ಅನ್ವೇಷಣೆ ಭಾಗ ೨೧

ಅನ್ವೇಷಣೆ ಭಾಗ ೨೧

ಮ್ಯಾಪ್ ನೋಡುತ್ತಿದ್ದ ಹಾಗೆ ಆ ವ್ಯಕ್ತಿಯನ್ನು ಕಂಡುಹಿಡಿಯುವುದು ನಾನಂದುಕೊಂಡಷ್ಟು ಸುಲಭವಲ್ಲ, ಇಷ್ಟು ದೊಡ್ಡ ಊರಿನಲ್ಲಿ ಅವನ ಕಣ್ಣು ತಪ್ಪಿಸಿ, ಎಷ್ಟು ಅಂಗಡಿಗಳನ್ನು ಹುಡುಕಲು ಸಾಧ್ಯ... ಯಾಕೋ ಈ ಆಲೋಚನೆ ವರ್ಕೌಟ್ ಆಗುವ ಹಾಗೆ ಕಾಣುತ್ತಿಲ್ಲ, ಇದಕ್ಕೆ ಬೇರೆ ಏನಾದರೂ ಉಪಾಯ ಕಂಡುಹಿಡಿಯಬೇಕು....ಸಿಮ್ ಆಕ್ಟಿವೆಟ್ ಆಗಲು ಇನ್ನು ಎರಡು ತಾಸು ಇದೆ ಅಷ್ಟರಲ್ಲಿ ಸ್ನಾನ ಮಾಡಿ ತಿಂಡಿ ತಿಂದು ಬರೋಣ ಎಂದುಕೊಂಡು ಸ್ನಾನ ಮಾಡಿ ಆಚೆ ಬಂದು ಮತ್ತೆ ಬಸ್ ಸ್ಟ್ಯಾಂಡ್ ಬಳಿ ಬಂದು ಅಲ್ಲಿದ್ದ ಹೋಟೆಲ್ನಲ್ಲಿ ತಿಂಡಿ ತಿಂದು ಮತ್ತೆ ರೂಮಿಗೆ ಬಂದು ಮತ್ತೆ ಮ್ಯಾಪನ್ನು ನೋಡುತ್ತಾ ಕುಳಿತೆ. ಅಷ್ಟರಲ್ಲಿ ಸಿಮ್ ಆಕ್ಟಿವೆಟ್ ಆದ ಮೆಸೇಜ್ ಬಂತು, ಕೂಡಲೇ ತ್ರಿವಿಕ್ರಂ ಗೆ ಕರೆ ಮಾಡಿ ಅಲ್ಲಿಯವರೆಗೂ ನಡೆದ ವಿವರಗಳನ್ನು ನೀಡಿ, ಹಾಗೆ ತನ್ನ ಆಲೋಚನೆಯನ್ನು ಡ್ರಾಪ್ ಮಾಡಿರುವುದಾಗಿ ತಿಳಿಸಿದೆ.

ಅರ್ಜುನ್.... ನನಗೆ ಮೊದಲೇ ಗೊತ್ತಿತ್ತು, ನಿನ್ನ ಆಲೋಚನೆಯನ್ನು ಇಟ್ಟುಕೊಂಡು ಈ ರಹಸ್ಯವನ್ನು ಭೇಧಿಸುವುದು ಅಸಾಧ್ಯ ಎಂದು, ಆದರೆ ನಿನ್ನ ಉತ್ಸಾಹಕ್ಕೆ ಯಾಕೆ ತಣ್ಣೀರು ಎರಚಲಿ ಎಂದು ಸುಮ್ಮನಿದ್ದೆ. ನೀನೇನೂ ಯೋಚಿಸಬೇಡ, ನಾನು ಈಗಷ್ಟೇ ಮಿನಿಸ್ಟರ್ ಬಳಿ ಖುದ್ದಾಗಿ ಮಾತಾಡಿ ಬಂದೆ. ಅವರು ತಂಡವನ್ನು ಮಧುರೈಗೆ ಕಳಿಸಲು ಒಪ್ಪಿಕೊಂಡಿದ್ದಾರೆ. ಇವತ್ತು ರಾತ್ರಿಯೇ ಹೊರಡುತ್ತಿದ್ದೇವೆ. ಅಲ್ಲಿಯವರೆಗೂ ನೀನು ಹುಷಾರಾಗಿರಬೇಕು ಅಷ್ಟೇ. ನಾವು ಬೆಳಿಗ್ಗೆ ಅಷ್ಟೊತ್ತಿಗೆ ಅಲ್ಲಿ ಬಂದು ನಿನಗೆ ಕರೆ ಮಾಡುತ್ತೇನೆ ಬೈ.

ಅಬ್ಬಾ.... ಸಧ್ಯ ಎಂದು ನಿಟ್ಟುಸಿರು ಬಿಟ್ಟು ಸ್ವಲ್ಪ ಹೊತ್ತು ಮಲಗೋಣ ಎಂದು ಕಣ್ಮುಚ್ಚಿದೆ.

ಕಣ್ಣು ಮುಚ್ಚಿದರೆ ಜಾನಕಿಯೇ ಕಣ್ಣ ಮುಂದೆ ಬರುತ್ತಿದ್ದಳು, ಅವಳು ನನ್ನ ಪಕ್ಕದಲ್ಲಿ ಕುಳಿತು, ನನ್ನ ತಲೆಯನ್ನು ಅವಳ ಮಡಿಲಲ್ಲಿ ಇಟ್ಟುಕೊಂಡು ಹಣೆಯನ್ನು ಸವರುತ್ತಿದ್ದಂತೆ ಭಾಸವಾಯಿತು... ಪ್ರೀತಿಯಿಂದ ಅವಳ ಕೈ ಹಿಡಿದುಕೊಳ್ಳುವಷ್ಟರಲ್ಲಿ ಅವಳು ಹೊರಟುಬಿಟ್ಟಳು. ಎದ್ದು ಕೂತು ಕಣ್ಣಂಚಲ್ಲಿ ಮೂಡಿದ್ದ ಹನಿಯನ್ನು ಒರೆಸಿಕೊಂಡು ಪರ್ಸಿನಲ್ಲಿದ್ದ ಅವಳ ಫೋಟೋ ತೆಗೆದು ಆ ಫೋಟೋಗೆ ಒಂದು ಮುತ್ತು ಕೊಟ್ಟು ಮತ್ತೆ ಮಲಗಿದೆ.

ಇನ್ನೇನು ಗಾಢವಾದ ನಿದ್ರೆ ಹತ್ತಬೇಕು ಎನ್ನುವಷ್ಟರಲ್ಲಿ ಯಾರೋ ಎದೆಯ ಮೇಲೆ ದಬದಬ ಎಂದು ಗುದ್ದಿದ ಹಾಗಾಯಿತು. ಗಾಭರಿಯಿಂದ ಎಂದು ನೋಡಿದರೆ ಗುದ್ದುತ್ತಿರುವುದು ಎದೆಯ ಮೇಲಲ್ಲ, ಬಾಗಿಲನ್ನು ಎಂದು ಗೊತ್ತಾಯಿತು. ಯಾರಿರಬಹುದು? ತ್ರಿವಿಕ್ರಂ ಬರುವುದು ನಾಳೆ ಬೆಳಿಗ್ಗೆ, ಅಂಗಡಿಯವನಿಗೆ ಬರಲು ಹೇಳಿರುವುದು ಸಂಜೆಗೆ...ಇನ್ಯಾರಿಗೂ ನಾನಿಲ್ಲಿ ಇರುವುದು ಗೊತ್ತಿಲ್ಲ.... ಮುರುಗನ್?? ಎದ್ದು ಹೋಗಿ ಬಾಗಿಲ ಸಂದಿನಿಂದ ನೋಡಿದರೆ... !!ಹೌದು ಮುರುಗನ್ ನಿಂತಿದ್ದಾನೆ, ಕೈಯಲ್ಲಿ ಒಂದು ಕಬ್ಬಿಣದ ರಾಡ್ ಹಿಡಿದುಕೊಂಡು ಇನ್ನೊಂದು ಕೈಯಿಂದ ಬಾಗಿಲನ್ನು ಬಡಿಯುತ್ತಿದ್ದಾನೆ, ಇನ್ನೊಂದು ಕಾಲು ಗಂಟೆ ಹಾಗೆಯೇ ಬಡಿದರೆ ಬಾಗಿಲು ಮುರಿದು ಬೀಳುವುದೆನೋ ಎನ್ನುವ ಹಾಗೆ ಬಡಿಯುತ್ತಿದ್ದಾನೆ, ಪಕ್ಕದಲ್ಲೇ ಅಂಗಡಿಯವನು ನಿಂತಿದ್ದಾನೆ.

ಅಂದರೆ... ಅವನೂ ಇವರ ಜೊತೆ ಭಾಗಿಯಾಗಿದ್ದಾನೆ....ನನ್ನ ಪ್ರತಿಯೊಂದು ನಡೆಯನ್ನೂ ಅವನು ಗಮನಿಸುತ್ತಿದ್ದಾನೆ ಎಂದಾಯಿತು... ಈಗ ಇಲ್ಲಿಂದ ತಪ್ಪಿಸಿಕೊಳ್ಳುವ ದಾರಿ ಏನು ಎಂದು ಸುತ್ತಲೂ ನೋಡಿದರೆ ಯಾವ ದಾರಿಯೂ ಕಾಣಲಿಲ್ಲ. ರೂಮಿನ ಅಟ್ಟದ ಮೇಲೆ ನೋಡಿದರೆ ಒಂದು ದಪ್ಪನಾದ ಕಬ್ಬಿಣದ ಕಂಬಿ ಒಂದು ಕಂಡಿತು, ಸಾಕು... ಇದನ್ನು ಹಿಡಿದು ಹೇಗೋ ಅವನಿಂದ ತಪ್ಪಿಸಿಕೊಳ್ಳಬಹುದು.... ಅವನಿಗಿಂತ ಮೊದಲು ನಾನೇ ದಾಳಿ ಮಾಡಿದರೆ ಆಚೆಯಿಂದ ತಪ್ಪಿಸಿಕೊಳ್ಳಬಹುದು ಎಂದುಕೊಂಡು ನಿಧಾನಕ್ಕೆ ಬಾಗಿಲ ಚಿಲಕ ಸಡಿಲಿಸಿ ಕಂಬಿಯನ್ನು ಸಿದ್ಧ ಇಟ್ಟುಕೊಂಡು ಅವನ ಮೇಲೆ ನುಗ್ಗೋಣ ಎಂದು ಮುಂದಾದರೆ, ಅವನು ಕೈಯಲ್ಲಿ ಪಿಸ್ತೂಲ್ ಹಿಡಿದು ನಿಂತಿದ್ದಾನೆ.... ಅವನು ಯಾವಾಗ ಪಿಸ್ತೂಲ್ ಹಿಡಿದನೋ ಗೊತ್ತಾಗಲಿಲ್ಲ, ನಾನು ಕಂಬಿಯನ್ನು ಬೀಸುವುದರೊಳಗೆ ಪಿಸ್ತೂಲಿನಿಂದ ಗುಂಡು ಹಾರಿತ್ತು.... ಕ್ಷಣಕಾಲ ಏನಾಯಿತೆಂದು ತಿಳಿಯುವುದರೊಳಗೆ ಗುಂಡು ನನ್ನ ಎದೆಯನ್ನು ಸೀಳಿಕೊಂಡು ಒಳಗಡೆ ಸೇರಿ ಇಡೀ ದೇಹಕ್ಕೆ ಶಾಖ ಕೊಟ್ಟಂತಾಗಿ, ನೋವು ತಾಳಲಾರದೆ ಜೋರಾಗಿ ಕಿರುಚಲು ಯತ್ನಿಸುವಷ್ಟರಲ್ಲಿ ಮತ್ತೊಂದು ಗುಂಡು ನನ್ನ ಗಂಟಲನ್ನು ಸೀಳಿತ್ತು....

ಮುರುಗನ್ ಹಿಂದಿನಿಂದ ಆ ವ್ಯಕ್ತಿ ನನ್ನೆದುರು ಬಂದು, ಲೇ... ನಾನು ಮೊದಲೇ ಹೇಳಿರಲಿಲ್ಲವ... ಸುಮ್ಮನೆ ಹೊರಟು ಹೋಗು ಇಲ್ಲವಾದರೆ, ಜಾನಕಿ ಇರುವ ಕಡೆಗೇ ನಿನ್ನನ್ನೂ ಕಳಿಸಬೇಕಾಗುತ್ತದೆ ಎಂದು..... ಕಣ್ಣುಗಳು ಮಂಜಾಗುತ್ತಿತ್ತು.... ಇನ್ನೇನು ಪ್ರಾಣ ಪಕ್ಷಿ ಹಾರಬೇಕು ಎನ್ನುವಷ್ಟರಲ್ಲಿ ಜೋರಾಗಿ ಶಬ್ದ ಆಯಿತು.... ಏನೆಂದು ಬಲವಂತವಾಗಿ ಕಣ್ಣು ಬಿಟ್ಟು ನೋಡಿದರೆ, ಯಾರೋ ಬಾಗಿಲು ತಟ್ಟುತ್ತಿರುವ ಸದ್ದು... ಅಂದರೆ ಇಷ್ಟು ಹೊತ್ತು ನಾನು ಕಂಡಿದ್ದು ಕನಸು!!

ಹೌದು ದೇಹ ದಣಿದಿದ್ದರಿಂದ ಒಳ್ಳೆಯ ನಿದ್ರೆ ಆವರಿಸಿತ್ತು...ಆಗಲೇ ಸಮಯ ಸಂಜೆ ನಾಲ್ಕು ಗಂಟೆ ಆಗಿತ್ತು... ಓಹೋ ನಾನು ಮಲಗಿ ಸುಮಾರು ನಾಲ್ಕು ಗಂಟೆಗಳು ಆಗಿ ಹೋಗಿದೆ ಎಂದುಕೊಂಡು ಬಾಗಿಲ ಬಳಿ ಬಂದು ಬಗ್ಗಿ ನೋಡಿದರೆ ಅಂಗಡಿಯವನು ನಿಂತಿದ್ದ.... ಬಾಗಿಲು ತೆರೆದು ಏನೆಂದು ಕೇಳಿದ್ದಕ್ಕೆ, ಏನಿಲ್ಲ ಸರ್... ಊಟ ಏನಾದರೂ ಬೇಕಿದ್ದರೆ ನನಗೆ ಫೋನ್ ಮಾಡಿ ನಾನೇ ತರಿಸಿ ಹುಡುಗನ ಕೈಲಿ ಕಳಿಸಿಕೊಡುತ್ತೇನೆ... ಏಕೆಂದರೆ ಇಲ್ಲೆಲ್ಲೂ ಒಳ್ಳೆಯ ಊಟ ಸಿಗುವುದಿಲ್ಲ, ಪ್ರತಿದಿನ ನಮ್ಮ ಹುಡುಗ ಬೇರೆ ಕಡೆಯಿಂದ ತರುತ್ತಾನೆ... ನಿಮಗೂ ಬೇಕಿದ್ದರೆ ಹೇಳಿಬಿಡಿ ಎಂದ.

 

ನನಗೆ ಇನ್ನೂ ಒಳ್ಳೆಯದೇ ಆಯಿತು... ಆಚೆ ಹೋಗುವ ತಲೆನೋವು ಇರುವುದಿಲ್ಲ ಎಂದುಕೊಂಡು... ಹಾ ರಾತ್ರಿಗೆ ಊಟ ಬೇಕಿತ್ತು ಎಂದು ಹೇಳಿ, ಒಟ್ಟಿಗೆ ತಿಂಗಳಿಗೆ ಕೊಟ್ಟರೆ ಆಗುತ್ತೋ ಅಥವಾ ಅವತ್ತಿಂದು ಅವತ್ತು ಕೊಡಬೇಕೋ ಎಂದು ಕೇಳಿದ್ದಕ್ಕೆ, ನಿಮಗೆ ಹೇಗೆ ಅನುಕೂಲವೋ ಹಾಗೆ ಮಾಡಿ ಎಂದು ಹೇಳಿ ಹೊರಟು ಹೋದ.

ನಾನು ಅಂಗಡಿಯವನಿಗೆ ಎಷ್ಟು ದಿವಸ ಇರುತ್ತೇನೆ ಏನು ಒಂದೂ ಹೇಳಿರಲಿಲ್ಲ... ಏಕೆಂದರೆ ಕಡಿಮೆ ದಿವಸಕ್ಕೆ ಎಂದರೆ ಖಂಡಿತ ಅವನು ರೂಮು ಕೊಡುವುದಿಲ್ಲ ಎನಿಸಿ ಅವನ ಬಳಿ ಏನೂ ಹೇಳಿರಲಿಲ್ಲ. ಒಂದು ವೇಳೆ ನಾಳೆ ತ್ರಿವಿಕ್ರಂ ಬಂದು ಇಲ್ಲಿರುವುದು ಬೇಡ, ಬೇರೆ ಎಲ್ಲಾದರೂ ಇರಬೇಕು ಎಂದರೆ ಏನು ಮಾಡುವುದು... ಇರಲಿ ತ್ರಿವಿಕ್ರಂ ಅವರನ್ನೇ ಕೇಳಿಬಿಡೋಣ ಎಂದು ಮತ್ತೊಮ್ಮೆ ಕರೆ ಮಾಡಿ, ಸರ್... ಹೀಗೆ ನಾನೊಂದು ರೂಮಿನಲ್ಲಿ ಉಳಿದುಕೊಂಡಿದ್ದೇನೆ, ಅದಕ್ಕೆ ಅಡ್ವಾನ್ಸ್ ಸಂಜೆ ಕೊಡುತ್ತೇನೆ ಎಂದು ಹೇಳಿದ್ದೇನೆ. ನೀವು ಬಂದ ಮೇಲೆ ನಾನು ಇಲ್ಲೇ ಮುಂದುವರಿಯುವುದ ಅಥವಾ ಬೇರೆ ಎಲ್ಲಾದರೂ ನನ್ನನ್ನು ಸ್ಥಳಾಂತರ ಮಾಡಿಸುತ್ತೀರೋ?

ಅರ್ಜುನ್.... ಆ ಮೂಲ ವ್ಯಕ್ತಿಗೆ ಯಾವುದೇ ಅನುಮಾನ ಬರದ ಹಾಗಿದ್ದರೆ ಅಲ್ಲೇ ಮುಂದುವರಿಯಬಹುದು.... ನಿಮಗೆ ಆ ನಂಬಿಕೆ ಇದ್ದರೆ ಅಲ್ಲೇ ಇರುವುದು ಒಳ್ಳೆಯದು. ಏಕೆಂದರೆ ನಾನು ಬಂದರೆ ಡಿಪಾರ್ಟ್ಮೆಂಟ್ ಜೊತೆಯಲ್ಲಿ ಇರುತ್ತೇನೆ, ಮತ್ತು ನೀವು ನನ್ನ ಜೊತೆ ಕಾಣಿಸಿಕೊಂಡರೆ ಅವನಿಗೆ ಅನುಮಾನ ಬರಬಹುದು... ಏಕೆಂದರೆ ಆ ವ್ಯಕ್ತಿಗೆ ಖಂಡಿತ ಪೋಲಿಸ್ ಡಿಪಾರ್ಟ್ಮೆಂಟ್ ನಲ್ಲಿ ಯಾರೊಂದಿಗಾದರೂ ಸಂಪರ್ಕ ಇದ್ದೆ ಇರುತ್ತದೆ. ಹಾಗಾಗಿ ನೀವು ಅಲ್ಲಿರುವುದೇ ಸೇಫ್...

ಓಕೆ... ಸರ್ ನನಗೆ ಅನಿಸಿದ ಮಟ್ಟಿಗೆ ಈ ಜಾಗ ಸೇಫ್ ಅನಿಸುತ್ತದೆ. ನಾನು ನನ್ನ ಎಲ್ಲ ದಾಖಲೆಗಳಲ್ಲೂ ಹೆಸರು ಮತ್ತು ಅಡ್ರೆಸ್ಸ್ ಬದಲಿಸಿಕೊಂಡಿದ್ದೇನೆ.... ಇನ್ನು ಏನಿದ್ದರೂ ನೀವು ಬಂದ ಮೇಲೆ ಹೇಗೆ ಹೇಳುತ್ತೀರೋ ಹಾಗೆ ಮುಂದುವರಿಯೋಣ. ಥಾಂಕ್ ಯೂ ಸರ್.. 

Rating
No votes yet