ಅನ್ವೇಷಣೆ ಭಾಗ ೧೯
ಅರ್ಜುನ್... ಎಲ್ಲಪ್ಪಾ ಹೊರಟಿದ್ದೀಯ?
ಅಮ್ಮ..... ಆಫೀಸಿನ ಕೆಲಸದ ಮೇಲೆ ತಮಿಳುನಾಡಿಗೆ ಹೋಗುತ್ತಿದ್ದೇನೆ. ಒಂದು ಹದಿನೈದು ದಿನದ ಕೆಲಸ ಇದೆ, ಅದು ಮುಗಿದ ಕೂಡಲೇ ವಾಪಸ್ ಬರುತ್ತೇನೆ. ಈ ಮಧ್ಯದಲ್ಲಿ ನಿಮಗೇನಾದರೂ ಸಹಾಯ ಬೇಕಿದ್ದರೆ, ಇನ್ಸ್ಪೆಕ್ಟರ್ ತ್ರಿವಿಕ್ರಂ ಅವರ ನಂಬರ್ ಕೊಟ್ಟಿರುತ್ತೇನೆ, ಅವರನ್ನು ಸಂಪರ್ಕಿಸಿ.
ಸರೀನಪ್ಪ ಹಾಗೇ ಆಗಲಿ, ನೀನು ಹುಷಾರು.... ಜಾಸ್ತಿ ತಲೆ ಕೆಡಿಸಿಕೊಂಡು ನಿನ್ನ ಆರೋಗ್ಯ ಹಾಳು ಮಾಡಿಕೊಳ್ಳಬೇಡ. ಆಗಾಗ ಫೋನ್ ಮಾಡುತ್ತಿರು, ಟೈಮ್ ಟೈಮ್ ಗೆ ಸರಿಯಾಗಿ ತಿನ್ನು....
ಸರೀನಮ್ಮ.... ನಿಮ್ಮ ಆರೋಗ್ಯ ನೋಡಿಕೊಳ್ಳಿ ಎಂದು ಅವರ ಪಾದಕ್ಕೆ ಬಿದ್ದು ಆಶೀರ್ವಾದ ತೆಗೆದುಕೊಂಡು ಮಧುರೈಗೆ ಹೊರಟೆ.
ಮಧುರೈ ನನಗೆ ಹೊಸ ಜಾಗ, ಮೊಟ್ಟ ಮೊದಲ ಬಾರಿಗೆ ಮಧುರೈಗೆ ಬರುತ್ತಿರುವುದು. ಅಲ್ಲಿನ ಜನ ಹೇಗೋ, ವಾತಾವರಣ ಹೇಗೋ, ಎಲ್ಲಿರುವುದು, ಹೇಗೆ ಹುಡುಕುವುದು ಇದ್ಯಾವುದೂ ತಲೆಯಲ್ಲಿ ಇರಲಿಲ್ಲ. ಇದ್ದದ್ದು ಒಂದೇ ಒಂದು... ಅವನನ್ನು ಹುಡುಕುವುದು.... ಅವನಿಗೆ ಶಿಕ್ಷೆ ಕೊಡಿಸುವುದು... ಬಸ್ನಲ್ಲಿ ನನ್ನ ಪಕ್ಕ ಕೂತಿದ್ದ ವ್ಯಕ್ತಿ ನನ್ನನ್ನು ಮಾತಿಗೆಳೆದ, ಎಲ್ಲಿಗೆ ಹೋಗುತ್ತಿರುವುದು ಎಂದು ಕೇಳಿದ. ನಾನು ಮಧುರೈ ಎಂದೆ. ಅವನು ನಿಮ್ಮದು ಸ್ವಂತ ಊರು ಮಧುರೈನ ಎಂದು ಕೇಳಿದ. ಇಲ್ಲ ಇದೆ ಮೊದಲ ಬಾರಿಗೆ ಮಧುರೈಗೆ ಬರುತ್ತಿರುವುದು, ಒಂದು ಕೆಲಸದ ಮೇಲೆ ಹೋಗುತ್ತಿದ್ದೇನೆ. ನೀವು ಎಲ್ಲಿಗೆ ಹೋಗುತ್ತಿರುವುದು ಎಂದು ಕೇಳಿದ್ದಕ್ಕೆ.... ನನ್ನದು ಸ್ವಂತ ಊರು ಮಧುರೈ, ಬೆಂಗಳೂರಿನಲ್ಲಿ ಬಿಸಿನೆಸ್ ಇದೆ. ವಾರಕ್ಕೂಮ್ಮೆ ಮಧುರೈಗೆ ಬಂದು ಹೋಗುತ್ತೇನೆ ಎಂದು ಮಧುರೈ ಬಗ್ಗೆ ಮಾತಾಡಲು ಶುರು ಮಾಡಿದ.
ನನಗೂ ಟೈಮ್ ಪಾಸ್ ಆಗುತ್ತಿದ್ದರಿಂದ ಅವನು ಹೇಳಿದ್ದನ್ನೆಲ್ಲಾ ಕೇಳುತ್ತಿದ್ದೆ, ಅವನು ಮೊದಲ ಬಾರಿಗೆ ಮಧುರೈ ಬರುತ್ತಿದ್ದೀರ ಎನ್ನುತ್ತಿದ್ದೀರಾ, ಅದೂ ಅಲ್ಲದೆ ಏನೋ ಮುಖ್ಯವಾದ ಕೆಲಸ, ಅದು ಮುಗಿಯುವವರೆಗೂ ಮಧುರೈ ಬಿಟ್ಟು ಹೋಗುವುದಿಲ್ಲ ಎನ್ನುತ್ತಿದ್ದೀರಾ... ಅಲ್ಲಿಯವರೆಗೂ ಎಲ್ಲಿ ಇರುತ್ತೀರ? ಎಂದು ಕೇಳಿದ... ನಾನು ಕೂಡಲೇ ಯಾವುದಾದರೂ ಹೋಟೆಲ್ ನಲ್ಲಿ ರೂಂ ಮಾಡಿಕೊಂಡು ಇರುತ್ತೇನೆ, ನಿಮಗೆ ಗೊತ್ತಿರುವ ಯಾವುದಾದರೂ ಕಡಿಮೆ ಬೆಲೆಯ ಹೋಟೆಲ್ ಇದ್ದರೆ ಹೇಳಿ ಎಂದು ಕೇಳಿದ್ದಕ್ಕೆ, ಆ ವ್ಯಕ್ತಿ ಸ್ವಲ್ಪ ಹೊತ್ತು ಯೋಚಿಸಿ, ನಿಮಗೇನೂ ಅಭ್ಯಂತರ ಇಲ್ಲದಿದ್ದರೆ ನನ್ನ ಸ್ನೇಹಿತ ಒಬ್ಬನ ರೂಂ ಇದೆ, ನೀವು ಕೆಲಸ ಮುಗಿಯುವವರೆಗೂ ಅಲ್ಲಿ ಇರಬಹುದು... ಯಾಕೆಂದರೆ ಗೊತ್ತಿರದ ಜಾಗದಲ್ಲಿ ಹೋಟೆಲ್ ನಲ್ಲಿ ಉಳಿದುಕೊಳ್ಳುವುದು ಅಷ್ಟು ಒಳ್ಳೆಯ ಆಲೋಚನೆ ಅಲ್ಲ... ಅದಕ್ಕಾಗಿ ಹೇಳಿದೆ, ಅದೂ ನಿಮಗೆ ಅಭ್ಯಂತರ ಇಲ್ಲದಿದ್ದರೆ ಎಂದು ಹೇಳಿದ.
ನಾನು ಸಧ್ಯದಲ್ಲಿ ಇರುವ ಪರಿಸ್ಥಿತಿಯಲ್ಲಿ ಯಾರನ್ನೂ ನಂಬುವುದು ಕಷ್ಟವಾಗಿತ್ತು. ಅದೂ ಯಾರೋ ಗುರುತು ಪರಿಚಯ ಇಲ್ಲದ ವ್ಯಕ್ತಿ ಹೇಳಿದ್ದನ್ನು ಹೇಗೆ ನಂಬುವುದು? ಆದರೆ ಆ ವ್ಯಕ್ತಿ ಹೇಳುತ್ತಿರುವುದೂ ಸರಿಯೇ, ನಾನು ಹುಡುಕಿಕೊಂಡು ಬಂದಿರುವ ವ್ಯಕ್ತಿ ನನ್ನ ಮೇಲೆ ನಿಗಾ ಇಟ್ಟು ನಾನು ಹೋಟೆಲ್ ನಲ್ಲಿ ಉಳಿದುಕೊಂಡಿರುವುದು ಗೊತ್ತಾದರೆ ನನಗೇ ಅಪಾಯ, ಆದ್ದರಿಂದ ಈತ ಹೇಳಿದ ಹಾಗೆ ರೂಮಿನಲ್ಲಿ ಇರುವುದೇ ಉತ್ತಮ ಎಂದೆನಿಸಿತು.... ಸರಿ ಸರ್, ಆದರೆ ನೀವು ನಾನು ಇರುವಷ್ಟು ದಿನಕ್ಕೂ ಬಾಡಿಗೆ ತೆಗೆದುಕೊಳ್ಳಬೇಕು... ನಾನು ನನ್ನ ಆಚೆಯೇ ನೋಡಿಕೊಳ್ಳುತ್ತೇನೆ, ಬರೀ ಉಳಿದುಕೊಳ್ಳುವುದಕ್ಕೆ ಜಾಗ ಕೊಟ್ಟರೆ ಸಾಕು ಎಂದು ಹೇಳಿದೆ.
ನೋಡಿ ಮಿ. ನೀವು ಬೆಂಗಳೂರಿನವರೇ ಎನ್ನುತ್ತಿದ್ದೀರಾ.... ನಿಮ್ಮ ಬಳಿ ಹೇಗೆ ನಾನು ದುಡ್ಡು ತೆಗೆದುಕೊಳ್ಳಲಿ, ಆದರೆ ನಿಮಗೆ ಸಂಕೋಚ ಎನ್ನುವುದಾದರೆ ನೀವು ದುಡ್ಡು ಕೊಟ್ಟು ಇರಬಹುದು, ಆದರೆ ಮೊದಲು ನೀವು ನಿಮ್ಮ ಕೆಲಸ ಮುಗಿಸಿ ಹೊರಡುವ ಕೊನೆಯ ದಿನ ಮಾತ್ರ ದುಡ್ಡನ್ನು ಕೊಡುವುದಾದರೆ ಸರಿ ಎಂದು ತಮ್ಮ ಸ್ನೇಹಿತನಿಗೆ ಕರೆ ಮಾಡಿ ಬಸ್ ನಿಲ್ದಾಣಕ್ಕೆ ಬರಲು ಹೇಳಿದರು.
ಸರ್, ನೀವು ಮಾಡಿದ ಸಹಾಯಕ್ಕೆ ನಾನು ಹೇಗೆ ಥ್ಯಾಂಕ್ಸ್ ಹೇಳಬೇಕೋ ಗೊತ್ತಾಗುತ್ತಿಲ್ಲ, ನಾನಿರುವ ಪರಿಸ್ಥಿತಿಯಲ್ಲಿ ನೀವು ಮಾಡಿರುವ ಸಹಾರ ನಾನು ಎಂದಿಗೂ ಮರೆಯುವುದಿಲ್ಲ.
ಅರ್ಜುನ್... ನೀವೇನೂ ತಪ್ಪು ತಿಳಿಯದಿದ್ದರೆ, ನೀವು ಯಾವ ಕೆಲಸದ ಮೇಲೆ ಮಧುರೈಗೆ ಬರುತ್ತಿದ್ದೀರ ಎಂದು ಕೇಳಬಹುದ? ಏಕೆಂದರೆ ನನ್ನಿಂದ ಏನಾದರೂ ಸಹಾಯ ಮಾಡಬಹುದಾದರೆ....
ಹೇಗೆ ಆ ವ್ಯಕ್ತಿಯ ಬಗ್ಗೆ ನನ್ನ ವಿಷಯವನ್ನು ಹೇಳುವುದು ಎಂದು ತಿಳಿಯದೆ, ಸರ್ ಒಂದು ಆಸ್ತಿ ವಿಷಯವಾಗಿ ಇಲ್ಲಿಗೆ ಬಂದಿದ್ದೇನೆ. ಇಷ್ಟು ಬಿಟ್ಟು ನಾನು ಬೇರೆ ಏನನ್ನೂ ಹೇಳಲು ಸಾಧ್ಯವಿಲ್ಲ, ದಯವಿಟ್ಟು ನೀವು ತಪ್ಪು ತಿಳಿಯಬಾರದು.
ಅಯ್ಯೋ ಅರ್ಜುನ್.... ಇದರಲ್ಲಿ ತಪ್ಪೇನು ಇದೆ, ನಾನು ನಿಮಗೆ ಪರಿಚಯ ಆಗಿ ಕೇವಲ ಗಂಟೆಗಳು ಕಳೆದಿವೆ, ಅಷ್ಟರಲ್ಲಿ ನಾನು ನಿಮ್ಮ ಪರ್ಸನಲ್ ವಿಷಯಗಳನ್ನು ಕೇಳುವುದು ತಪ್ಪು, ನಾನೇ ನಿಮಗೆ ಸಾರಿ ಹೇಳಬೇಕು.... ನಿಮ್ಮನ್ನು ಮುಜುಗರಕ್ಕೆ ಈಡು ಮಾಡಿದೆ ಎನಿಸುತ್ತದೆ. ಏನೂ ಪರವಾಗಿಲ್ಲ. ಒಟ್ಟಿನಲ್ಲಿ ನಿಮ್ಮ ಕೆಲಸ ಸುಗಮವಾಗಿ ನಡೆದರೆ ಅಷ್ಟೇ ಸಾಕು ಎಂದು ಹೇಳಿದ.
ಅಷ್ಟರಲ್ಲಿ ಬಸ್ ಮಧುರೈ ಬಸ್ ನಿಲ್ದಾಣಕ್ಕೆ ಬಂದಿತ್ತು. ಸಮಯ ಬೆಳಿಗ್ಗೆ ಆರು ಗಂಟೆ ಆದರೂ ಧಗೆ ಹೊಡೆಯುತ್ತಿತ್ತು. ಬಸ್ಸಿನಿಂದ ಕೆಳಗಿಳಿದು ಕೇವಲ ಅರ್ಧ ಗಂಟೆ ಆಗಿತ್ತು. ಅಷ್ಟರಲ್ಲೇ ಬೆವರಿನಲ್ಲಿ ಮೈ ತೋಯ್ದು ಹೋಗಿತ್ತು. ಆದರೆ ಆ ವ್ಯಕ್ತಿ ಮಾತ್ರ ಏನೂ ಆಗಿಯೇ ಇಲ್ಲ ಎನ್ನುವಂತೆ ನಿಂತಿದ್ದ. ನಾನು ಆ ವ್ಯಕ್ತಿಯನ್ನು ಏನು ಸರ್, ನಿಮಗೆ ಬೆವರುವುದೇ ಇಲ್ಲವೇ ಎಂದು ಕೇಳಿದ್ದಕ್ಕೆ ಆತ ನಕ್ಕು, ಹಾಗೇನಿಲ್ಲ ಅರ್ಜುನ್... ನಮಗೆ ಇಲ್ಲಿಯೇ ಇದ್ದು ಇದ್ದು ಅಭ್ಯಾಸ ಆಗಿ ಹೋಗಿದೆ. ನಮ್ಮ ಮೈಯಲ್ಲಿರುವ ಬೆವರೆಲ್ಲ ಆವಿ ಆಗಿ ಹೋಗಿದೆ ಎಂದು ಮತ್ತೊಮ್ಮೆ ನಕ್ಕು,ಎದುರಿನಲ್ಲಿ ಬಂದ ವ್ಯಕ್ತಿಯನ್ನು ಬರಮಾಡಿಕೊಂಡು, ಅರ್ಜುನ್ ಈತನೇ ನನ್ನ ಸ್ನೇಹಿತ ಮುರುಗನ್ ಎಂದು, ನೀವು ಇವನ ರೂಮಿನಲ್ಲೇ ಇರುತ್ತಿರುವುದು. ಮುರುಗನ್ ಬಹಳ ಒಳ್ಳೆಯ ಮನುಷ್ಯ... ನಿಮಗೆ ಯಾವುದೇ ಸಮಯದಲ್ಲಿ ಏನೇ ಸಹಾಯ ಬೇಕಿದ್ದರೂ ನೀವು ಮುರುಗನ್ ಬಳಿ ಕೇಳಿ... ಇಲ್ಲವಾದರೆ ನನ್ನ ಮೊಬೈಲಿಗೆ ಕರೆ ಮಾಡಿ... ಯಾವುದೇ ಸಂಕೋಚ ಇಟ್ಟುಕೊಳ್ಳಬೇಡಿ.... ಸರಿ ನಾನಿನ್ನು ಹೊರಡುತ್ತೇನೆ ಎಂದು ಆ ವ್ಯಕ್ತಿ ಆಟೋ ಹಿಡಿದು ಹೊರಟ.
ನಾನು ಮುರುಗನ್ ಜೊತೆ ಆತನ ರೂಮಿಗೆ ಬಂದೆ. ರಾತ್ರಿ ಪ್ರಯಾಣದಿಂದ ದೇಹ ದಣಿದಿದ್ದರಿಂದ ಸ್ವಲ್ಪ ಹೊತ್ತು ಮಲಗಿರುತ್ತೇನೆ ಎಂದು ಮುಖ ತೊಳೆದು ಮಲಗಿದೆ. ಮತ್ತೆ ಎದ್ದಾಗ ರೂಮಿನಲ್ಲಿ ಯಾರೂ ಇರಲಿಲ್ಲ. ಸಮಯ ನೋಡಿದರೆ ಹತ್ತು ಗಂಟೆ ಆಗಿತ್ತು. ಬಾಗಿಲು ತೆರೆದು ಆಚೆ ಬಂದರೆ ಬಿಸಿಲು ಧಗಧಗಿಸುತ್ತಿತ್ತು. ಕಾಲು ಆಚೆ ಇಟ್ಟರೆ ಕಾದ ಹೆಂಚಿನ ಮೇಲಿಟ್ಟ ಹಾಗಿತ್ತು... ಹೇಗಪ್ಪ ಇಲ್ಲಿ ಜೀವನ ಮಾಡುತ್ತಾರೆ ಜನ ಎಂದುಕೊಂಡು ಸುತ್ತಲೂ ಒಮ್ಮೆ ನೋಡಿದೆ, ಈತನ ರೂಂ ಇದ್ದಿದ್ದು ನಾಲ್ಕನೇ ಮಹಡಿಯಲ್ಲಿ ಆದ್ದರಿಂದ ಸುತ್ತಲಿನ ಪ್ರದೇಶ ಎಲ್ಲಾ ಕಾಣುತ್ತಿತ್ತು. ಬರೀ ದೇವಸ್ಥಾನದ ಗೋಪುರಗಳೇ ಎದ್ದು ಕಾಣುತ್ತಿದ್ದವು. ಮಧುರೈ ದೇವಸ್ಥಾನಗಳ ಊರು ಎಂದು ಕೇಳಿದ್ದು ನೆನಪಾಗಿತ್ತು. ಹಿಂದೊಮ್ಮೆ ಜಾನಕಿ ಸಹ ಮಧುರೈಗೆ ಹೋಗಿ ಮೀನಾಕ್ಷಿಯ ದರ್ಶನ ಮಾಡಬೇಕು ಕಣೋ ಎಂದು ಹೇಳಿದ್ದು ನೆನಪಾಗಿ ಕಣ್ಣಂಚಲ್ಲಿ ನೀರು ಮೂಡಿತು. ಅಷ್ಟರಲ್ಲಿ ಮೊಬೈಲಿಗೆ ಕರೆಯೊಂದು ಬಂತು, ಯಾವುದೋ ಅಪರಿಚಿತ ನಂಬರಿಂದ ಬಂದ ಕರೆ ಆಗಿತ್ತು.
ಮಿ. ಅರ್ಜುನ್ ವೆಲ್ಕಂ ಟು ಮಧುರೈ.... ನಿನ್ನ ಆಗಮನ ನಿರೀಕ್ಷಿಸಿದ್ದೆ, ಆದರೆ ಇಷ್ಟು ಬೇಗ ಎಂದುಕೊಂಡಿರಲಿಲ್ಲ... ಆದರೆ ಅಷ್ಟಕ್ಕೇ ಎಲ್ಲ ಮುಗಿದು ಹೋಯ್ತು ಎಂದು ತಿಳಿದುಕೊಳ್ಳಬೇಡ... ಈಗಲೂ ಕಾಲ ಮೀರಿಲ್ಲ, ಸುಮ್ಮನೆ ನಿನ್ನ ಪಾಡಿಗೆ ನೀನು ಊರಿಗೆ ಹೊರಟು ಹೋಗು, ನಿನ್ನನ್ನೇ ನಂಬಿಕೊಂಡು ನಿನ್ನ ಅಪ್ಪ ಅಮ್ಮ, ಜಾನಕಿಯ ಅಪ್ಪ ಅಮ್ಮ ಎಲ್ಲಾ ಇದ್ದಾರೆ. ನೀನು ಏನೇ ಮಾಡಿದರೂ ನಿನ್ನ ಜಾನಕಿ ಮತ್ತೆ ವಾಪಸ್ ಬರುವುದಿಲ್ಲ. ನನ್ನನ್ನು ಹುಡುಕಲು ನಿನ್ನ ಕೈಲಿ ಆಗಲ್ಲ, ಸುಮ್ಮನೆ ಗಂಟು ಮೂಟೆ ಕಟ್ಟಿಕೊಂಡು ಊರಿಗೆ ಹೋದರೆ ಬಚಾವಾಗುತ್ತೀಯ.... ಇಲ್ಲ ಎಂದರೆ, ನಿನ್ನ ಜಾನಕಿ ಇರುವ ಜಾಗಕ್ಕೇ ನಿನ್ನನ್ನು ಕಳುಹಿಸಬೇಕಾಗುತ್ತದೆ ಹುಷಾರ್...
Comments
ಉ: ಅನ್ವೇಷಣೆ ಭಾಗ ೧೯
ಬಸ್ಸಿನಲ್ಲಿ ಪರಿಚಯವಾದವನ ಸ್ನೇಹಿತನ ಜೊತೆ ಉಳಿದದ್ದು ನಂಬುವುದು ಕಷ್ಟ. ಮುಂದುವರೆಯಲಿ.