ಅನ್ವೇಷಣೆ ಭಾಗ ೧೮

ಅನ್ವೇಷಣೆ ಭಾಗ ೧೮

ವೀಣಾದೇವಿಯವರು ಮತ್ತು ತ್ರಿವಿಕ್ರಂ ಜೊತೆ ಮಾತಾಡಿದ ಮೇಲೆ ಮನಸು ನಿರಾಳವಾಗಿತ್ತು. ಇನ್ನೇನು ಹೆಚ್ಚು ಕಡಿಮೆ ಎಲ್ಲಾ ಮುಗಿದಂತೆ. ಆರೋಪಿಯನ್ನು ಕಂಡು ಹಿಡಿದು ಅವನಿಗೆ ಶಿಕ್ಷೆ ಕೊಡಿಸಿಬಿಟ್ಟರೆ, ಜಾನಕಿಯ ಆತ್ಮಕ್ಕೆ ಶಾಂತಿ ಸಿಗುತ್ತದೆ ಎಂದುಕೊಂಡು ಜಾನಕಿಯ ಫೋಟೋ ಕೈಗೆ ತೆಗೆದುಕೊಂಡು ಅದನ್ನೇ ನೋಡುತ್ತಾ.. ಜಾನೂ.... ನಿನ್ನನ್ನು ಉಳಿಸಿಕೊಳ್ಳಳಂತೂ ನನ್ನ ಕೈಲಿ ಆಗಲಿಲ್ಲ, ಇನ್ನೇನು ಸ್ವಲ್ಪ ದಿನದಲ್ಲೇ ನಿನ್ನನ್ನು ಕೊಂದ ಆರೋಪಿಯನ್ನು ಕಂಡು ಹಿಡಿದು ಅವನಿಗೆ ಶಿಕ್ಷೆ ಕೊಡಿಸುತ್ತೇನೆ ಜಾನೂ. ಐ ಲವ್ ಯೂ...

ಎರಡು ದಿನಗಳ ನಂತರ ತ್ರಿವಿಕ್ರಂ ಕರೆ ಮಾಡಿ, ಅರ್ಜುನ್ ಸ್ಟೇಷನ್ ಬಳಿ ಬನ್ನಿ ಮಾತಾಡಬೇಕು ಎಂದ ಕೂಡಲೇ ಸ್ಟೇಷನ್ ಬಳಿ ಹೋಗಿ ತ್ರಿವಿಕ್ರಂ ಅವರನ್ನು ಭೇಟಿ ಮಾಡಿದಾಗ, ಅರ್ಜುನ್..... ನೆನ್ನೆ Remand ನಲ್ಲಿದ್ದ ವ್ಯಕ್ತಿ ತಪ್ಪಿಸಿಕೊಂಡು ಬಿಟ್ಟಿದ್ದಾನೆ!!!

ಸರ್... ಏನು ನೀವು ಹೇಳುತ್ತಿರುವುದು?

ಹೌದು ಅರ್ಜುನ್....ಮೊನ್ನೆ ಇವರು ಕೊಟ್ಟ ಟ್ರೀಟ್ಮೆಂಟ್ ಗೆ ಅವನು ಮೂರ್ಛೆ ತಪ್ಪಿದ್ದಾನೆ, ಅವನಿಗೆ ಚಿಕಿತ್ಸೆ ಕೊಡಿಸಲು ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ಅವರಿಗೆ ಚಳ್ಳೆಹಣ್ಣು ತಿನ್ನಿಸಿ ತಪ್ಪಿಸಿಕೊಂಡಿದ್ದಾನೆ. Department ಎಲ್ಲಾ ಕಡೆ ಕಟ್ಟೆಚ್ಚರ ವಹಿಸಿದ್ದಾರೆ. ಕಂಟ್ರೋಲ್ ರೂಂನಿಂದ ಎಲ್ಲಾ ಕಡೆ ಇವನ ಫೋಟೋಗಳನ್ನು ಕಳುಹಿಸಿದ್ದಾರೆ, ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ, Airport ಎಲ್ಲಾ ಕಡೆ ನಿಗಾ ವಹಿಸಿದ್ದಾರೆ. ಅವನು ಹೇಗೇ ಮಾಡಿದರೂ ಸಿಟಿ ಬಿಟ್ಟು ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ೨೪ ಗಂಟೆಯ ಒಳಗಡೆ ಅವನನ್ನು ಬಂಧಿಸಬೇಕೆಂದು ಆದೇಶ ಹೊರಡಿಸಿದ್ದಾರೆ. ಖಂಡಿತ ಅವನು ಸಿಕ್ಕೇ ಸಿಗುತ್ತಾನೆ.

ಸರ್.... ಏನಿದು ಎಲ್ಲಾ ಸರಿ ಹೋಯಿತು ಎಂದುಕೊಳ್ಳುವಷ್ಟರಲ್ಲಿ ಹೀಗಾಗಿದೆ? ಮತ್ತೆ ಅವನನ್ನು ಹಿಡಿದು ಮತ್ತೆ ಅವನನ್ನು ವಿಚಾರಣೆಗೆ ಒಳಪಡಿಸುವುದಕ್ಕೆ ಎಷ್ಟು ದಿನ ಬೇಕಾಗುತ್ತದೆ ಸರ್..

ಅರ್ಜುನ್....ಅವನು ತಪ್ಪಿಸಿಕೊಂಡಿರುವುದರಿಂದ ಮತ್ತೆ ಅವನು ಸಿಕ್ಕರೆ, ಈ ಬಾರಿ ಸೀದಾ ಅವನನ್ನು ನಮ್ಮ ಕಸ್ಟಡಿಗೆ ಕೊಡುವುದಿಲ್ಲ. ಮೊದಲು ಅವನ ಪೂರ್ವಾಪರ ಎಲ್ಲಾ ನೋಡಿ, ಅವನು ಇನ್ನೆಷ್ಟು ಕೇಸುಗಳಲ್ಲಿ ಭಾಗಿಯಾಗಿದ್ದಾನೆ, ದೇಶದ ಯಾವ ಯಾವ ಭಾಗದಲ್ಲಿ ಅವನು ತನ್ನ ಚಟುವಟಿಕೆಗಳನ್ನು ನಡೆಸಿದ್ದಾನೆ, ಯಾರ್ಯಾರ ಜೊತೆ ಇವನಿಗೆ ನಂಟು ಇದೆ, ಇದೆಲ್ಲಾ ಆದ ಮೇಲೆ ನಾವು ನಮ್ಮ ವಿಚಾರಣೆ ನಡೆಸಬಹುದು. ನೋಡೋಣ.... ನಾನು ಕಮಿಷನರ್ ಬಳಿ ಆಗಲೇ ಮಾತಾಡಿದ್ದೇನೆ... ಅವನು ಸಿಕ್ಕ ಕೂಡಲೇ ನನ್ನದೊಂದು ಸಣ್ಣ ವಿಚಾರಣೆ ಎಂದು ಹೇಳಿದ್ದೇನೆ. ಅವರೂ ಸಹ ಹಾಗೆ ಆಗಲಿ ನೋಡೋಣ ಎಂದಿದ್ದಾರೆ....

ಅಷ್ಟರಲ್ಲಿ ತ್ರಿವಿಕ್ರಂ ವೈರ್ಲೆಸ್ ಹೊಡೆದುಕೊಂಡಿತು....Escaped criminal arrested ಎಂಬ ಮೆಸೇಜ್ ಬಂದಿತು. ತ್ರಿವಿಕ್ರಂ ಅರ್ಜುನ್ ಮುಖ ನೋಡಿ, ಅರ್ಜುನ್.... ನಮ್ಮ ಟೈಮ್ ಚೆನ್ನಾಗಿದೆ. ಅವನು ಸಿಕ್ಕಿ ಹಾಕಿಕೊಂಡಿದ್ದಾನೆ.... ನಾನು ಕೂಡಲೇ Commissioner Office ಗೆ ಹೋಗಿ ಬರುತ್ತೇನೆ. ಅಲ್ಲಿಂದ ಬಂದ ಮೇಲೆ ನಾನು ನಿಮಗೆ ಕರೆ ಮಾಡುತ್ತೇನೆ ಎಂದು ಹೊರಟರು.

ಮತ್ತೆ ಮರುದಿನ ಬೆಳಿಗ್ಗೆ ಕರೆಮಾಡಿದ ತ್ರಿವಿಕ್ರಂ, ಅರ್ಜುನ್... ನೆನ್ನೆಯೇ ಆ ವ್ಯಕ್ತಿಯನ್ನು ವಿಚಾರಣೆ ಮಾಡಿದೆ. ವೀಣಾದೇವಿಯರು ಕೊಟ್ಟ ಮಾಹಿತಿಯನ್ನೇ ಇವನೂ ಕೊಟ್ಟಿದ್ದಾನೆ. ಇವನೂ ಆ ವ್ಯಕ್ತಿಯನ್ನು ಮುಖತಃ ಭೇಟಿ ಆಗಿಲ್ಲವಂತೆ. ಆದರೆ ಆ ವ್ಯಕ್ತಿಯ ಸ್ವಂತ ಊರು ತಮಿಳುನಾಡಿನ ಮಧುರೈ ಎಂದಷ್ಟೇ ತಿಳಿದಿದೆಯಂತೆ. ಮತ್ತು ಕಾಲಿನ ಶೂ ಸೈಜ್ ಬಿಟ್ಟರೆ ಬೇರೆ ಯಾವ ಮಾಹಿತಿಯೂ ಇಲ್ಲವಂತೆ.

ಸರ್.... ಮತ್ತೆ ಹೇಗೆ ಸರ್ ಅವನನ್ನು ಕಂಡು ಹಿಡಿಯುವುದು....

ಅರ್ಜುನ್.... ಕೇವಲ ಈ ಮಾಹಿತಿಯಿಂದ ಅವನನ್ನು ಪತ್ತೆ ಹಚ್ಚಲು ಸಾಧ್ಯವಿಲ್ಲ. ಮೊದಲು ಹಿರಿಯ ಅಧಿಕಾರಿಗಳ ಜೊತೆ ಮಾತಾಡಿ, ಅವರು ಮಧುರೈ ಪೋಲೀಸರ ಸಂಪರ್ಕ ಸಾಧಿಸಿ, ನಂತರ ಅವರಿಗೆ ವಿವರಗಳನ್ನು ಕೊಟ್ಟು, ಅವರು ತನಿಖೆ ಶುರುಮಾಡಿ, ಅವನನ್ನು ಬಂಧಿಸುವಷ್ಟರಲ್ಲಿ ಎಷ್ಟು ಸಮಯ ಬೇಕಾಗುತ್ತದೋ ಹೇಳಲು ಸಾಧ್ಯವಿಲ್ಲ. ಅದೂ ಅಲ್ಲದೆ ಬರೀ ಶೂ ಸೈಜ್ ಹಿಡಿದುಕೊಂಡು ಹೇಗೆ ಪತ್ತೆ ಹಚ್ಚುವುದು? ಮಧುರೈನಲ್ಲಿ ಎಷ್ಟು ಪಾದರಕ್ಷೆ ಅಂಗಡಿಗಳಿವೆ....ಅವನು ಯಾವುದರಲ್ಲಿ ಖರೀದಿಸುತ್ತಾನೋ? ಒಂದು ವೇಳೆ ಅವನು ಒಂದೊಂದೇ ಸೈಜ್ ಶೂ ಖರೀದಿಸಬೇಕೆಂದರೆ ಯಾವುದಾದರೂ ನಿಖರವಾದ ಅಂಗಡಿಯಲ್ಲೇ ತೆಗೆದುಕೊಳ್ಳುತ್ತಾನೆ. ಅದೇ ಅಂಗಡಿ ಪತ್ತೆ ಆದರೆ ಓಕೆ... ಆದರೆ ಅವನು ಎರಡೂ ಸೈಜಿನ ಎರಡು ಜೊತೆಗಳನ್ನು ತೆಗೆದುಕೊಂಡರಂತೂ ಅವನನ್ನು ಪತ್ತೆ ಹಚ್ಚುವುದು ಬಹಳ ಕಷ್ಟ....

ಅರ್ಜುನ್... ಯಾಕೋ ಬರ್ತಾ ಬರ್ತಾ ಈ ಕೇಸ್ ಬಹಳ ಜಟಿಲವಾಗುತ್ತಿದೆ ಎನಿಸುತ್ತಿದೆ. ನನಗೆ ಹೇಗೆ ಮುಂದುವರಿಯಬೇಕೆಂದೇ ತಿಳಿಯುತ್ತಿಲ್ಲ....

ಸರ್... ನಿಮಗೇನೂ ಅಭ್ಯಂತರ ಇಲ್ಲ ಎಂದರೆ ನಾನು ಮಧುರೈನಲ್ಲಿರುವ ಎಲ್ಲಾ ಶೂ ಅಂಗಡಿಗಳಲ್ಲೂ ಈ ರೀತಿಯ ಬೇರೆ ಬೇರೆ ಸೈಜಿನ ಶೂ ಕೊಡುವರೇನೋ ಎಂದು ವಿಚಾರಿಸಿ ನೋಡಬಹುದ? ಹಾಗೊಂದು ವೇಳೆ ಏನಾದರೂ ಮಾಹಿತಿ ದೊರೆತರೆ ನಾನು ನಿಮಗೆ ಅದನ್ನು ತಲುಪಿಸುತ್ತೇನೆ. ಏಕೆಂದರೆ ಪೊಲೀಸರು ವಿಚಾರಿಸಲು ಹೋದರೆ ಕೆಲ ಅಂಗಡಿಯವರು ಮಾಹಿತಿ ನೀಡಲು ಹಿಂದೆ ಮುಂದೆ ನೋಡಬಹುದು ಅಥವಾ ಸುಳ್ಳೇ ಹೇಳಬಹುದು. ಹಾಗಾಗಿ ನಾನೇ ಹೋಗೋಣ ಎಂದುಕೊಳ್ಳುತ್ತಿದ್ದೇನೆ....

ಅರ್ಜುನ್.... ಆದರೆ.... ಆದರೆ... ಇದು ಬಹಳ ರಿಸ್ಕಿನ ಕೆಲಸ, ಅದೂ ಈ ಸಮಯದಲ್ಲಿ ಅವನು ಬಹಳ ಜಾಗರೂಕನಾಗಿರುತ್ತಾನೆ ಮತ್ತು ಅವರ ಕಡೆಯವರನ್ನೆಲ್ಲ ಹಿಡಿಯುತ್ತಿರುವುದರಿಂದ ಅವನ ಮನಸ್ಥಿತಿ ಉಗ್ರವಾಗಿರುತ್ತದೆ. ಇವಾಗ ನೀನು ಅವನ ಜಾಡನ್ನು ಹುಡುಕಿಕೊಂಡು ಹೊರಡುವುದು ಬಹಳ ಅಪಾಯ ಅರ್ಜುನ್. ನನ್ನ ಮಾತನ್ನು ಕೇಳಿ ಆ ಆಲೋಚನೆಯನ್ನು ಬಿಟ್ಟು ಬಿಡು.... ಎಲ್ಲಕ್ಕಿಂತ ಮಿಗಿಲಾಗಿ, ಒಂದು ವೇಳೆ ನೀನು ಈ ಕೆಲಸ ಮಾಡಲು ಹೊರಟರೆ ಅದು ಆಫ್ ದಿ ರೆಕಾರ್ಡ್ ಆಗುತ್ತದೆ ಮತ್ತು ಅದಕ್ಕೆ ನಾನು ವೈಯಕ್ತಿಕವಾಗಿ ಸಹಾಯ ಮಾಡಬಲ್ಲೆನಷ್ಟೇ ಹೊರತು Department ಕಡೆಯಿಂದ ಏನೂ ಮಾಡಲು ಸಾಧ್ಯವಿರುವುದಿಲ್ಲ. ನಾಳೆ ಏನಾದರೂ ಹೆಚ್ಚು ಕಡಿಮೆ ಆದರೆ ಅದಕ್ಕೆ ನಾನು ಏನೂ ಮಾಡುವ ಸ್ಥಿತಿಯಲ್ಲಿ ಇರುವುದಿಲ್ಲ ಅರ್ಜುನ್ ....

ಸರ್.... ಜಾನಕಿಯೇ ಇಲ್ಲ ಎಂದ ಮೇಲೆ ನನಗೆ ಜೀವನದ ಮೇಲೆ ಯಾವುದೇ ಆಸೆ ಇಲ್ಲ. ಅವನೆಷ್ಟೇ ಉಗ್ರನಾಗಿರಲಿ ಎಷ್ಟೇ ಜಾಗರೂಕನಾಗಿರಲಿ ಅವನನ್ನು ಕಂಡು ಹಿಡಿದೇ ಹಿಡಿಯುತ್ತೇನೆ. ಇನ್ನು ನಿಮ್ಮ ವಿಷಯ.... ಸರ್... ನೀವು ನಿಮ್ಮ ವೈಯಕ್ತಿಕ ಸಹಾಯ ಒಂದು ಕೊಟ್ಟರೆ ಸಾಕು, Department ಕಡೆಯಿಂದ ನನಗೆ ಯಾವುದೇ ಸಹಾಯ ಬೇಕಿಲ್ಲ. ಮತ್ತು ಈ ಕೆಲಸದಲ್ಲಿ ನನಗೆ ಏನಾದರೂ ನೀವು ತಲೆ ಕೆಡಿಸಿಕೊಳ್ಳಬೇಡಿ... ಅದರ ಸಂಪೂರ್ಣ ಜವಾಬ್ದಾರಿ ನನ್ನದೇ. ಸರ್... ನಾನು ನಾಳೆಯೇ ಮಧುರೈಗೆ ಹೊರಡುತ್ತೇನೆ. ಎಲ್ಲ ಕಡೆ ಹುಡುಕುತ್ತೇನೆ... ನಂತರ ನಾನು ನಿಮಗೆ ಮುಂದಿನ ಅಪ್ಡೇಟ್ ಕೊಡುತ್ತೇನೆ. ಈ ಮಧ್ಯದಲ್ಲಿ ನಿಮಗೇನಾದರೂ ಮಾಹಿತಿ ಸಿಕ್ಕರೆ ಅದನ್ನು ನನಗೆ ಕೊಡಿ ಸಾಕು....

ಸರ್... ಈ ಕೆಲಸದಲ್ಲಿ ಒಂದು ವೇಳೆ ನನಗೇನಾದರೂ ಆದರೆ, ದಯವಿಟ್ಟು ನಮ್ಮ ಅಪ್ಪ ಅಮ್ಮ ಮತ್ತು ಜಾನಕಿಯ ಅಪ್ಪ ಅಮ್ಮನನ್ನು ಅವಾಗವಾಗ ವಿಚಾರಿಸಿಕೊಳ್ಳುತ್ತಿರಿ.... ಏಕೆಂದರೆ ಇಬ್ಬರ ಕುಟುಂಬಕ್ಕೂ ಇರುವುದು ನಾನೊಬ್ಬನೇ ಆಧಾರ... ಇಬ್ಬರೂ ನನ್ನನ್ನೇ ನಂಬಿಕೊಂಡಿದ್ದಾರೆ.....

ಅರ್ಜುನ್... ನೀವೇನೂ ಚಿಂತಿಸಬೇಡಿ.... ನೀವು ಮಾಡಲು ಹೊರಟಿರುವ ಕೆಲಸದಲ್ಲಿ ನಿಮಗೆ ಎಲ್ಲಾ ರೀತಿಯ ಯಶಸ್ಸು ದೊರೆಯಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ. All the best.

thank you very much sir....

Rating
No votes yet