ಅನ್ವೇಷಣೆ ಭಾಗ ೨೪

ಅನ್ವೇಷಣೆ ಭಾಗ ೨೪

ಅಬ್ಬಾ ಇನ್ನೇನು ಮುರುಗನ್ ನನ್ನು ಹಿಡಿದಾಗಿದೆ, ಇನ್ನು ಆದಷ್ಟು ಬೇಗ ಸೆಲ್ವಂ ಸಹ ಸಿಕ್ಕಿಬಿಡುತ್ತಾನೆ, ಅವನಿಗೆ ಶಿಕ್ಷೆ ಕೊಡಿಸಿಬಿಟ್ಟರೆ ಜಾನಕಿಯ ಆತ್ಮ ಶಾಂತಿ ಆಗುತ್ತದೆ ಎಂದುಕೊಂಡು ರೂಮಿಗೆ ಬರುತ್ತಿದ್ದ ದಾರಿಯಲ್ಲಿ, ಇದ್ದಕ್ಕಿದ್ದಂತೆ ಯಾರೋ ಹಿಂದಿನಿಂದ ಹೆಗಲ ಮೇಲೆ ಕೈ ಹಾಕಿದಂತಾಯಿತು. ಯಾರೆಂದು ತಿರುಗಿ ನೋಡಿದರೆ ಒಬ್ಬ ಅಜಾನುಬಾಹು ವ್ಯಕ್ತಿ, ಕಪ್ಪಗೆ ದಪ್ಪಗೆ, ಗಿರಿಜಾ ಮೀಸೆ ಇಟ್ಟುಕೊಂಡು ಬಲವಾಗಿ ನನ್ನ ಕತ್ತಿನ ಪಟ್ಟಿ ಹಿಡಿದು ಅನಾಯಾಸವಾಗಿ ಎತ್ತಿ ಕಾರಿನಲ್ಲಿ ಹಾಕಿ ಹೊರಟುಬಿಟ್ಟ. ಅಲ್ಲಿ ಏನಾಗುತ್ತಿದೆ ಎಂದು ಅರಿವಾಗುವಷ್ಟರಲ್ಲೇ ಆ ವ್ಯಕ್ತಿ ಬಲವಾಗಿ ನನ್ನ ಪಕ್ಕೆಗೆ ಒಂದು ಗುದ್ದಿದ. ಅವನು ಗುದ್ದಿದ ರಭಸಕ್ಕೆ ನನ್ನ ಕಣ್ಣುಗಳು ಕತ್ತಲಾಯಿತು.

ಮತ್ತೆ ಕಣ್ಣು ಬಿಟ್ಟಾಗ ನನ್ನ ಕೈ ಕಾಲುಗಳನ್ನು ಹಗ್ಗದಿಂದ ಬಿಗಿಯಾಗಿ ಕಟ್ಟಿರುವುದು ಗೊತ್ತಾಯಿತು. ಕಣ್ಣು ಬಿಟ್ಟು ಸುತ್ತಲೂ ಒಮ್ಮೆ ನೋಡಿದಾಗ ಅದೊಂದು ಅದ್ಭುತ ಬಂಗಲೆ. ಸುತ್ತಲೂ ಭವ್ಯವಾದ ಅಲಂಕಾರಿಕ ವಸ್ತುಗಳು, ಭವ್ಯವಾ ಮೇಜು ಖುರ್ಚಿಗಳು, ಬೃಹದಾಕಾರದ ಅಕ್ವೇರಿಯಂ, ಎಲ್ಲಾ ನೋಡಿ ನನಗೆ ಒಮ್ಮ್ಬೆ ಆಶ್ಚರ್ಯವಾಯಿತು. ಇದೇನಿದು ನನ್ನನ್ನು ಯಾವುದೋ ಹಳೆಯ ಗೋಡೌನ್ ಗೋ, ಇಲ್ಲ ಯಾವುದೋ ಹಳೆಯ ಕಟ್ಟಡಕ್ಕೊ, ಅಥವಾ ಹಳೆಯ ಫ್ಯಾಕ್ಟರಿಗೆ ಕರೆದುಕೊಂಡು ಬರುತ್ತಾರೆ ಎಂದುಕೊಂಡರೆ ಇದೇನಿದು ಇಂಥಹ ಭವ್ಯವಾದ ಬಂಗಲೆಯಲ್ಲಿ ಕೂಡಿ ಹಾಕಿದ್ದಾರಲ್ಲ. ಯಾರನ್ನಾದರೂ ಕೇಳೋಣ ಎಂದುಕೊಂಡರೆ ಯಾರೂ ಕಾಣುತ್ತಿಲ್ಲ. ಅಲ್ಲಿ ನನ್ನೊಬ್ಬನನ್ನು ಬಿಟ್ಟರೆ ಇನ್ಯಾರೂ ಕಾಣುತ್ತಿಲ್ಲ. ನನಗೆ ಒಂದಿಂಚೂ ಕದಲಲು ಆಗುತ್ತಿಲ್ಲ. ಆಗಲೇ ಕೈ ಕಾಲುಗಳು ಜೋಮು ಹಿಡಿಯಲು ಆರಂಭಿಸಿತ್ತು.

ಇದು ಖಂಡಿತ ಸೆಲ್ವಂ ಕೆಲಸ ಎಂದು ಆರಾಮಾಗಿ ಊಹಿಸಬಹುದಾಗಿತ್ತು. ಆದರೆ ಏನಾದರೂ ಕೇಳಲು ಯಾರೂ ಇಲ್ಲವೇ ಇಲ್ಲವಲ್ಲ ಎಂದು ಮತ್ತೊಮ್ಮೆ ಸುತ್ತಲೂ ನೋಡಿದೆ. ನಾಲ್ಕು ದಿಕ್ಕುಗಳಲ್ಲೂ CC Camera ಅಳವಡಿಸಿರುವುದು ಕಂಡುಬಂತು. ಹೇಗಾದರೂ ಕೈಗೆ ಕಟ್ಟಿರುವ ಹಗ್ಗ ಬಿಚ್ಚಿಕೊಳ್ಳೋಣ ಎಂದು ನೋಡಿದರೆ ಊಹುಂ... ಒಂದು ಅಂಗುಲವೂ ಅಲುಗಾಡದಂತೆ ಬಿಗಿದ್ದಿದರು. ಹ್ಮ್.... ಜಾಸ್ತಿ ಕೊಸರಾಡಿದರೆ ನನಗೇ ನೋವೆಂದು ಸುಮ್ಮನಾದೆ.

ನನಗೆ ಪ್ರಜ್ಞೆ ಬಂದೇ ಸುಮಾರು ಒಂದು ಗಂಟೆ ಆಗಿತ್ತು... ಅದರೂ ಯಾರ ಸುಳಿವೂ ಇರಲಿಲ್ಲ. ಹೋಗಲಿ ಜೋರಾಗಿ ಕಿರುಚೋಣ ಎಂದರೆ, ಬಾಯಲ್ಲಿ ಬಟ್ಟೆ ತುರುಕಿದ್ದಾರೆ. ಅಲ್ಲಿ ನೋಡಿದರೆ ತ್ರಿವಿಕ್ರಂ ಮುರುಗನ್ ನನ್ನು ಬಂಧಿಸಿದ್ದಾರೆ. ಅವನು ಏನು ಮಾಹಿತಿ ಕೊಟ್ಟಿರುತ್ತಾನೋ.... ಸೆಲ್ವಂ ಕಥೆ ಏನೋ... ಇಲ್ಲಿ ನೋಡಿದರೆ ಇವರು ನನ್ನನ್ನು ಬಂಧಿಸಿದ್ದಾರೆ... ತ್ರಿವಿಕ್ರಂಗೆ ಈ ವಿಷಯ ಗೊತ್ತೋ ಇಲ್ಲವೋ.... ಛೇ.... ಏನು ಮಾಡುವುದು ಒಂದೂ ತಿಳಿಯುತ್ತಿಲ್ಲವಲ್ಲ....

ಸಮಯ ಮಾತ್ರ ಓಡುತ್ತಲೇ ಇತ್ತು.... ಆಚೆ ಕತ್ತಲಾದಂತೆ, ಮನೆಯೊಳಗಡೆ ಕತ್ತಲಾವರಿಸತೊಡಗಿತ್ತು. ಬಾಯಲ್ಲಿ ಬಹಳ ಹೊತ್ತಿನಿಂದ ಬಟ್ಟೆ ಇದ್ದಿದ್ದರಿಂದ ಗಂಟಲು ಒಣಗಿ ದಾಹ ಆಗತೊಡಗಿತ್ತು. ಕೈ ಕಾಲುಗಳಲ್ಲಿ ರಕ್ತ ಸಂಚಾರವೇ ನಿಂತು ಹೋದಂತಾಗಿತ್ತು. ಅಷ್ಟು ಹೊತ್ತಾದರೂ ಯಾರ ಸುಳಿವೂ ಇರಲಿಲ್ಲ. ಕತ್ತಲಾಗುವ ಮುಂಚೆ ಕೈಗೆ ಕಟ್ಟಿರುವ ಹಗ್ಗವನ್ನು ಕತ್ತರಿಸಿಕೊಳ್ಳಲು ಸುತ್ತಲೂ ಏನಾದರೂ ಮೊನಚಾದ ವಸ್ತು ಕಾಣುತ್ತದೇನೋ ಎಂದು ಸುತ್ತಲೂ ನೋಡಿದೆ.... ಇಲ್ಲ ಅಲ್ಲಿ ಏನೂ ಕಾಣಲಿಲ್ಲ. ಕೋಪ ತಾಳಲಾಗದೆ ಕೂತಿದ್ದ ಖುರ್ಚಿಯನ್ನು ಬಲವಾಗಿ ಮೇಲಕ್ಕೆ ಎತ್ತಿ ಮತ್ತೆ ಹಾಗೆ ಕೂತೆ. ಎತ್ತಿದ ರಭಸಕ್ಕೆ ಖುರ್ಚಿಯ ಕಬ್ಬಿಣದ ಅಲಗೊಂದು ಕಿತ್ತು ಬಂದಿತ್ತು. ಇದನ್ನೇ ಆಯುಧವಾಗಿ ಬಳಸಬೇಕು.... ಪೂರ್ತಿ ಕತ್ತಲಾಗಲಿ ಎಂದು ಸುಮ್ಮನೆ ಏನೂ ಆಗೇ ಇಲ್ಲವೇನೋ ಎಂಬಂತೆ ಕುಳಿತಿದ್ದೆ.

ಒಮ್ಮೆ ಪೂರ್ತಿ ಕತ್ತಲಾಗುವವರೆಗೂ ಸುಮ್ಮನಿದ್ದು ನಂತರ ನಿಧಾನವಾಗಿ ಆ ಕಬ್ಬಿಣದ ಅಲುಗಿನ ಅಂಚಿನಿಂದ ನಿಧಾನವಾಗಿ ಹಗ್ಗವನ್ನು ಕತ್ತರಿಸಲು ಪ್ರಯತ್ನಿಸಿದೆ. ಆದರೆ ಬಹಳ ಹೊತ್ತಿನಿಂದ ಕಟ್ಟಿದ್ದರಿಂದ ಕೈ ಎತ್ತಲೂ ಆಗುತ್ತಿರಲಿಲ್ಲ. ಮನದಲ್ಲಿ ಒಮ್ಮೆ ಜಾನಕಿಯನ್ನು ನೆನೆದು ಮತ್ತೆ ನಿಧಾನವಾಗಿ ಉಜ್ಜಲು ಆರಂಭಿಸಿದೆ. ಸತತವಾಗಿ ಎರಡು ಗಂಟೆ ಉಜ್ಜಿದ ಬಳಿಕ ಹಗ್ಗ ತುಂಡಾಗಿದ್ದು ಗೊತ್ತಾಯಿತು. ಆದರೆ ಕೂಡಲೇ ಎದ್ದರೆ, ಯಾರಾದರೂ cameraದಲ್ಲಿ ನೋಡುತ್ತಿದ್ದು ಒಳಗೆ ಬಂದರೆ ಅಪಾಯ ತಪ್ಪಿದ್ದಲ್ಲ ಎಂದುಕೊಂಡು ಹಾಗೆಯೇ ಮೂರ್ಚೆ ತಪ್ಪಿ ಬೀಳುವ ಹಾಗೆ ನೆಲಕ್ಕೆ ಬಿದ್ದೆ. ಬಿದ್ದ ಹತ್ತು ನಿಮಿಷದ ನಂತರ ನಿಧಾನವಾಗಿ ಕಾಲನ್ನು ಮುಂದಕ್ಕೆ ತಂದು ಹಗ್ಗವನ್ನು ಬಿಚ್ಚಲು ಶುರುಮಾಡಿದೆ. ಹಗ್ಗವನ್ನು ಬಿಚ್ಚಿದ ನಂತರ ನಿಧಾನವಾಗಿ ಹಾಗೇ ತೆವಳಿಕೊಂಡು ಅಲ್ಲಿಂದ ಎದ್ದು ಪಕ್ಕದಲ್ಲಿದ್ದ ಕೊಠಡಿಗೆ ಬಂದೆ. ಕತ್ತಲಲ್ಲಿ ಎಲ್ಲಿದ್ದೇನೆ ಎಂದು ತಿಳಿಯುತ್ತಿರಲಿಲ್ಲ. ಹಾಗೇ ತಡವಿಕೊಂಡು ಕಿಟಕಿಯ ಬಳಿ ಬಂದು ಕಿಟಕಿಯ ಬಾಗಿಲು ತೆರೆದರೆ ಗಾಳಿ ತಣ್ಣನೆ ಬೀಸತೊಡಗಿತು. ಅಲ್ಲೇ ಎಲ್ಲಾದರೂ ಕುಡಿಯಲು ನೀರು ಸಿಗುತ್ತದಾ ಎಂದು ಹುಡುಕಿದರೂ ಏನೂ ಪ್ರಯೋಜನವಾಗಲಿಲ್ಲ. ಹಾಗೇ ಸ್ವಲ್ಪ ಹೊತ್ತು ಮಲಗೋಣ ಎನಿಸಿದರೂ, ಬೇಡ ಒಂದು ನಿದ್ರೆ ಎಲ್ಲವನ್ನೂ ಕೆಡಿಸುತ್ತದೆ ಎಂದುಕೊಂಡು ಬೆಳಕಿಗಾಗಿ ಸ್ವಿಚ್ ಹಾಕೋಣ ಎಂದು ಪ್ರಯತ್ನಿಸಿದಾಗ ಕರೆಂಟ್ ಇಲ್ಲ ಎಂದು ಅರಿವಾಯಿತು.

ಓಹೋ ಕರೆಂಟ್ ಇಲ್ಲದ್ದರಿಂದ CC Camera ಗಳು ಕೆಲಸ ಮಾಡುತ್ತಿಲ್ಲ ಎನಿಸುತ್ತದೆ, ಅದಕ್ಕೆ ಇಷ್ಟು ಹೊತ್ತಾದರೂ ಯಾರೂ ಒಳಗಡೆ ಬಂದಿಲ್ಲ. ಬೆಳಕು ಹರಿಯುವಷ್ಟರಲ್ಲಿ ನಾನಿಲ್ಲಿಂದ ತಪ್ಪಿಸಿಕೊಳ್ಳದಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿ. ಆದರೆ ಈ ಕತ್ತಲಲ್ಲಿ ಎಲ್ಲಿ ಏನೆಂದು ಹುಡುಕಲಿ.... ಹೋಗಲಿ ತ್ರಿವಿಕ್ರಂಗೆ ಕರೆ ಮಾಡೋಣ ಎಂದುಕೊಂಡು ಜೇಬಿಗೆ ಕೈ ಹಾಕಿದರೆ ಏನಿದೆ ಅಲ್ಲಿ..... ಮೊಬೈಲನ್ನು ಎತ್ತಿಬಿಟ್ಟಿದ್ದರು..... ಛೇ.... ಈಗ ಹೇಗೆ ತ್ರಿವಿಕ್ರಂ ಅವರನ್ನು ಸಂಪರ್ಕಿಸುವುದು... ಇಲ್ಲಿಂದ ತಪ್ಪಿಸಿಕೊಳ್ಳುವುದು.... ಇರಲಿ ನೋಡೋಣ ಎಂದುಕೊಂಡು ಹಾಗೇ ಕತ್ತಲಲ್ಲೇ ತಡವಿಕೊಂಡು ಮುಂಚೆ ಇದ್ದ ಹಾಲಿಗೆ ಬಂದೆ. ಅಲ್ಲಿಂದ ಹಾಗೆ ಮುಂದೆ ಬರುತ್ತಿದ್ದ ಹಾಗೆ ಮೆಟ್ಟಿಲು ಕಂಡಿತು. ನಿಧಾನವಾಗಿ ಒಂದೊಂದೇ ಮೆಟ್ಟಿಲು ಏರಿ ಮೇಲೆ ಬಂದಾಗ ಅಲ್ಲಿ ಕತ್ತಲು ಇನ್ನೂ ಗಾಢವಾಗಿ ಏನಂದರೆ ಏನೂ ಕಾಣುತ್ತಿರಲಿಲ್ಲ. ಏನು ಮಾಡುವುದೆಂದು ತೋಚದೆ ತಲೆ ಕೆಡುತ್ತಿತ್ತು.... ಹಾಗೇ ಅಲ್ಲೇ ಗೋಡೆಗೆ ಆನಿಕೊಂಡು ನಿಧಾನವಾಗಿ ತಡವುತ್ತಿದ್ದಾಗ ಕೈಗೆ ಏನೋ ತಗುಲಿದಂತಾಯಿತು, ಮತ್ತೊಮ್ಮೆ ಸ್ಪರ್ಶದಿಂದ ಅದು ಟೆಲಿಫೋನ್ ಎಂದು ಗೊತ್ತಾಯಿತು.

ಅಬ್ಬಾ ಬದುಕಿದೆಯ ಬಡಜೀವವೇ ಎಂದುಕೊಂಡು ರಿಸೀವರ್ ಕೈಗೆತ್ತಿಕೊಂಡರೆ...ನನ್ನ ದುರಾದೃಷ್ಟಕ್ಕೆ ಫೋನ್ ಡೆಡ್ ಆಗಿತ್ತು. ರಿಸೀವರ್ ಕುಕ್ಕಿ ಕೈ ಹಿಂತೆಗೆಯುವಾಗ ಮತ್ತೊಂದು ವಸ್ತು ತಗುಲಿದಂತಾಯಿತು. ಅದೊಂದು ಪುಟಾಣಿ ಡಬ್ಬಿಯೆಂದು, ಕಣ್ಣಿಗೆ ಹತ್ತಿರ ತೆಗೆದುಕೊಂಡು ನೋಡಿದಾಗ ಅದೊಂದು ಬೆಂಕಿ ಪಟ್ಟಣ ಎಂದು ಗೊತ್ತಾಯಿತು. ಕೂಡಲೇ ಒಂದು ಕಡ್ಡಿ ಗೀರಿ ಆ ಬೆಳಕಿನಲ್ಲಿ ಕಣ್ಣಿಗೆ ಏನು ಕಾಣುತ್ತದೆ ಎಂದು ನೋಡಿಕೊಂಡೆ. ಅಲ್ಲಿ ಒಂದು ನಾಲ್ಕು ರೂಮುಗಳು ಮತ್ತು ಒಂದೆರೆಡು ಸೋಫಾ ಇರುವುದು ಕಂಡಿತು. ಆ ಕಡ್ಡಿ ಆರುವುದರೊಳಗೆ ಒಂದು ರೂಮಿನ ಬಳಿ ಹೋಗಿ ಮಾತೊಂದು ಕಡ್ಡಿ ಗೀರಿ ರೂಮಿನ ಒಳಹೊಕ್ಕರೆ ಅಲ್ಲೇನೂ ಕಾಣಲಿಲ್ಲ. ನಂತರದ ಎರಡು ರೂಮುಗಳಲ್ಲೂ ಏನೂ ಕಾಣಲಿಲ್ಲ.

ಬೆಂಕಿ ಪಟ್ಟಣದಲ್ಲಿ ಉಳಿದದ್ದು ಒಂದು ಕಡ್ಡಿ. ಕೊನೆಯ ರೂಮಿನ ಬಳಿ ಹೋಗಿ ಕಡ್ಡಿ ಗೀರಿ ಒಳಹೊಕ್ಕರೆ ಅಲ್ಲಿ ಒಂದು ಖುರ್ಚಿಯಿದ್ದು ಯಾರೋ ಅದರಲ್ಲಿ ಕುಳಿತಿರುವಂತೆ ಕಂಡಿತು.... ಅಷ್ಟರಲ್ಲೇ ಕಡ್ಡಿ ಆರಿ ಹೋಯಿತು.

Rating
No votes yet