕ್ಕಿದೆ(ದ್ದಾರೆ) ಇಲ್ಲಿ! ಅದೇ ತಾನೇ "Consumerist Culture"ನಿಂದಾಗಿ ನಾವು ಪಡೆದಿರುವ ಬಳುವಳಿ.

ನಮ್ಮ(ದೇಶದ) ಭವಿಷ್ಯವನ್ನು "ಮಾರಾಟಕ್ಕಿರುವ ಸರಕು"ಗಳಾಗಿರುವ ಈ ಪ್ರಜಾಪ್ರತಿನಿಧಿಗಳು ನಿರ್ಧರಿಸಲಿದ್ದಾರೆ. ಸದ್ಯಕ್ಕೆ ಇದನ್ನು ಓದಿ, ಕೇಳಿ, ನೋಡಿ ಆನಂದಿಸುವುದಷ್ಟೇ ನಮ್ಮ ಭಾಗ್ಯ!

Rating
No votes yet

Comments