ಅನಂತಮೂರ್ತಿಯವರನ್ನು ಗೆಲ್ಲಿಸಬೇಕು

ಅನಂತಮೂರ್ತಿಯವರನ್ನು ಗೆಲ್ಲಿಸಬೇಕು

ರಾಜ್ಯಸಭೆ ಎಂದರೆ ರಾಜಕೀಯ ಪುನರ್ವಸತಿ ಎಂಬ ಮಾತಿಗೆ ಸಾಕ್ಷ್ಯಗಳು ಸಿಗುತ್ತಲೇ ಬಂದಿವೆ. ಸಾರ್ವತ್ರಿಕ ಚುನಾವಣೆಯ ಹೊತ್ತಲ್ಲಿ ಪಕ್ಷಕ್ಕಾಗಿ ದುಡಿದವರು, ಟಿಕೆಟ್‌ ಸಿಗದೇ ಅಸಮಾಧಾನಗೊಂಡವರು, ಮತ ದಾರರಿಂದ ತಿರಸ್ಕೃತಗೊಂಡವರು, ಪಾರ್ಟಿ ಫಂಡ್‌ಗೆ ದೊಡ್ಡ ಮೊತ್ತ ಚೆಲ್ಲಿದವರು, ಮುಂದೆ ಮತ್ತೂ ಕೊಡುವೆನೆಂದು ಭರವಸೆ ಕೊಟ್ಟವರು... ಇಂಥವರಿಗೆಲ್ಲ ರಾಜಕೀಯ ಪುನರ್ವಸತಿ, ಪ್ರವೇಶ ತಾಣಗಳೆಂದರೆ ವಿಧಾನ ಪರಿಷತ್‌, ರಾಜ್ಯಸಭೆಗಳು. ಇದು ಎಲ್ಲರಿಗೂ ಗೊತ್ತಿರುವ ಸತ್ಯ.

ರಾಜ್ಯಸಭೆಗೆ ಈಗ ಚುನಾವಣೆ ಬಂದಿದೆ. ಆಯಾ ಪಕ್ಷಗಳು ತಮ್ಮ ಶಾಸಕರ ಬಲದ ಮೇಲೆ ದೇಶದ ಮೇಲ್ಮನೆಗೆ ಕೆಲವರನ್ನು ಕಳುಹಿಸಲಿದ್ದಾರೆ. ವಾಸ್ತವವಾಗಿ ಈ ಶಾಸಕರು ತಮ್ಮ ಕ್ಷೇತ್ರದ ಎಲ್ಲ ಮತದಾರರ ಪರವಾಗಿ ಮತ ಚಲಾಯಿಸಲಿದ್ದಾರೆ. ಅಂದರೆ ನಮ್ಮ ಪ್ರತಿನಿಧಿ ನಮ್ಮೆಲ್ಲರ ಮನಸ್ಸಾಕ್ಷಿಗೆ ಅನುಗುಣವಾಗಿ ಮತ ಹಾಕಬೇಕು. ಅಥವಾ ಆಯಾ ಶಾಸಕ ಆತನ ಕ್ಷೇತ್ರದ ಬಹುಸಂಖ್ಯಾಕ ಜನತೆ ಏನು ಹೇಳುತ್ತಾರೆ ಎಂದು ಗಮನದಲ್ಲಿಟ್ಟು ಮತ ಚಲಾಯಿಸಬೇಕು. ಅಂದರೆ ರಾಜ್ಯಸಭೆ ಚುನಾವಣೆಯ ಹೊತ್ತಲ್ಲಿ ಕೂಡ ಶಾಸಕ ಮತದಾರರ ಬಳಿ ಹೋಗಬೇಕಾಗುತ್ತದೆ. ಬಹುಸಂಖ್ಯಾತ ಮತದಾರರ ಒಲವು ಯಾರ ಕಡೆಗಿದೆ ಎಂದು ತಿಳಿದುಕೊಳ್ಳ ಬೇಕಾಗುತ್ತದೆ. ಅದಕ್ಕನುಗುಣವಾಗಿ ಮತ ಹಾಕಬೇಕಾಗುತ್ತದೆ. ಹಾಗಾದಾಗ ಮಾತ್ರ ಇದು ಪ್ರಜಾಪ್ರಭುತ್ವ ಎಂಬ ಮಾತಿಗೆ ಅರ್ಥ ಬರುತ್ತದೆ. ಶಾಸಕ ಸ್ಥಾನ ಅಂದರೆ ಏನು ಎಂದು ಗೊತ್ತಿರುವ ಯಾವುದೇ ಶಾಸಕ ಈ ವಿಷಯದಲ್ಲಿ, `ಹಾಗೆ ಮಾಡಬೇಕೆಂದು ಕಾನೂನಲ್ಲಿ ಹೇಳಿಲ್ಲ' ಎಂದು ತಪ್ಪಿಸಿಕೊಳ್ಳುವಂತಿಲ್ಲ. ಏಕೆಂದರೆ ಇಂಥ ಸಮಯದಲ್ಲಿ ತನ್ನ ಕ್ಷೇತ್ರದ ಜನರ ಅಭಿಪ್ರಾಯ ಕೇಳಬಾರದು ಎಂದೂ ಯಾವ ಕಾನೂನೂ ಹೇಳಿಲ್ಲ.

ಆದರೆ ಈಗ ಏನಾಗುತ್ತಿದೆ? ರಾಜ್ಯಸಭೆ ಚುನಾವಣೆ ಅಂದರೆ ಅದು ಶಾಸಕರಿಗೆ ಮಾತ್ರ ಸಂಬಂಧಿಸಿದ್ದು ಎಂಬ ವಾತಾವರಣವಿದೆ. ಶಾಸಕನಿಗೆ ತನ್ನ ಕ್ಷೇತ್ರದ ಜನತೆಯ ಅಭಿಪ್ರಾಯವಿರಲಿ, ಸ್ವತಃ ತನ್ನ ಆತ್ಮಸಾಕ್ಷಿಯ ಮತ ಹಾಕುವುದಕ್ಕೂ ಅವಕಾಶವಿಲ್ಲ. ಈಗಲೇ ನೋಡಿ. ಒಂದೆಡೆ ಆಂಧ್ರಪ್ರದೇಶ ಮೂಲದ, ಈ ನಾಡಿನ ಜನತೆಗೆ ಅಷ್ಟೇನೂ ಪರಿಚಿತರಲ್ಲದ ಉದ್ಯಮಿ ರಾಜೀವ್‌ ಚಂದ್ರಶೇಖರ್‌ ಇದ್ದಾರೆ. ಇನ್ನೊಂದೆಡೆ ನಾಡಿಗೆ ಜ್ಞಾನಪೀಠ ತಂದುಕೊಟ್ಟ, ವಿಚಾರವಾದಿ, ಚಿಂತಕ ಎಂದು ಎಲ್ಲರೂ ಒಪ್ಪುವ, ರಾಜ್ಯಸಭೆಗೆ ರಾಜ್ಯವನ್ನು ಪ್ರತಿನಿಧಿಸಲು ಅತ್ಯಂತ ಸೂಕ್ತ ವ್ಯಕ್ತಿ ಎಂದು ಬಹುತೇಕ ಜನರಿಗೆ ಅನಿಸುವ ಇದೇ ನಾಡಿನ ಸಾಹಿತಿ ಡಾ. ಯು. ಆರ್‌. ಅನಂತಮೂರ್ತಿ ಇದ್ದಾರೆ. ಸೂಕ್ತ ವ್ಯಕ್ತಿಗಳು ಆಡಳಿತಕ್ಕೆ ಬರಬೇಕು ಎಂಬ ಕಳಕಳಿ ರಾಜಕೀಯ ಪಕ್ಷಗಳಿಗಿದ್ದರೆ ಅವರು ಅನಂತಮೂರ್ತಿ ಅವರ ಬೆಂಬಲಕ್ಕೇ ನಿಲ್ಲಬೇಕಾಗುತ್ತದೆ. ಏಕೆಂದರೆ ಸಮರ್ಥರನ್ನು ಚುನಾಯಿಸಿ ಎಂದು ನಾಳೆ ಮತದಾರರಲ್ಲಿ ಕೇಳಲು ಆಗ ಮಾತ್ರ ಅವರಿಗೆ ನೈತಿಕ ಹಕ್ಕಿರುತ್ತದೆ. ಜನತೆಗೆ ಮಾದರಿಯಾಗಬಲ್ಲ ಇಂಥ ಅವಕಾಶವನ್ನು ಶಾಸಕರು ಬಳಸಿಕೊಳ್ಳಬೇಕಾಗುತ್ತದೆ. ಇಲ್ಲವಾದರೆ `ನೀವು ಎಂಥವರನ್ನು ಆರಿಸುತ್ತೀರಿ ಎಂದು ನಮಗೆ ಗೊತ್ತಿದೆ' ಎಂದು ಪ್ರಜ್ಞಾವಂತ ಜನ ನಾಳೆ ಇವರ ಮುಖಕ್ಕೆ ಹೊಡೆಯುವಂತೆ ಕೇಳಬಹುದು.

ಆದರೆ ಇಂಥ ಚಿಂತನೆಗಳು ವಾಸ್ತವವಾಗುವ ಕಾಲದ ಹತ್ತಿರವೂ ನಾವಿದ್ದಂತಿಲ್ಲ. ಅನಂತಮೂರ್ತಿ ಅವರ ಸ್ಪರ್ಧೆ ಇಂಥ ಒಂದು ಎಚ್ಚರವನ್ನು, ರಾಜಕೀಯ ಪಕ್ಷಗಳ ಹುಳುಕುಗಳನ್ನು ಜನತೆಯ ಎದುರು ಇಡತೊಡಗಿದೆ. ಅಷ್ಟರಮಟ್ಟಿಗೆ ಅವರ ಸ್ಪರ್ಧೆ ಸಾರ್ಥಕ. ಇಂಥ ಸಂದರ್ಭಗಳು ಎದುರಾದಾಗ ಶಾಸಕರ ಸ್ಥಿತಿ ಮಾತ್ರ ಮರುಕ ಹುಟ್ಟಿಸುತ್ತಿದೆ. ಅನಂತಮೂರ್ತಿಯವರನ್ನು ಆಯ್ಕೆ ಮಾಡಲು ಬೇಕಾದಷ್ಟು ಶಾಸಕರ ಬೆಂಬಲ ಖಂಡಿತ ಸಿಗಬಹುದು. ಆದರೆ ಅದು ಅವರೆಲ್ಲ ಆತ್ಮಸಾಕ್ಷಿಯ ಗೌಪ್ಯ ಮತದಾನ ಮಾಡಲು ಸಾಧ್ಯವಿದ್ದಾಗ ಮಾತ್ರ. ಆದರೆ ಪಕ್ಷವೆಂಬ ಭೂತ ಅವರೆದುರಿಗಿದೆ. ಕೆಲ ಶಾಸಕರನ್ನು ತೀರ ಖಾಸಗಿಯಾಗಿ ಮಾತನಾಡಿಸಿದರೆ ಅನಂತಮೂರ್ತಿ ಅವರ ಬಗ್ಗೆ ಪ್ರೀತಿಯಿಂದ ಮಾತನಾಡಬಹುದು. ನಿಜಕ್ಕೂ ಅಂಥವರು ಈ ನಾಡಿನ ಪ್ರತಿನಿಧಿಯಾಗಿ ರಾಜ್ಯಸಭೆಯಲ್ಲಿ ಇರಬೇಕು ಎನ್ನಬಹುದು. ಅವರಿಗೇ ಮತ ಹಾಕಬೇಕು ಎಂದೂ ಅನಿಸುವುದಾಗಿ ಹೇಳಬಹುದು. ಆದರೆ ಅವರು ಮಾತ್ರ ಅನಂತಮೂರ್ತಿ ವಿರುದ್ಧವೇ ಮತ ಚಲಾಯಿಸಬೇಕಾಗುತ್ತದೆ. `ನಾವೆಲ್ಲ ಪಕ್ಷದ ಶಿಸ್ತಿಗೆ ಬದ್ಧರಾದವರು. ನಮಗೆ ರಾಜಕೀಯದಲ್ಲಿ ಇನ್ನೂ ಬಹುಕಾಲ ಇರಬೇಕೆಂಬ ಆಸೆ ಇದೆ. ಪಕ್ಷದ ಆದೇಶದ ವಿರುದ್ಧ ಮತಹಾಕಿ ಪಕ್ಷದ್ರೋಹಿ ಅನಿಸಿಕೊಳ್ಳುವುದು ನನಗಿಷ್ಟವಿಲ್ಲ. ಹೀಗಾಗಿ ಮನಸ್ಸಿದೆಯೋ, ಇಲ್ಲವೋ ಪಕ್ಷ ಹೇಳಿದಂತೆ ನಡೆಯುತ್ತೇನೆ' ಎನ್ನಬಹುದು. ಹಾಗೆ ನೋಡಿದರೆ ವಾಸ್ತವ ಇದೇ ಅಲ್ಲವೇ?

ಹೌದಾದರೆ ನಮ್ಮ ಶಾಸಕರು, ಸ್ವತಃ ಪ್ರಜಾಪ್ರಭುತ್ವದಂತೆ ಮತದಾನದ ಹಕ್ಕನ್ನು ಸ್ವ ಇಚ್ಛೆಯಿಂದ ಚಲಾಯಿಸಲಾಗದವರು, ಪ್ರಜಾಪ್ರಭುತ್ವವನ್ನು ಕಾಪಾಡುತ್ತಾರೆ ಎಂದರೆ ನಂಬುವುದು ಹೇಗೆ? ಈ ನಾಡಿನ ಒಬ್ಬ ಹಿರಿಯ ಹಾಗೂ ಜನರ ಬಗ್ಗೆ ಪ್ರೀತಿ ಇರುವ ವ್ಯಕ್ತಿಯ ಬದಲು ಬೇರೆ ರಾಜ್ಯದ ದುಡ್ಡಿದ್ದವರೊಬ್ಬರ ಬೆಂಬಲಕ್ಕೆ ನಿಂತವರು ಈ ರಾಜ್ಯದ ಹಿತ ಕಾಪಾಡುತ್ತಾರೆ ಎಂದು ನಂಬುವುದು ಮೂರ್ಖತನವಲ್ಲದೇ ಬೇರೇನಲ್ಲ.
ಅನಂತಮೂರ್ತಿ ಅವರ ಸ್ಪರ್ಧೆಯಿಂದ ರಾಜಕೀಯ ಪಕ್ಷಗಳ ಕೆಲ ಆಂತರಿಕ ಆಸೆಗಳೂ ಬೆತ್ತಲಾಗತೊಡಗಿವೆ. ಆ ಆಸೆಗಳು ಬಯಲಾದವೆಂದೇ ಅನಂತಮೂರ್ತಿ ಅವರ ಕುರಿತು ಟೀಕೆಗಳೂ ಬರತೊಡಗಿವೆ. ಕೊನೆಹಂತದಲ್ಲಿ ಈ ಸ್ಪರ್ಧೆ ಪ್ರಕಟವಾಗಿದ್ದು ಆ ಪಕ್ಷಗಳಿಗೆ ತೀರ ಇರಿಸು ಮುರಿಸು ಉಂಟುಮಾಡಿದೆ. ಅವರು ಕನ್ನಡಕ್ಕೆ ಏನು ಮಾಡಿದ್ದಾರೆ ಎಂದೆಲ್ಲ ಕೇಳತೊಡಗಿದ್ದಾರೆ. ಅಂಥವರನ್ನು ರಾಜ್ಯಸಭೆಗೆ ಕಳಿಸೋದಕ್ಕೆ ಆಗುತ್ತಾ? ಎಂದು ಕೇಳಿದ್ದಾರೆ. ಆದರೆ ರಾಜೀವ ಚಂದ್ರಶೇಖರ್‌ ಕನ್ನಡಕ್ಕೆ ಮಾಡಿರುವ ಸೇವೆಗಿಂತ ಅನಂತಮೂರ್ತಿ ಅವರ ಕೊಡುಗೆ ಖಂಡಿತವಾಗಿಯೂ ಜಾಸ್ತಿಯಿದೆ. ಹೊರ ರಾಜ್ಯದ ಉದ್ಯಮಪತಿಯೊಬ್ಬರನ್ನು ರಾಜ್ಯಸಭೆಗೆ ಕಳಿಸಲು ಸಾಧ್ಯವಾಗುವುದಾದರೆ ಅನಂತಮೂರ್ತಿ ಯಾಕಾಗುವುದಿಲ್ಲ? ಅವರು ನಿಮಗೆ ದುಡ್ಡು ಕೊಡುವುದಿಲ್ಲ ಎಂದೇ? ಅವರು ನಿಮ್ಮ ಪಕ್ಷದ ಸದಸ್ಯ ಅಲ್ಲವೆಂದೇ? ಅಥವಾ ಇನ್ನಾವುದೋ ಪ್ರಬಲ ಕಾರಣವಿದೆಯೇ?

ಶಾಸಕರು ಈಗಲಾದರೂ ಪಕ್ಷಕ್ಕೆ ಮಾರಿಕೊಂಡ ಆತ್ಮಸಾಕ್ಷಿಯನ್ನು ವಾಪಸ್‌ ಪಡೆಯಲು ಪ್ರಯತ್ನಿಸುವುದು ಜಾಣತನ. ಪಕ್ಷಗಳೂ ಕೂಡ ವಿಪ್‌ ಹೆಸರಲ್ಲಿ ಶಾಸಕರ ಆತ್ಮಸಾಕ್ಷಿ ಕಸಿದುಕೊಳ್ಳುವ ಪ್ರಜಾಪ್ರಭುತ್ವ ವಿರೋಧಿ ನಿಲುವಿಂದ ಈ ವಿಷಯದಲ್ಲಾದರೂ ಹೊರನಿಂತು ಮುತ್ಸದ್ದಿತನ ತೋರುವ ಅಗತ್ಯವಿದೆ. ರಾಜ್ಯಸಭೆಗೆ ಅನಂತಮೂರ್ತಿ ಅವರು ಆಯ್ಕೆಯಾಗುವಂತೆ ನೋಡಿಕೊಂಡರೆ ಅದು ಶಾಸಕ ಸ್ಥಾನಕ್ಕೆ ತಂದುಕೊಡುವ ದೊಡ್ಡ ಗೌರವ.
(21-03-2006 ಉದಯವಾಣಿಯಲ್ಲಿಯೂ ಈ ಲೇಖನ ಪ್ರಕಟವಾಗಿದೆ)

ರಾಜಶೇಖರ ಜೋಗಿನ್ಮನೆ

Rating
No votes yet

Comments