ಅದು ‘ಚನಪ್ಪ ಚನಗೌಡಾ’ ಅಲ್ಲ, ಹಾಗಾದರೆ ಮತ್ತೇನು?
ಪ್ರಿಯರೇ, ಕರ್ನಾಟಕ ಸುಗಮ ಸಂಗೀತ ಪರಿಷತ್ತು (ರಿ), ಬೆಂಗಳೂರು ಮತ್ತು ಧಾರವಾಡ ಜಿಲ್ಲಾಡಳಿತದ ವತಿಯಿಂದ ಧಾರವಾಡದಲ್ಲಿ ಫೆಬ್ರವರಿ 2 ಮತ್ತು 3 ರಂದು ‘ಗೀತೋತ್ಸವ – 2013’ ಇಲ್ಲಿನ ಸೃಜನಾ ಕಲಾಮಂದಿರ ಮತ್ತು ಕರ್ನಾಟಕ ಕಾಲೇಜು ಮೈದಾನ, ಧಾರವಾಡದಲ್ಲಿ ಜರುಗಿತು.
ಸಮ್ಮೇಳನದ ಅಧ್ಯಕ್ಷತೆ ಯನ್ನು ಸುಪ್ರಸಿದ್ಧ ಹಿರಿಯ ಭಾವಗೀತೆ ಹಾಡಗಾರ್ತಿ ಶ್ರೀಮತಿ ಅನುರಾಧಾ ಧಾರೇಶ್ವರ ವಹಿಸಿದ್ದರು.ಯಾರು ಈ ಅನುರಾಧಾ ಧಾರೇಶ್ವರ ಅಂತೀರಾ, ಕನ್ನಡದಲ್ಲಿ ‘ಐ ಮೇರೆ ವತನ ಕೆ ಲೋಗೋ’ ಹಾಡು’ ಓ ನನ್ನ ದೇಶ ಬಾಂಧವರೇ’ ಹಾಡನ್ನು ಅದ್ಭುತವಾಗಿ ಹಾಡಿ ಅಪಾರ ಜನಮೆಚ್ಚುಗೆ ಗಳಿಸಿದ, ನಾಡಿನ ಅತ್ಯಂತ ಹಿರಿಯ ಭಾವಗೀತೆ ಹಾಡುಗಾರ್ತಿ.
ಅಭೂತಪೂರ್ವ ಕಾರ್ಯಕ್ರಮ ನಡೆಸಿಕೊಟ್ಟ ಸುಗಮ ಸಂಗೀತ ಪರಿಷತ್ನ ಅಧ್ಯಕ್ಷರಾದ ವೈ ಕೆ ಮುದ್ದುಕೃಷ್ಣ ಹಾಗೂ ಅವರ ತಂಡಕ್ಕೆ ಧಾರವಾಡದ ಜನತೆಯ ಪರವಾಗಿ ಹೃತ್ಪೂರ್ವಕ ಕೃತಜ್ಞತೆಗಳು.
ನಾಡಿನ ಎಲ್ಲ ಭಾವಗೀತೆಗಳ ಕಲಾವಿದರು, ರಮೇಶಚಂದ್ರ, ರತ್ನಮಾಲಾ ಪ್ರಕಾಶರವರಂಥ ಚಿತ್ರಗಳ ಹಿನ್ನೆಲೆ ಗಾಯಕರೆನಿಸಿಕೊಂಡವರೆಲ್ಲ, ಶಿವವೊಗ್ಗ ಸುಬ್ಬಣ್ಣ ವೊದಲ್ಗೊಂಡು ಹಿರಿಯ ಭಾವಗೀತೆಗಳ ಕಲಾವಿದರು, ಹಾಡು ಹುಟ್ಟಿಸಿದ ಕವಿಗಳೆಲ್ಲ ಅಲ್ಲಿ ನೆರೆದು ತಮ್ಮ ತಮ್ಮ ಕಾರ್ಯಕ್ರಮಗಳನ್ನು ಅದ್ಭುತವಾಗಿ ನೀಡಿದರು. ಎರಡು ದಿನಗಳ ಕಾರ್ಯಕ್ರಮ ಈ ಭಾಗಗಳಲ್ಲಿ ಹಂಚಿಕೆಯಾಗಿ , ವಿನೂತನವಾಗಿ ನಡೆಯಿತು. ಈ ಕೆಳಗಿನಂತೆ ಸಂಚಿಕೆಗಳಲ್ಲಿ ಕಾರ್ಯಕ್ರಮ ಹಂಚಲ್ಪಟ್ಟಿತ್ತು..
ನವಶೋಧ, ಅನರಣನ, ಸ್ವರಮಾಧುರ್ಯ-ಪದಲಾಲಿತ್ಯ, ಸ್ವರ ರಾಗ ಸಂಚಾರ, ಪೂರ್ವಕ್ಕೆ ಪಶ್ಚಿಮದ ಲೇಪನ, ಕವಿಗೋಷ್ಠಿ, ಗೀತಸಂಗೀತ, ಮರೆಯಬಾರದ ಹಾಡುಗಳು, ಚಿಣ್ಣರ ಗಾಯನ, ಗಾನಲಹರಿ- ಕೇಳಿ ನಮ್ಮ ಹಾಡು, ಗೀತ-ಗೌರವ, ಗೀತಸಂಗೀತ
ಕೊನೆಗೆ ಸಮಾರೋಪದಲ್ಲಿ ಕವಿ ಬಿ ಆರ್ ಲಕ್ಷ್ಮಣರಾವ ಮುಖ್ಯ ಅತಿಥಿಯಾಗಿ, ನಾಡೋಜ ಚನ್ನವೀರ ಕಣವಿ ಅಧ್ಯಕ್ಷರಾಗಿದ್ದರು. ಈ ಸಮಾರೋಪದಲ್ಲಿ ನಾಡಿನ ಹೆಮ್ಮೆಯ ಹಿರಿಯ ಪಿಯಾನೋ ಮಾಸ್ಟರ್ ಪಂಡಿತ ವಸಂತ ಕನಕಾಪೂರ ಅವರಿಗೆ ಸನ್ಮಾನ, ಹಾಗೂ ಸನ್ಮಾನಿತರಾದ ಇನ್ನಿತರರೆಂದರೆ ರತ್ನಮಾಲಾ ಪ್ರಕಾಶ, ಮಾಲತಿ ಶರ್ಮಾ, ಎಂ, ಕೆ ಜಯಶ್ರೀ, ಶ್ರೀನಿವಾಸ ಉಡುಪ, ತಬಲಾ ಪಟು ದೇವಂಬು, ಬಿ ಡಿ ಹಿರೇಗೌಡರ, ವಿಶ್ರಾಂತ ಕುಲಪತಿ ಎಮ್ ಎಮ್ ಕಲಬುರ್ಗಿ ಯವರಿಗೆ ಸನ್ಮಾನಿಸಲಾಯಿತು.
ಸಮಾರೋಪ ಸಮಾರಂಭದಲ್ಲಿ, ವೊದಲಿಗೆ ಕಲಬುರ್ಗಿಯವರು ತುಂಬ ಅರ್ಥಪೂರ್ಣವಾಗಿ ಮಾತನಾಡಿದರು. ಸುಗಮ ಸಂಗೀತ ಹೇಗಿರಬೇಕು. ಅದರಲ್ಲಿ ಸಂಗೀತ ಎಷ್ಟು ಮಿಳಿತವಾಗಿರಬೇಕು. ಏಕೆಂದರೆ ಈಗ ನಡೆದ ಕಾರ್ಯಕ್ರಮಗಳಲ್ಲಿ ಹಿನ್ನೆಲೆ ಸಂಗೀತ ಹಾಡನ್ನು ಮುಚ್ಚಿಹಾಕುವಂತಿರುವುದನ್ನು ಎಲ್ಲರ ಗಮನಕ್ಕೆ ತಂದರು.
ಹೇಗೆ ಕಾರ್ಯಕ್ರಮದಲ್ಲಿ ಹಾಡಿದ ಶಿಶುನಾಳ ಶರೀಫರ ಹಾಡು ‘ಕೋಡಗನ ಕೋಳಿ ನುಂಗಿತ್ತ’ ಎಂದು ಹೇಳುತ್ತೋ, ಹಾಗೆ ‘ಹಾಡನ್ನು ಹಿನ್ನೆಲೆ ಸಂಗೀತ ನುಂಗಿತ್ತ’ ಎಂದು ಹೇಳಬೇಕಾಗತೈತಿ ಎಂದು ತಿಳಿಹೇಳಿ, ಹಾಡಿನಲ್ಲಿ ಹಾಡಿಗೇ ಪ್ರಾಶಸ್ತ್ಯ ಕೊಡಬೇಕೇ ವಿನ: ಹಾಡನ್ನು ನುಂಗುವಂತೆ ಸಂಗೀತವಿರಬಾರದೆಂದು ಕಿವಿಮಾತು ಹೇಳಿದರು.
ಗಾಯಕ ಹಾಡಿನ ಗದ್ಯವನ್ನು ಸರಿಯಾಗಿ ಗ್ರಹಿಸಬೇಕು, ಅದನ್ನು ವೊದಲು ಒಬ್ಬ ಭಾಷಾ ತಜ್ಞರ ಹತ್ತಿರ ಹಾಡಿ, ಅದರಲ್ಲಿ ತಪ್ಪುಗಳೇನಾದರೂ ನುಸುಳಿವೆಯೋ ಹೇಗೆ ಎಂದು ಪರಿಷ್ಕರಿಸಿದ ನಂತರ ಎರಡು ಮೂರು ಸಾಧ್ಯತೆಗಳಲ್ಲಿ ರೆಕಾರ್ಡ ಮಾಡಬೇಕೆಂದು ಹೇಳಿ ಇದಕ್ಕೆ ಪೂರಕವಾಗಿ ಕೆಲವು ಮಾಹಿತಿ ನೀಡಿದರು.
ನಾವೆಲ್ಲ ಕೇಳುತ್ತ, ಹಾಡುತ್ತ, ಮಕ್ಕಳಿಂದ ಕುಣಿಯುತ್ತ ಬಂದ ಹಾಡು ‘ಚನಪ್ಪ ಚನಗೌಡ, ಕುಂಬಾರ ಮಾಡಿದ ಮಡಿಕೆವ್ವಾ’ ಎಂಬುದನ್ನು ಕೇಳುತ್ತ ಬಂದಿದ್ದೇವೆ, ಏನು ಈ ಹಾಡಿನ ಮರ್ಮ. ಎಲ್ಲಿಯ ಚನ್ನಪ್ಪ, ಎಲ್ಲಿಯ ಮಡಕೆಯ ಮಾಡುವವ, ಏನಿದು ಎಂದು ಹಾಡಿನ ಜಾಡು ಹಿಡಿದು ಸಂಶೋಧನೆಯ ತಲೆಯೋಡಿಸಿದಾಗ, ಗೊತ್ತಾದದ್ದು, ಈ ಹಾಡು ಮೂಲವಾಗಿ ರೂಪಿತವಾದದ್ದು, ‘ಚನ್ನಪ್ಪ ಚನ್ನ ಕೊಡ’ ‘ನಂತರ ಚನ್ನಗೊಡ’ ಆಗಿದೆ ಎಂದು ಹೇಳಿ ಅದು ಅಪಭ್ರಂಶವಾಗಿ ‘ಚನಪ್ಪ ಚನಗೌಡಾ, ಕುಂಬಾರ ಮಾಡಿದ ಮಡಕೆವ್ವಾ’ ಎಂದು ಪ್ರಚಲಿತವಾಗಿದೆ ಎಂದರು. ಹೀಗೆ ತಪ್ಪು ನುಸುಳಿಬಿಡುತ್ತವೆ. ಅದಕ್ಕೆ ಹಾಡುವ ಮುನ್ನ ವಿಧ್ವಾಂಸರ ಹತ್ತಿರ ಅದರ ಹಾಡನ್ನು ಪರಿಷ್ಕರಿಸುವುದು ಉತ್ತಮ ಎಂದರು. ಒಳ್ಳೆಯ ಆಧ್ಯಾತ್ಮಿಕ ಅಂಶವುಳ್ಳ ಹಾಡಿದು.
ಸುಗಮ ಸಂಗೀತದಲ್ಲೂ ಕೂಡ ಹಲವಾರು ತಪ್ಪುಗಳು ಸಂಭವಿಸುತ್ತವೆ. ‘ಜಯಭಾರತ ಜನನಿಯ ತನುಜಾತೆ, ಜಯಹೇ ಕರ್ನಾ ಟಕ ಮಾತೆ’ ಎಂದು ಹಾಡಲಾಗಿದೆ, ಮಕ್ಕಳು ಸುಮಾರು ಇಪ್ಪತ್ತು ಸಾರಿ ಟಕಮಾತೆ ಟಕಮಾತೆ ಎಂದು ಹಾಡುವುದು ಇರುಸು ಮುರುಸು ಉಂಟುಮಾಡುತ್ತದೆ. ಇದು ತಪ್ಪು ಹೀಗಾಗಬಾರದು ಎಂದು ಹೇಳಿ, ಇದೇ ಹಾಡಿನಲ್ಲಿರುವ ಹಲವಾರು ಅರ್ಧಮುರಿದ ಸಾಲುಗಳನ್ನು ಉಲ್ಲೇಖ ಮಾಡಿ ತೋರಿಸಿದರು.
ಕನ್ನಡದಲ್ಲಿ ಯಾವ ಕವಿಯೂ ಹಾಡಿನ ಸಂದರ್ಭಗಳನ್ನು ಎಲ್ಲಿಯೂ ನಮೂದಿಸಿರುವುದಿಲ್ಲ, ಬೇಂದ್ರೆಯವರ ಹೊರತಾಗಿ. ಬೇಂದ್ರೆ ಮಾತ್ರ ಪ್ರತಿ ಕವನ ಬರೆದಾಗಲೂ ಅದರ ಹುಟ್ಟು, ವಿವರ ಬರೆಯುತ್ತಿದ್ದರಂತೆ. ಬೇಂದ್ರೆ ಬರೆಯುತ್ತಿದ್ದುದು ಈ ಮಣ್ಣಿನ ದೇಶೀ ಭಾಷೆಯಲ್ಲಿ, ಉಳಿದ ಮೈಸೂರು ಭಾಗ, ಮಂಗಳೂರು, ಧಾರವಾಡ ಕಡೆಯ ಎಲ್ಲರೂ óಶಿಷ್ಟ ಶೈಲಿಯಲ್ಲಿ ಬರೆದಿದ್ದಾರೆ. ಬರೆಯುತ್ತಿದ್ದಾರೆ. ಇದು ಕೃತಕ. ದೇಶೀ ಭಾಷೆಯನ್ನು ಅದರ ಶೈಲಿಯಲ್ಲಿಯೇ ಹಾಡಬೇಕು. ಜನಪದ, ಲಾವಣಿ, ಹಂತೀ ಪದ, ಜೋಗುಳ ಮುಂತಾದುವೆಲ್ಲ ದೇಶೀ ಹಾಡುಗಳು. ಇವುಗಳನ್ನು ಅವಗಳ ಮೂಲ ಶೈಲಿಯಲ್ಲಿಯೇ ಹಾಡಬೇಕು. ಆದರೆ ಶಿಷ್ಟ ಅಂದರೆ ಕೃತಕ ಇವುಗಳನ್ನು ತಮಗೆ ಸೂಕ್ತಕಂಡ ಧಾಟಿಗಳಲ್ಲಿ ಹಾಡಬಹುದು ಎಂದರು. ಬೇಂದ್ರೆಯವರು ಹಲವಾರು ಸಂದರ್ಭಗಳಲ್ಲಿ ಜಿ.ಪಿ. ರಾಜರತ್ನಂ ಅವರ ಬರಹಗಳು ಕೂಡ, ಉದಾಹರಣೆಗೆ ಎಂಡ ಕುಡುಕ ರತ್ನ,’ ಅದು ದೇಶೀ ಅಲ್ಲ, ಅದನ್ನು ನಾನು( ಬೇಂದ್ರೆ) ದೇಶೀ ಎಂದು ಒಪ್ಪುವುದಿಲ್ಲ ಎಂದಿದ್ದನ್ನು ನೆನಪಿಸಿಕೊಂಡರು.
ಎಲ್ಲ ಕವನಗಳು ಹಾಡಲು ಬರುವುದಿಲ್ಲ. ಕೆಲವು ಕೇವಲ ಗಂಭೀರ ಓದಿಗಾಗಿ ಇರುತ್ತವೆ. ಅಂಥವುಗಳನ್ನು ಹಾಡಬಾರದು. ಉದಾಹರಣೆಗೆ ಬೇಂದ್ರೆಯವರ ‘ಜೋಗಿ’ ಕವನವನ್ನು ಹಾಡಬಾರದು. ಅದನ್ನು ಓದಬೇಕಷ್ಟೇ. ಎಂದು ಹೇಳಿದರು. ಹೀಗಾಗಿ ಎಲ್ಲ ಕವನಗಳು ಹಾಡಿಗೆ ಯೋಗ್ಯವಾಗಿರುವುದಿಲ್ಲ, ಹಾಡುವ ಹಾಗೂ ಹಾಡಲಾರದ/ಹಾಡಬಾರದ ಕವನಗಳ ಮಧ್ಯ ವಿವೇಚನೆ ಸಣ್ಣ ಕೂದಲೆಳೆಯ ಅಂತರದಲ್ಲಿ ಇರುತ್ತದೆ, ಅದನ್ನು ಅರ್ಥೈಸಿಕೊಳ್ಳಬೇಕು. ಕಿವಿಗೊಟ್ಟು ಕೇಳುತ್ತಿದ್ದ ರತ್ನಮಾಲಾ ಪ್ರಕಾಶ, ಬಿ ಆರ್ ಲಕ್ಷ್ಮಣರಾವ ತದೇಕ ಚಿತ್ತದಿಂದ ಕಲಬುರ್ಗಿಯವರ ಮಾತುಗಳನ್ನು ಆಲಿಸಿ, ಎದೆಯಾಳಕ್ಕೆ ಇಳಿಸುತ್ತಿದ್ದುದನ್ನು ಕಂಡೆ.
ನಾವಾದರೂ ಎಷ್ಟೋ ಹಾಡುಗಳಲ್ಲಿ ತಪ್ಪುಗಳು ನುಸುಳಿರುವುದನ್ನು ನೋಡಿದ್ದೇವೆ, ಉದಾಹರಣೆಗೆ ಶಿಶುನಾಳ ಶರೀಫರ ‘ಬಿದ್ದೀಯ ಬೇ ಮುದುಕಿ ಬಿದ್ದೀಯ ಬೇ’ ಎಂದಿರುವುದನ್ನು ಬಿದ್ದಿಯ ಬ್ಬೇ ಮುದುಕಿ ಬಿದ್ದೀಯ ಬ್ಬೇ ‘ ಎಂದು ಹಾಡಿರುವುದನ್ನು ಕೇಳಿದ್ದೇವೆ. ಇದು ತಪ್ಪು. ಮುಂದೆ ಹೀಗಾದ ತಪ್ಪುಗಳನ್ನು ಸರಿಪಡಿಸಿಕೊಳ್ಳುವುದು ಭಾಷೆಯ ಸೊಗಡಿನ ದೃಷ್ಟಿಯಿಂದ ಆರೋಗ್ಯಕರ.
ಇದನ್ನೇ ಕಲಬುರ್ಗಿ ಯವರು ಇನ್ನೊಂದು ಮಾತಿನಲ್ಲಿ, ‘ ಬ್ರಿಟಿಷರು ಕಿತ್ತೂರು ಚನ್ನಮ್ಮ’ ಚಿತ್ರದಲ್ಲಿ ಮಾತನಾಡುವು ವೈಖರಿಯನ್ನು ಭಿನ್ನವಾಗಿ ತೋರಿಸಿದ್ದಾರೆ. ನಮಗೆ ಅದೆಷ್ಟು ಅಸಮಂಜಸ ಎಂದು ಅನ್ನಿಸುವುದೋ, ಹಾಗೆ ಭಾಷೆಯ ನಿಜ ಅರ್ಥದಲ್ಲಿ ಅದನ್ನು ಪ್ರಯೋಗಿಸಬೇಕು. ಯಾಂತ್ರಿಕವಾದ ಪದಪ್ರಯೋಗವಿರಬಾರದು. ಅದರಲ್ಲಿ ಜೀವವಿರದು ಎಂದು ತಿಳಿಸಿದರು. ವಿಧ್ವಾಂಸರು ಈ ನಿಟ್ಟಿನಲ್ಲಿ ದೃಷ್ಟಿ ಹರಿಸಿ, ಇನ್ನೂ ಹೆಚ್ಚಿನ ಕೊಡುಗೆ ನೀಡಬೇಕೆಂದು ಕೋರಿದರು.
ಒಂದು ಅರ್ಥಪೂರ್ಣ ಸಮಾರಂಭಕ್ಕೆ ಅತ್ಯುತ್ತಮ ಸಮಾರೋಪದ ವಿಮರ್ಶಾತ್ಮಕ ಭಾಷಣ ಬರುವುದು, ಧಾರವಾಡದಲ್ಲಿ ಮಾತ್ರ ಸಾಧ್ಯವೇನೋ!