ಅಣ್ಣಾ ಮತ್ತು ಬಸವಣ್ಣ
ಒಂದು ಪ್ರಶಸ್ತಿ; ಒಬ್ಬರಿಗೆ ಅದರ ಸಂದಾಯ. ಕೊಟ್ಟವರಿಗೂ, ಗಿಟ್ಟಿಸಿಕೊಂಡವರಿಗೂ, ಮಾಧ್ಯಮದಲ್ಲಿ ಮಿಂಚಿದ ಧನ್ಯತೆ!
ಅಣ್ಣ ಬಸವಣ್ಣನ ಹೆಸರಿನಲ್ಲಿ ಕೃಷಿ ಪ್ರಶಸ್ತಿ, ಖಾಸಗೀ ಪೀಠವೊಂದರ ಕಾರ್ಯಚಟುವಟಿಕೆ. ಈ ವರ್ಷ, ಅಣ್ಣ ಹಜಾರ ಎಂಬ ನೇತಾರನಿಗದು ಲಭ್ಯ.
ಬಸವಣ್ಣನವರು ತಮ್ಮ ಅಧಿಕಾರಾವಧಿಯಲ್ಲಿ ಮುಕ್ತ, ಸಮಾನತಾ ಸಮಾಜ ನಿರ್ಮಿಸುವ ಪ್ರಯೋಗಶೀಲತೆ ತೋರಿದ್ದರೆಂದು ಕೇಳಿದ್ದೇವೆ; ಆಡಳಿತದಲ್ಲಿನ ಭ್ರಷ್ಟತೆ ನಿವಾರಣೆಗೆ ಕೂಗೆತ್ತಿದವರೆಂದು ಅಣ್ಣಾಗೆ ಪ್ರಸಿದ್ಧಿ. ಬಸವಣ್ಣನವರ ಸಾಮಾಜಿಕಾಧ್ಯಾತ್ಮಿಕ ಕ್ರಾಂತಿಯಲ್ಲಿ, ಕೃಷಿಕ ಸಮಾಜದ ಸಂಘಟನೆಗೆ ವಿಶಿಷ್ಟ ಒತ್ತೇನೂ ಇದ್ದಂತೆ ಕಂಡು ಬರುವುದಿಲ್ಲ; ಆದರೆ ಆಧುನಿಕ ’ಅಣ್ಣ’, ಪ್ರಶಸ್ತಿಯ ಹೆಸರಿಗೆ ಸಂದರರ್ಭೋಚಿತವಾಗುವಂತೆ ದೇಶಾದ್ಯಂತ ರೈತ ಆಂದೋಳನಕ್ಕೆ ಕರೆಕೊಟ್ಟರು.
ಅಣ್ಣಾ ಹಜಾರೆಯಂಥಾ ರಾಜಕಾರಣಿಯಲ್ಲದ ರಾಜಕಾರಣಿಗಳು, ಬಸವಣ್ಣನಂತಹ ಕ್ರಿಯಾಶೀಲರಿಂದ ಪಡೆಯಬೇಕಾದ ಸ್ಫೂರ್ತಿ ಬೇರೆಯೇ ಇದೆ. ಬಸವಣ್ಣನವರ ಕ್ರಾಂತಿ, ನಿಜವಾಗಿ, ಪಟ್ಟಭದ್ರರು ಕಟ್ಟಿದ್ದ ಭ್ರಷ್ಟ ವ್ಯವಸ್ಥೆಯ ವಿರುದ್ಧವೇ ಆಗಿತ್ತು. ವೇದವೊಂದೇ ವಿದ್ಯೆಯಾಗಿ, ವೈದಿಕರು ಇಡೀ ಸಮಾಜ, ತಮ್ಮ ಬೊಜ್ಜಿಗೆ ಮೀರಿ ಬೆಳೆಯಗೊಡಿತ್ತಿರಲಿಲ್ಲ. ಈಗಿನ ಸಕ್ರಿಯ ರಾಜಕಾರಣಿಗಳು ಮಾಡುತ್ತಿರುವುದಾದರೂ ಅದನ್ನೇ. ಬಸವಣ್ಣನ ’ನೀತಿ’ಬೇಡ, ರಾಜನೀತಿಯಾದರೂ ಅಣ್ಣಾನ ಆತ್ಮಸಾಕ್ಷಿಗೆ ತಟ್ಟಲಿಲ್ಲ!