ಅನ್ವೇಷಣೆ ಭಾಗ ೧೨

ಅನ್ವೇಷಣೆ ಭಾಗ ೧೨

ಇನ್ನು ಈ ವಿಷಯದಲ್ಲಿ ಒಂಟಿಯಾಗಿ ಮುಂದುವರಿಯುವುದು ಉಚಿತವಲ್ಲ ಎಂದೆನಿಸಿ ಇನ್ಸ್ಪೆಕ್ಟರ್ ತ್ರಿವಿಕ್ರಮ್ ಗೆ ಕರೆ ಮಾಡಿ ನಿಮ್ಮನ್ನು ಭೇಟಿ ಮಾಡಬೇಕು ಎಂದು ತಿಳಿಸಿ CC ಕ್ಯಾಮೆರಾದ ಟೇಪ್ ತೆಗೆದುಕೊಂಡು ಸ್ಟೇಷನ್ ಗೆ ಹೋಗಿ ನಡೆದ ವಿಷಯಗಳನ್ನು ತಿಳಿಸಿದಾಗ, ತ್ರಿವಿಕ್ರಮ್ ಅಚ್ಚರಿಗೊಂಡರು.

ಅರ್ಜುನ್..... this is unbelievable... ನಿಜಕ್ಕೂ ನೀವು ಇಷ್ಟೆಲ್ಲಾ ಮಾಹಿತಿ ಸಂಗ್ರಹಿಸಿದ್ದೀರ ಎಂದರೆ ನನಗೆ ನಂಬಲೇ ಆಗುತ್ತಿಲ್ಲ. ರೀ... ನೀವು ನಿಮ್ಮ ಕೆಲಸ ಬಿಟ್ಟು ನಮ್ಮ Department ಗೆ ಬಂದು ಬಿಡ್ರಿ. ಹ್ಹ... ಹ್ಹ... ತಮಾಷೆಗೆ ಹೇಳಿದೆ. But, ನಿಜಕ್ಕೂ ನೀವು ಮಾಡಿರುವ ಕೆಲಸ ನಿಮಗೆ ಜಾನಕಿ ಮೇಲೆ ಎಷ್ಟು ಪ್ರೀತಿ ಇದೆ ಎಂದು ತೋರಿಸುತ್ತದೆ ಮಿ. ಅರ್ಜುನ್. ಎಲ್ಲಿ ಆ ಟೇಪ್ ಕೊಡಿ ನೋಡೋಣ ಎಂದು ಆ ಟೇಪನ್ನು ಹಾಕಿ ಅದರಲ್ಲಿದ್ದ ವ್ಯಕ್ತಿಗಳ ಫೋಟೋಗಳನ್ನು ಪ್ರಿಂಟ್ ತೆಗೆದು control ರೂಮಿನ ಮೂಲಕ ಎಲ್ಲಾ ಸ್ಟೇಷನ್ ಗಳಿಗೂ ಕಳುಹಿಸಿಕೊಟ್ಟರು.

ಅರ್ಜುನ್....ಅವರ ಬಗ್ಗೆ ಮಾಹಿತಿ ದೊರೆತ ಕೂಡಲೇ ನಾನು ನಿಮ್ಮನ್ನು ಸಂಪರ್ಕಿಸುತ್ತೇನೆ. ಆದಷ್ಟು ಬೇಗ ದುಷ್ಕರ್ಮಿಗಳನ್ನು ಹಿಡಿಯುವುದಾಗಿ ನಾನು ನಿಮಗೆ ಭರವಸೆ ಕೊಡುತ್ತೇನೆ. Once again... really you have done a great job  ಅರ್ಜುನ್.

ಆ ದುಷ್ಕರ್ಮಿಗಳ ಮಾಹಿತಿ ದೊರೆಯುವವರೆಗೂ ನಾನು ಬೇರೇನೂ ಮಾಡಲು ಸಾಧ್ಯವಿರಲಿಲ್ಲ. ಮತ್ತೆ ಕೆಲಸದ ಕಡೆ ಗಮನ ಕೊಟ್ಟೆ... ಒಂದು ವಾರವಾದರೂ ತ್ರಿವಿಕ್ರಮ್ ಇಂದ ಯಾವುದೇ ಮಾಹಿತಿ ಬರಲಿಲ್ಲ. ನಾನೇ ವಿಚಾರಿಸೋಣ ಎಂದು ಕರೆ ಮಾಡಿದಾಗ.... ಹಾ ಅರ್ಜುನ್ ನಿಮಗೆ ನೂರು ವರ್ಷ ಆಯಸ್ಸು... ಈಗಷ್ಟೇ ನಿಮಗೆ ಕರೆ ಮಾಡೋಣ ಎಂದುಕೊಳ್ಳುತ್ತಿದ್ದೆ ಅಷ್ಟರಲ್ಲಿ ನೀವೇ ಕರೆ ಮಾಡಿದಿರಿ. ಒಂದು ಗುಡ್ ನ್ಯೂಸ್... ಆ ಇಬ್ಬರು ವ್ಯಕ್ತಿಗಳು ಆಂಧ್ರ ಮೂಲದವರು, ಚಿತ್ತೂರಿನಲ್ಲಿ ಅವರನ್ನು ಕಸ್ಟಡಿಗೆ ತೆಗೆದುಕೊಂಡಿದ್ದಾರೆ. ನಾಳೆ ಇಲ್ಲಿಗೆ ಕರೆದುಕೊಂಡು ಬರುತ್ತಿದ್ದಾರೆ.

ನಾಳೆ ನಾವು ಮೊದಲ ಸುತ್ತಿನ ವಿಚಾರಣೆ ನಡೆಸಿ ನಂತರ ನಿಮಗೆ ಮಾಹಿತಿ ನೀಡುತ್ತೇನೆ. ನೀವು ಮಾಡಿದ ತನಿಖೆ ಫಲ ನೀಡುತ್ತಿದೆ ಮಿ. ಅರ್ಜುನ್ ಎಂದು ಕರೆ ಕಟ್ ಮಾಡಿದರು.

ತ್ರಿವಿಕ್ರಮ್ ಹೇಳಿದ ಮಾತು ಕೇಳಿ ಒಂದೆಡೆ ಸಂತೋಷ ಆದರೆ ಮತ್ತೊಂದೆಡೆ ಕೋಪದಲ್ಲಿ ಮೈ ಕುದಿಯುತ್ತಿತ್ತು. ಅವರೇನಾದರೂ ಕೈಗೆ ಸಿಕ್ಕರೆ ಮೊದಲು ಅವರನ್ನು ಖಂಡ ತುಂಡವಾಗಿ ಕತ್ತರಿಸುವಷ್ಟು ಆಕ್ರೋಶ ಉಕ್ಕುತ್ತಿತ್ತು.

ಮಾರನೆ ದಿನ ತ್ರಿವಿಕ್ರಮ್ ಯಾವಾಗ ಯಾವಾಗ ಕರೆ ಮಾಡುತ್ತಾರೋ ಎಂದು ಕಾತುರದಿಂದ ಎದುರು ನೋಡುತ್ತಿದ್ದೆ. ಸಂಜೆ ಕೆಲಸ ಮುಗಿಸಿ ಮನೆಗೆ ಹೊರಡುವ ಮುನ್ನ ಕರೆ ಮಾಡಿದ ತ್ರಿವಿಕ್ರಮ್, ಅರ್ಜುನ್ ನೀವು ಅಂದು ಊಹೆ ಮಾಡಿದ್ದು ನಿಜ.... ಮೊದಲು ನೀವು ಸ್ಟೇಷನ್ ಗೆ ಬನ್ನಿ. ಇಲ್ಲಿ ಎಲ್ಲಾ ವಿವರವಾಗಿ ಮಾತಾಡೋಣ.

ಸರ್... ಈಗಲೇ ಬರುತ್ತೇನೆ ಎಂದು ಸ್ಟೇಷನ್ ಗೆ ಹೋದಾಗ, ಆ ಇಬ್ಬರು ವ್ಯಕ್ತಿಗಳು ಅಲ್ಲೇ ಮೂಲೆಯಲ್ಲಿ ಕುಳಿತಿದ್ದರು. ಅವರನ್ನು ನೋಡಿದ ತಕ್ಷಣ ನನ್ನ ಕೋಪ ತಡೆದುಕೊಳ್ಳಲಾಗದೆ ಸೀದಾ ಅವರ ಬಳಿ ಹೋಗಿ ಮುಷ್ಟಿಯಿಂದ ಬಲವಾಗಿ ಇಬ್ಬರ ಮುಖಕ್ಕೂ ಒಂದೊಂದು ಗುದ್ದಿದೆ. ಗುದ್ದಿದ ರಭಸಕ್ಕೆ ಇಬ್ಬರ ಮೂಗು ಒಡೆದು ರಕ್ತ ಒಸರಲು ಆರಂಭವಾಯಿತು. ಹಠಾತ್ ದಾಳಿಯಿಂದ ಆ ಇಬ್ಬರೂ ತರಗುಟ್ಟಿ ಹೋಗಿದ್ದರು. ನನ್ನ ಆವೇಶ ಕಂಡ ತ್ರಿವಿಕ್ರಮ್ ಕೂಡಲೇ ಓಡಿ ಬಂದು ನನ್ನನ್ನು ತಡೆದು, ಮಿ. ಅರ್ಜುನ್ control yourself ಎಂದು ಗದರಿದರು.

ಮಿ. ಅರ್ಜುನ್ ನಿಮಗೆ ಎಷ್ಟೇ ಕೋಪ ಇದ್ದರೂ ಈ ರೀತಿ ವಿಚಾರಣಾಧೀನ ವ್ಯಕ್ತಿಗಳ ಮೇಲೆ ಹಲ್ಲೆ ನಡೆಸುವಂತಿಲ್ಲ. ಎಲ್ಲಿಯವರೆಗೂ ಅವರು ಅಪರಾಧಿಗಳು ಎಂದು ಸಾಬೀತು ಆಗುವುದಿಲ್ಲ ಅಲ್ಲಿಯವರೆಗೂ ನೀವು ಸಮಾಧಾನದಿಂದಿರಬೇಕು.

ನನ್ನ ಕೋಪ ಇನ್ನೂ ಕಮ್ಮಿ ಆಗಿರಲಿಲ್ಲ. ಸರ್... ದಯವಿಟ್ಟು ನನ್ನನ್ನು ತಡೆಯಬೇಡಿ.... ಈ ನನ್ಮಕ್ಕಳನ್ನು ಇವತ್ತು ಕತ್ತರಿಸಿ ಬಿಡುತ್ತೇನೆ.... ಬಿಡಿ ಸರ್ ನನ್ನನ್ನು... ಬಿಡಿ ಸರ್.... ಎಂದು ಕಿರುಚಿಕೊಳ್ಳುತ್ತಿದ್ದೆ. ತ್ರಿವಿಕ್ರಮ್ ಬಲವಂತವಾಗಿ ನನ್ನ ಕೈ ಹಿಡಿದು ಎಳೆದುಕೊಂಡು ತಮ್ಮ ಕೋಣೆಯೊಳಗೆ ಕರೆದುಕೊಂಡು ಹೋದರು. ಅರ್ಜುನ್.... ನೀವು ಓದಿಕೊಂಡವರು... ನೀವೇ ಇಷ್ಟು ಆವೇಶಕ್ಕೆ ಒಳಗಾದರೆ ಹೇಗೆ? ನಿಮ್ಮ ನೋವು ನನಗೆ ಅರ್ಥವಾಗತ್ತೆ, ಆದರೆ ಆತುರ ಬಿದ್ದರೆ ಕೆಲಸ ಕೆಡತ್ತೆ....ಸಮಾಧಾನ ಮಾಡಿಕೊಳ್ಳಿ. ಬನ್ನಿ ಮಾತಾಡೋಣ

ಸರಿ ಸರ್.... ಈಗ ಹೇಳಿ ಅವರು ಏನು ಹೇಳಿದರು, ಏತಕ್ಕೆ ಕೊಲೆ ಮಾಡಿದರಂತೆ?

ಅರ್ಜುನ್.... ಅಸಲಿಗೆ ಇವರು ಕೊಲೆ ಮಾಡಿದವರಲ್ಲ. ಆದರೆ ಕೊಲೆ ಮಾಡಿದವರಿಗೆ ಸಹಾಯ ಮಾಡಿದ್ದಾರೆ ಅಷ್ಟೇ. ಇವರಿಗೆ ಪೂರ್ತಿ ಮಾಹಿತಿ ಏನೂ ಗೊತ್ತಿಲ್ಲ. ಇವರು ಚಿಲ್ಲರೆ ಹಣಕ್ಕಾಗಿ ಕೆಲಸ ಮಾಡುವವರು. ಇವರಿಬ್ಬರು ಮಾಟ ಮಾಡುವವರು. ಯಾರಾದರೂ ಮಾಟ ಮಾಡಲು ಕರೆದರೆ ಅವರಿಂದ ಹಣ ತೆಗೆದುಕೊಂಡು ಮಾಟ ಮಾಡುತ್ತಾರೆ ಅಷ್ಟೇ. ಈ ವಿಷಯದಲ್ಲೂ ಹಾಗೇ ಆಗಿರುವುದು. ಯಾರೋ ಇವರಿಗೆ ಫೋನ್ ಮಾಡಿ ಮೊದಲು ಶೀಲಾಗೆ ಮಾಟ ಮಾಡಲು ಹೇಳಿದ್ದಾರೆ,ಅದೇ ದಿವಸ ಜಾನಕಿಗೂ ಮಾಟ ಮಾಡಲು ಹೇಳಿದ್ದಾರೆ. ಅದೇ ರೀತಿಯಂತೆ ಇವರು ಅವರಿಬ್ಬರಿಗೂ ಮಾಟ ಮಾಡಿ ಅವರ ಮನೆಯ ಹಿತ್ತಲಲ್ಲಿ ಮಾಟ ಮಾಡಿದ ವಸ್ತುಗಳನ್ನು ಹಾಕಿದ್ದಾರೆ.

ನೀವು ಅವರಿಬ್ಬರ ಮನೆಯ ವಾಟರ್ ಮೀಟರ್ ಬಳಿ ಕಂಡ ವಸ್ತುಗಳು ಇವರು ಹಾಕಿರುವುದೇ. ಇಷ್ಟು ಬಿಟ್ಟರೆ ಅವರಿಗೆ ಇನ್ನೇನೂ ವಿಷಯ ಗೊತ್ತಿಲ್ಲ. ಈಗ ನಮ್ಮ ಮುಂದಿರುವ ಸವಾಲೆಂದರೆ ಆ ಕರೆ ಮಾಡಿದ್ದು ಯಾರೆಂದು ಕಂಡು ಹಿಡಿಯುವುದು? ಅವರು ಕೊಟ್ಟ ಮೊಬೈಲ್ ನಂಬರಿಗೆ ಕರೆ ಮಾಡಿದರೆ ಆ ನಂಬರ್ ಸ್ವಿಚ್ ಆಫ್ ಎಂದು ಬರುತ್ತಿದೆ. ಆ ನೆಟ್ವರ್ಕ್ ಅವರಿಗೆ ಅಂದು ಆ ನಂಬರ್ ಯಾವ ಸ್ಥಳದಿಂದ ಬಂದಿದ್ದು ಎಂದು ಕೇಳಲು ಹೇಳಿದ್ದೇನೆ. ಆ ವಿಷಯ ಗೊತ್ತಾದರೆ ಏನಾದರೂ ಸುಳಿವು ಸಿಗಬಹುದೇನೋ ನೋಡಬೇಕು.

ಸರ್... ಅವರು ಸುಳ್ಳು ಹೇಳುತ್ತಿರುತ್ತಾರೆ.... ಅವರಿಗೆ ಎಲ್ಲಾ ಮಾಹಿತಿ ಗೊತ್ತಿರುತ್ತದೆ ಸರ್... ಒಂದೈದು ನಿಮಿಷ ನನ್ನ ಬಳಿ ಬಿಡಿ, ಎಲ್ಲಾ ಆಚೆ ಕಕ್ಕಿಸುತ್ತೇನೆ ....

ಮಿ. ಅರ್ಜುನ್, ಈ ವಿಷಯದಲ್ಲಿ ನೀವು ನಮಗೆ ಹೇಳಿಕೊಡಬೇಕಿಲ್ಲ .... ಯಾರಿಂದ ಹೇಗೆ ಮಾಹಿತಿ ಸಂಗ್ರಹಿಸಬೇಕು, ಯಾರನ್ನು ಹೇಗೆ ವಿಚಾರಿಸಿಕೊಳ್ಳಬೇಕು ಎಂದು ನಿಮಗಿಂತ ನಮಗೆ ಚೆನ್ನಾಗಿ ಗೊತ್ತಿದೆ. ಅಷ್ಟೇ ಅಲ್ಲ ಯಾರು ನಿಜ ಹೇಳುತ್ತಾರೆ ಯಾರು ಸುಳ್ಳು ಹೇಳುತ್ತಾರೆ ಎಂದೂ ನಮಗೆ ಗೊತ್ತಾಗಿಬಿಡುತ್ತದೆ. ಇವರು ಜುಜುಬಿಗಳು.... ಇವರನ್ನು ನೀವು ಏನೇ ಮಾಡಿದರು ಇವರಿಂದ ನಿಮಗೆ ಹೆಚ್ಚಾಗಿ ಏನೂ ಮಾಹಿತಿ ಸಿಗುವುದಿಲ್ಲ. ನೋಡೋಣ ಇರಿ ಆ ಕರೆ ಎಲ್ಲಿಂದ ಬಂದಿದೆ ಎಂದು ಗೊತ್ತಾಗಲಿ ಆಮೇಲೆ ನೋಡೋಣ.

Rating
No votes yet

Comments