ಅನ್ವೇಷಣೆ ಭಾಗ ೨೨

ಅನ್ವೇಷಣೆ ಭಾಗ ೨೨

ಮಧುರೈ ಬಿಸಿಲಿಗೆ ಎಷ್ಟು ತಿಂದರೂ ತಿಂದರ್ಧ ಗಂಟೆಯಲ್ಲೇ ಮತ್ತೆ ಹಸಿವಾಗುತ್ತಿತ್ತು. ತಿಂದದ್ದೆಲ್ಲಾ ಬೆವರಿನಲ್ಲೇ ಕರಗಿ ಹೋಗುತ್ತಿತ್ತು. ರಾತ್ರಿ ಅಂಗಡಿಯ ಊಟ ತಂದುಕೊಟ್ಟು ಹೋದ ನಂತರ ಊಟ ಮಾಡಿ ಮಲಗಿದೆ. ಬೆಳಿಗ್ಗೆ ಆರು ಗಂಟೆಗೆ ಮೊಬೈಲ್ ಹೊಡೆದುಕೊಳ್ಳಲು ಆರಂಭಿಸಿತು. ಕೂಡಲೇ ಎದ್ದು ಕಣ್ಣುಜ್ಜಿಕೊಂಡು ಕರೆ ಸ್ವೀಕರಿಸಿದರೆ ತ್ರಿವಿಕ್ರಂ ಹಲೋ ಎಂದರು. ಹಲೋ ಅರ್ಜುನ್, ಗುಡ್ ಮಾರ್ನಿಂಗ್ ನಾವು ಈಗಷ್ಟೇ ಮಧುರೈಗೆ ಬಂದಿಳಿದೆವು. ಅರ್ಜುನ್ ನೀನು ಸರಿಯಾಗಿ ಯಾವ ಏರಿಯಾದಲ್ಲಿ ಇರುವುದು ಎಂದು ಹೇಳುವೆಯ?

ಸರ್... ನಾನಿಲ್ಲಿ ಸೆಂಟ್ರಲ್ ಸಿನೆಮಾ ಹಾಲ್ ಪಕ್ಕದಲ್ಲಿರುವ ನೇತಾಜಿ ರಸ್ತೆಯಲ್ಲಿ ಒಂದು ಮನೆಯಲ್ಲಿ ಬಾಡಿಗೆಗೆ ಇದ್ದೀನಿ.

ಅರ್ಜುನ್ ಹಾಗಿದ್ದರೆ ಒಂದು ಕೆಲಸ ಮಾಡಿ, ಸರಿಯಾಗಿ ಹತ್ತು ಗಂಟೆಗೆ C.S ನಗರ್ ನಲ್ಲಿರುವ ಪೋಲಿಸ್ ಕ್ವಾರ್ಟರ್ಸ್ ಗೆ ಬಂದು ಬಿಡು. ನೀನಿರುವ ಜಾಗದಿಂದ ಅಂದಾಜು ಐದು ಕಿಮೀ ದೂರದಲ್ಲಿ ಈ ಕ್ವಾರ್ಟರ್ಸ್ ಇರುವುದು. ಜಾಸ್ತಿ ಹೊತ್ತು ರಸ್ತೆಯಲ್ಲಿ ನಿಲ್ಲದೆ ಆಟೋದಲ್ಲಿ ಇಲ್ಲಿಗೆ ಬಂದುಬಿಡು. ಇಲ್ಲಿ ಬಂದ ಮೇಲೆ ನಾನು ನಿನಗೆ ಮುಂದಿನ ವಿಷಯದ ಬಗ್ಗೆ ಮಾತಾಡುತ್ತೇನೆ. ಹುಷಾರ್...!!

ಸರ್, ಹಾಗೇ ಆಗಲಿ.. ನಾನು ಸರಿಯಾಗಿ ಹತ್ತು ಗಂಟೆಗೆ ಅಲ್ಲಿರುತ್ತೇನೆ ಎಂದು ಹೇಳಿ ಸ್ನಾನ ಮಾಡಿ ಸಿದ್ಧವಾಗಿ ಒಂಭತ್ತು ಗಂಟೆಗೆ ಸರಿಯಾಗಿ ರೂಮಿನಿಂದ ಆಚೆ ಬಂದು ಕೂಡಲೇ ಒಂದು ಆಟೋ ಹತ್ತಿ C.S.Nagar Police quarters ಎಂದು ಹೇಳಿದೆ, ಅವನು ತಮಿಳಿನಲ್ಲಿ ಅಂಬದು ರುವಾ ಎಂದ... ನಾನು ಚರಿ ಚರಿ ಪೊಂಗೋ ಎಂದೆ. ಅವನು ಆಟೋ ಶುರು ಮಾಡಿ ಹೊರಟ. ಅವನು ಸರಿ ದಾರಿಯಲ್ಲಿ ಹೋಗುತ್ತಿದ್ದಾನೋ ಇಲ್ಲವೋ ಎಂದು ಮ್ಯಾಪ್ ತೆಗೆದುಕೊಂಡು ದಾರಿಯಲ್ಲಿ ಕಾಣುತ್ತಿದ್ದ ಬೋರ್ಡ್ ಎಲ್ಲ ನೋಡುತ್ತಿದ್ದೆ. ಮೊದಲು ದಾನಪ್ಪ ಮೊದಲಿಯಾರ್ ಸ್ಟ್ರೀಟ್, N.Masi ಸ್ಟ್ರೀಟ್, ಕೊಚಿ - ಧನುಷ್ಕೋಟಿ ರಸ್ತೆ, PT Rajan ರಸ್ತೆ, ಎಲ್ಲಾ ದಾಟಿಕೊಂಡು ಸರಿಯಾಗೇ ಪೋಲಿಸ್ ಕ್ವಾರ್ಟರ್ಸ ಬಳಿ ಬಂದ. ಬಹುಶಃ ಪೋಲಿಸ್ ಕ್ವಾರ್ಟರ್ಸ ಎಂದು ಹೇಳಿದ್ದಕ್ಕೆ ಸರಿಯಾಗಿ ಬಂದ ಎಂದುಕೊಂಡು ಅವನಿಗೆ ಐವತ್ತು ರೂ ಕೊಟ್ಟು ಕ್ವಾರ್ಟರ್ಸ ಗೇಟಿನ ಬಳಿ ಬಂದು ತ್ರಿವಿಕ್ರಂಗೆ ಕರೆ ಮಾಡಿದಾಗ, ಅವರೇ ಆಚೆ ಬರುತ್ತೇನೆ ಎಂದು ಗೇಟ್ ಬಳಿ ಬಂದರು.

ಬನ್ನಿ ಒಳಗೆ ಹೋಗೋಣ ಎಂದು ತಮ್ಮ ರೂಮಿಗೆ ಕರೆದುಕೊಂಡು ಹೋಗಿ ಕೂಡಲು ಹೇಳಿ, ಅರ್ಜುನ್ ಹೇಗಿದೆ ಮಧುರೈ?

ಸರ್....ಒಂದು ತಿಂಗಳು ಇಲ್ಲಿದ್ದರೆ ಮೈಯಲ್ಲಿರೋ ಗ್ಲುಕೋಸ್ ಎಲ್ಲಾ ಖಾಲಿ ಆಗಿಬಿಡುತ್ತದೆ ಎಂದಿದ್ದಕ್ಕೆ ಅವರೂ ನಕ್ಕು.... ಅರ್ಜುನ್ ನೀವು ಮುರುಗನ್ ನಿಂದ ತಪ್ಪಿಸಿಕೊಂಡು ಬಂದು ಬಹಳ ಒಳ್ಳೆಯ ಕೆಲಸ ಮಾಡಿದ್ದೀರಿ. ಇಲ್ಲವಾದರೆ ಈ ಹೊತ್ತಿಗೆ ಏನಾಗುತ್ತಿತ್ತೋ ಹೇಳಲು ಸಾಧ್ಯವಿಲ್ಲ. ಒಂದು ರೀತಿ ನೀವು ಸಾವಿನ ಸಂಗ ಮಾಡಿ ಬಂದಿದ್ದೀರಿ ಎಂದೇ ಹೇಳಬೇಕು. ನೀವು ಇಲ್ಲಿಗೆ ಬಂದಿದ್ದರಿಂದ ಒಂದು ಉಪಯೋಗ ಏನಾಯಿತೆಂದರೆ ಆ ಮೂಲ ವ್ಯಕ್ತಿಯನ್ನು ನೋಡಿದ್ದು....

ನೋಡಿ ಆ ವ್ಯಕ್ತಿ ನಿಮ್ಮ ಪ್ರತಿ ಚಲನವಲನಗಳನ್ನು ಗಮನಿಸುತ್ತಿದ್ದ ಎಂದಾಯಿತು....ನಿಮ್ಮ ಜೊತೆಯೇ ಬಸ್ಸಲ್ಲಿ ನಿಮಗೆ ಅನುಮಾನ ಬರದ ಹಾಗೆ ಬಂದು ನಿಮ್ಮನ್ನು ಟ್ರಾಪ್ ಮಾಡಿದ್ದ. ಅರ್ಜುನ್..... ಬಸ್ ಎಂದ ಕೂಡಲೇ ನೆನಪಾಯಿತು.... ನೀನು ಬಂದಿದ್ದು ಯಾವ ಬಸ್ಸಿನಲ್ಲಿ? I mean KSRTC ಅಥವಾ TNSTC ಯಲ್ಲೋ?

ಸರ್... KSRTC ಯಲ್ಲಿ... ಯಾಕೆ ಸರ್?

ಅರ್ಜುನ್, ನೀವು ಬಂದಿದ್ದು ಮೊನ್ನೆ ರಾತ್ರಿಯ ಬಸ್ಸಿಗೆ ಅಲ್ಲವೇ... ಒಂದು ನಿಮಿಷ ಇರಿ ಎಂದು ಯಾರಿಗೋ ಕರೆ ಮಾಡಿ ಐದು ನಿಮಿಷ ಮಾತನಾಡಿ ಫೋನ್ ಇಟ್ಟು, ಅರ್ಜುನ್ ಆತನ ಹೆಸರು ಸೆಲ್ವಂ ಎಂದು KSRTC reservation list ಇಂದ ತಿಳಿಯಿತು, ಆದರೆ ಅದನ್ನೇ ನಿಜ ಎಂದು ಹೇಳಲು ಸಾಧ್ಯವಿಲ್ಲ.... ಆದರೂ ನಮ್ಮ ಪ್ರಯತ್ನ ನಾವು ಮಾಡೋಣ. ಅರ್ಜುನ್, ನಮ್ಮ ತಂಡದಲ್ಲಿ ಒಬ್ಬರು ಸ್ಕೆಚ್ ಎಕ್ಸ್ಪರ್ಟ್ ಬಂದಿದ್ದಾರೆ. ಇನ್ನೇನು ಸ್ವಲ್ಪ ಹೊತ್ತಿನಲ್ಲಿ ಅವರು ಬರುತ್ತಾರೆ. ನೀನು ಸೆಲ್ವಂ ಹೇಗಿದ್ದ ಎಂದು ಅವರಿಗೆ ವಿವರಿಸಿದರೆ ಅವರು ಸ್ಕೆಚ್ ಬರೆದುಕೊಡುತ್ತಾರೆ. ನಂತರ ನಮ್ಮ ಕೆಲಸ ಸುಲಭವಾಗುತ್ತದೆ.

ಸರ್... ನೀವು ನೆನ್ನೆ ಫೋನ್ ನಲ್ಲಿ ಹೇಳಿದಿರಿ, ಅವನಿಗೆ ಇಲ್ಲಿನ ಪೋಲಿಸ್ ಡಿಪಾರ್ಟ್ಮೆಂಟ್ ಜೊತೆ ಲಿಂಕ್ ಇರುತ್ತದೆ ಎಂದು... ಮತ್ತೆ ಹೇಗೆ ನಮ್ಮ ಕೆಲಸ ಸುಲಭ ಆಗುತ್ತದೆ?

ಅರ್ಜುನ್... ಲಿಂಕ್ ಎಂದರೆ ಇಡೀ ಡಿಪಾರ್ಟ್ಮೆಂಟ್ ಜೊತೆ ಎಂದಲ್ಲ, ಯಾರೋ ಒಬ್ಬ informer ಇರುತ್ತಾನೆ, ಅದು ಏನೂ ಮಾಡಲು ಸಾಧ್ಯವಿಲ್ಲ... ಸಣ್ಣ ಪುಟ್ಟ ವಿವರಗಳು ಅವನಿಗೆ ಗೊತ್ತಾಗೇ ಆಗುತ್ತದೆ.... ಅದರ ಬಗ್ಗೆ ನೀವೇನೂ ಚಿಂತಿಸಬೇಡಿ... ಅದನ್ನು ನಾನು ನೋಡಿಕೊಳ್ಳುತ್ತೇನೆ. ಅಷ್ಟರಲ್ಲೇ ಸ್ಕೆಚ್ ಎಕ್ಸ್ಪರ್ಟ್ ಬಂದು ಅರ್ಜುನ್ ಹೇಳಿದ ಮಾಹಿತಿಯ ಮೇರೆಗೆ ಒಂದು ಸ್ಕೆಚ್ ಬರೆದುಕೊಟ್ಟರು.

ಅರ್ಜುನ್ ಅದನ್ನು ನೋಡಿ, ಸರ್.... ಸೂಪರ್ ನೀವು, ಹೀಗೆ ಇದಾನೆ ಸರ್ ಅವನು....

ಅರ್ಜುನ್, ಇನ್ನು ನೀವು ಹೊರಡಿ.... ನೀವು ರೂಮಿನಲ್ಲೇ ಇರಿ. ನಾನು ಮುಂದಿನ ವಿಷಯ ತಿಳಿಸುತ್ತೇನೆ. ನಿಮ್ಮನ್ನು ವಾಪಸ್ ಊರಿಗೆ ಹೊರಡಲು ಹೇಳಬಹುದಿತ್ತು, ಆದರೆ ನಿಮ್ಮಿಂದ ಇನ್ನೂ ಇಲ್ಲಿ ಆಗಬೇಕಾದ ಕೆಲಸಗಳು ಬಹಳಷ್ಟಿವೆ. ನೀವು ಹೊರಟುಬಿಟ್ಟರೆ ನನ್ನ ಪ್ಲಾನ್ ವರ್ಕೌಟ್ ಆಗುವುದಿಲ್ಲ. ಇನ್ನೊಂದು ಸ್ವಲ್ಪ ದಿವಸ ನಿಮ್ಮ ಸಹಕಾರ ನನಗೆ ಬೇಕಾಗುತ್ತದೆ. ನನಗೆ ಗೊತ್ತು ನನಗಿಂತ ಮೊದಲು ನೀವೇ ತಯಾರಾಗಿರುತ್ತೀರಾ ಎಂದು... ಆದರೂ...

ಸರ್, ಈ ವಿಷಯದಲ್ಲಿ ನೀವೇನೂ ಚಿಂತಿಸಬೇಡಿ... ಎಷ್ಟು ದಿವಸ ಬೇಕಾದರೂ ನಾನಿಲ್ಲಿ ಇರುತ್ತೇನೆ. ಅವನನ್ನು ಹಿಡಿದು ಅವನಿಗೆ ಶಿಕ್ಷೆ ಆಗುವವರೆಗೂ ನಾನು ಇಲ್ಲಿಂದ ಕದಲುವುದಿಲ್ಲ.... ನೀವು ಯಾವ ಸಮಯದಲ್ಲಿ ಎಲ್ಲಿಗೆ ಬಾ ಎಂದರೂ ಬರುತ್ತೇನೆ.

ಓಕೆ ಅರ್ಜುನ್, ಇನ್ನೊಂದು ಸ್ವಲ್ಪ ದಿವಸದಲ್ಲೇ ಇದಕ್ಕೊಂದು ಮುಕ್ತಾಯ ಹಾಡುತ್ತೇನೆ. ಖಂಡಿತ ಅವನನ್ನು ಹಿಡಿದು ಶಿಕ್ಷೆ ಕೊಡಿಸುತ್ತೇನೆ. ನಾನು ನಿಮಗೆ ಭರವಸೆ ಕೊಡುತ್ತೇನೆ. ನೀವಿನ್ನು ಹೊರಡಿ.

ಅರ್ಜುನ್... ಇರಿ ನಾನು ಆ ಕಡೆಯೇ ಬರುತ್ತಿದ್ದೇನೆ, ನಾನೇ ನಿಮ್ಮನ್ನು ಡ್ರಾಪ್ ಮಾಡುತ್ತೇನೆ.

Rating
No votes yet

Comments

Submitted by kavinagaraj Sun, 02/08/2015 - 09:04

ನಾನೂ ಸಹ ಈ ಧಾರಾವಾಹಿಯನ್ನು ಹಿಂಬಾಲಿಸುತ್ತಲೇ ಇರುವೆ. ನೋಡುವೆ, ಜಯಂತರು ಎಲ್ಲಿಗೆ ಕರೆದೊಯ್ಯುತ್ತಾರೆ, ಅಂತ!!