ಅಧ್ವಾನದ ಬಸ್ಗಳು
· ಪುಷ್ಪಕ್ ವಾಹನಸೇವೆ ಪ್ರಾರಂಭಗೊಂಡಾಗ ಅದರಲ್ಲಿ ನಿಲ್ಲುವ ಪ್ರಯಾಣಕ್ಕೆ ಆಸ್ಪದವಿಲ್ಲ, ಸಂಸ್ಥೆಯ ಸಿಬ್ಬಂದಿಗೆ ಪ್ರವೇಶವಿಲ್ಲ, ಸೀಮಿತ ನಿಲುಗಡೆ, ವೇಗಕ್ಕೆ ಆದ್ಯತೆ ಎಂಬುದಾಗಿತ್ತು. ದುಬಾರಿ ರಿಕ್ಷಾಗಳಿಗಿಂತ ಪುಷ್ಪಕ್ಗಳು ವೇಗ ಮತ್ತು ಸುರಕ್ಷತೆಯ ದೃಷ್ಟಿಯಿಂದ ಜನರ ಮೆಚ್ಚುಗೆ ಗಳಿಸಿದವು. ಆದರೆ ಆಸೆಬುರುಕ ಬಿಎಂಟಿಸಿ ಉದ್ದೇಶಪೂರ್ವಕವಾಗಿ ಸಾಮಾನ್ಯ ಬಸ್ಗಳನ್ನು ತಡೆಹಿಡಿದು ಒಂದರ ಹಿಂದೆ ಒಂದರಂತೆ ಪುಷ್ಪಕ್ಗಳನ್ನೇ ಓಡಿಸತೊಡಗಿತು. ಅವು ತುಂಬಿ ತುಳುಕಿ ವೇಗಕ್ಕೆ ತಡೆ ಉಂಟಾದರೂ ಜನ ವಿಧಿಯಿಲ್ಲದೇ ಅವನ್ನು ಆಶ್ರಯಿಸಬೇಕಾಯಿತು.
· ಒಂದೇ ಬಾಗಿಲಿನ ಬಸ್ಗಳಲ್ಲಿ ಚಾಲಕನೇ ಕಂಡಕ್ಟರನಾಗಿರುವುದು ಸುರಕ್ಷಿತ ಚಾಲನೆಗೆ ಎರವಾಗಿದೆ ಮಾತ್ರವಲ್ಲ ಸಮಯವೂ ಹೆಚ್ಚು ತಗಲುತ್ತದೆ. ಚಾಲಕನ ಸನಿಹವೇ ಹೆಂಗಸರು ನಿಲ್ಲುತ್ತಾರೆ, ಅವರಿಗೆ ಆತುಕೊಂಡೇ ಗಂಡಸರು ನಿಲ್ಲುತ್ತಾರಾಗಲೀ ಹಿಂಬದಿಗೆ ಯಾರೂ ಸರಿದು ಹೋಗುವುದಿಲ್ಲವಾದ್ದರಿಂದ ಬಸ್ಸಿಗೆ ಹತ್ತುವಾಗ ಇಳಿಯುವಾಗ ನೂಕಾಟ ಗೊಣಗಾಟ ಮಾಮೂಲು.
· ಇತ್ತೀಚಿನ ವರ್ಷಗಳಲ್ಲಿ ಬಿಎಂಟಿಸಿಯ ಯಾವುದೇ ಬಸ್ಸಿನಲ್ಲಿ ಕಿಟಕಿಗಳ ಮೇಲ್ಗಡೆ ವಾತಾಯನದ ಕವಾಟ ಅಥವಾ ರಂಧ್ರಗಳಿಲ್ಲ. ಮಳೆ ಚಳಿಯಂಥ ಸಂದರ್ಭಗಳಲ್ಲಿ ಕಿಟಕಿಗಳನ್ನು ಮುಚ್ಚಿದಾಗ ಆಗುವ ಹವಾಬಂಧನ ಒಳ್ಳೆಯದಲ್ಲ. ಕೆಲವು ಬಸ್ಸುಗಳಲ್ಲಿ ಕಿಟಕಿಗಳ ಮೇಲ್ಗಡೆ ಪಾರದರ್ಶಕ ಗವಾಕ್ಷಿಗಳಿದ್ದು ಈಗ ಆ ಜಾಗವನ್ನು ಜಾಹಿರಾತು ಫಲಕಗಳು ಮುಚ್ಚಿಬಿಟ್ಟು ಬಿಎಂಟಿಸಿಯ ದುರಾಸೆಯನ್ನು ಸಾರುತ್ತಿವೆ. ಕೆಲಬಸ್ಗಳ ಮೆಟ್ಟಿಲೇರಲು ಹೈಜಂಪ್ ಗೊತ್ತಿರಬೇಕು. ಚಾಲಕನ ಎಡಬದಿಯಲ್ಲಿ ಮುಂಬಾಗಿಲು ಇರುವಲ್ಲಿ ಮುಂದಿನ ಸೀಟಿನಲ್ಲಿ ಕುಳಿತ ಮಹಿಳೆಯರಿಗೆ ಸುರಕ್ಷಾ ಹಿಡಿಕೆ ಇಲ್ಲವೇ ಇಲ್ಲ. ಈ ಹಿಡಿಕೆಗಳು ಇಲ್ಲದಿರುವುದರಿಂದ ಹತ್ತುವುದೂ ಇಳಿಯುವುದೂ ಕೂಡಾ ತ್ರಾಸದಾಯಕ.
· ಕೆಲವು ಬಸ್ಸುಗಳ ಕಿಟಕಿಗಳು ಗಾತ್ರದಲ್ಲಿ ಚಿಕ್ಕದಿದ್ದು ಅವಘಡ ಉಂಟಾದಾಗ ಕಿಟಕಿಯಿಂದ ಯಾರೂ ಹೊರಬರಲಾಗದೆ ಅಕ್ಷರಶಃ ಬಂಧಿಯಾಗಬೇಕಾದ ಸನ್ನಿವೇಶ ಇದೆ. ಶಬ್ದಮಾಲಿನ್ಯಕ್ಕೆ ಕಾರಣವಾದ ಹಳೆಯ ತುತ್ತೂರಿಯ ಬದಲಿಗೆ ಈಗ ವಿದ್ಯುತ್ ಹಾರ್ನ್ ಅಳವಡಿಸಲಾಗಿದೆ, ಸಂತೋಷ! ಆದರೂ ಅವನ್ನು ಒಂದೇ ಸಮನೆ ಒತ್ತುವುದರಿಂದ ಮತ್ತಷ್ಟು ಕರ್ಣಕಠೋರ ಎನಿಸುತ್ತದೆ.
· ಚಾಲಕನಿಗೆ ಕಂಡಕ್ಟರನಿಗೆ ಪ್ರಯಾಣವು ಏಕತಾನವಾಗಿರುತ್ತದೆ ನಿಜ. ಆದರೆ ಪ್ರಯಾಣಿಕನಿಗೆ ಪ್ರತಿ ಸಿಬ್ಬಂದಿಯೂ ಪ್ರತಿ ಪ್ರಯಾಣವೂ ಹೊಸದೇ. ಅವನು ಕೇಳುವ ಪ್ರಶ್ನೆಗಳೆಲ್ಲ ಆತಂಕದಿಂದಲೇ ತುಂಬಿರುತ್ತವೆ, (ಎಷ್ಟು ಹೊತ್ತಿಗೆ ಹೊರಡುತ್ತೆ? ಇಂಥಾ ಕಡೆ ಹೋಗುತ್ತಾ? ಇಂಥಾ ಕಡೆ ನಿಲ್ಲುತ್ತಾ?) ಈ ಪ್ರಶ್ನೆಗಳೆಲ್ಲಾ ಬಾಲಿಶವೆಂದು ತಿಳಿಯಬಾರದು. ನಿತ್ಯವೂ ಹೊರವೂರುಗಳಿಂದ ಬಂದು ಹೋಗುವ ಜನಕ್ಕೆ ಸಿಬ್ಬಂದಿಯವರು ಪ್ರವಾಸಿ ಮಾರ್ಗದರ್ಶಿಗಳಂತಲ್ಲದಿದ್ದರೂ ಕನಿಷ್ಠ ಸೌಜನ್ಯದ ವ್ಯಕ್ತಿಗಳಾಗಿ ಪ್ರವರ್ತಿಸಬೇಕು.
· ಒಂದೇ ಬಾಗಿಲಿನ ಬಸ್ಸುಗಳ ಒಳಹಿಂಭಾಗದಲ್ಲಿ ಸಾಕಷ್ಟು ಸ್ಥಳಾವಕಾಶವಿದ್ದರೂ ಜನ ಮುಂಭಾಗದಲ್ಲೇ ಜೋತುಬೀಳುತ್ತಾರೆ. ದೂರ ಪ್ರಯಾಣದವರು ಕೊನೇ ಸ್ಟಾಪಿಗೆ ಕಾಯುವವರು ದಯವಿಟ್ಟು ಹಿಂದೆ ಸರಿಯಿರಿ. ತ್ರಾಸದಾಯಕ ಪ್ರಯಾಣ ಮನಃಕ್ಲೇಶಕ್ಕೆ ಕಾರಣವಾಗುತ್ತದೆ.