ಅನ್ವೇಷಣೆ ಭಾಗ ೨೩

ಅನ್ವೇಷಣೆ ಭಾಗ ೨೩

ತ್ರಿವಿಕ್ರಂ ಬಳಿ ಮಾತಾಡಿ ಬಂದ ಮೇಲೆ, ನನಗೂ ಆದಷ್ಟು ಬೇಗ ಅವನನ್ನು ಪತ್ತೆ ಹಚ್ಚುತ್ತೇವೆ ಎಂಬ ನಂಬಿಕೆ ಮೂಡಿತ್ತು. ಆದರೆ ತ್ರಿವಿಕ್ರಂ ಹೇಗೆ ಅವನನ್ನು ಪತ್ತೆ ಹಚ್ಚಲು ಪ್ಲಾನ್ ಮಾಡಿರಬಹುದು....ಅವನ ಫೋಟೋ ಎಲ್ಲಾ ಕಡೆ ಕಳುಹಿಸಿದರೆ ಅವನು ಜಾಗೃತನಾಗಿ ಊರು ಬಿಟ್ಟರೆ.... ಹೀಗೆ ಏನೇನೋ ಯೋಚನೆಗಳು ಕಾಡಲು ಹತ್ತಿತು. ಏನೋ ಯೋಚಿಸುತ್ತಿದ್ದ ಹಾಗೆ ಮನೆಯ ನೆನಪಾಯಿತು... ಹೌದು ನಾನು ಇಲ್ಲಿಗೆ ಬಂದು ಆಗಲೇ ನಾಲ್ಕು ದಿನ ಆಯಿತು... ಬಂದಾಗಿನಿಂದ ಮನೆಗೆ ಫೋನ್ ಸಹ ಮಾಡಿಲ್ಲ. ಅದೂ ಅಲ್ಲದೆ ನನ್ನ ನಂಬರ್ ಬೇರೆ ಬದಲಾಗಿದೆ.... ಅವರೆಷ್ಟು ಗಾಭರಿಯಾಗಿರುತ್ತಾರೋ ಎಂದುಕೊಂಡು ಕೂಡಲೇ ಮನೆಗೆ ಕರೆ ಮಾಡಿದೆ.

ಮೊದಲನೇ ರಿಂಗಿಗೆ ಫೋನ್ ತೆಗೆದುಕೊಂಡ ಅಮ್ಮ ನನ್ನ ಧ್ವನಿ ಕೇಳುತ್ತಿದ್ದ ಹಾಗೆ ಅಳಲು ಶುರುಮಾಡಿದರು. ಅರ್ಜುನ್.... ಎಲ್ಲಪ್ಪ ಹೋಗಿದ್ದೆ? ಹೋಗಿ ನಾಲ್ಕು ದಿನ ಆಯ್ತು, ಒಂದು ಫೋನ್ ಇಲ್ಲ, ಮಾಹಿತಿ ಇಲ್ಲ... ಅದೂ ಈ ಪರಿಸ್ಥಿತಿಯಲ್ಲಿ....ನಾವಿಲ್ಲಿ ಎಷ್ಟು ಒದ್ದಾಡುತ್ತಿದ್ದೀವಿ ಗೊತ್ತಾ... ಇಲ್ಲಿ ಪರಿಸ್ಥಿತಿ ಹೀಗಿರುವಾಗ, ನೀನು ಹೀಗೆ ಮಾಡಬಹುದ? ಒಂದೇ ಒಂದು ಫೋನ್ ಮಾಡಲು ಏನಪ್ಪಾ ನಿನಗೆ? ಫೋನ್ ಮಾಡಿದರೆ ನಿನ್ನ ನಂಬರ್ ಬೇರೆ ಸಿಗುತ್ತಿಲ್ಲ.... ನಾವು ಏನಂದುಕೊಳ್ಳಬೇಕು?

ಅಮ್ಮ ದಯವಿಟ್ಟು ನನ್ನನ್ನು ಕ್ಷಮಿಸು.... ಇಲ್ಲಿ ಕೆಲಸದ ಒತ್ತಡದಲ್ಲಿ ಫೋನ್ ಮಾಡಲು ಆಗಿಲ್ಲ, ಅದೂ ಅಲ್ಲದೆ ನನ್ನ ಫೋನ್ ಪ್ರಾಬ್ಲಮ್ ಆಗಿತ್ತು, ಅದಕ್ಕೆ ನಿಮಗೆ ನನ್ನ ಸಂಪರ್ಕ ಸಿಗುತ್ತಿರಲಿಲ್ಲ. ಈಗ ಫೋನ್ ಸರಿ ಮಾಡಿಸಿದ ತಕ್ಷಣ ನಿಮಗೇ ಫೋನ್ ಮಾಡುತ್ತಿರುವುದು. ನೀನೇನೂ ಟೆನ್ಶನ್ ಮಾಡಿಕೊಳ್ಳಬೇಡ. ನಾನಿಲ್ಲ ಸೌಖ್ಯವಾಗಿದ್ದೇನೆ... ಇನ್ನೊಂದು ಹತ್ತು ದಿವಸ ಕೆಲಸ ಇದೆ, ಆದ ಕೂಡಲೇ ಬರುತ್ತೇನೆ. ಬೇಗ ಮುಗಿದರೆ ಬೇಗ ಬಂದುಬಿಡುತ್ತೇನೆ.....ಹಾಗೆಯೇ ಅಪ್ಪನ ಜೊತೆ, ಜಾನಕಿಯ ಅಪ್ಪ ಅಮ್ಮನ ಬಳಿಯೂ ಮಾತಾಡಿ ಫೋನ್ ಇಟ್ಟ ಮೇಲೆ ನಿರಾಳ ಎನಿಸಿತು. ಅಷ್ಟರಲ್ಲಿ ಅಂಗಡಿಯ ಹುಡುಗ ಮಧ್ಯಾಹ್ನದ ಊಟ ತಂದುಕೊಟ್ಟ. ಊಟ ಮಾಡಿ ಸ್ವಲ್ಪ ಹೊತ್ತು ಮಲಗೋಣ ಎನ್ನುವಷ್ಟರಲ್ಲಿ ತ್ರಿವಿಕ್ರಂ ಫೋನ್ ಮಾಡಿದರು.

ಅರ್ಜುನ್.... ನಾನು ಹೇಳುವ ವಿಷಯ ಗಮನವಿಟ್ಟು ಕೇಳು... ಆ ಸ್ಕೆಚ್ಚನ್ನು ನಾವು ಇಲ್ಲಿನ ಕಂಟ್ರೋಲ್ ರೂಮಿನ ಮೂಲಕ ಎಲ್ಲಾ ಸ್ಟೇಶನ್ ಗಳಿಗೂ ಕಳುಹಿಸಿ ಆಗಿದೆ. ಹಾಗೆಯೇ ಎಲ್ಲಾ ಕಡೆ ಬಂದೋಬಸ್ತ್ ಮಾಡಿದೆ. ಅವನು ಮಧುರೈ ಬಿಟ್ಟು ಹೋಗಲು ಸಾಧ್ಯವಿಲ್ಲ. ಅವನಿಗೂ ಈಗಾಗಲೇ ಈ ಮಾಹಿತಿ ಹೋಗಿರುತ್ತದೆ. ಈಗ ನೀನು ಮಾಡುವ ಕೆಲಸ ಹೇಳುತ್ತೇನೆ ಕೇಳು. ಸರಿಯಾಗಿ ಸಂಜೆ ಒಂದು ನಾಲ್ಕು ಗಂಟೆಯ ಸುಮಾರಿಗೆ ನಮ್ಮ ಡಿಪಾರ್ಟ್ಮೆಂಟಿನ ಸತೀಶ್ ಎನ್ನುವವರು ಸೆಂಟ್ರಲ್ ಸಿನೆಮಾ ಹಾಲ್ ಬಳಿ ಬಂದು ನಿನಗೆ ಫೋನ್ ಮಾಡುತ್ತಾರೆ. ನೀನು ಅವರನ್ನು ಭೇಟಿ ಆಗಿ ಅವರನ್ನು ನಿನ್ನ ಜೊತೆ ಮುರುಗನ್ ರೂಮಿಗೆ ಕರೆದುಕೊಂಡು ಹೋಗು. ಅವರನ್ನು ನಿನ್ನ ಸ್ನೇಹಿತ ಎಂದು ಮುರುಗನ್ ಗೆ ಪರಿಚಯಿಸಿ ಮಾತನಾಡುತ್ತಿರು... ಮುಂದಿನ ಕೆಲಸ ಸತೀಶ್ ಮಾಡುತ್ತಾರೆ.

ಸರಿ ಸರ್ .. ನೀವು ಹೇಗೆ ಹೇಳುತ್ತೀರೋ ಹಾಗೆ ಮಾಡುತ್ತೇನೆ.

ಸಂಜೆ ನಾಲ್ಕು ಗಂಟೆ ಆಗುವುದನ್ನೇ ಕಾಯುತ್ತಿದ್ದೆ... ಸರಿಯಾಗಿ ನಾಲ್ಕು ಗಂಟೆಗೆ ಯಾವುದೋ ಒಂದು ಅಪರಿಚಿತ ನಂಬರಿಂದ ಕರೆ ಬಂದಿತು. ಬಹುಷಃ ಸತೀಶ್ ಅವರೇ ಕರೆ ಮಾಡಿರಬಹುದು ಎಂದು ಫೋನ್ ರಿಸೀವ್ ಮಾಡಿದರೆ ಸತೀಶ್ ಅವರದ್ದೇ ಕರೆ ಆಗಿತ್ತು. ಕೂಡಲೇ ಸೆಂಟ್ರಲ್ ಸಿನೆಮಾ ಹಾಲ್ ಬಳಿ ಹೋಗಿ ಅವರನ್ನು ಭೇಟಿ ಮಾಡಿ ಅವರ ಜೊತೆ ಮುರುಗನ್ ರೂಮಿನ ಕಡೆ ಹೊರಟೆ.

ಮುರುಗನ್ ರೂಮಿನ ಬಳಿ ಬಂದು ನೋಡಿದರೆ ರೂಮಿಗೆ ಬೀಗ ಹಾಕಿತ್ತು.... ಎಲ್ಲಾದರೂ ಆಚೆ ಹೋಗಿರಬಹುದು ಎಂದುಕೊಂಡು ಅಲ್ಲೇ ಕಾಯುತ್ತಾ ಅದೂ ಇದೂ ಮಾತಾಡುತ್ತಿದ್ದೆವು. ಸುಮಾರು ಒಂದು ಗಂಟೆ ಆದರೂ ಅವನ ಸುಳಿವಿರಲಿಲ್ಲ. ಅಷ್ಟರಲ್ಲೇ ಮಹಡಿ ಮೇಲೆ ಬಂದ ವ್ಯಕ್ತಿಯೊಬ್ಬರು, ಮುರುಗನ್ ಇಲ್ಲ ಬೆಂಗಳೂರಿಗೆ ಹೋಗಿದ್ದಾನೆ, ಒಂದು ವಾರ ಆಗುತ್ತೆ ಬರುವುದು ಎಂದು ಹೇಳಿದ್ದ ಎಂದು ಹೇಳಿ ಹೊರಟು ಹೋದರು. ಕೂಡಲೇ ತ್ರಿವಿಕ್ರಂಗೆ ಕರೆಮಾಡಿ ವಿಷಯ ತಿಳಿಸಿದಾಗ... ಅರ್ಜುನ್, ಬಹುಶಃ ನೀವು ಬೆಂಗಳೂರಿಗೆ ವಾಪಸ್ ಹೋಗಿರುತ್ತೀರ ಎಂಬ ಅನುಮಾನದ ಮೇಲೆ ಅವನು ನಿಮ್ಮನ್ನು ಹುಡುಕಿಕೊಂಡು ಅಲ್ಲಿಗೆ ಹೋಗಿರುತ್ತಾನೆ. ಆದರೆ ನಾವಿಲ್ಲಿ ಬಂದಿರುವ ವಿಷಯ ಅದಾಗಲೇ ಸೆಲ್ವಂಗೆ ತಿಳಿದಿರುವುದರಿಂದ.... ಅವನು ಮುರುಗನ್ ನನ್ನು ಕೂಡಲೇ ವಾಪಸ್ ಕರೆಸಬಹುದು.... ನೀವು ಒಂದು ಕೆಲಸ ಮಾಡಿ... ನಾಳೆ ಮಧ್ಯಾಹ್ನ ಮತ್ತೊಮ್ಮೆ ಸತೀಶ್ ಅಲ್ಲಿಗೆ ಬರುತ್ತಾರೆ. ಮತ್ತೊಮ್ಮೆ ಅವರನ್ನು ಕರೆದುಕೊಂಡು ಮುರುಗನ್ ರೂಮಿನ ಬಳಿ ಹೋಗಿ.

ಮರುದಿನ ತ್ರಿವಿಕ್ರಂ ಹೇಳಿದಂತೆಯೇ ಮಧ್ಯಾಹ್ನದ ವೇಳೆಗೆ ಸತೀಶ್ ಅವರನ್ನು ಕರೆದುಕೊಂಡು ಮುರುಗನ್ ರೂಮಿನ ಬಳಿ ಬಂದಾಗ, ಆಗಲೂ ರೂಂ ಬೀಗ ಹಾಕಿತ್ತು. ಬಹುಶಃ ಇನ್ನೂ ಬಂದಿಲ್ಲವೇನೋ ಎಂದುಕೊಂಡು ತ್ರಿವಿಕ್ರಂಗೆ ಫೋನ್ ಮಾಡಲು ಯತ್ನಿಸಿದಾಗ ಯಾರೋ ಮೆಟ್ಟಿಲು ಹತ್ತಿ ಬರುತ್ತಿರುವುದು ತಿಳಿಯಿತು. ಕಿಟಕಿಯಿಂದ ಬಗ್ಗಿ ನೋಡಿದಾಗ ಮುರುಗನ್ ಮೆಟ್ಟಿಲು ಏರಿ ಬರುತ್ತಿದ್ದ. ಸತೀಶ್ ಕಡೆ ತಿರುಗಿ ಅವನೇ ಮುರುಗನ್ ಎಂದ ಕೂಡಲೇ, ನಾನಿಲ್ಲೇ ಪಕ್ಕದಲ್ಲಿ ಇರುತ್ತೇನೆ ಎಂದು ಗೋಡೆಯ ಬದಿಗೆ ಹೋದರು. ಅವರ ಯೋಜನೆ ಏನೆಂದು ನನಗೆ ಅರ್ಥವಾಗಲಿಲ್ಲ. ಮೇಲೆ ಬಂದ ಮುರುಗನ್ ಗೆ ನನ್ನನ್ನು ನೋಡಿ ಆಶ್ಚರ್ಯವಾಯಿತು. ನನ್ನ ಬಳಿ ಬಂದು, ಏನ್ಸಾರ್ ಇದ್ದಕ್ಕಿದ್ದ ಹಾಗೆ ಹೊರಟು ಬಿಟ್ಟಿರಿ? ಯಾಕೆ ಏನಾದರೂ ತೊಂದರೆ ಆಯ್ತಾ ಎಂದು ಕೇಳುತ್ತಿದ್ದ ಹಾಗೆ ಅವನ ಹಿಂದಿನಿಂದ ಸತೀಶ್ ಕೈಯಲ್ಲಿ ಪಿಸ್ತೂಲನ್ನು ಹಿಡಿದು ಮುರುಗನ್ ತಲೆಗೆ ಹಿಡಿದು ಕದಲಬೇಡ, ಕದಲಿದರೆ ಅಷ್ಟೇ ಎಂದು ಎಚ್ಚರಿಸಿದರು.

ಆ ಅಚಾನಕ್ಕಾದ ಬೆಳವಣಿಗೆ ನಾನು ನಿರೀಕ್ಷಿಸಿರದ ಕಾರಣ ಆಶ್ಚರ್ಯಕರವಾಗಿ ನೋಡುತ್ತಾ ನಿಂತಿದ್ದೆ. ಅದನ್ನೇ ಅನುಕೂಲಕ್ಕಾಗಿ ಬಳಸಿಕೊಂಡ ಮುರುಗನ್ ನನ್ನ ಕೈ ಹಿಡಿದು ಬಲವಾಗಿ ಎಳೆದು ಸತೀಶ್ ಮೇಲೆ ಬೀಳಿಸಿದ, ಕೂಡಲೇ ಸತೀಶ್ ಆಯತಪ್ಪಿ ಎರಡು ಹೆಜ್ಜೆ ಹಿಂದೆ ಹೋದರು. ಅಷ್ಟು ಸಾಕಿತ್ತು ಮುರುಗನ್ ಗೆ, ಕೂಡಲೇ ಅಲ್ಲಿಂದ ಶರವೇಗದಲ್ಲಿ ಮೆಟ್ಟಿಲು ಇಳಿದು ಕ್ಷಣಾರ್ಧದಲ್ಲಿ ಕಾಣೆಯಾದ. ತಕ್ಷಣ ಸತೀಶ್ ತಮ್ಮ ವೈರ್ಲೆಸ್ ತೆಗೆದು, ಸರ್ ಮುರುಗನ್ ತಪ್ಪಿಸಿಕೊಂಡು ಕೆಳಗಡೆ ಬರುತ್ತಿದ್ದಾನೆ. ಅವನನ್ನು ಲಾಕ್ ಮಾಡಿ ಎಂದು ಬನ್ನಿ ಎಂದು ನನಗೆ ಹೇಳಿ ಚಕಚಕನೆ ಮೆಟ್ಟಿಲು ಇಳಿಯತೊಡಗಿದರು. 

ಓಹೋ ಹಾಗಿದ್ದರೆ ತ್ರಿವಿಕ್ರಂ ತಂಡ ಕೆಳಗಡೆ ರೆಡಿಯಾಗಿದೆ ಎಂದಾಯ್ತು. ತ್ರಿವಿಕ್ರಂ ಈ ವಿಷಯ ನನಗೆ ಹೇಳೇ ಇರಲಿಲ್ಲ. ಅಂದರೆ ಸತೀಶ್ ನನ್ನ ಜೊತೆ ಬರುವಾಗಲೇ ತ್ರಿವಿಕ್ರಂ ತಂಡ ಕೂಡ ನಮ್ಮನ್ನು ಹಿಂಬಾಲಿಸಿಕೊಂಡು ಕೆಳಗಡೆ ಕಾಯುತ್ತಿದ್ದಾರೆ. ಬಹುಶಃ ತ್ರಿವಿಕ್ರಂ ಈ ವಿಷಯ ಮೊದಲೇ ನಿರೀಕ್ಷಿಸಿದ್ದರು ಎಂದೆನಿಸುತ್ತದೆ. ಗ್ರೇಟ್!! ಎಂದುಕೊಂಡು ಇಬ್ಬರೂ ಕೆಳಗಡೆ ಬಂದೆವು. ಅದಾಗಲೇ ಮುರುಗನ್ ತ್ರಿವಿಕ್ರಂ ಕೈಯಲ್ಲಿ ಬಂದಿಯಾಗಿ ಕೊಸರಾಡುತ್ತಿದ್ದ. ನನ್ನನ್ನು ನೋಡಿದ ಕೂಡಲೇ ತ್ರಿವಿಕ್ರಂ ಒಮ್ಮೆ ನಕ್ಕು ಅರ್ಜುನ್.... ಇನ್ನು ನಮ್ಮ ಕೆಲಸ ಸುಲಭವಾಯಿತು. ಇವನನ್ನು ಸ್ವಲ್ಪ ಬೆಂಡೆತ್ತಿದರೆ ಸೆಲ್ವಂ ವಿಷಯ ತಿಳಿಯುತ್ತದೆ. ಈಗ ನೀವು ಬೇಕಾದರೆ ಬೆಂಗಳೂರಿಗೆ ವಾಪಸ್ ಹೊರಡಬಹುದು... ನಾವು ಸೆಲ್ವಂನನ್ನು ಪತ್ತೆ ಹಚ್ಚಿದ ಕೂಡಲೇ ನಿಮಗೆ ವಿಷಯ ತಿಳಿಸುತ್ತೇನೆ.

ಸರ್... ಇಲ್ಲ ಸರ್, ಅವನನ್ನೂ ಪತ್ತೆ ಹಚ್ಚುವವರೆಗೂ ನಾನಿಲ್ಲೇ ಇರುತ್ತೇನೆ.

ಮುರುಗನ್ ನನ್ನ ಕಡೆ ದುರುಗುಟ್ಟಿ ನೋಡುತ್ತಾ ನಿನ್ನನ್ನು ಸುಮ್ಮನೆ ಬಿಡುವುದಿಲ್ಲ ಕಣೋ, ನೀನು ಇಲ್ಲಿಂದ ಜೀವಂತವಾಗಿ ಹೋಗುವುದಿಲ್ಲ...ಎಂದು ಕಿರುಚಾಡುತ್ತಿದ್ದ. ಪೇದೆಗಳು ಅವನ ಕುತ್ತಿಗೆ ಪಟ್ಟಿಯನ್ನು ಹಿಡಿದು ಗಾಡಿಯಲ್ಲಿ ಹತ್ತಿಸಿ ಕರೆದುಕೊಂಡು ಹೊರಟರು.

Rating
No votes yet