ಅನಂತ ಹಾಗು ತಲೆಗೆ ಹಚ್ಚುವ ತೈಲ

ಅನಂತ ಹಾಗು ತಲೆಗೆ ಹಚ್ಚುವ ತೈಲ

 ಅನಂತ ಹಾಗು ತಲೆಗೆ ಹಚ್ಚುವ ತೈಲ

====================

ಅನಂತ!

 

ಸ್ವಲ್ಪ ಸಹಜವಲ್ಲದ ವ್ಯಕ್ತಿತ್ವ , ದಡ್ಡನೆಂದು ಆಡಿಕೊಳ್ಳುವಂತಿಲ್ಲ ಬುದ್ದಿವಂತನೆಂದು ಹೊಗಳುವಂತಿಲ್ಲ. ಸ್ವಲ್ಪ ಶ್ರೀನಾಥರ ನೆಂಟ ಸುಬ್ಬನ ತರ ಅಂದುಕೊಳ್ಳಿ.  ಮದುವೆಯಾಗಿತ್ತು , ಸಂಸಾರ ಬೆಳೆಯಲು ಬುದ್ದಿವಂತಿಕೆ ಏನು ಬೇಕಿಲ್ಲವಲ್ಲ ಮಕ್ಕಳು ಆಗಿತ್ತು. ಈಗ ಅನಂತ ಚಿಕ್ಕವನೇನಲ್ಲ ಅವನು ಸುಮಾರು ಐವತ್ತರ ಆಸುಪಾಸು. ಬುದ್ದಿ ಮಾತ್ರ ಕೆಲವೊಮ್ಮೆ ಚಿಕ್ಕ ಹುಡುಗನ ತರ. 

 

ಮಗಳು ಕಾಲೇಜು ಮುಗಿಸುತ್ತಿದ್ದಳು ವಯಸಿಗೆ ಸಹಜವೆಂಬಂತೆ ಮುಖ ತಲೆಯ ಕೂದಲು ಉಗುರು ಬಣ್ಣ ಎಲ್ಲವು ಸಹಜ ಆಸೆಗಳೆ. ಅವಳ ಗೆಳತಿಯೊಬ್ಬಳು ತಲೆಗೆ ಹಚ್ಚುವ ತೈಲ ಒಂದನ್ನು ತಂದು ಕೊಟ್ಟಳು ಕೇರಳದಲ್ಲಿ ತಯಾರಿಸಿರುವುದು. ಚಿಕ್ಕ ಬಾಟಲು ಸುಮಾರು ನೂರು ಮಿಲಿಲೀಟರು ಸಹ ಇಲ್ಲದ್ದಿದ್ದರು ನಾನೂರು ರೂಪಾಯಿ. ದಿನ ತಲೆಗೆ ಹಚ್ಚಿದರೆ ಹದಿನೈದು ದಿನದಲ್ಲಿ. ಕೂದಲು ಅಕ್ಕಮಹಾದೇವಿಯಂತೆ ಉದ್ದುದ್ದ ಆಗುವದೆಂದು ನಂಬಿಸಿದ್ದಳು.

 

ಸರಿ ಅನಂತನಿಗೆ ಏಕೊ ಮಗಳು ಸ್ಟೂಲ್ ಮೇಲಿಟ್ಟಿದ್ದ ಬಾಟಲು ಕಣ್ಣಿಗೆ ಬಿತ್ತು, ರೂಮಿನಲ್ಲಿದ್ದ ಮಗಳಿಗೆ ಕೂಗಿ ಕೇಳಿದ 

 

"ಏನಮ್ಮ ಈ ಎಣ್ಣೆ ತಲೆಗೆ ಹಚ್ಚುವುದು ತಾನೆ ನಾನು ಹಚ್ಚಬಹುದ, ನನಗೆ ಉಷ್ಣ ಜಾಸ್ತಿ ಆಗಿಬಿಟ್ಟಿದೆ" 

 

ಮಗಳು ಹೇಳಿದಳು

 

"ಹೌದಪ್ಪ ತಲೆಗೆ ಹಚ್ಚುವುದು. ಹೇಗೆ ನಿನಗು ಬಾಲ್ಡ್ ಆಗಿಹೋಗಿದೆ, ಸುಮ್ಮನೆ ಹಚ್ಚಿನೋಡು ಕೂದಲೆಲ್ಲ ಕಪ್ಪಗೆ ಬೆಳೆಯಬಹುದು"

 

ಜೊತೆಗೆ ನಗು ಬೇರೆ.

 

ಸರಿ ಅನಂತ ಬಾಟಲಿ ಬಿರಡೆ ತೆಗೆದ, ವಾಸನೆ ಎಂತದೊ ಘಮಘಮ ಅನ್ನುತಿದೆ ಅಂದುಕೊಂಡವನೆ ತಲೆಗೆ ಚೆನ್ನಾಗಿ ಹಚ್ಚಿದ್ದ, ಹರಳೆಣ್ಣೆ ಹಚ್ಚುವಂತೆ. ನಂತರ ಕೈ ಕಡೆ ನೋಡಿದ, ಕೈಗೆಲ್ಲ ಎಣ್ಣೆ ಮೆತ್ತಿತ್ತು, ನೆತ್ತಿಯ ಮೇಲಿನಿಂದ ಮುಖದ ಮೇಲೆಲ್ಲ ಇಳಿಯುತ್ತಿತ್ತು. ಸರಿ ಎಣ್ಣೆ ಚೆನ್ನಾಗಿರುವಂತಿದೆ, ಆಮೇಲೆ ಸೀಗೆ ಪುಡಿ ಹಚ್ಚಿ ನೀರು ಹಾಕಿದರಾಯಿತು ಅಂದುಕೊಂಡವನೆ ಕೈಗೆಲ್ಲ ಅದನ್ನು ಚೆನ್ನಾಗಿ ಹಚ್ಚಿದ, ಹಾಗೆ ಸ್ವಲ್ಪ ಎದೆಗೆ ಕಾಲಿಗೆ, ಹಚ್ಚಿ ಉಳಿದದ್ದು ಮುಖಕ್ಕು ಚೆನ್ನಾಗಿ ಹಚ್ಚಿ ಉಜ್ಜಿದ.

 

 ಹೊರಗೆ ಏತಕ್ಕೊ ಬಂದ ಮಗಳು,

'ಅಪ್ಪಾ......' 

ಎಂದು ಕೂಗಿಕೊಂಡಳು

 

"ಏನಾಯ್ತು ಏಕೆ ಹಾಗೆ ಕೂಗಿಕೊಳ್ತಿದಿ " 

ಎನ್ನುತ್ತ ಅನಂತನ ಹೆಂಡತಿ, ಅಂದರೆ ಪದ್ಮಾ ಹೊರಬಂದಳು

 

"ಅಮ್ಮ ,  .... ಅಪ್ಪಾನ್ನ ನೋಡು ಕೂದಲು ಬೆಳೆಯುವ ಎಣ್ಣೆಯನ್ನು ಮೈಗೆ ಮುಖಕ್ಕೆಲ್ಲ ಹಚ್ಚಿಕೊಂಡಿದ್ದಾರೆ, ಈಗ ಏನು ಗತಿ" ಎಂದಳು

 

ಅವನ ಹೆಂಡತಿ ಸಹ ಗಾಭರಿಯಾಗಿ 

"ಇದೇನ್ರಿ ಹೀಗೆ ಮೈಗೆಲ್ಲ ಹಚ್ಚಿಕೊಳ್ತೀದ್ದೀರಿ " ಎಂದರೆ 

 

"ಇವಳೆ ಹೇಳಿದಳಲ್ಲೆ ತಲೆಗೆ ಹಚ್ಚುವ ಎಣ್ಣೆ ಅಂತ, ನಾನು ಕೊಬ್ಬರಿ ಎಣ್ಣೇ, ತರ ಅಂದುಕೊಂಡು ಸ್ವಲ್ಪ ಮೈಗೆಲ್ಲ ಹಚ್ಚಿಕೊಂಡೆ ಈಗ ಏನಾಯ್ತು ಬಿಡು, ಸೀಗೆಪುಡಿ  ಹಾಕಿ ತೊಳೆದುಬಿಡುವೆ" ಎಂದ ಅನಂತ

 

"ಅಪ್ಪ ಹಾಗೆಲ್ಲ ಸೀಗೆ ಪುಡಿ ಹಾಕುವಂತಿಲ್ಲ, ಇದು ಆಯುರ್ವೇಧಿಕ್ ಕಂಪನಿಯದು, ಯಾವುದಾದರು ಶಾಂಪು ಹಾಕಿ ಸ್ನಾನ ಮಾಡು. ಅಲ್ಲದೆ ಒಂದು ಸಾರಿಗೆ ಇದನ್ನು ಒಂದು ಹನಿಯಷ್ಟು ಮಾತ್ರ ಬೆರಳಲ್ಲಿ ಅದ್ದಿ ತಲೆಗೆ ಹಚ್ಚಿ ಉಜ್ಜಬೇಕು ನೀನು ನೋಡಿದರೆ ಹರಳೆಣ್ಣೆ ಅನ್ನುವಂತೆ  ಥೈಲದಲ್ಲೆ ಸ್ನಾನ ಮಾಡಿದ್ದಿ " ಎಂದಳು ಮಗಳು

 

"ಸರಿ ಬೆಳಗ್ಗೆ ಎದ್ದು ಹಾಗೆ ಮಾಡಿದರಾಯ್ತು ಬಿಡು" 

 

ಎನ್ನುತ್ತ  ಅಮ್ಮ ಮಗಳು ಹೇಳಿದರು ಕೇಳದೆ,  ಹಾಗೆ ಮಲಗಿಬಿಟ್ಟ ರಾತ್ರಿ 

 

-----------------------------------

 

ಬೆಳಗ್ಗೆ ಅನಂತನ ಮಗಳು ರುಕ್ಕು ಮಲಗಿರುವಾಗಲೆ ಅವಳ ಅಮ್ಮ ಪದ್ಮಾ , ಬಚ್ಚಲು ಮನೆಯ ಹತ್ತಿರದಿಂದ 'ಕಿಟಾರ್ 'ಎಂದು ಜೋರಾಗಿ ಕಿರುಚಿದಂತೆ ಆಯ್ತು. ಎನಾಯಿತೊ ಎಂದು ಗಾಭರಿಯಿಂದ ಎದ್ದು ಓಡಿದಳು. ಅಮ್ಮನ ಪಕ್ಕ ನಿಂತು ನೋಡುತ್ತಾಳೆ

 

ಬಚ್ಚಲು ಮನೆಯಿಮ್ದ ದೊಡ್ಡ ಗಾತ್ರದ ಕರಡಿ ಹೊರಬರುತ್ತಿದೆ!

 

ಇಬ್ಬರು ಮತ್ತೊಮ್ಮೆ ಕಿರುಚುವ ಮುಂಚೆ ಒಳಗಿನಿಂದ ಬಂದ ಕರಡಿ ಮಾತನಾಡಿತು

 

"ಇದೇನ್ರೆ ಬೆಳೆಗ್ಗೆ ಎದ್ದು ಹೀಗೆ ನನ್ನ ನೋಡ್ತಾ ನಿಂತುಬಿಟ್ರಿ" !

 

ಅಮ್ಮ ಮಗಳಿಗೆ ಅರ್ಥವಾಯಿತು, ಅದು ಅನಂತ ಎಂದು. 

 

ಅವರಿಗೆ ಏನುಹೊಳೆಯಲಿಲ್ಲ, ಮಗಳಿಗೆ ಕಡೆಗೆ ಹೊಳೆಯಿತು, ಬಹುಷ ಕೇರಳದ ಆ ತೈಲವನ್ನು ಯದ್ವಾತದ್ವಾ ಹಚ್ಚಿದ್ದರಿಂದ ಅಪ್ಪ ಕರಡಿಯಾಗಿಬಿಟ್ಟಿದ್ದಾನೆ , ಮೈಕೈ ಮುಖದ ಮೇಲೆಲ್ಲ ಕೂದಲು ಉದ್ದಕ್ಕೆ ಬೆಳೆದು ಕರಡಿಯಂತೆ ಕಾಣುತ್ತಿದ್ದಾರೆ, ಈಗ ಏನಪ್ಪ ಮಾಡೋದು, ಇದಕ್ಕೆ ಪ್ರತಿಯಾಗಿ ಕೂದಲು ಉದರುವ ಯಾವುದಾದರು ತೈಲವಿದೆ ಎಂದು ಗೆಳತಿಯನ್ನೆ ಕೇಳಬೇಕೆಂದು ಹೊರಟಳು. 

 

ಮುಗಿಯಿತು.

 

 

Rating
No votes yet

Comments

Submitted by nageshamysore Sun, 08/04/2013 - 05:13

In reply to by partha1059

ಪಾರ್ಥರೆ ಹೇಗಾದರೂ ಓದಿಕೊಳ್ಳುವ ಮಾತಿರಲಿ, ಮೊದಲು ಆ ತೈಲವನ್ನು ಒಂದೆರೆಡು ಹನಿ ಇತ್ತ ರವಾನಿಸುವಿರಾ? ಅನಂತವಾಗಿ ಬೆಳೆಯದಿದ್ದರೂ ಚಿಂತೆಯಿಲ್ಲ -  ಕೊಂಚವಾದರೂ ಬೊಕ್ಕ ತಲೆ ಚೊಕ್ಕವಾದೀತೇನೊ ಪ್ರಯತ್ನಿಸಿ ನೋಡಬಹುದು...!

Submitted by partha1059 Sun, 08/04/2013 - 10:44

In reply to by nageshamysore

ಖಂಡೀತ‌ ನಾನು ಸಹಾಯ‌ ಮಾಡಬಲ್ಲೆ ! ಈಗ ತಿಳಿದಿರುವಂತೆ ಅನಂತನೆ ಆ ತೈಲ‌ ಕಂಪನಿಯ‌ ಏಜೆನ್ಸಿಗೆ ಹಾಕಿಕೊಂಡಿದ್ದಾನೆ , ನೀವು ಸೀದಾ ಅವನಿಗೆ ನಾನೂರು ರುಪಾಯಿ ಡಿ.ಡಿ/ಎಮ್ ಓ ಕಳಿಸಿಬಿಡಿ ಮರುಟಪಾಲಿಗೆ ನಿಮಗೆ ತೈಲ್ಲ ಗ್ಯಾರಂಟಿ
ವಿಳಾಸ‌ :
ಅನಂತ‌
'ಲೇಖನ‌ ವಿಭಾಗ‌'
ಸಂಪದ‌
ಬೆಂಗಳೂರು

Submitted by makara Sun, 08/04/2013 - 09:24

ಪಾರ್ಥ ಸರ್,
ಆ ತೈಲದಿಂದ ಮೈತುಂಬಾ ಕೂದಲು ಬಂದು ಅನಂತ ಕರಡಿಯಾದನೋ ಇಲ್ಲಾ ಗೊತ್ತಿಲ್ಲ ಆದರೆ ಅದನ್ನು ಮಾರುವ ತೈಲ ಕಂಪನಿಗಳಂತೂ ನಮ್ಮನ್ನು ಕೂದಲಿಲ್ಲದ ಬಕರಾ ಮಾಡುತ್ತಿವೆ :))
ಇಂತಹ ಕಥೆಯ ಆಲೋಚನೆ ಬರಲು ನೀವೂ ಆ ತೈಲವನ್ನು ಹಚ್ಚಿಕೊಂಡು ಇರುವ ಕೂದಲುಗಳನ್ನು ಕಳೆದುಕೊಂಡಿಲ್ಲವಷ್ಟೇ? :))
ವಂದನೆಗಳೊಂದಿಗೆ, ಶ್ರೀಧರ್ ಬಂಡ್ರಿ