ಅನ್ವೇಷಣೆ ಭಾಗ ೧೧
ಯಾವಾಗ ವಾರಾಂತ್ಯ ಆಗುತ್ತದೋ ಯಾವಾಗ ಉಳಿದವರನ್ನು ಭೇಟಿ ಮಾಡುತ್ತೇನೋ ಎಂದು ಚಡಪಡಿಸುತ್ತಿದ್ದಾಗ ಥಟ್ಟನೆ ಒಂದು ವಿಷಯ ತಲೆಗೆ ಬಂತು. ಜಾನಕಿ ಸದಾಕಾಲ ತನಗೆ ಬಹಳ ಆಪ್ತ ಗೆಳತಿ ಎಂದು ಒಬ್ಬಳನ್ನು ಹೇಳುತ್ತಿರುತ್ತಾಳೆ, ಅವಳ ಹೆಸರು.... ಹೆಸರು... ಹಾ ಮಾಧುರಿ.... ಜಾನಕಿ ಕಾಣೆಯಾದಾಗಿನಿಂದ ಮಾಧುರಿ ಒಂದು ದಿನವೂ ಜಾನಕಿಯ ಬಗ್ಗೆ ವಿಚಾರಿಸಿಲ್ಲ, ಜಾನಕಿ ಸತ್ತಾಗಲೂ ಸತ್ತ ನಂತರವೂ ಅವಳು ಒಮ್ಮೆಯೂ ಬಂದಿಲ್ಲ. ಅವಳಿಂದ ಏನಾದರೂ ಮಾಹಿತಿ ಸಿಗಬಹುದೇನೋ ಎಂದುಕೊಂಡು ಕೂಡಲೇ ಅವಳನ್ನು ಸಂಪರ್ಕಿಸಲು ಅವಳ ನಂಬರ್ ಗೆ ಕರೆ ಮಾಡಿದರೆ, ಅವಳ ಫೋನ್ ಸ್ವಿಚ್ ಆಫ್ ಎಂದು ಬರುತ್ತಿತ್ತು. ಮತ್ತೆ ಜಾನಕಿಯ ಮನೆಗೆ ಕರೆಮಾಡಿ ಮಾಧುರಿ ಮನೆಯ ಅಡ್ರೆಸ್ ಗೊತ್ತಿದ್ದರೆ ಕೊಡಿ ಎಂದು ಕೇಳಿದ್ದಕ್ಕೆ, ಇಲ್ಲಪ್ಪ ಅವಳು ಯಾವುದೋ ಪೀಜಿಯಲ್ಲಿ ಇರುವುದು... ಈಗ ಯಾಕೆ ಅವಳ ಮನೆ ಅಡ್ರೆಸ್ಸ್?
ಇಲ್ಲ...ಅದೂ ಜಾನಕಿ ಕಾಣೆ ಆದಾಗಿನಿಂದ ಮಾಧುರಿಯ ಸುದ್ದಿಯೇ ಇಲ್ಲ, ಜಾನಕಿ ಹೋದಾಗಲೂ ಅವಳು ಬಂದಿರಲಿಲ್ಲ ಅಲ್ಲವ? ಅದಕ್ಕೆ ಅವಳಿಂದ ಏನಾದರೂ ಮಾಹಿತಿ ಸಿಗಬಹುದೇನೋ ಎಂದುಕೊಂದು ಅವಳ ನಂಬರ್ ಗೆ ಪ್ರಯತ್ನಿಸಿದರೆ ಸ್ವಿಚ್ ಆಫ್ ಎಂದು ಬರುತ್ತಿತ್ತು. ಅದಕ್ಕೆ ಕೇಳಿದೆ ಅಷ್ಟೇ.
ಅರ್ಜುನ್, ಅವಳು ಅವಳ ಅಜ್ಜಿ ತೀರಿಕೊಂಡರು ಎಂದು ಅವಳ ಸ್ವಂತ ಊರಾದ ರಾಜಾಸ್ಥಾನ್ ಗೆ ಹೋಗಿದ್ದಾಳೆ. ಜಾನಕಿ ಕಾಣೆಯಾದ ಎರಡು ದಿನಕ್ಕೆ ಅವಳು ಅಲ್ಲಿಗೆ ಹೋದಳು, ಮತ್ತೆ ಜಾನಕಿ ಹೋದಾಗಲೂ ಫೋನ್ ಮಾಡಿದ್ದಳು. ಅವಳಿಂದ ನಿನಗೇನೂ ಮಾಹಿತಿ ಸಿಗುವುದಿಲ್ಲ. ಅರ್ಜುನ್ ನೀನು ಅನಾವಶ್ಯಕವಾಗಿ ಎಲ್ಲರ ಮೇಲೂ ಅನುಮಾನ ಪಡುತ್ತಿದ್ದೀಯ ಎಂದೆನಿಸುತ್ತಿದೆ. ಎಲ್ಲಿ ನೀನು ಸಂಕಟದಲ್ಲಿ ಸಿಲುಕುತ್ತೀಯೋ ಎಂಬ ಭಯ ಕಾಡುತ್ತಿದೆ.
ಅಂಕಲ್ ನೀವೇನೂ ಯೋಚನೆ ಮಾಡಬೇಡಿ.... ಮಾಧುರಿ ಬಗ್ಗೆ ಮಾಹಿತಿಗೆ ಧನ್ಯವಾದಗಳು ಎಂದು ಕರ್ ಕಟ್ ಮಾಡಿ ವಾರಾಂತ್ಯಕ್ಕೆ ಕಾಯುತ್ತಿದ್ದೆ. ಶನಿವಾರ ಬೆಳಿಗ್ಗೆಯೇ ಅಡ್ರೆಸ್ ಶೀಟ್ ಇಟ್ಟುಕೊಂಡು ಸಂಪರ್ಕಿಸಲು ಸಾಧ್ಯವಾಗದವರ ಜಾಡನ್ನು ಹುಡುಕಿ ಹೊರಟಾಗ ಎಲ್ಲಿಯೂ ನನಗೆ ಬೇಕಾದ ಮಾಹಿತಿ ದಕ್ಕಿರಲಿಲ್ಲ. ಭಾನುವಾರ ಸಂಜೆಯವರೆಗೂ ಹೆಚ್ಚು ಕಡಿಮೆ ಎಲ್ಲರನ್ನೂ ಸಂಪರ್ಕಿಸಿದ್ದೆ. ಇನ್ನು ಕೊನೆಯದಾಗಿ ಉಳಿದಿದ್ದು ಒಬ್ಬಳು ಹುಡುಗಿ. ಅವಳ ಮನೆಯ ಬಳಿ ಬಂದಾಗ ಮನೆಯಲ್ಲಿ ಯಾರೂ ಇರಲಿಲ್ಲ. ಪಕ್ಕದ ಮನೆಯವರನ್ನು ಕೇಳಿದಾಗ ಆ ಹುಡುಗಿ ಶೀಲಾಗೆ ಹುಷಾರಿಲ್ಲದ ಕಾರಣ ಆಸ್ಪತ್ರೆಗೆ ಅಡ್ಮಿಟ್ ಮಾಡಿರುವುದಾಗಿ ತಿಳಿಸಿದರು. ಯಾವ ಆಸ್ಪತ್ರೆ ಎಂದು ತಿಳಿದುಕೊಂಡು ಆಸ್ಪತ್ರೆಗೆ ಬಂದಾಗ ಶೀಲಾ ಪತಿ ಸಹದೇವ್ ಸಿಕ್ಕರು.
ಅವರಿಗೆ ಪೂರ್ತಿ ವಿಷಯವನ್ನು ಹೇಳದೆ ಹೀಗೆ ಜಾನಕಿ ಬಗ್ಗೆ ಸ್ವಲ್ಪ ಮಾತಾಡಬೇಕಿತ್ತು ಎಂದು ಹೇಳಿ ಶೀಲಾಳನ್ನು ಭೇಟಿ ಮಾಡಿ ಮೊದಲು ಅವರ ಆರೋಗ್ಯದ ವಿಷಯವನ್ನು ವಿಚಾರಿಸೋಣ ಎಂದು ಕೇಳಿದಾಗ ಅವರು ಹೇಳಿದ ಮಾಹಿತಿ ಕೇಳಿ ಆಶ್ಚರ್ಯ ಎನಿಸಿತು. ಸರಿಯಾಗಿ ಜಾನಕಿ ಆಸ್ಪತ್ರೆಗೆ ಅಡ್ಮಿಟ್ ಆದ ದಿನವೇ ಶೀಲಾ ಕೂಡ ಅದೇ ರೀತಿಯ ಸಮಸ್ಯೆಯಿಂದ ಆಸ್ಪತ್ರೆಗೆ ಅಡ್ಮಿಟ್ ಆಗಿದ್ದಳು. ಶೀಲಾಗೂ ಕೂಡ ಯಾರೋ ಮೈಯೆಲ್ಲಾ ಹಿಂಡಿದಂಥಹ ಅನುಭವವಾಗಿತ್ತು, ರಾತ್ರಿ ಇಡೀ ವಾಂತಿ ಆಗಿ ಎರಡು ದಿನ ಆದಮೇಲೆ ಡಿಸ್ಚಾರ್ಜ್ ಆಗಿದ್ದಾಗಿ ತಿಳಿಸಿದಳು. ಈಗ ಮತ್ತೆ ಜ್ವರ ಬಂದಿರುವ ಕಾರಣ ಅಡ್ಮಿಟ್ ಆಗಿರುವುದಾಗಿ ತಿಳಿಸಿದಳು.
ನೀವು ಆಸ್ಪತ್ರೆಗೆ ಅಡ್ಮಿಟ್ ಆದ ದಿನ ನಿಮ್ಮನ್ನು ಹುಡುಕಿಕೊಂಡು ಯಾರಾದರೂ ಅಪರಿಚಿತರು ಮನೆಗೆ ಬಂದಿದ್ದು, ಅಥವಾ ನಿಮಗೆ ಯಾರಾದರೂ ಬೆದರಿಕೆ ಕರೆಗಳನ್ನು ಮಾಡಿದ್ದು, ಹೆದರಿಸಿದ್ದು ಆ ರೀತಿ ಏನಾದರೂ ಘಟನೆ ನಡೆದಿದ್ದು ನೆನಪಿದೆಯ ಎಂದು ಕೇಳಿದ್ದಕ್ಕೆ, ಇಲ್ಲ ಅರ್ಜುನ್ ಆ ರೀತಿ ಯಾವುದೇ ಘಟನೆಗಳು ಸಂಭವಿಸಿಲ್ಲ. ಹಾ.... ಆದರೆ ಒಂದು ವಿಷಯ ನಡೆಯಿತು, ಅಂದಿನ ದಿನ ಬೆಳಿಗ್ಗೆ ನಮ್ಮ ಯಜಮಾನರು ಊಟ ಮಾಡಿ ಆಫೀಸಿಗೆ ಹೋಗಿದ್ದರು. ಯಾರೋ ಇಬ್ಬರು ಅಪರಿಚಿತರು ಬಂದಿದ್ದರು, ತಾವು ವಾಟರ್ ಸಪ್ಲೈ ಬೋರ್ಡ್ ನಿಂದ ಬಂದಿರುವುದು, ನಿಮ್ಮ ಮನೆಯ ವಾಟರ್ ಲೈನ್ ಲೀಕ್ ಆಗುತ್ತಿದೆ ಎಂದು ಕಂಪ್ಲೇಂಟ್ ಬಂದಿದೆ. ಒಮ್ಮೆ ಚೆಕ್ ಮಾಡಬೇಕು ಎಂದು ಹೇಳಿದರು. ಆದರೆ ನಾವು ಯಾವುದೇ ಕಂಪ್ಲೇಂಟ್ ಕೊಟ್ಟಿರದಿದ್ದರಿಂದ ಅವರಿಗೂ ಅದನ್ನೇ ಹೇಳಿದೆ.
ಆದರೆ ಅವರು ಹೇಗಿದ್ದರೂ ಬಂದಿದ್ದೇವೆ, ಒಂದು ಸಲ ಚೆಕ್ ಮಾಡಿ ಹೋಗುತ್ತೇವೆ ಎಂದು ಮನೆಯ ಹಿಂಬದಿ ಇದ್ದ ವಾಟರ್ ಮೀಟರ್ ಪರೀಕ್ಷಿಸಿ ಹತ್ತು ನಿಮಿಷದ ನಂತರ ಹೊರಟು ಹೋದರು. ಆದರೆ ಅವರೇನೂ ನನಗೆ ತೊಂದರೆ ಮಾಡಲಿಲ್ಲ.
ತುಂಬಾ ಥ್ಯಾಂಕ್ಸ್ ಶೀಲಾ ಅವರೇ ನಿಮ್ಮ ಮಾಹಿತಿಗೆ, ಅಗತ್ಯ ಬಿದ್ದರೆ ನಾನೊಮ್ಮೆ ನಿಮ್ಮ ಮನೆಯ ವಾಟರ್ ಮೀಟರ್ ಇದ್ದ ಸ್ಥಳ ನೋಡುತ್ತೇನೆ. ಸರಿ ನಾನಿನ್ನು ಹೊರಡುತ್ತೇನೆ ಎಂದು ಆಚೆ ಬಂದು ಜಾನಕಿ ಮನೆಗೆ ಫೋನ್ ಮಾಡಿ, ಜಾನಕಿಗೆ ಹುಷಾರಿಲ್ಲದ ದಿನ ಮನೆಗೆ ಯಾರಾದರೂ ವಾಟರ್ ಸಪ್ಲೈ ಬೋರ್ಡ್ ನವರು ಬಂದಿದ್ದಾರ ಎಂದು ಕೇಳಿದ್ದಕ್ಕೆ... ಹೌದು ಬಂದಿದ್ದರು. ನಾವು ಏನೂ ಕಂಪ್ಲೇಂಟ್ ಕೊಟ್ಟಿರದಿದ್ದರೂ ಸುಮ್ಮನೆ ಚೆಕ್ ಮಾಡಿ ಹೋಗುತ್ತೇವೆ ಎಂದು ಚೆಕ್ ಮಾಡಿ ಹೋದರು. ಅದು ಸರಿ ಯಾಕಪ್ಪ ಆ ವಿಷಯ ಕೇಳುತ್ತಿದ್ದೀಯ? ಅದು ಸರಿ ಅವತ್ತು ಅವರು ಬಂದಿದ್ದರು ಎಂದು ನಿನಗೆ ಹೇಗೆ ಗೊತ್ತಾಯಿತು?
ಅಂಕಲ್ ಅದೆಲ್ಲಾ ನಿಧಾನವಾಗಿ ಹೇಳುತ್ತೇನೆ ಎಂದು ಕರೆ ಕಟ್ ಮಾಡಿ ಅಲ್ಲಿಂದ ಸೀದಾ ಶೀಲಾ ಮನೆಯ ಹಿಂಭಾಗಕ್ಕೆ ಬಂದು ವಾಟರ್ ಮೀಟರ್ ಇದ್ದ ಜಾಗದಲ್ಲಿ ಏನಾದರೂ ಅನುಮಾನಾಸ್ಪದ ವಸ್ತುಗಳು ಇದೆಯಾ ಎಂದು ಚೆಕ್ ಮಾಡಿದೆ. ಆದರೆ ಅಲ್ಲೇನೂ ಆ ರೀತಿಯ ವಸ್ತುಗಳು ಕಾಣಲಿಲ್ಲ. ಆದರೆ ಕೆಲವು ವಸ್ತುಗಳನ್ನು ನೋಡಿ ಅನುಮಾನ ಬಂದು ಮತ್ತೆ ಶೀಲಾಗೆ ಕರೆ ಮಾಡಿ, ಶೀಲಾ ನೀವು ನಾನ್ ವೆಜ್ ತಿನ್ನುತ್ತೀರಾ ಎಂದು ಕೇಳಿದೆ... ಅದಕ್ಕವಳು ಇಲ್ಲ ಅರ್ಜುನ್ ನಾವು ಪಕ್ಕಾ ಬ್ರಾಹ್ಮಣರು ಅಪ್ಪಿ ತಪ್ಪಿ ಅದೆಲ್ಲಾ ತಿನ್ನುವುದಿಲ್ಲ, ಅದಕ್ಕೆ ನಾವು ಮನೆ ಸಹ ಹುಡುಕಿ ಹುಡುಕಿ ಅಕ್ಕ ಪಕ್ಕ ಯಾರೂ ನಾನ್ ವೆಜ್ ತಿನ್ನದವರ ಮಧ್ಯದಲ್ಲಿ ಮಾಡಿದ್ದು. ಅದು ಸರಿ ಅದ್ಯಾಕೆ ಕೇಳುತ್ತಿದ್ದೀಯ?
ಹೇಳ್ತೀನಿ, ಮತ್ತೆ ನೀವು ನಿಮ್ಮ ವಾಟರ್ ಮೀಟರ್ ಬಳಿ ಹೋಗಿ ಎಷ್ಟು ದಿವಸ ಆಗಿದೆ? ನೀವು ಅಲ್ಲಿ ಏನಾದರೂ ಕಸ ಹಾಕುತ್ತೀರಾ?
ಇಲ್ಲ ಅರ್ಜುನ್... ನಾವು ಆ ಕಡೆ ಹೋಗಿ ಸುಮಾರು ವರ್ಷವೇ ಆಗಿದೆ... ಅದೆಲ್ಲಾ ಯಾಕೆ ಕೇಳುತ್ತಿದ್ದೀಯ ಅರ್ಜುನ್?
ಏನಿಲ್ಲ ಶೀಲಾ ಸುಮ್ಮನೆ ಕೇಳಿದೆ, ನಾನು ಮತ್ತೆ ಕರೆ ಮಾಡುತ್ತೇನೆ ಎಂದು ಹೇಳಿ ಸೀದಾ ಜಾನಕಿಯ ಮನೆಗೆ ಬಂದು ಅವರ ವಾಟರ್ ಮೀಟರ್ ಇದ್ದ ಜಾಗಕ್ಕೆ ಬಂದು ನೋಡಿದರೆ ಆಶ್ಚರ್ಯ!!. ಶೀಲಾ ಮನೆಯ ವಾಟರ್ ಮೀಟರ್ ಬಳಿ ಏನೆಲ್ಲಾ ವಸ್ತುಗಳು ಇದ್ದವೋ ಅದೇ ವಸ್ತುಗಳು ಇಲ್ಲೂ ಇದ್ದವು. ಈಗ ಒಂದೊಂದೇ ವಿಷಯಗಳು ಸ್ಪಷ್ಟವಾಗತೊಡಗಿದವು. ಆದರೆ ಯಾರು ಮಾಡಿರುವುದು ಮತ್ತು ಏಕೆ ಮಾಡಿರುವುದು ಎಂದು ಹೇಗೆ ಪತ್ತೆ ಹಚ್ಚುವುದು ಎಂದು ತಿಳಿಯಲಿಲ್ಲ.
ಜಾನಕಿ ಮತ್ತು ಶೀಲಾ ಒಂದೇ ದಿನ ಆಶ್ರಮಕ್ಕೆ ಸೇರಿರುವುದು, ಇಬ್ಬರೂ ಹೆಚ್ಚು ಕಡಿಮೆ ಒಂದೇ ವಯಸ್ಸಿನವರು, ಇಬ್ಬರಿಗೂ ಒಂದೇ ದಿವಸ ಆರೋಗ್ಯ ಕೆಟ್ಟಿದ್ದು... ಇಲ್ಲಿಯವರೆಗೂ ಎಲ್ಲವೂ ಒಂದಕ್ಕೊಂದು ಹೋಲಿಕೆಯಾಗುತ್ತಿದ್ದವು. ಆದರೆ ನಂತರದಲ್ಲಿ ಜಾನಕಿ ಮೃತ್ಯುವಿನ ಪಾಲಾಗಿದ್ದು ಮಾತ್ರ ವಿಪರ್ಯಾಸ. ಮತ್ತು ಅದೇ ದಿನ ಇಬ್ಬರ ಮನೆಗೂ ಅಪರಿಚಿತ ವ್ಯಕ್ತಿಗಳು ಬಂದಿದ್ದಾರೆ, ಇಬ್ಬರ ಮನೆಯ ಬಳಿಯೂ ಅದೇ ಅನುಮಾನಕರ ವಸ್ತುಗಳು ದೊರೆತಿವೆ... ಎಲ್ಲವೂ ಸರಿ ಆದರೆ ಏತಕ್ಕಾಗಿ? ಛೇ.... ಛೇ.... ದೇವರೇ ಎಲ್ಲಾದರೂ ಒಂದೇ ಒಂದು ಸುಳಿವು ಕೊಡಪ್ಪಾ ಎಂದುಕೊಂಡು ಆಗಸದ ಕಡೆ ನೋಡಿ ಪಕ್ಕಕ್ಕೆ ತಿರುಗಿದೆ.
ಆಗ ಜಾನಕಿಯ ಮನೆಯ ಪಕ್ಕದಲ್ಲಿದ್ದ ಆಭರಣ ಮಳಿಗೆ ಕಣ್ಣಿಗೆ ಬಿತ್ತು. ತಕ್ಷಣ ಒಳಗೆ ಹೋಗಿ ಅಲ್ಲಿನ ಮ್ಯಾನೇಜರ್ ನನ್ನು ಸಂಪರ್ಕಿಸಿ ಆ ಅಪರಿಚಿತರು ಬಂದ ದಿನಾಂಕವನ್ನು ಅವರಿಗೆ ಹೇಳಿ, ಆ ದಿನ ನಿಮ್ಮ ಅಂಗಡಿಯ CC ಕ್ಯಾಮರಾದಲ್ಲಿ ರೆಕಾರ್ಡ್ ಆಗಿರುವ ದೃಶ್ಯಗಳನ್ನು ನಾನು ನೋಡಬಹುದ ಎಂದು ಕೇಳಿದ್ದಕ್ಕೆ, ಮೊದಲು ಅವರು ನಿರಾಕರಿಸಿದರೂ ನಂತರ ವಿಷಯ ತಿಳಿಸಿದಾಗ ಒಪ್ಪಿಗೆ ಸೂಚಿಸಿ ಅಂದಿನ ವೀಡಿಯೊಗಳನ್ನು ತೋರಿಸಿದರು. ಅದರಲ್ಲಿ ಆ ಆ ಇಬ್ಬರು ಅಪರಿಚಿತರ ಮುಖಗಳು ಸ್ಪಷ್ಟವಾಗಿ ಅಲ್ಲದಿದ್ದರೂ ಗುರುತು ಹಚ್ಚಲು ಸಾಧ್ಯವಾಗುವ ಹಾಗೆ ರೆಕಾರ್ಡ್ ಆಗಿತ್ತು.
Comments
ಉ: ಅನ್ವೇಷಣೆ ಭಾಗ ೧೧
ಹೊಸ ತಿರುವು ಕೊಟ್ಟಿದ್ದೀರಿ. ಮುಂದುವರೆಸಿರಿ.
ಉ: ಅನ್ವೇಷಣೆ ಭಾಗ ೧೧
ಕುತೂಹಲಕಾರಿಯಾಗಿದೆ
In reply to ಉ: ಅನ್ವೇಷಣೆ ಭಾಗ ೧೧ by partha1059
ಉ: ಅನ್ವೇಷಣೆ ಭಾಗ ೧೧
ಧನ್ಯವಾದಗಳು ಕವಿಗಳೇ ಮತ್ತು ಪಾರ್ಥಸಾರಥಿಯವರೇ.