ಅಣ್ಣಾ ಹಜಾರೆಗೆ ನನ್ನ ನಮಸ್ಕಾರಗಳು
ಅಣ್ಣಾ ಹಜಾರೆಗೆ ನನ್ನ ನಮಸ್ಕಾರಗಳು
ಭ್ರಷ್ಟಾಚಾರ ವಿರೋಧಿ ಆಂಧೋಳನ/ಚಳುವಳಿ ನಮ್ಮ ಸ್ವಾತಂತ್ರ್ಯ ಚಳುವಳಿಯ ಬಳುವಳಿ. ಯಾವುದೇ ಬಳುವಳಿ ತನ್ನ ಒಡಲೊಳಗೆ ಒಂದು ಅರುಚಿಯ ವಸ್ತುವನ್ನೂ ಹೊತ್ತು ತಂದಿರುತ್ತದೆ. ಇದಕ್ಕಾಗಿ ಸ್ವಲ್ಪ ಮನಃಶಾಸ್ತ್ರದ ಹಾಗು ಸಾಮಾನ್ಯ ಪ್ರಜ್ಞೆಯ ಹಿನ್ನಲೆಯನ್ನು ಮನಸ್ಸಿನಲ್ಲಿಟ್ಟುಕೊಂಡು ಚಿಂತಿಸಬೇಕು.
ನನ್ನ ಅಜ್ಜಿ ಅಂದರೆ ಹೆತ್ತ ತಾಯಿಯ ತಾಯಿಯ ತಂಗಿ. ಅವಳು ಹಳೆಯ ಕಾಲದ ಶಿಷ್ಟಾಚಾರದವಳು. ಸಾಲದ್ದಕ್ಕೆ ಗುರು ಬೋಧನೆ ಮಾಡಿಸಿಕೊಂಡಿದ್ದವಳು. ಒಟ್ಟಿನಲ್ಲಿ ಮುಗ್ಧೆ .ಒಂದು ಗಂಡು ಮಗುವನ್ನು ಹೆತ್ತ ವಳು. ಜೀವನದ ಯೌವನದಲ್ಲೇ ವಿಧವೆ ಆದವಳು. ಇದ್ದ ಒಬ್ಬ ಮಗನನ್ನು ಲೌಕೀಕವಾಗಿ ಆಸೆ ಅಭಿಮಾನದಿಂದ ಬೆಳಸಿದವಳು. ಇದೆಲ್ಲಾ ನನಗೆ ಸ೦ವೆದನೆಯಾದ ಮಾಹಿತಿ..ಆದ್ರೆ ನನ್ನ ಅಜ್ಜಿ ಈಗ ಇಹ ಲೋಕದಲ್ಲಿ ಇಲ್ಲ. ಆ ಮಗ ಈಗ ಸ್ವಾತಂತ್ರ್ಯ ಹೋರಾಟಗಾರ ಎಂದು ಪೆನ್ಸನ್ ಪಡೆಯುತ್ತಿದ್ದಾರೆ. ಆತ ವ್ಯವಸಾಯಗಾರ.ಇಬ್ಬರೂ ದಾಂಡಿಗ ಗಂಡು ಮಕ್ಕಳನ್ನು ಹೆತ್ತು ಅವರೂ ಸಹ ದೇಶ ಸೇ(ಶೇ)ವೇ ಮಾಡುತ್ತಿದ್ದಾರೆ.
ನಾನು ಆಗ ೬೦ ರ ದಶಕದಲ್ಲಿ ಹೈಸ್ಕೂಲ್ನಲ್ಲಿ ಓದುತ್ತಿದ್ದೆ. ನನ್ನ ಅಜ್ಜಿ ಒಮ್ಮೆ ನನ್ನ ತಾಯಿಯ ಬಳಿ ಮಾತಾಡುತ್ತಾ “ಕಾಲದಿಂದಲೂ ಹಿಂಗೆ ಆಗೋದ.ಎನ್ ಉದ್ಧಾರ ಮಾಡಾನು? ವ್ಯವಸಾಯ ಎಲ್ಲಾ ಹಾಳು ಮಾಡಿ ತಾಲೋಕ್ ಆಫೀಸಿನತ್ತಿರ ಅದೇನೋ ಸರ್ಕಾರ ಬಿಟ್ಟಿ ಕೊಡೋ ಕಾಸಿಗೆ ಬೆಳಿಗ್ಗೆಯಿಂದ ಸಂಜ್ ತನಕ ನಿಂತವನೆ” ಎಂದು ಬೈಯುತ್ತಾ ನೀನಾದರೂ ಅಕ್ಕ ಅನ್ನಿಸಿಕೊಂಡವಳು ಅವನಿಗೆ ಉಗಿ ಎನ್ನುವಾಗ ನನಗೆ ಆಶ್ಚರ್ಯ ಮತ್ತು ಕುತೂಹಲ ಒಟ್ಟಿಗೇ ಆದವು. ಕಾರಣ ನನ್ನ ಸೋದರ ಮಾವನಿಗೆ ಸರ್ಕಾರ ದುಡ್ಡು ಕೊಡ್ತಾರ? ಅವನೇನು ನೌಕರಿಯಲ್ಲಿಲ್ಲವಲ್ಲಾ ಮೇಲಾಗಿ ಅವನೇನೂ ಅಂತಹ ಚುರುಕು ಬುದ್ಧಿಯುಲ್ಲವನಾಗಿರಲಿಲ್ಲ. ನಾನು ಕಟುವಾಗಿ ವಿಮರ್ಶೆ ಮಾಡಿ ಮತ್ತೊಬ್ಬರನ್ನು ಕೆಣಕುವ ಸ್ವಭಾವದವ ಅಂತ ತಾಯಿಗೆ ಸದಾ ನನ್ನ ಮೇಲೆ ಸಿಟ್ಟು. ಆ ಕಾರಣಕ್ಕೆ ಆ ದಿನ ಸುಮ್ಮನಾದೆ.ಮತ್ತೊಂದು ದಿನ ಅಜ್ಜಿ ನಮ್ಮ ಮನೆಗೆ ಬಂದಾಗ ಅಜ್ಜಿಯನ್ನು ಕೇಳಿಯೇ ಬಿಟ್ಟೆ. ಅಜ್ಜಿ ಮಾವನಿಗೆ ಸರ್ಕಾರ ಏಕೆ ಪಿಂಚಿಣಿ ಕೊಡ್ತಾರೆ ? ಅಂತ. ಅಜ್ಜಿ ಹೇಳಿದರು “ಏನ್ಲ ಮಗ ನೀನಿನ್ನು ಹುಟ್ಟಿರಲಿಲ್ಲ ಆಗ ಊರು ಊರಲ್ಲಿ ಎಲ್ಲಾ ಪೋಲಿ ಹೈಕಳು ಸೇರಿಕೊಂಡು ಮಾಡೋ ವ್ಯವಸಾಯ ಮಾಡದೆ ತಿರಿಕ್ಕಂಡು ಸಿಕ್ಕದ ಜನಕ್ಕೆಲ್ಲಾ ಸಿಕ್ಕಿದ ಕಡೆಲೆಲ್ಲಾ ಕಲ್ಲು ಹೊಡಕ್ಕೊಂಡು ಅದೇನೋ ಹೊತಾರೆ ಸಂಜ್ಗೆಗೆ ಊಟ ಕೊಡ್ತಾರೆ ಅಂತ ಇವನುವೇ ಪೋಲಿ ತಿರಿಕ್ಕಂಡಿದ್ದಾಂತ.” ಆಮೇಲೆ ಇಸ್ಕುಲ್ಗೆ ಹೋಗ್ಲ ಅಂದರೆ ಅದೇನೋ ಗಾಂಧಿ ಟೋಪಿ ಹಾಕ್ಕೊಂಡು ತಿರಿಕ್ಕಂಡಿದ್ದ .ಅದೇನೋ ಆ ಟೋಪಿ ಹಾಕ್ಕೊಂಡವರ ಪೋಲೀಸಿನವರು ಜೇಲ್ಗೆ ಹಾಕಿ ಹಾಕಿ ಬಿಡ್ತಾ ಇದ್ದರು. ನ೦ಗೂ ಸಾಕಾಗಿ ಹೋಗಿ ಎಲ್ಲಾರ ಹಾಳಾಗು ಅಂತ ಸುಮ್ನಾಗುವೆ.ಎಂದರು.
ಅದು ಸರಿ, ಸರಿಯಾಗಿ ಓದಲಿಲ್ಲ ಮತ್ತೆ ಪೋಲಿ ಆಗಿದ್ದ ಅಂತೀಯ ಮಾವನಿಗೆ ಸರ್ಕಾರ ದುಡ್ಡು ಕೊಡ್ತಾರೆ ಅಂತೀಯಲ್ಲ ಮತ್ತೆ ಎಂದೆ. ಅಜ್ಜಿ ಹೇಳಿದರು ಅದೆ ಕನ್ಲ ಮಗ ಇವನಂಗೆ ಪೋಲಿ ತಿರುಗುತ್ತಿದ್ದ ಮುಂಡೆವ್ಕೆಲ್ಲಾ ಹೀಗೆಲ್ಲಾ ಪಿಂಚಿಣಿ ಅಂತ ಕೊಡ್ತಾರೆ ಕಣ್ಲ ಮಗಾ.ಅಂದರು.
ಅವಳ ಮುಗ್ಧತೆಗೆ ಮನಸೋತೆ. ಸತ್ಯವನ್ನೇ ಆಡುವ ಅಜ್ಜಿ ನನ್ನ ಆಜ್ಜಿ ಎಂದು ಹೆಮ್ಮೆ ಅನ್ನಿಸಿತು. ನನ್ನ ಅಜ್ಜಿ ಈಗ ಸ್ವರ್ಗಸ್ಥರಾಗಿದ್ದಾರೆ. ಆದರೆ ಇವತ್ತಿಗೂ ಪೋಲಿ ಮಾವ ಸ್ವಾತಂತ್ರ್ಯ ಹೋರಾಟಗಾರ ಎನ್ನಿಸಿಕೊಂಡು ಸ್ವಾತಂತ್ರ್ಯ ಅನ್ನೋದರ ಬಗ್ಗೆ ಒಂದಿಷ್ಟೂ ಮಾಹಿತಿ ಕೊಡಲಾರದವ ಸ್ವಾತಂತ್ರ್ಯಹೋರಾಟಗಾರ ಮತ್ತು ಅದರ ಪೂರಕ ಸವಲತ್ತುಗಳನ್ನೂ ಪಡೆಯುತ್ತಿದ್ದಾರೆ.
ಇಲ್ಲಿ ನನ್ನ ಪ್ರಶ್ನೆ ಇಂತಹ ಸಂಖ್ಯೆಯ ಆಧಾರ ಮಾಡಿಕೊಂಡು ಪ್ರಜಾಪ್ರಭುತ್ವ ಗಳಿಸಿದೆವು. ಆ ಸಂಖ್ಯೆಯ ವಂಶಾವಳಿಯೇ ಬಹುತೇಕ ರಾಮಲೀಲಾ ಮೈದಾನದಲ್ಲಿ ಹೋ(ಹಾ)ರಾಡುತ್ತಿದ್ದಾರೆ. ಇವರೆಲ್ಲಾ ಆಶಾವಾದಿಗಳು ನಿಕೃಷ್ಟ ವಿಮರ್ಶಕರಲ್ಲ. ಅವರೇನಿದ್ದರೂ ಸತ್ಯವನ್ನು ಅದುಮಿಟ್ಟು ಅವರ ಕೈಗೆ ಎಟುಕುವ ಪ್ರತಿಫಲಕ್ಕೆ ಹೊಂದುವ ವಿವರಣೆ ನೀಡುವಂತಹ ಜನರು.
ರಸ್ತೆಯಲ್ಲಿ ಅಪಘಾತ ನಡೆದಾಗ ನೋಡಿದವರು ಒಂದೆರಡು ಸೇರಿದವರು ನೂರಾರು ನಾವೇ ನೋಡಿದೆವು ಅಂತ ಸಾಕ್ಷಿ ಹೇಳುವರು ಸಾವಿರಾರು. ವಿಚಾರಹೀನ ಪ್ರವುತ್ತಿಯವರೇ ಆಂದ್ಹೊಲನಕ್ಕೆ ಇಳಿದರೆ ಅವರೇ ಹೇಳುವಂತೆ ಮತ್ತೊಂದು ಅರ್ಥಹೀನ ಸ್ವಾತಂತ್ರ್ಯ ಗಳಿಸಬಹುದಷ್ಟೆ.
ಅಣ್ಣಾ ಹಜಾರೆ ಕೇವಲ ಒಬ್ಬ ಸೈನಿಕ. ಚಂಚಲ ಮನಸ್ಸಿನವ. ತನ್ನ ಯೋಗ್ಯತೆಗೆ ಮೀರಿದ ಕೆಲಸವನ್ನು ಸಾಧಿಸಲು ಹೊರಟವ. ಅಂಜುಬುರುಕರು, ಆಸೆಬುರುಕರು, ಸಿನಿಕರು ಮಾತ್ರ ಹಜಾರೆಯ ನೆರಳನ್ನು ಆಶ್ರಯಿಸುತ್ತಾರೆ. ಕಾರಣ ಇವರು ನಮಗೆ ಇರುವ ಐ ಪಿ ಸಿ ಮತ್ತು ಸಿಆರ್ ಪಿ ಸಿ ಗಳ ಕಾನೂನನ್ನು ಚಲಾಯಿಸಲು ಯೋಗ್ಯ ದೇಶ ಪ್ರೆಮಿಗಳನ್ನು ಹುಡುಕಲಾರದವರು. ಕುರೂಪಿ ಆದವಳಿಗೆ ಎಷ್ಟು ಒಡವೆ ಹೊರಿಸಿದರು ಪ್ರಯೋಜನವಿಲ್ಲ. ಐ ಪಿ ಸಿ ಮತ್ತು ಸಿಆರ್ ಪಿ ಸಿ ಗಳು ನಮ್ಮ ಹಳ್ಳಿಗೆ ಕಾಲಿಕ್ಕುವುದು ಬೇಡ ಎನ್ನುವ ಜನ ಇಂದಿಗೂ ದೇಶದಲ್ಲಿವೆ. ಆ ವಂಶಾವಳಿಯಿಂದ ಮಾತ್ರ ನಾಯಕತ್ವ ವಯಿಸಲು ಸಾಧ್ಯ. ಬುದ್ಧಿವಂತರ ಆದರೆ ಹೃದಯಹೀನರ ಸಂಖ್ಯಾ ಬಲದಿಂದ ಮತ್ತೊಂದು ಸ್ವಾತಂತ್ರ್ಯವೆ? ಅಸಾಧ್ಯ.
ಗ್ರಾಮೀಣ ಭಾರತದ ಸೋದರರನ್ನು ಮೆಟ್ಟಿ ದಾಪುಗಾಲು ಹಾಕಿರುವ ನಗರದವರೇ ತುಂಬಿರುವ ಕಪಟ ಜನಸಾಗರ ಅದಕ್ಕೊಪ್ಪುವ ರೀತಿ ಸೆಲ್ ಪೋನಿನ ಟವರಿನ ತುದಿಗೆ ಏರಿ ಸಾಯುವೆ ಅನ್ನುವ ವಿಕೃತ ಮನದವನಂತೆ ವರ್ತಿಸಿತ್ತಿರುವ ಹಜಾರೆ ನವ ಭಾರತದ ಪ್ರತೀಕ. ಗ್ರಾಮೀಣ ಭಾರತ ಬೇರೆಯಾಗಿ ಯೋಚಿಸುತ್ತಿದೆ ಅದು ಬೇರೆಯೇ ರೂಪ ತಾಳಿ ಬರಲು ಕಾಯುತ್ತಿದೆ.
೧-ಸಂವಿಧಾನದ ಅಡಿ ರಚಿಸಿರುವ ಸಂಸತ್ ಸದಸ್ಯರು ಚೋರರಾಗಿರುವುದಾದರೆ ಜನ ಲೋಕ್ಪಾಲ್ ಅಡಿಯಲ್ಲಿ ನೇಮಕವಾದವರೂ ಮಹಾ ಚೋರಲಾಗಲಾರರೆ?
೨-ರಾಮಲೀಲಾ ದೇಶಪ್ರೇಮಿಗಳು ನಮ್ಮ ಸಂಸತ್ ಸದಸ್ಯರ ವ್ಯಾಪ್ತಿಗೆ ಹೋಗಿ ಜನಸಾಮಾನ್ಯರನ್ನು ಎಚ್ಚೆತ್ತುಕೊಳ್ಳಲು ಪ್ರಚಾರ ಕೈಕೊಳ್ಳಬಾರದೆ?
೩-ಅತ್ಯಂತ ಕಠಿಣ ಕಾನೂನುಗಳು ಈಗಾಗಲೇ ಇರುವಾಗ ಹೊಸ ಕಾನೂನು ಹೊಸ ಹಜಾರೆ ಏಕೆ? ಸುಳ್ಳು ಮಹಜರ್, ಖಾಲಿ ಜೇಬಿನವರ ವಿರುದ್ಧ ಸುಳ್ಳು ಸಾಕ್ಷಿಗಳು ಇವೆಲ್ಲಾ ನಮ್ಮವೇ ಪಾಪದ ಮಾನಸಿಕ ಶಿಶುಗಳು. ಜನ ಲೋಕಪಾಲ್ ವಿರುದ್ಧ ಜನಾನ್ಧೋಲನ ಆಗುವುದಿಲ್ಲವೆಂದು ಹೇಳಲಾಗದು.
೪-ಮಹಾತ್ಮ ಗಾಂಧಿಯನ್ನು ಟೀಕಿಸುವ ಅಥವಾ ಆತನನ್ನು ದೇಶ ವಿಭಜಕ ಅಂದವರೇ ಹಜಾರೆಯನ್ನು ಎರಡನೇ ಮಹಾತ್ಮ ಎಂದು ಹೊಗಳಿ ಎರಡನೇ ಸ್ವಾತಂತ್ರ್ಯ ಗಳಿಸಲು ಸಹಕರಿಸಿ ಅನ್ನುವುದು ವಿಪರ್ಯಾಸ ಅಲ್ಲವೆ?
೫-ಇರುವ ವ್ಯವಸ್ಥೆಯಲ್ಲಿ ಭಾರತ ಹೆಜ್ಜೆ ಇಡುತ್ತಿದೆ ಯಾರಿಗೆ ಈ ವಿಚಾರದಲ್ಲಿ ಸಂಕಟ ಇದೆಯೋ ಅವರೆಲ್ಲಾ ಪ್ರತ್ಯೇಕ ರಾಷ್ಟ್ರ ನಿರ್ಮಾಣ ಮಾಡಿಕೊಳ್ಳಲಿ ಅನ್ನುವ ವಾದಕ್ಕೆ ಬುನಾದಿ ಆಗುತ್ತಿದೆಯೇ?
೬-ಅಂದೂ ಸಹ ನಮ್ಮ ಹಳ್ಳಿಗಳು ತಮಗಿರುವ ಇತಿಮಿತಿಗಳಲ್ಲಿ ಸಂತೋಷದಿಂದ ಇದ್ದರು. ಆಗ ಎಚ್ಚೆತ್ತವರು ಎಂದುಕೊಂಡವರು ನಿಮಗೇ ಹೊಸ ಲೋಕವನ್ನೇ ತೆರೆಯುತ್ತೇವೆ ಅಂದರು.ಆಗೆನ್ದವರ ಮಕ್ಕಳು ಹಾಲಿ ಇಂಗ್ಲೆಂಡ್ ಅಮೇರಿಕಾದಲ್ಲಿ ಇದ್ದಾರೆ. ಕೆಲವರು ಭಾರತದಲ್ಲೇ ಉಳಿದು ಸಕಲ ಸವಲತ್ತು ಪಡೆಯುತ್ತಿದ್ದಾರೆ. ಇನ್ನೂ ಕೆಲವರು ಭಾರತಲ್ಲಿದ್ದೂ ನಿರುಪಯುಕ್ತರಾಗಿದ್ದಾರೆ. ಏಕೆಂದರೆ ಕಳಕಳಿಯ ವ್ಯಕ್ತಿಗಳು ಎಂದೋ ವಿಧಿ ವಶರಾಗಿದ್ದಾರೆ. ಇದು ವಿಷಮ ಸ್ಥಿತಿ.
೭-ಬೆಳೆಗಿಂತ ಕಳೆಯೇ ಶಕ್ತಿಶಾಲಿ. ಅದೇ ರೀತಿ ಭಾರತದಲ್ಲಿ ಕಳೆ ಸಕಲ ಸಾರವನ್ನು ಹೀರುತ್ತಿದೆ. ಹೀರುವ ವಿಧಾನಕ್ಕೆ ಮತ್ತೊಂದು ಆಯಾಮ ತಯಾರಾಗುತ್ತಿದೆ,ಅಷ್ಟೇ.
೮-ಮಹಾತ್ಮ ಗಾಂಧೀಯೇ ಒಳ್ಳೆಯ ಚಿಂತಕನಾಗಿ ಇರಲಿಲ್ಲ ಆತನಿಗೆ ಆಫ್ರಿಕಾದಲ್ಲಿ ಬೂಟು ಕೊಟ್ಟ ಏಟಿನ ಸೇಡಿಗೆ ಭಾರತವನ್ನು ಕರ್ಮ ಭೂಮಿ ಮಾಡಿಕೊಂಡ ಅನ್ನುವುದಾದರೆ ಹಜಾರೆಯನ್ನೂ ಬಳಸಿಕೊಂಡು ಹೋ(ಓ)ರಾಟ ಮಾಡುವವರ ಕರೆಯಬೇಕಾದರೂ ಏನ೦ತ? ಹಜಾರೆಯ ಬಳಿ/ಸುತ್ತಾ ಜೇನು ನೋಣಗಳಿವೆ ಈ ದೇಶದ ಮಧು ಹೀರಲು ವೇದಿಕೆಯನ್ನು ತಯಾರು ಮಾಡಿಕೊಳ್ಳುತ್ತಿವೆ.
೯-ಸೃಷ್ಟಿಯ ವಿಪರ್ಯಾಸವೆಂದರೆ ಬಹುಪಾಲು ಮಳೆ ಸಾಗರದ ಮೇಲೆ ಸುರಿಯುತ್ತದೆ.ನಮ್ಮ ಮರಳುಗಾಡುಗಳು ಸೊರಗುತ್ತವೆ. ಸುಮಾರು ಆರು ದಶಕದಿಂದ ಗಿಡವಾಗಿ ಮರವಾಗಿ ಬಲಿತು ಹೋಗಿರುವ ನಮ್ಮ ಗುಣಗಳನ್ನು ಅದ್ಯಾವ ಕಾನೂನು ತಡೆಯಬಲ್ಲುದು . ಒಟ್ಟಿನಲ್ಲಿ ಬಗೆ ಹರಿಸಲಾರದ ಸಮಸ್ಯೆಗಳ ಸುಳಿಯಲ್ಲಿರುವ ಭಾರತಕ್ಕೆ ಮತ್ತೊಂದು ಸಮಸ್ಯೆ ಹಜಾರೆ.
Rating