ಅದಲು ಬದಲು ಕಂಚಿ ಬದಲು - ಲಕ್ಷ್ಮೀಕಾಂತ ಇಟ್ನಾಳ

ಅದಲು ಬದಲು ಕಂಚಿ ಬದಲು - ಲಕ್ಷ್ಮೀಕಾಂತ ಇಟ್ನಾಳ

ಅದಲು ಬದಲು ಕಂಚಿ ಬದಲು
            - ಲಕ್ಷ್ಮಿಕಾಂತ ಇಟ್ನಾಳ
ಬಾಲ್ಯದ ಕಾಗದದ ದೋಣಿಯನು ನೆನೆದು
ಗಾಳಿಪಟ ಗೋಲಿ ಬುಗುರಿ ಲಗೋರಿಗೆ
ಕಾಗದದ ದೋಣಿಯಲಿ ಕಾತರಿಸಿ ಹೊರಟೆ
ಜೊತೆಯಾಡಿದ ಗೆಳೆಯರಂಗಳದ ಮಡಿಲಿಗೆ

ಅಂಗಳಗಳಿಲ್ಲ ಮನಸುಗಳು ಬರಿದು ನಗುವಾರಿದ
ಮುಖಗಳಲಿ ಬಾಯಾರಿದ ಬೆಳದಿಂಗಳ
ಬಾರುಗಳು ಕ್ಲಬ್ಬುಗಳು ತುಂಬಿದ ಅಂಗಳ
ಬಯಲುಗಳು ಬಡವಾಗಿ ಬದುಕಿಗೇ ಮಂಗಳ

ಹೆಸರುಗಳೇ ಮಾಯ ಒಂದೊಬ್ಬ ಎರಡಕ್ಷರ
ಮತ್ತೊಬ್ಬ ಮೂರಕ್ಷರ ಮಗದೊಬ್ಬನಸ್ತಿತ್ವ ನಾಹಿ
ಮನೆ ಮನದ ಬೀದಿಯು ಕೊರಕಲಿನ ಕಣಿವೆ
ಜಲಬತ್ತಿದೆದೆಯಲ್ಲಿ ದೋಣಿ ಮುಗ್ಗರಿಸಿ


ಅವನೆಲ್ಲಿ  ಅಣ್ಣ   ತಮ್ಮನ್ನ ಕಟಗೊಂಡು
ಹೆಗಲ ಮೇಲೆತಿಕೊಂಡು ಬರತಿದ್ದ ಹಿಂದೆ ಹಿಂದೆ
ತುಂಡು ತುಂಡಾಗಿ ಕಡಿದೆಸೆದು ಬಂದು ಪಾಲು
ಕೇಳಿಯಾನೆಂದು ನಿಂದಿಹನು ಕಂಬಿಯ ಹಿಂದೆ

ಅರ್ಜಿ ಕೈಲಿತ್ತು ಮತ್ತೊಬ್ಬ ಮಣ್ಣಿಗೂ ದಿಕ್ಕಿಲ್ಲ ಸತ್ತರೆ
ಮಾಶಾಸನ ಮಂಜೂರಿಗೆ ಗೊಳೋಯೆಂದ
ನಾನೋ ಚಪರಾಸಿ ಗೆಳೆಯರೇಕೈಕ ದೊರೆ
ಪಡೆದೆ ಸಿಗಲೆಂದು ಕ್ಷಣದ ಸಾಂತ್ವನವೊಂದ


ನೋಡಲೊಂದೂರು ಮನೆ ಮನೆಯೂ ದ್ವೀಪ
ಮನ ಮನದ ದೀಪವಾರಿಸಿದ ಕೂಪ
ಜಗಕೆಲ್ಲ ಬೆಳಕೀರಿ ತನ್ನ ಮನೆ ಕೊನೆಗೀರೊ
ಬದುಕಿನ ಮೌಲ್ಯವದು ಅದಲು ಬದಲು


ಗುಡಿಸಲುಗಳರಳಿ ಅರಮನೆಗಳಾಗಿಹವು
ಅರಮನೆಯು  ಭಾಗ ವಾಗಿಹುದು ನೂರು
ಒಂದು ಮಾಡಲು ಹೋಗಿ ಆಗಿದ್ದು ಇನ್ನೇನೊ
ಒಂದೆ ತಾಯಿಯ ಮನೆಯು ಒಡೆದು ಚೂರು


ಅವರು ಇವರಾಗಿಹರು ಇವರು ಅವರಾಗಿಹರು
ಮಂತ್ರಿ ಮಾಗಧರು ಅದಲು ಬದಲಾಗಿಹರು
ಅದಲು ಬದಲು ಕಂಚೀ ಬದಲು ಅವರ ಬಿಟ್ಟು ಇವರಾರು
ಕಣ್ಣುಮುಚ್ಚೇ ಕಾಡೇಗೂಡೆ ಇವರ ಬಿಟ್ಟು ಅವರಾರು

Rating
No votes yet

Comments

Submitted by partha1059 Sat, 10/13/2012 - 11:46

ಲಕ್ಷ್ಮಿ ಕಾಂತರೆ ಉತ್ತಮ ಕವನ. ಕವನದ ಹಿಂದಿನ ಭಾವನೆ ಬಲವಾಗಿ ಮನಸನ್ನು ಹಿಡಿಯುತ್ತದೆ.

ಬಹುಷಃ ಈಗಲು ಅಲ್ಲಿ ಕಾಗದದ ದೋಣಿಗಳು , ಗಾಳಿಪಟ , ಗೋಲಿ ಬುಗಿರಿಗಳು ಇದ್ದೆ ಇರುತ್ತವೆ

ಆದರೆ ನೀವು ನಿಮ್ಮ ದೋಣಿಯನ್ನೆ (ಸ್ನೇಹಿತರನ್ನೆ) ಹುಡುಕಿ ಹೋದದ್ದರಿಮ್ದ ಹೀಗಸಿರಬಹುದು ಅನಿಸುತ್ತದೆ. ನಿಮ್ಮ ಭಾವನೆ ಪ್ರತಿಯೊಬ್ಬರ ಭಾವನೆ, ಮತ್ತು ಅನುಭವ. ಚಿಕ್ಕವಯಸಿನಲ್ಲಿ ನಮಗೆ ಸ್ನೇಹಿತರು, ಆಟ ಹೊರತಾಗಿ ಮತ್ತೇನು ಕಾಣುವದಿಲ್ಲ. ಹಿರಿಯರ ಜಗಳಗಳು, ಪೋಲಿಸ್ ಕೋರ್ಟ್ ಮುಂತಾದವುಗಳೆಲ್ಲ ನಮ್ಮ ಪ್ರಪಂಚದಿಂದ ದೂರ. ಹಾಗಾಗಿ ಗಮನಿಸುವದಿಲ್ಲ.

ಈಗಲು ಅಲ್ಲಿ ನೋಡಿ ಈಗಿನ ಮಕ್ಕಳು ಕಾಗದದ ದೋಣಿ ಅಲ್ಲದಿದ್ದರು , ವೀಡಿಯೋ ಗೇಮ್ಸ್ ನಲ್ಲಿರುವ ದೋಣಿಗಳಲ್ಲಿ ಆಡುತ್ತಲೆ ಇರುತ್ತಾರೆ, ಅದೊಂದೊ ಸ್ಥಾಯಿ ಭಾವ, ವ್ಯಕ್ತಿಗಳು ಮಾತ್ರ ಬೇರೆ ಬೇರೆ ಅಷ್ಟೆ.

ಒಂದು ತರಕ್ಕೆ ನಿಮ್ಮ ಮಾತು ನಿಜ ಅದಲು ಬದಲು ಕಾಂಚಿ ಬದಲು , ಅಗಿದ್ದ ಮಕ್ಕಳೆಲ್ಲ ದೊಡ್ಡವರಾಗಿದ್ದಾರೆ, ಆಗಿರದ ಜೀವಗಳು ಈಗ ಮಕ್ಕಳಾಗಿ ಇರುತ್ತಾರೆ, ಮತ್ತೆ ಸ್ವಲ್ಪ ವರ್ಶ ಕಳೆದರೆ, ಈಗ ಮಕ್ಕಳಾಗಿರುವರು, ದೊಡ್ಡವರ ಜಾಗ ಆಕ್ರಮಿಸುತ್ತಾರೆ, ಮತ್ತೆ ಮತ್ಯಾರೊ ಮಕ್ಕಳು ಬರುತ್ತಾರೆ, ... ಕಣ್ಣೆ ಮುಚ್ಚುವ ಕಾಡೆ ಗೂಡೆ ಸಾಗುತ್ತಲೆ ಇರುತ್ತದೆ

Submitted by lpitnal@gmail.com Sat, 10/13/2012 - 12:13

ನಿಮ್ಮ ಕವಿತೆ ಮನಮುಟ್ಟುತ್ತದೆ.
ಬಾಲ್ಯದ ಕಾಗದದ ದೋಣಿಯನು ನೆನೆದು....
ಮತ್ತು
'ಗುಡಿಸಲುಗಳರಳಿ ಅರಮನೆಗಳಾಗಿಹವು-
.....
ಒಂದೆ ತಾಯಿಯ ಮನೆಯು ಒಡೆದು ಚೂರು' ಇವೆರಡರಲ್ಲಿ ಇರುವ ಸಾಲುಗಳು
ಇಂದಿನ ಪರಿಸ್ಥಿತಿಗೆ ಹಿಡಿದ ಕನ್ನಡಿಯಾಗಿದೆ- .Krishna Prasad

Submitted by lpitnal@gmail.com Sat, 10/13/2012 - 12:15

ಮಾನವೀಯ ಮೌಲ್ಯಗಳನ್ನು ಗಾಳಿಗೆ ತೂರಿ ದಿಕ್ಕಾಪಾಲಾಗಿರುವ ಇಂದಿನ ಜೀವನಶೈಲಿಯನ್ನು ಮನ ಮರುಗುವಂತೆ ಅನಾವರಿಸಿದ ಪರಿಗೆ ಬೆರಗಾಗಿರುವೆ!
- Latha Damle

Submitted by H A Patil Sat, 10/13/2012 - 19:21

ಲಕ್ಷ್ಮಿಕಾಂತ ಇಟ್ನಾಳ್ ರವರಿಗೆ ವಂದನೆಗಳು
ಇದೊಂದು ಉತ್ತಮ ಕವನ, ಪಾರ್ಥಸಾರಥಿಯವರೆಂದಂತೆ ' ಅದಲು ಬದಲು ಕಂಚಿ ಬದಲು ' ಆಟ ನಿರಂತರವಾಗಿ ಸಾಗಿಬಂದಂತಹುದು, ಆಟಗಾರರು ಬೆಳೆಯುತ್ತ ಜೀವನದ ಜಂಜಾಟದಲ್ಲಿ ಕಳೆದು ಹೋಗುತ್ತಾರೆ, ಆದರೆ ಆ ಖಾಲಿ ಜಾಗವನ್ನು ಹೊಸ ಪೀಳಿಗೆ ತುಂಬುತ್ತ ನಲಿಯುತ್ತ ಮುಂದೆ ಸಾಗಿ ಹೋಗುತ್ತದೆ, ಅರ್ಥಪೂರ್ಣ ಕವನ ನೀಡಿದ್ದೀರಿ ಧನ್ಯವಾದಗಳು.