ಅನ್ವೇಷಣೆ ಭಾಗ ೨೦

ಅನ್ವೇಷಣೆ ಭಾಗ ೨೦

ಹೇ ಬಾಸ್ಟರ್ಡ್.... ಎನ್ನುವಷ್ಟರಲ್ಲಿ ಕರೆ ಕಟ್ ಆಗಿತ್ತು.... ಮತ್ತೆ ಆ ನಂಬರಿಗೆ ಕರೆ ಮಾಡಿದರೆ ಸ್ವಿಚ್ ಆಫ್ ಎಂದು ಬರುತ್ತಿತ್ತು. ಕೂಡಲೇ ತ್ರಿವಿಕ್ರಂಗೆ ಕರೆ ಮಾಡಿ ನಡೆದ ವಿಷಯವನ್ನು ತಿಳಿಸಿದ್ದಕ್ಕೆ..... ಅರ್ಜುನ್, ನಾನು ನಿಮಗೆ ಮೊದಲೇ ಹೇಳಿರಲಿಲ್ಲವ, ಅವನು ಖಂಡಿತ ನಿಮ್ಮ ಎಲ್ಲ ಚಲನವಲನಗಳನ್ನು ಗಮನಿಸುತ್ತಿರುತ್ತಾನೆ ಎಂದು, ನನ್ನ ಅನುಮಾನ ನಿಜ ಆದರೆ ಬಸ್ಸಿನಲ್ಲಿ ನಿಮ್ಮ ಜೊತೆ ಬಂದವನು, ನಿಮ್ಮನ್ನು ರೂಮಿನಲ್ಲಿ ಇರಲು ಅವಕಾಶ ಮಾಡಿಕೊಟ್ಟವನೇ ಆ ಮೂಲ ವ್ಯಕ್ತಿ ಎನಿಸುತ್ತದೆ.... ಈಗ ರೂಮಿನಲ್ಲಿ ಯಾರಿದ್ದೀರ?

ಸರ್ ನಾನೊಬ್ಬನೇ, ಆ ಮುರುಗನ್ ಆಚೆ ಹೋಗಿದ್ದಾನೆ ಎನಿಸುತ್ತೆ..

ಅರ್ಜುನ್ ಹಾಗಿದ್ದರೆ ಈ ಕೂಡಲೇ ಅಲ್ಲಿಂದ ಜಾಗ ಖಾಲಿ ಮಾಡಿ ಆಚೆ ಬನ್ನಿ, ಹಾಗೆಯೇ ಮೊದಲು ನಿಮ್ಮ ಸಿಮ್ ಕಾರ್ಡ್ ತೆಗೆದುಬಿಡಿ, ನೀವು ಅಲ್ಲಿರುವಷ್ಟು ದಿವಸ ಮೊಬೈಲ್ ಬಳಸಬೇಡಿ... ಏನೇ ಇದ್ದರೂ ಸಾರ್ವಜನಿಕ ಫೋನ್ ಉಪಯೋಗಿಸಿ.... ಓಕೆ, ಉಳಿದಿದ್ದನ್ನು ಆಮೇಲೆ ಹೇಳುತ್ತೇನೆ..ಈ ಕೂಡಲೇ ಅಲ್ಲಿಂದ ಹೊರಡಿ, ಆಚೆ ಬಂದು ಯಾವುದಾದರೂ ಹೋಟೆಲ್ ನಲ್ಲಿ ರೂಂ ಮಾಡಿ ನಂತರ ನನಗೆ ಫೋನ್ ಮಾಡಿ..  ಹಾ ಆಮೇಲೆ ಇನ್ನೊಂದು ವಿಷಯ, ಹೋಟೆಲ್ ನಲ್ಲಿ ನಿಮ್ಮ Original ಮಾಹಿತಿ ಕೊಡಬೇಡಿ. ಅಂದರೆ... ನಿಮ್ಮ ಹೆಸರು, ಅಡ್ರೆಸ್ ಎಲ್ಲಾ ತಪ್ಪು ಕೊಡಿ, ಅಲ್ಲೊಂದೆ ಅಲ್ಲ ಇನ್ನೆಲ್ಲೇ ಹೋದರು ನಿಮ್ಮ ಯಾವುದೇ ವಿಷಯ ಯಾರೊಂದಿಗೂ ಹಂಚಿಕೊಳ್ಳಬೇಡಿ.... ಓಕೆ ಸರಿ ಬೈ. 

ಕೂಡಲೇ ರೂಮಿನ ಒಳಗೆ ಹೋಗಿ ಬ್ಯಾಗೆಲ್ಲಾ ಸಿದ್ಧಪಡಿಸಿಕೊಂಡು ಆಚೆ ಹೋಗೋಣ ಎಂದು ಒಮ್ಮೆ ಕೆಳಗೆ ಬಗ್ಗಿ ನೋಡಿದಾಗ ಮುರುಗನ್ ಬರುತ್ತಿರುವುದು ಕಂಡಿತು, ಕೂಡಲೇ ಅಲ್ಲಿಂದ ಹೇಗೆ ತಪ್ಪಿಸಿಕೊಳ್ಳುವುದು ಎಂದು ಆ ಕಡೆ ಈ ಕಡೆ ಕಣ್ಣು ಹಾಯಿಸಿದಾಗ, ನಾನಿದ್ದ ಕಟ್ಟಡದಿಂದ ಪಕ್ಕದ ಕಟ್ಟಡಕ್ಕೆ ಹೋಗಲು ಒಂದು ಸಣ್ಣ ಏಣಿಯ ಹಾಗೆ ಇಟ್ಟಿದ್ದರು. ಕೂಡಲೇ ಆ ಏಣಿಯ ಸಹಾಯದಿಂದ ಪಕ್ಕದ ಕಟ್ಟಡಕ್ಕೆ ಹೋಗಿ ಅಲ್ಲಿಂದ ಕೆಳಗಿಳಿದು ರಸ್ತೆಗೆ ಬಂದು ಆಟೋ ಹಿಡಿದು ಹೊರಡಲು ಹೇಳಿದೆ, ಆತ ಎಲ್ಲಿಗೆ ಎಂದು ಕೇಳಿದ... ನಾನು ಅವನಿಗೆ ಅನುಮಾನ ಬರಬಾರದೆಂದು ಬಸ್ ಸ್ಟ್ಯಾಂಡ್ ಎಂದು ಹೇಳಿದೆ.

ಅವನು ಕೂಡಲೇ ಬಸ್ ಸ್ಟ್ಯಾಂಡ್ ಕಡೆ ಹೊರಟ. ಹಿಂದಿನ ದಿನದಿಂದ ಇಲ್ಲಿಯವರೆಗೂ ನಡೆದ ಘಟನೆಗಳನ್ನು ನೆನೆಸಿಕೊಂಡು ಒಂದು ಕ್ಷಣ ಮೈ ರೋಮಾಂಚನಗೊಂಡಿತು ಹಾಗೆಯೇ ಬೇಸರವೂ ಆಯಿತು. ಕೈಗೆ ಸಿಕ್ಕಿದ್ದ ಪಾತಕಿಯನ್ನು ಕಳೆದುಕೊಂಡೆನಲ್ಲ.... ಛೇ.... ಈಗ ಅವನನ್ನು ಎಲ್ಲಿ ಎಂದು ಹುಡುಕುವುದು.....ಒಂದೇ ಒಂದು ಸುಳಿವೆಂದರೆ ಅವನ ಮುಖವನ್ನು ನೋಡಿದ್ದು, ಇಲ್ಲವಾದರೆ ಮುಖ ಪರಿಚಯ ಇಲ್ಲದ ವ್ಯಕ್ತಿಯನ್ನು ಈ ದೊಡ್ಡ ಊರಿನಲ್ಲಿ ಯಾವುದೇ ಸಹಾಯವಿಲ್ಲದೆ ಹುಡುಕುವುದು ಕಷ್ಟವಾಗುತ್ತಿತ್ತು... ಈಗಲೂ ಸುಲಭವೇನಲ್ಲ... ಹ್ಮ್.... ಇರಲಿ ನೋಡೋಣ.... ಆ ಮಧುರೈ ಮೀನಾಕ್ಷಿ ಹೇಗೆಲ್ಲಾ ನಡೆಸುತ್ತಾಳೋ ಹಾಗೆ ನಡೆಯುವುದು ಬಿಟ್ಟರೆ ನನ್ನ ಬಳಿ ಬೇರೆ ದಾರಿ ಇಲ್ಲ.... ಅಷ್ಟರಲ್ಲಿ ಆಟೋ ಬಸ್ ಸ್ಟ್ಯಾಂಡ್ ಬಳಿ ಬಂದು ನಿಂತಿತು. ಅವನಿಗೆ ದುಡ್ಡು ಕೊಟ್ಟು ಅಲ್ಲಿಂದ ಸಾರ್ವಜನಿಕ ಫೋನ್ ಎಲ್ಲಿದೆ ಎಂದು ಹುಡುಕಿಕೊಂಡು ಬರುತ್ತಿದ್ದಾಗ ಅಲ್ಲೇ ಇದ್ದ ಬಸ್ ಒಂದಕ್ಕೆ ಮುರುಗನ್ ಹತ್ತಿದ್ದು ಕಂಡಿತು.

 

ಓಹೋ ಇವನು ಆಗಲೇ ನನ್ನನ್ನು ಹುಡುಕಿಕೊಂಡು ಬಂದಿದ್ದಾನೆ.... ಹಾಗಿದ್ದರೆ ತ್ರಿವಿಕ್ರಂ ಊಹೆ ಸರಿಯಾಗೇ ಇದೆ. ಬೇರೆ ಯಾರೋ ಆಗಿದ್ದರೆ ಅವನು ನನ್ನನ್ನು ಯಾಕೆ ಹುಡುಕಿಕೊಂಡು ಬರುತ್ತಿದ್ದ. ಖಂಡಿತ ಅವನೇ ಮೂಲ ವ್ಯಕ್ತಿ ಎಂಬುದು ದೃಢವಾಯಿತು...ಮುರುಗನ್ ಅಲ್ಲಿಂದ ಕಣ್ಮರೆ ಆಗುವವರೆಗೂ ಅವನನ್ನೇ ಹಿಂಬಾಲಿಸಿ, ಅವನು ಅಲ್ಲಿಂದ ಹೊರಟ ಮೇಲೆ ಒಂದು STD ಬೂತಿನೊಳಗೆ ಹೊಕ್ಕಿ, ತ್ರಿವಿಕ್ರಂಗೆ ಕರೆ ಮಾಡಿ, ವಿವರ ನೀಡಿ ಸಧ್ಯಕ್ಕೆ ಬಸ್ ಸ್ಟ್ಯಾಂಡ್ ನಲ್ಲಿ ಇದ್ದೀನಿ, ಮುಂದೆ ಎಲ್ಲಾದರೂ ಹೋಟೆಲ್ ಒಂದರಲ್ಲಿ ರೂಂ ಮಾಡೋಣ ಎಂದಿದ್ದೇನೆ.... ಆದರೆ ಎಲ್ಲಿ ಎಂದು ತಿಳಿಯುತ್ತಿಲ್ಲ. ಅವನು ಎಲ್ಲಾ ಕಡೆ ಹುಡುಕೆ ಹುಡುಕುತ್ತಾನೆ.... ನಾನು ಮೊದಲು ನನ್ನ ಮಾಹಿತಿಗಳನ್ನು ಬದಲಿಸಿಕೊಳ್ಳಬೇಕು ಅದಕ್ಕೆ ಒಂದು ಇಂಟರ್ನೆಟ್ ಸೆಂಟರ್ ಹುಡುಕುತ್ತಿದ್ದೇನೆ.

ಅರ್ಜುನ್ ಇಂಟರ್ನೆಟ್ ಸೆಂಟರ್ ನಿಂದ ಏನು ಮಾಡುತ್ತೀಯ?

ಸರ್, ಫೋಟೋಶಾಪ್ ಬಳಸಿ ನನ್ನ ಲೈಸೆನ್ಸನ್ನು ಸ್ಕಾನ್ ಮಾಡಿ, ಅದರಲ್ಲಿ ಇರುವ ಮಾಹಿತಿಯನ್ನು ಬದಲಾಯಿಸಿ ಅದರ ಪ್ರಿಂಟ್ ಔಟ್ ತೆಗೆದುಕೊಳ್ಳುತ್ತೇನೆ, ಎಲ್ಲೇ ಹೋಗಿ ಯಾರಾದರೂ ಮಾಹಿತಿ ಕೇಳಿದರೆ ತೋರಿಸಲು ಅನುಕೂಲ ಆಗುತ್ತದೆ. ಏಕೆಂದರೆ ನಾನು ಪ್ರತಿ ಬಾರಿ ಸಾರ್ವಜನಿಕ ಫೋನ್ ಹುಡುಕಿಕೊಂಡು ಬರಲು ಆಗದಿರಬಹುದು. ಅದಕ್ಕೆ ಸಿಮ್ ತೆಗೆದುಕೊಳ್ಳಲು ಮಾಹಿತಿ ಕೊಡಬೇಕಲ್ಲ. ಈ ಮಾಹಿತಿಯನ್ನು ಕೊಟ್ಟು ಒಂದು ಸಿಮ್ ತೆಗೆದುಕೊಳ್ಳುತ್ತೇನೆ. ಸಧ್ಯಕ್ಕೆ ಇಷ್ಟು ಮಾಹಿತಿ ನೀಡಿರುತ್ತೇನೆ. ನಾನು ಸಿಮ್ ತೆಗೆದುಕೊಂಡ ನಂತರ ನಾನು ಕರೆ ಮಾಡಿ ನಿಮಗೆ ನಂಬರ್ ಕೊಡುತ್ತೇನೆ. ಸರ್ ಮತ್ತೊಮ್ಮೆ ಹೇಳುತ್ತೇನೆ ಎಂದು ಬೇಸರ ಮಾಡಿಕೊಳ್ಳಬೇಡಿ... ಈ ಕೆಲಸದಲ್ಲಿ ನನಗೇನಾದರೂ ಆದರೆ ನಮ್ಮ ಮನೆಯವರನ್ನು ಮತ್ತು ಜಾನಕಿಯ ಮನೆಯವರಿಗೆ ನೀವು ಆಸರೆ ಆಗಿರುತ್ತೀರ ತಾನೇ....

ಅರ್ಜುನ್.... ನೀವು ಅದರ ಬಗ್ಗೆ ಯಾವುದೇ ಚಿಂತೆ ಮಾಡಬೇಡಿ.... ಇನ್ನೊಂದು ವಿಷಯ... ನಾನು ಮಿನಿಸ್ಟರ್ ಬಳಿ ಮಾತಾಡಿ, ಈ ಕೇಸಿನಲ್ಲಿ ಆದಷ್ಟು ಬೇಗ ಮೂಲ ವ್ಯಕ್ತಿಯನ್ನು ಹುಡುಕಲು ನಮ್ಮ ಡಿಪಾರ್ಟ್ಮೆಂಟ್ ಪರವಾಗಿ ಒಂದು ತಂಡವನ್ನು ಮಧುರೈಗೆ ಕಳುಹಿಸಲು ಪತ್ರ ಬರೆದಿದ್ದೇನೆ. ಅವರು ಇವತ್ತು ಸಂಜೆಯ ಒಳಗಡೆ ವಿಷಯ ತಿಳಿಸುತ್ತೇನೆ ಎಂದು ಹೇಳಿದ್ದಾರೆ. ನೋಡೋಣ ಏನಾಗುತ್ತದೋ ಎಂದು. 

ಅರ್ಜುನ್.... ನಾನು ನನ್ನ ಕೈಲಾದಷ್ಟು ನಾನು ಪ್ರಯತ್ನ ಪಡುತ್ತಿದ್ದೇನೆ. ಅದೇನೋ ಗೊತ್ತಿಲ್ಲ ಈ ಕೇಸ್ ಕೈಗೆ ತೆಗೆದುಕೊಂಡಾಗಿನಿಂದ ನನ್ನ ಮನಸಿಗೆ ಬಹಳ ನೋವಾಗುತ್ತಿದೆ. ಅಂದರೆ ನಾನು ಯಾವತ್ತೂ ಯಾವ ಕೇಸನ್ನು ಒಬ್ಬ ಅಧಿಕಾರಿಯಾಗಿ ಅಷ್ಟೇ ಡೀಲ್ ಮಾಡಿದ್ದೆ. ಆದರೆ ಮೊಟ್ಟ ಮೊದಲ ಬಾರಿಗೆ.... ಹ್ಮ್ .... ಓಕೆ ನೋಡೋಣ....

ಸರ್... ನಿಮ್ಮ ಕಾಳಜಿಗೆ ತುಂಬಾ ಧನ್ಯವಾದಗಳು....

ಕರೆ ಕಟ್ ಮಾಡಿ ಇಂಟರ್ನೆಟ್ ಸೆಂಟರ್ ಹುಡುಕಿಕೊಂಡು ಹೋಗುತ್ತಿದ್ದಾಗ ಅಲ್ಲೇ ಪಕ್ಕದಲ್ಲೇ ಒಂದು ಸೆಂಟರ್ ಕಾಣಿಸಿತು. ಅಲ್ಲಿ ಹೋಗಿ ಲೈಸೆನ್ಸನ್ನು ಸ್ಕಾನ್ ಮಾಡಿ, ಅದರಲ್ಲಿ ಹೆಸರು ಮತ್ತು ಅಡ್ರೆಸ್ಸನ್ನು ಬದಲಾಯಿಸಿ, ಒಂದು ಪ್ರಿಂಟ್ ಔಟ್ ತೆಗೆದುಕೊಂಡು ಅಲ್ಲೇ ಪಕ್ಕದಲ್ಲಿದ್ದ Aircel ಅಂಗಡಿಗೆ ಹೋಗಿ, ಒಂದು ಪ್ರಿಪೇಯ್ಡ್ ಸಿಮ್ ತೆಗೆದುಕೊಳ್ಳಲು ಅಪ್ಲಿಕೇಶನ್ ಕೊಟ್ಟು ಸಿಮ್ ತೆಗೆದುಕೊಂಡು ಆಚೆ ಬಂದು ಮಧುರೈ ಸಿಟಿಯ ಒಂದು ಮ್ಯಾಪ್ ತೆಗೆದುಕೊಂಡು ರೂಮಿಗಾಗಿ ಯಾವುದಾದರೂ ಹೋಟೆಲ್ ಇದೆಯಾ ಎಂದು ಹುಡುಕಾಡುತ್ತಿದ್ದಾಗ, ತಲೆಯಲ್ಲಿ ಒಂದು ಆಲೋಚನೆ ಬಂತು, ರೂಮಿನ ಬದಲು ಯಾವುದಾದರೂ ಮನೆಯನ್ನು ಬಾಡಿಗೆ ಪಡೆದರೆ, ಅವನಿಗೆ ಅನುಮಾನ ಬರುವುದಿಲ್ಲ ಎಂದೆನಿಸಿತು... ಆದರೆ ಇಲ್ಲಿ ನನಗೆ ಯಾರು ಮನೆ ಕೊಡುತ್ತಾರೆ ಎಂದು ಯೋಚಿಸುತ್ತಿದ್ದಾಗ ಅಲ್ಲೇ ಇಂಟರ್ನೆಟ್ ಸೆಂಟರಿನ ಬಾಗಿಲ ಮೇಲೆ Rooms/House for Rent /Lease ಎಂದು.

ಅಮ್ಮ ಮಧುರೈ ಮೀನಾಕ್ಷಿ ಅಂತೂ ನೀನಾದರೂ ನನ್ನ ಜೊತೆ ಇದೆಯಲ್ಲ ಎಂದುಕೊಂಡು ಅವನಿಗೆ ಒಂದು ರೂಂ ಬಾಡಿಗೆಗೆ ಬೇಕು ಆದರೆ ಹೋಟೆಲಿನಲ್ಲಿ ಬೇಡ ಬೇರೆ ಎಲ್ಲಾದರೂ ಇದ್ದರೆ ಹೇಳಿ ಎಂದಿದ್ದಕ್ಕೆ ಅವನು ಕೂಡಲೇ ಇಲ್ಲೇ ಪಕ್ಕದಲ್ಲೇ ಒಂದು ರೂಂ ಇದೆ ಬನ್ನಿ ಎಂದು ಕರೆದುಕೊಂಡು ಒಂದು ಸಣ್ಣ ಗಲ್ಲಿಯೊಳಗೆ ಹೊಕ್ಕಿ ಅಲ್ಲಿದ್ದ ಒಂದು ರೂಮನ್ನು ತೋರಿಸಿದ. ಇದ್ದದ್ದರಲ್ಲೇ ಅಚ್ಚುಕಟ್ಟಾಗಿತ್ತು, ಅಷ್ಟು ಸುಲಭವಾಗಿ ಯಾರಿಗೂ ಅದನ್ನು ಕಂಡುಹಿಡಿಯಲು ಸಾಧ್ಯವಿರಲಿಲ್ಲ... ಹಾಗಾಗಿ ಇದೇ ಇರಲಿ ಎಂದು ಅವನಿಗೆ ಸಂಜೆ ಅಡ್ವಾನ್ಸ್ ಕೊಡುತ್ತೇನೆ ಎಂದು ಹೇಳಿ ಅವನನ್ನು ಕಳುಹಿಸಿ ಮಧುರೈ ಮ್ಯಾಪ್ ಹಿಡಿದು ಕುಳಿತೆ.

Rating
No votes yet