ಅನ್ವೇಷಣೆ ಭಾಗ ೨೫
ಯಾರೋ ಕುಳಿತಿದ್ದಾರೆ... ಆದರೆ ಯಾರದು, ನಾನು ಒಳಗೆ ಬಂದು ಕಡ್ಡಿ ಗೀರಿದ್ದು ಆ ವ್ಯಕ್ತಿಗೆ ತಿಳಿದಿಲ್ಲ ಎಂದರೆ... ಅವನು ನಿದ್ರೆಯಲ್ಲಿದ್ದಾನೆ ಎಂದುಕೊಂಡು ನಿಧಾನವಾಗಿ ಅಲ್ಲಿಂದ ಆಚೆ ಬರಲು ಹಿಂದೆ ಹಿಂದೆ ಒಂದೊಂದೇ ಹೆಜ್ಜೆ ಹಾಕುತ್ತಿದ್ದೆ. ಅಷ್ಟರಲ್ಲಿ ಅಲ್ಲೆಲ್ಲೋ ಇದ್ದ ಲೈಟ್ ಹೌಸ್ ನಿಂದ ಬೆಳಕು ಆ ರೂಮಿನ ಒಳಗೆ ಬಿದ್ದು ಅಲ್ಲಿದ್ದ ವ್ಯಕ್ತಿಯ ಮುಖದ ಮೇಲೆ ಬಿದ್ದು ಹಾಗೆ ಮರೆಯಾಯಿತು....
ಆ ಕ್ಷಣದಲ್ಲಿ ಅಲ್ಲಿ ಕಂಡ ಮುಖ ನೋಡಿ ಒಂದು ಕ್ಷಣ ಆಶ್ಚರ್ಯ!!
ಹೊರಬರಲು ಹೆಜ್ಜೆ ಇಡುತ್ತಿದ್ದವನು ಆ ಕ್ಷಣಕ್ಕೆ ಗರಬಡಿದವನಂತೆ ನಿಂತುಬಿಟ್ಟೆ. ನಿಧಾನವಾಗಿ ಒಂದೊಂದೇ ಹೆಜ್ಜೆ ಮುಂದಕ್ಕೆ ಇಡಲು ಶುರುಮಾಡಿ ಆ ವ್ಯಕ್ತಿಯ ಬಳಿ ಬಂದು ಮಂಡಿಯೂರಿ ಕೆಳಕ್ಕೆ ಕುಳಿತು ಜಾನಕಿ ಎಂದೆ.....!!!
ಏನೂ ಪ್ರತಿಕ್ರಿಯೆ ಬರಲಿಲ್ಲ... ಮತ್ತೊಮ್ಮೆ ಮೆಲ್ಲಗೆ ಜಾನಕಿ ಎಂದೆ.... ಆಗಲೂ ಏನೂ ಪ್ರತಿಕ್ರಿಯೆ ಬರಲಿಲ್ಲ... ನಿಧಾನವಾಗಿ ಕೈ ಹಿಡಿದುಕೊಂಡು ಜಾನಕಿ ಎಂದೆ.... ಆಗ ನಿಧಾನವಾಗಿ ತಲೆ ಎತ್ತಿ ಆ... ಆ... ಯಾರೂ ಎಂದು ಕಣ್ಣು ಬಿಟ್ಟಳು ಜಾನಕಿ!!!
ನನಗೆ ಗಂಟಲಿನಿಂದ ಮಾತೇ ಹೊರಡಲಿಲ್ಲ.... ಮಾತಾಡಲು ಬಾಯಿ ತೆರೆದರೆ ಗಂಟಲು ಉಬ್ಬಿ ಬರುತ್ತಿತ್ತು.... ಕಷ್ಟಪಟ್ಟು ಜಾನೋ ನಾನು ನಿನ್ನ ಅರ್ಜುನ್ ಎಂದು ಹೇಳುವಷ್ಟರಲ್ಲಿ ಕಣ್ಣಿಂದ ನೀರು ಹರಿಯಲು ಶುರುವಾಯಿತು. ಅರ್ಜುನ್ ಎಂಬ ಹೆಸರು ಕೇಳುತ್ತಿದ್ದಂತೆ ಜಾನಕಿ ಜೋರಾಗಿ ಅರ್ಜುನ್ ಎಂದು ಕೂಗಿದಳು, ಅಷ್ಟರಲ್ಲಿ ಮತ್ತೊಮ್ಮೆ ಲೈಟ್ ಹೌಸ್ ಬೆಳಕು ಆ ರೂಮಿನಲ್ಲಿ ಬಿದ್ದು ಇಬ್ಬರೂ ಒಬ್ಬರ ಮುಖ ಒಬ್ಬರು ನೋಡಿಕೊಂಡೆವು.
ನನ್ನ ಮುಖ ಕಂಡ ಕೂಡಲೇ ಜಾನಕಿ ಗದ್ಗದಿತಳಾಗಿ ಅಳಲು ಶುರುಮಾಡಿ ನನ್ನನ್ನು ಗಟ್ಟಿಯಾಗಿ ತಬ್ಬಿಕೊಂಡಳು. ನನಗೆ ಒಂದೂ ಅರ್ಥವಾಗುತ್ತಿರಲಿಲ್ಲ. ಆದರೆ ಜಾನಕಿ ಜೀವಂತವಾಗಿರುವುದು ಕಂಡು ಸಂತೋಷ ಉಕ್ಕಿ ಹರಿಯುತ್ತಿತ್ತು. ಆದರೆ ಅದೇ ಸಮಯದಲ್ಲೇ, ಆದಷ್ಟೂ ಬೇಗ ಇಲ್ಲಿಂದ ಆಚೆ ಹೋಗದಿದ್ದರೆ ಇಬ್ಬರ ಜೀವಕ್ಕೂ ಅಪಾಯ ಎಂಬುದು ನೆನಪಿಗೆ ಬಂತು.
ಅರ್ಜುನ್... ಅರ್ಜುನ್.... ನಾನು ಮತ್ತೆ ನಿನ್ನನ್ನು ನೋಡುತ್ತೇನೋ ಇಲ್ಲವೋ ಎಂದುಕೊಂಡು ಬಿಟ್ಟಿದ್ದೆ ಎಂದು ಬಿಕ್ಕುತ್ತಿದ್ದಳು ಜಾನಕಿ.
ಜಾನೂ....ಅದೆಲ್ಲಾ ಆಮೇಲೆ ಮಾತಾಡೋಣ, ಮೊದಲು ಇಲ್ಲಿಂದ ತಪ್ಪಿಸಿಕೊಳ್ಳಬೇಕು, ಇಲ್ಲದಿದ್ದರೆ ಇಬ್ಬರ ಪ್ರಾಣಕ್ಕೂ ಅಪಾಯ ತಪ್ಪಿದ್ದಲ್ಲ. ಇಲ್ಲಿಂದ ತಪ್ಪಿಸಿಕೊಳ್ಳಲು ಯಾವುದಾದರೂ ದಾರಿ ಇದೆಯಾ?
ಅರ್ಜುನ್, ನಾನಿಲ್ಲಿಗೆ ಬಂದಾಗಿನಿಂದ ರೂಮನ್ನು ಬಿಟ್ಟು ಆಚೆ ಹೋಗಿಲ್ಲ...
ಸರಿ ಸರಿ ಎಂದು ಆ ಕಿಟಕಿಯಿಂದ ಆಚೆ ನೋಡಿದರೆ ಸಮುದ್ರ ಬಿಟ್ಟರೆ ಬೇರೇನೂ ಕಾಣಲಿಲ್ಲ. ಜಾನೂ ಒಂದೇ ನಿಮಿಷ ಇರು ಎಂದು ಮೊದಲು ಹೋಗಿದ್ದ ರೂಮುಗಳಿಗೆ ಹೋಗಿ ಕಿಟಕಿಯ ಆಚೆ ನೋಡಿದರೆ ಒಂದಿಬ್ಬರು ಗಸ್ತು ತಿರುಗುತ್ತಿರುವುದು ಕಂಡು ಬಂದಿತು. ಆದರೆ ಸಮುದ್ರದ ದಂಡೆಯಲ್ಲಿ ಇದ್ದೀವಿ ಎಂದರೆ ಖಂಡಿತ ಇದು ಮಧುರೈ ಅಂತೂ ಆಗಿರಲು ಸಾಧ್ಯವಿಲ್ಲ. ಹಾಗಿದ್ದರೆ ನಾವೆಲ್ಲಿ ಇದ್ದೀವಿ... ಬಹುಶಃ ಚೆನ್ನೈಗೆ ಏನಾದರೂ ಕರೆದುಕೊಂಡು ಬಂದಿದ್ದಾರ?ಎಲ್ಲವೂ ಅಯೋಮಯವಾಗಿತ್ತು. ಹಾಗೇ ಯೋಚಿಸುತ್ತಾ ಜಾನಕಿ ರೂಮಿಗೆ ಬರುವಷ್ಟರಲ್ಲಿ ಕರೆಂಟ್ ಬಂದಿತು. ಕೂಡಲೇ CC camera ನೆನಪಾಯಿತು. ಅವರು Camera ನೋಡಿದರೆ ಯಾವ ಸಮಯದಲ್ಲಿ ಬೇಕಾದರೂ ಒಳಬರಬಹುದು ಎಂದುಕೊಂಡು ಜಾನಕಿಗೆ ಕೂಡಲೇ ಬಾ ಎಂದು ಹೇಳಿ ಕೆಳಗೆ ಕರೆದುಕೊಂಡು ಬಂದು ಕೈಗೆ ಏನಾದರೂ ಆಯುಧ ಸಿಗುತ್ತದ ಎಂದು ನೋಡುತ್ತಿರುವಷ್ಟರಲ್ಲಿ ಯಾರೋ ಬಾಗಿಲು ತೆರೆಯುತ್ತಿರುವಂತೆ ಅನಿಸಿತು.
ಅಲ್ಲೇ ಬಾಗಿಲ ಪಕ್ಕದಲ್ಲಿ ಒಂದು ಕಬ್ಬಿಣದ ಸಲಾಕೆ ಇರುವುದು ಕಣ್ಣಿಗೆ ಬಿತ್ತು. ಕೂಡಲೇ ಜಾನಕಿಯನ್ನು ಬಾಗಿಲ ಬದಿಯಲ್ಲಿ ಅವಿತುಕೋ ಎಂದು ಹೇಳಿ ಆ ಸಲಾಕೆಯನ್ನು ಹಿಡಿದುಕೊಂಡು ಮತ್ತೆ ನನ್ನನ್ನು ಕಟ್ಟಿಹಾಕಿದ್ದ ಖುರ್ಚಿಯ ಮೇಲೆ ಬಂದು ಕುಳಿತು ಸಲಾಕೆಯನ್ನು ಪಕ್ಕದಲ್ಲಿ ಇಟ್ಟುಕೊಂಡೆ. ಬಾಗಿಲು ತೆರೆದು ಮೊದಲು ಒಬ್ಬ ಒಳ ಬಂದವನೇ ಸೀದಾ ನನ್ನ ಬಳಿ ಬಂದು ಕುತ್ತಿಗೆ ಪಟ್ಟಿಗೆ ಕೈ ಹಾಕಿದ ಕೂಡಲೇ ಅವನ ಎರಡೂ ಕೈಯನ್ನು ಬಲವಾಗಿ ತಿರುಗಿಸಿ ಗಂಟಲಿಗೆ ಒಂದು ಬಲವಾದ ಪೆಟ್ಟು ಕೊಟ್ಟೆ. ಆ ಹೊಡೆತಕ್ಕೆ ಅವನ ಗಂಟಲಿನಿಂದ ಆಚೆ ಬರುತ್ತಿದ್ದ ಕೂಗು ಹಾಗೆ ಒಳಗೆ ಹೋಯಿತು. ಮತ್ತೊಂದು ಹೊಡೆತ ಅವನ ಕುತ್ತಿಗೆಯ ಹಿಂಭಾಗಕ್ಕೆ ಬೀಳುತ್ತಿದ್ದ ಹಾಗೆ ಅವನು ಸದ್ದಿಲ್ಲದೇ ನೆಲಕ್ಕೆ ಒರಗಿದ. ಅಷ್ಟರಲ್ಲಿ ಇನ್ನೊಬ್ಬ ಒಳಗೆ ಬಂದು ಅಲ್ಲಿನ ಪರಿಸ್ಥಿತಿ ಕಂಡು ಅವು ಪ್ರತಿಕ್ರಿಯಿಸುವಷ್ಟರಲ್ಲಿ ಕಬ್ಬಿಣದ ಸಲಾಕೆ ಅವನ ತಲೆಗೆ ಅಪ್ಪಳಿಸಿ ರಕ್ತ ಚಿಮ್ಮಿ ನೆಲಕ್ಕುರುಳಿದ.
ಮತ್ತೆ ಯಾರಾದರೂ ಒಳ ಬರುವರೇನೋ ಎಂದು ಕಾದರೂ ಯಾರ ಸೂಚನೆಯೂ ಇರಲಿಲ್ಲ. ಅಷ್ಟರಲ್ಲಿ ಆಚೆ ಬೆಳಕು ಹರಿಯಲು ಆರಂಭಿಸಿತು. ಅವರಿಬ್ಬರ ಜೇಬಿನಲ್ಲಿ ಏನಾದರೂ ಸಿಗಬಹುದೇನೋ ಎಂದು ತಡಕಾಡಿದಾಗ ನನ್ನ ಮೊಬೈಲ್ ಮತ್ತು ಇನ್ನೊಂದೆರೆಡು ಮೊಬೈಲ್ ಮತ್ತು ಒಂದಷ್ಟು ಹಣ ಇತ್ತು. ಅಲ್ಲಿಂದ ತಪ್ಪಿಸಿಕೊಳ್ಳಲು ಅಗತ್ಯ ಎಂದು ಆ ಹಣವನ್ನು ಮತ್ತು ಮೊಬೈಲ್ಗಳನ್ನು ತೆಗೆದುಕೊಂಡು ಜಾನಕಿಯನ್ನು ಕರೆದುಕೊಂಡು ಆಚೆ ಬಂದರೆ ಎತ್ತ ನೋಡಿದರೂ ಸಮುದ್ರದ ನೀರು ಮತ್ತು ಮರಳು ಬಿಟ್ಟು ಇನ್ನೇನೂ ಕಾಣಲಿಲ್ಲ. ಎತ್ತ ಕಡೆ ಹೋಗುವುದೆಂದೂ ತಿಳಿಯಲಿಲ್ಲ. ತಕ್ಷಣ ಲೈಟ್ ಹೌಸ್ ನೆನಪಾಗಿ ಅದರ ಕಡೆ ನಡೆಯೋಣ ಚಕಚಕನೆ ಹೆಜ್ಜೆ ಹಾಕಲು ಶುರುಮಾಡಿದೆವು. ಜಾನಕಿ ಸಾಕಷ್ಟು ಬಳಲಿದ್ದರಿಂದ ಬೇಗ ಬೇಗನೆ ಹೆಜ್ಜೆ ಹಾಕಲು ಆಗುತ್ತಿರಲಿಲ್ಲ.
ಸುಮಾರು ದೂರ ಕ್ರಮಿಸಿದ ಮೇಲೆ ದೂರದಲ್ಲಿ ರಸ್ತೆ ಕಂಡಿತು. ಆದರೆ ರಸ್ತೆಯ ಅಕ್ಕಪಕ್ಕದಲ್ಲಿ ಏನೂ ಕಾಣಲಿಲ್ಲ. ಬಹುಶಃ ಇದು ಯಾವುದೋ ಹೈವೇ ಪಕ್ಕದಲ್ಲಿರುವ ಗೆಸ್ಟ್ ಹೌಸ್ ಎಂದು ಕಾಣುತ್ತದೆ. ಸಿಟಿಯಿಂದ ಸುಮಾರು ದೂರದಲ್ಲಿ ಇದ್ದೀವಿ ಎನಿಸುತ್ತದೆ. ಇಲ್ಲಿಂದ ಹೇಗೆ ತಪ್ಪಿಸಿಕೊಳ್ಳುವುದು. ರಸ್ತೆಯಲ್ಲಿ ನಿಂತರೆ ಇಲ್ಲಿಗೆ ಬರುವವರ ಕಣ್ಣಿಗೆ ಬಿದ್ದರೆ ಅಷ್ಟೇ... ಏನು ಮಾಡುವುದು ಎಂದು ಯೋಚಿಸುವಷ್ಟರಲ್ಲಿ ಕೈಲಿದ್ದ ಮೊಬೈಲ್ ರಿಂಗಾಗಲು ಶುರುವಾಯಿತು. ಯಾರೆಂದು ನೋಡಿದರೆ ಸೆಲ್ವಂ ಬಾಸ್ ಎಂದಿತ್ತು. ಓಹೋ ಅವನೇ ಕರೆ ಮಾಡುತ್ತಿದ್ದಾನೆ ಎಂದುಕೊಂಡು ಕರೆ ಕಟ್ ಮಾಡಿದೆ. ಮತ್ತೊಂದೆರೆಡು ಸಲ ಕರೆ ಮಾಡಿದಾಗಲೂ ಕರೆ ಕಟ್ ಮಾಡಿ ಕೂಡಲೇ ಜಾನಕಿಯನ್ನು ಕರೆದುಕೊಂಡು ರಸ್ತೆಗೆ ಬಂದು ಯಾವುದಾದರೂ ಗಾಡಿ ಬರುವುದೇನೋ ಎಂದು ಎದುರು ನೋಡುತ್ತಿದ್ದೆ.
ಮೊಬೈಲ್ ಕರೆ ಕಟ್ ಮಾಡಿದ್ದರಿಂದ ಸೆಲ್ವಂಗೆ ಖಂಡಿತ ಅನುಮಾನ ಬಂದಿರಬಹುದು. ಅವನು ಯಾವ ಕ್ಷಣದಲ್ಲಿ ಬೇಕಾದರೂ ಇಲ್ಲಿಗೆ ಬರಬಹುದು... ಅವನು ಬರುವ ಮುಂಚೆ ಇಲ್ಲಿಂದ ಜಾಗ ಖಾಲಿ ಮಾಡಬೇಕು ಎಂದು ಚಡಪಡಿಸುತ್ತಿದ್ದಾಗ ಯಾವುದೋ ಒಂದು ಬಸ್ ಬರುವುದು ಕಂಡಿತು. Bangalore to Chennai ಎಂದಿತ್ತು. ಓಹೋ ನನ್ನ ಊಹೆ ಸರಿಯಾಗೇ ಇದೆ. ಮಧುರೈನಿಂದ ಚೆನ್ನೈಗೆ ಕರೆದುಕೊಂಡು ಬಂದಿದ್ದಾರೆ ಎಂದು ಬಸ್ ಗೆ ಕೈ ಅಡ್ಡ ಮಾಡಿದಾಗ ಬಸ್ ನಿಲ್ಲಲಿಲ್ಲ. ಊರು ಹತ್ತಿರದಲ್ಲಿದ್ದಾಗ ಯಾವ ಬಸ್ ತಾನೇ ನಿಲ್ಲಿಸುತ್ತಾನೆ ಎಂದುಕೊಂಡು ನಡೆದುಕೊಂಡೇ ಹೊರಡೋಣ ಎಂದುಕೊಂಡೆ. ಆದರೆ ಹೊರಡುವ ದಾರಿಯಲ್ಲಿ ಸೆಲ್ವಂ ಕಡೆಯವರು ನಮ್ಮನ್ನು ನೋಡಿದರೆ... ಹಾಗೆಂದು ಅಲ್ಲೇ ನಿಲ್ಲಲೂ ಸಾಧ್ಯವಿಲ್ಲ.... ಒಂದು ಕಡೆ ಕತ್ತಲು ಸರಿದು ಬೆಳಕು ಆವರಿಸುತ್ತಿದೆ.... ಅಷ್ಟರಲ್ಲಿ ಒಂದು ಆಟೋ ಬರುವುದು ಕಂಡಿತು. ಅವನಿಗೆ ಕೈ ಹಾಕಿದ ಕೂಡಲೇ ನಿಲ್ಲಿಸಿ ಎಂಗೆ ಪೋನು ಎಂದು ಕೇಳಿದ.
ಸಿಟಿ ಬಸ್ ಸ್ಟಾಂಡ್ ಎಂದಿದ್ದಕ್ಕೆ ನೂತ್ತಿ ಅಂಬದು ಎಂದ... ಸರಿ ಸರಿ ಪೊಂಗೋ ಎಂದು ಹೇಳಿ ಆಟೋ ಹತ್ತಿ ಕುಳಿತೆ. ಅಲ್ಲಿಯವರೆಗೂ ಜಾನಕಿಯ ಮುಖ ಸರಿಯಾಗಿ ನೋಡಿರಲಿಲ್ಲ. ಆಟೋ ಒಳಗೆ ಕುಳಿತಾಗ ಜಾನಕಿಯ ಮುಖ ನೋಡಿದೆ. ಅತ್ತೂ ಅತ್ತೂ ಜಾನಕಿಯ ಕಣ್ಣುಗಳು ಒಳಕ್ಕೆ ಹೋಗಿದ್ದವು. ಮುಖ ಬಾಡಿ ಹೋಗಿತ್ತು. ಜಾನಕಿಯ ಮುಖವನ್ನು ನನ್ನ ಬೊಗಸೆಯಲ್ಲಿ ಹಿಡಿದು ಅವಳ ಹಣೆಗೊಂದು ಮುತ್ತನಿಟ್ಟು.... ಜಾನೂ ಎನಿದೆಲ್ಲ? ನನಗೊಂದೂ ಅರ್ಥವಾಗುತ್ತಿಲ್ಲ...
ಅರ್ಜುನ್ ನನಗೂ ಏನೂ ಅರ್ಥವಾಗುತ್ತಿಲ್ಲ.... ಮೊದಲು ಎಲ್ಲಾದರೂ ಒಂದು ಸೇಫ್ ಆದ ಜಾಗ ಹುಡುಕು ನಂತರ ಮಾತಾಡೋಣ...
Comments
ಉ: ಅನ್ವೇಷಣೆ ಭಾಗ ೨೫
ಹೊಸ ತಿರುವು! ಚೆನ್ನಾಗಿದೆ.
In reply to ಉ: ಅನ್ವೇಷಣೆ ಭಾಗ ೨೫ by kavinagaraj
ಉ: ಅನ್ವೇಷಣೆ ಭಾಗ ೨೫
ತಿರುವು ಎಲ್ಲಿ ನಾಗರಾಜ್ ಸರ್ ! ಕತೆ ಮುಗಿಯಿತು ! ಜಾನಕಿ ಸಿಕ್ಕಾಯಿತಲ್ಲ !
ಉ: ಅನ್ವೇಷಣೆ ಭಾಗ ೨೫
ನನ್ನ ಲಾಗಿನ್ ಸರಿಯಾಗಿ ಕೆಲಸ ಮಾಡದಿದ್ದರಿಂದ ಮು0ದಿನ ಭಾಗವನ್ನು ಪೋಸ್ಟ್ ಮಾಡಲು ತಡವಾಯಿತು. ಕ್ಷಮೆ ಇರಲಿ :)