ಅದಲು ಬದಲು

ಅದಲು ಬದಲು

ಹೋದ ವಾರ ಆಸ್ಟ್ರೇಲಿಯಾದಲ್ಲಿ ಚುನಾವಣೆ ಮುಗಿಯಿತು. ಸರ್ಕಾರ ಬದಲಾಯಿತು.ಅದರ ಬಗ್ಗೆ ಬರೀ ಬೇಕು ಅಂತ ಅನ್ಕೊಂಡರೂ ಆಗಲಿಲ್ಲ. ಈವತ್ತು ಹೊಸ ಸರ್ಕಾರ ಪ್ರಮಾಣ ವಚನ ಸ್ವೀಕರಿಸಿತಂತೆ.

ಹೋದ ಸರ್ಕಾರ ಬಿದ್ದಿದ್ದು, ಹೀನಾಮಾನವಾಗಿ ಸೋತಿದ್ದು ಯಾಕಿದ್ದೀತು? ಇದಕ್ಕೆಲ್ಲಾ ಏನು ಅರ್ಥ ಅಂತ ಯೋಚಿಸುತ್ತಿದ್ದೀನಿ.

ಬರೇ ಬೇಸತ್ತು ಜನ ಸರ್ಕಾರ ಬದಲಿಸಿದರೆ? ಇದು ನಿಜವಿರಬಹುದಾದರೂ ಒಪ್ಪಲು ಮನಸ್ಸಾಗುತ್ತಿಲ್ಲ!

ಯಾಕೆಂದರೆ, ಆಸ್ಟ್ರೇಲಿಯಾದಲ್ಲಿ ಈಗ ಸುಲಭವಾಗಿ ಕೆಲಸ ಸಿಗುತ್ತಿದೆ. ಇದಕ್ಕೆ ಹೋದ ಸರ್ಕಾರ ತಂದಿದ್ದ ವರ್ಕ್ ಚಾಯ್ಸಸ್ ಎಂಬ ಒಂದು ಕಾಯಿದೆಯೇ ಕಾರಣ ಎಂದು ಅದು ಎದೆ ತಟ್ಟಿ ಹೇಳಿಕೊಳ್ಳುತ್ತಿತ್ತು. ಅದು ಯೂನಿಯನ್‌ಗಳ ಬೆನ್ನು ಮುರಿಯಲೇ ತಂದ ಕಾಯಿದೆ. ಅದರಿಂದ ಎಷ್ಟೋ ಜನರಿಗೆ ಕೆಲಸದಲ್ಲಿ ಅಭದ್ರತೆ ಬೆನ್ನತ್ತಿದ್ದು ಸುಳ್ಳಲ್ಲ. ಸರ್ಕಾರ ಬದಲಾಯಿಸಲಿಕ್ಕೆ ಇದು ಕಾರಣ ಆಯಿತ?

ಈ ಸೋತ ಪ್ರಧಾನಿ, ಹೋದ ಸಲದ ಚುನಾವಣೆನಲ್ಲಿ ಇಂಟರೆಸ್ಟ್ ರೇಟ್ ಅದುಮಿಡ್ತೀವಿ ಅಂದಿದ್ದ. ಅದು ತನ್ನ ಕೈಲಾಗೊಲ್ಲ ಅಂತ ಗೊತ್ತಿದ್ದೂ... ಈ ಚುನಾವಣೆಗೆ ಮುನ್ನ ಐದಾರು ಸಲ ಇಂಟರೆಸ್ಟ್ ರೇಟ್ ಏರಿತ್ತು... ಸರ್ಕಾರ ಬದಲಾಯಿಸಲಿಕ್ಕೆ ಇದು ಕಾರಣ ಆಯಿತ?

ಇಡೀ ಲೋಕವೇ ಪರಿಸರದ ಬಗ್ಗೆ ತಲೆ ಕೆಡೆಸಿಕೊಂಡಿದ್ದಾಗ, ಈ ಸೋತ ಪ್ರಧಾನಿ ಅವೆಲ್ಲಾ ಸುಳ್ಳು ಅನ್ನುತ್ತಾ ವರ್ಷಾನುಗಟ್ಟಲೆ ಹಾಳು ಮಾಡಿದ. ಹೋದ ವರ್ಷ ತಾನೆ "ಏನಾದರೂ ಮಾಡಬೇಕು" ಅಂತ ಗೊಣಗತಾ ಇದ್ದ. ಜನರಿಗೆ ಇದು ಅಕ್ಷಮ್ಯ ಅನ್ನಿಸ್ತ? ಸರ್ಕಾರ ಬದಲಾಯಿಸಲಿಕ್ಕೆ ಇದು ಕಾರಣ ಆಯಿತ?

ಈ ಸೋತ ಪ್ರಧಾನಿ ಜನರಿಗೆ "ಸುಮ್ಮನೆ ಸರ್ಕಾರ ಬದಲಾಯಿಸೋದು ರಿಸ್ಕ್. ಹಾಗೆ ಮಾಡಬೇಡಿ. ನಾವು ಚೆನ್ನಾಗಿ ಆಳ್ತಾ ಇದ್ದೀವಲ್ಲ. ಯಾಕೆ ಸುಮ್ಮನೆ" ಅಂತ ಹೆದರಿಸಿದ್ದ. ಆದರೆ ತನ್ನ ಸುತ್ತ ನಾಡು ಬದಲಾಗಿರೋದು, ಜನ ಎಚ್ಚತ್ತಿರೋದು ಈ ಮುದಕಂಗೆ ಗೊತ್ತೇ ಆಗಲಿಲ್ಲ ಅಂತ ಪೇಪರಲ್ಲಿ ಈಗೀಗ ಬರೀತಾ ಇದ್ದಾರೆ. ಇದೇ ನಿಜವಾಗಿದ್ದು - ಸರ್ಕಾರ ಬದಲಾಯಿಸಲಿಕ್ಕೆ ಇದು ಕಾರಣ ಆಯಿತ?

ಅಥವಾ ನಿಜವಾಗಲೂ ಈ ಸರ್ಕಾರದ ಅನೈತಿಕ ನಡೆವಳಿಕೆ ಜನರಲ್ಲಿ ವಾಕರಿಕೆ ಬರಿಸ್ತ? ಇರಾಖ್ ಯುದ್ಧ, ಆದಿವಾಸಿಗಳ ಮೇಲಿನ ದಬ್ಬಾಳಿಕೆ, ನಿರಾಶ್ರಿತರ ಮೇಲಿನ ಕ್ರೌರ್ಯ. ಇವುಗಳ ಬಗ್ಗೆ ಹೆಚ್ಚು ಚರ್ಚೆ ಆಗಿಲ್ಲ ಅಂತ ಕಳವಳ ಆಗಿತ್ತು (ಆ ಕಳವಳ ಮಾತ್ರ ಈ ಸರ್ಕಾರ ಸೋತರೂ ಇದೆ). ಆದರೆ ಅವುಗಳ ಬಗ್ಗೆ ಮೊದಲೇ ಜನ ಮನಸು ಮಾಡಿ ಬಿಟ್ಟಿದ್ದರ?  ಸರ್ಕಾರ ಬದಲಾಯಿಸಲಿಕ್ಕೆ ಇದು ಕಾರಣ ಆಯಿತ? ಇದು ಬರೇ ನನ್ನ ಉಟೋಪಿಯನ್ ಕನಸಿನ ಭಾಗ ಇರಬಹುದು. ಇದೆಲ್ಲಾ ಅಷ್ಟು ಸುಲಭದಲ್ಲಿ ನಮ್ಮ ಕೈಗೆ ಸಿಗೋ ಅಂಥದ್ದು ಅಲ್ಲವೇನೋ. ನಮ್ಮ ಮನಸ್ಸಿಗೆ ಸಮಾಧಾನ ಆಗೋ ಅಂತ ಉತ್ತರ ಕಲ್ಪಿಸಿಕೊಂಡು ಖುಷಿ ಪಡಬಹುದಷ್ಟೆ.

ಆದರೆ, ಈ ಹವರ್ಡ್ ಎಂಬ ಅನಿಷ್ಟ ತೊಲಗಿದ ರೀತಿ ಮಾತ್ರ ತುಂಬಾ ಮುದಕೊಡುವ ಸಂಗತಿ. ಈ ದೇಶದ ಪ್ರಧಾನಿಯಾಗಿದ್ದವನೊಬ್ಬ ಚುನಾವಣೆಯಲ್ಲಿ ಸೋತಿರುವುದು 79 ವರ್ಷದಲ್ಲಿ ಇದೇ ಮೊದಲು. ಸೋತಿದ್ದು ಕೂಡ, ಜರ್ನಲಿಸ್ಟ್ ಆಗಿದ್ದು ಅವನನ್ನು ಸೋಲಿಸಲೆಂದೇ ಚುನಾವಣೆಗೆ ನಿಂತ ಮ್ಯಾಕ್ಸೀನ್ ಮೆಕ್ಯೂ ಎಂಬ ದಿಟ್ಟ ಹೆಂಗಸಿನ ಎದುರು. ಹವರ್ಡ್ ಆ ಸೀಟಿನಲ್ಲಿ 33 ವರ್ಷದಿಂದ ಕೂತಿದ್ದ!

ಆಯ್ತು. ಇನ್ನೇನು ಬದಲಾವಣೆ ಆಗತ್ತೆ ಅಂತ ಕಾದಿದ್ದೇನೆ. ಈ ಹನ್ನೊಂದುವರೆ ವರ್ಷದಿಂದ ಅಧೋಗತಿಗೆ ಇಳಿದಿದ್ದ ನಾಡಿನ ಅಂತರಂಗವಾದರೂ ಉಳಿಯುತ್ತದೋ ನೋಡಬೇಕು. ಅಥವಾ ಕೆವಿನ್ ರಡ್, ಮತ್ತೊಬ್ಬ ಹವರ್ಡ್ ಆಗ್ತಾನೋ!?

ಎಚ್ಚರವಾಗಿರದೇ ಬೇರೆ ದಾರಿ ಇಲ್ಲ.

Rating
No votes yet