ಅತೀತ ಶಕ್ತಿ
ನಾನು ಆ ಕಛೇರಿಯ ಆಡಳಿತಾಧಿಕಾರಿಯಾಗಿ ಹೊಸದಾಗಿ ಬಂದಿರುವೆ. ಸರ್ಪ್ರೈಸ್ ಚೆಕ್ ಮಾಡಲೆಂದು ಮೊದಲನೆಯ ದಿನವೇ ಅಲ್ಲಿಯ ಕೇರ್ಟೇಕರ್ ಬಳಿಗೆ ಬೆಳಗಿನ ೭ ಘಂಟೆಗೆ ಬಂದಿದ್ದೇನೆ. ಸೀದಾ ಬಂದವನೇ ನಾನು ಅಲ್ಲಿದ್ದ ಒಂದು ಕುರ್ಚಿಯ ಮೇಲೆ ಕುಳಿತೆ. ಕೇರ್ಟೇಕರ್ ಅಲ್ಲಿದ್ದ ಎಲೆಕ್ಟ್ರೀಷಿಯನ್ನಿಗೆ ಏನೋ ಸಾಮಾನನ್ನು ಕೊಡುತ್ತಿದ್ದ. ನನ್ನ ಕಡೆ ತಲೆ ಎತ್ತಿ ಕೂಡಾ ನೋಡಲಿಲ್ಲ. ಕಸ ಗುಡಿಸುವ ಹೆಂಗಸರು ಎಲೆ ಅಡಿಕೆ ಹೊಗೆಸೊಪ್ಪು ಜಗಿಯುತ್ತಾ ಅಲ್ಲಿಯೇ ಮೂಲೆಯಲ್ಲಿ ಕುಳಿತು ಹರಟೆ ಹೊಡೆಯುತ್ತಿದ್ದರು.
ಆಗೊಬ್ಬಳು ಹೆಂಗಸು ಚಲ್ಲು ಚಲ್ಲಾಗಿ ನಗುತ್ತಾ, ಮೈ ಕುಣಿಸುತ್ತಾ ಒಳಗೆ ಬಂದಳು. ಬಂದವಳೇ ನನ್ನ ಮುಂದಿದ್ದ ಕೇರ್ಟೇಕರನ ಕುರ್ಚಿಯಲ್ಲಿ ಕುಳಿತಳು. ಕೇರ್ಟೇಕರಿನಿಗೆ ನನ್ನ ಬಗ್ಗೆ ಏನನ್ನೋ ಕೇಳುತ್ತಿದ್ದಳು. ಅದೇನೆಂದು ನನಗೆ ಅರ್ಥವಾಗಿರಲಿಲ್ಲ. ಅವರ ಭಾಷೆ ತಿಳಿಯದಿದ್ದರೂ ಅಲ್ಪ ಸ್ವಲ್ಪವಾಗಿ ಅರ್ಥವಾಯಿತು. 'ಈ ಕುರಿ ಯಾರು? ಎಲ್ಲಿಂದ ಬಂದಿದೆ? ಇದಕ್ಕೆ ಇಲ್ಲಿ ಫ್ಲಾಟ್ ಅಲಾಟ್ ಆಗಿದೆಯೇ? ನಮ್ಮಗಳ ಬಗ್ಗೆ ನೀನೇನು ಹೇಳಿದ್ದೀಯೆ?' ಇತ್ಯಾದಿಯಾಗಿ ಪ್ರಶ್ನೆಗಳ ಸುರಿಮಳೆಯನ್ನೇ ಸುರಿಸುತ್ತಿದ್ದಳು.
ಅಷ್ಟು ಹೊತ್ತಿಗೆ ಮುಂಚೆ ನಮ್ಮಲ್ಲಿ ಡೆಪ್ಯುಟಿ ಟ್ರೆಶರರ್ ಆಗಿದ್ದ ಶ್ರೀ ಮಣಿಯವರು ಅಲ್ಲಿಗೆ ಬಂದಿದ್ದರು. ನನ್ನನ್ನು ಕಂಡು, 'ಏನಪ್ಪಾ ನೀನು ಈಗ ಅಸಿಸ್ಟೆಂಟ್ ಜನರಲ್ ಮ್ಯಾನೇಜರಾಗಿದ್ದೀಯಂತೆ. ಈಗ ಇಲ್ಲಿಗೇ ಇನ್-ಚಾರ್ಜ್ ಆಗಿ ಬಂದಿರುವಿಯಂತೆ. ನಿನ್ನ ಲಕ್ಕೇ ಲಕ್ಕು ನೋಡು. ಇಷ್ಟು ದಿನಗಳು ಕಷ್ಟಪಟ್ಟು ಕೆಲಸ ಮಾಡಿದ್ದಕ್ಕೆ ಇಷ್ಟು ಚಿಕ್ಕ ವಯಸ್ಸಿಗೇ ದೇವರು ನಿನಗೆ ಒಳ್ಳೆಯ ಹುದ್ದೆಗೆ ಪ್ರಮೋಶನ್ ಕೊಡಿಸಿದ್ದಾನೆ' ಎಂದಿದ್ದರು. ಅಷ್ಟು ಹೊತ್ತಿಗೆ ಕೇರ್ಟೇಕರ್ ನನ್ನ ಕಡೆ ನೋಡಿ ಅತಿ ವಿಧೇಯತೆಯನ್ನು ತೋರಿಸಿ, 'ಕ್ಷಮಿಸಿ ಸಾರ್. ತಾವಾರೆಂದು ತಿಳಿಯದೇ ಹೋಯಿತು. ಇಲ್ಲಿಯವರೆವಿಗೆ ಹಿರಿಯ ಅಧಿಕಾರಿಗಳ್ಯಾರೂ ಇಲ್ಲಿಗೆ ಬಂದಿರಲಿಲ್ಲ. ನಿಮಗೇನಾದರೂ ಬೇಕಿದ್ದರೆ ನನ್ನನ್ನೇ ಕರೆಸಿದರಾಗಿತ್ತು', ಎಂದು ಅಲ್ಲಿ ಕುಳಿತಿದ್ದ ಹೆಂಗಸರನ್ನು ಬೈದು ಹೊರಗಟ್ಟಿದ್ದ. ಹಾಗೂ ಚಲ್ಲಮ್ಮನಿಗೆ ಚೆನ್ನಾಗಿ ಬೈದು ಹೊರಗೆ ಕಳುಹಿಸಿದ.
ನಂತರದ ದೃಶ್ಯ.
ಕಫ್ ಪೆರೇಡ್ ರಸ್ತೆಯಲ್ಲಿ ನಡೆದು ಹೋಗುತ್ತಿರುವೆ. ಎದುರಿಗೆ ಯಾರೋ ಮೀನುಗಳ ಬುಟ್ಟಿ ಹೊತ್ತ ಮನುಷ್ಯನೊಬ್ಬ ಬರುತ್ತಿದ್ದಾನೆ. ಅವನು ನನ್ನನ್ನೇ ದಿಟ್ಟಿಸಿ ನೋಡುತ್ತಿದ್ದಾನೆ. ನಾನು ಶೂನ್ಯವನ್ನರಸುತ್ತಿರುವೆ. ಇದ್ದಕ್ಕಿದ್ದಂತೆಯೇ ಏನೋ ನೆನಪಾಗಿ ತೋರು ಬೆರಳಿನ ಉಗುರನ್ನು ಆಚೆಗೆ ತೆಗೆದು ಹಿಂದೆ ಮುಂದೆ ತಿರುಗಿಸಿ ನೋಡಿ (ಕೈ ಉಂಗುರ ನೋಡಿದಂತೆ) ಮತ್ತೆ ಅದನ್ನು ಯಥಾಸ್ಥಾನದಲ್ಲಿರಿಸುತ್ತೇನೆ. ಸುತ್ತುಮುತ್ತಲಿನವರೆಲ್ಲರೂ ಬೆಕ್ಕಸ ಬೆರಗಾಗಿ ನೋಡುತ್ತಿದ್ದರಂತೆ. ನನ್ನ ಕಿವಿಯಲ್ಲಿ ನನ್ನ ಸ್ನೇಹಿತ ಹಸಬ್ನೀಸ್ ಈ ವಿಷಯವನ್ನು ಉಸುರಿದ್ದ. ನನ್ನ ಕಣ್ಣಿಗೆ ಅದೇನೂ ಕಾಣಿಸುತ್ತಿರಲಿಲ್ಲ. ಕಾಣಿಸಿದವ ಮೀನಿನ ಬುಟ್ಟಿ ಹೊತ್ತ ಆ ಮನುಷ್ಯ - ಅದೂ ಕೆಲವೇ ಕ್ಷಣಗಳು ಮಾತ್ರ ಮತ್ತು ಜೊತೆಗೆ ನಡೆಯುತ್ತಿರುವ ಹಸಬ್ನೀಸ್. ನನ್ನ ದೃಷ್ಟಿ ಎಲ್ಲವೂ ನನ್ನ ಬೆರಳಿನ ಉಗುರಿನ ಕಡೆ ಮತ್ತು ಶೂನ್ಯದತ್ತ ಮಾತ್ರ. ನನ್ನಲ್ಲಿ ಯಾವುದೋ ಅತೀತ ಶಕ್ತಿ ಆವಾಹನೆಯಾದಂತಿದೆ.
ಅಷ್ಟು ಹೊತ್ತಿಗೆ ಹಾಲಿನವನ ಕರೆಗಂಟೆ ಕೇಳಿಸಿ ಎದ್ದೆ. ಸ್ವಲ್ಪ ಹೊತ್ತು ನಾ ಕಂಡ ದೃಶ್ಯದ ಬಗ್ಗೆ ಯೋಚಿಸಿ ಬರೆಯುತ್ತಿರುವೆ. ಇದೆಂಥ ಕನಸು. ನೀವೂ ಇಂತಹ ಕನಸು ಕಂಡಿರುವಿರಾ?