ಅನ್ವೇಷಣೆ ಭಾಗ ೨೮

ಅನ್ವೇಷಣೆ ಭಾಗ ೨೮

ಬೆಂಗಳೂರಿಗೆ ಬಂದು ಅಪ್ಪನಿಗೆ ಫೋನ್ ಮಾಡೋಣ ಎಂದುಕೊಂಡರೆ, ನಾನು ಅಪ್ಪನಿಗೆ ಹೇಳಿದ್ದ ಮಾತು ನೆನಪಿಗೆ ಬಂತು. ಇನ್ನೊಂದು ವಾರ ಬಿಟ್ಟು ಬರುತ್ತೇನೆ... ನೀವು ಯಾವುದಾದರೂ  ಜಾಗದಲ್ಲಿರಿ ಎಂದು ಹೇಳಿದ್ದು ನೆನಪಾಯಿತು. ಛೇ... ಈಗ ಅವರು ಎಲ್ಲಿದ್ದಾರೋ ಗೊತ್ತಿಲ್ಲವಲ್ಲ... ಏನು ಮಾಡುವುದು ಎಂದು ಯೋಚಿಸುತ್ತಿದ್ದಾಗ, ಮನೆಯವರು ಆಚೆ ಹೋದಾಗ ಕೀ ಪಕ್ಕದ ಮನೆಯಲ್ಲಿ ಕೊಡುವುದು ವಾಡಿಕೆ ಆದ್ದರಿಂದ ಅದನ್ನೊಮ್ಮೆ ಪ್ರಯತ್ನ ಮಾಡೋಣ ಎಂದು ಮನೆಯ ಬಳಿ ಬಂದು ಪಕ್ಕದ ಮನೆಯಲ್ಲಿ ಕೇಳಿದಾಗ ನಮ್ಮ ಅದೃಷ್ಟಕ್ಕೆ ಕೀ ಕೊಟ್ಟು ಹೋಗಿದ್ದರು. ಅವರು ಕೀ ಕೊಟ್ಟು ಇಬ್ಬರನ್ನೂ ವಿಚಾರಿಸಿ ಕಾಫೀ ಕೊಟ್ಟು ಬೀಳ್ಕೊಟ್ಟರು. ಮನೆಯ ಬೀಗ ತೆಗೆದು ಸ್ನಾನ ಮಾಡಿ ತಿಂಡಿ ತಿನ್ನಲು ಆಚೆ ಹೋದೆವು. ಆಚೆ ತಿಂಡಿ ತಿಂದು ಹಾಗೇ ಆಫೀಸಿನ ಬಳಿ ಹೋಗೋಣ ಎಂದು ಆಫೀಸಿಗೆ ಬಂದು ಮ್ಯಾನೇಜರ್ ನನ್ನು ಭೇಟಿ ಮಾಡಿ ನಡೆದ ವಿಷಯವೆಲ್ಲ ತಿಳಿಸಿ ಮುಂದಿನ ವಾರದಿಂದ ಕೆಲಸಕ್ಕೆ ಬರುವುದಾಗಿ ತಿಳಿಸಿ ಜಾನಕಿಯ ಕಾಲೇಜ್ ಬಳಿ ಹೋಗಿ ಅಲ್ಲಿಯೂ ನಡೆದ ವಿಷಯ ತಿಳಿಸಿ ಆದಷ್ಟು ಬೇಗ ಮತ್ತೆ ಕೆಲಸಕ್ಕೆ ಸೇರುವುದಾಗಿ ತಿಳಿಸಿ, ಅಲ್ಲಿಂದ ಆಚೆ ಬಂದು ವೀಣಾ ದೇವಿಯವರಿಗೆ ಕರೆಮಾಡಿ ಜಾನಕಿಯ ವಿಷಯ ತಿಳಿಸಿದಾಗ, ಮೊದಲಿಗೆ ಅವರು ಆಶ್ಚರ್ಯ ವ್ಯಕ್ತಪಡಿಸಿದರೂ ನಂತರ ಸಂತೋಷ ಪಟ್ಟರು. ಅಷ್ಟರಲ್ಲಾಗಲೇ ಮಧ್ಯಾಹ್ನ ಆಗಿದ್ದರಿಂದ ಎಲ್ಲಾದರೂ ಊಟ ಮಾಡಿ ಮನೆಗೋ ಹೋಗೋಣ ಎಂದು ಹೋಟೆಲೊಂದಕ್ಕೆ ಹೋದಾಗ ಅಲ್ಲಿ ಜಾನಕಿಯ ಅಪ್ಪ ಕಂಡರು.

ಅವರು ಜಾನಕಿಯನ್ನು ಕಂಡ ಕೂಡಲೇ ಭಾವೋದ್ವೇಗಕ್ಕೆ ಒಳಗಾದರು. ಆಚೆ ಮಾತಾಡುವುದು ಸರಿ ಇರುವುದಿಲ್ಲ ಎಂದುಕೊಂಡು ಅವರನ್ನು ಆಚೆ ಕರೆದುಕೊಂಡು ಬಂದು ನೀವು ಸಿಕ್ಕಿದ್ದು ಒಳ್ಳೆಯದಾಯಿತು. ಅಲ್ಲಿನ ಕೆಲಸ ಮುಗಿದಿದ್ದರಿಂದ ನಾವು ಬಂದುಬಿಟ್ಟೆವು... ನೀವು ಎಲ್ಲಿದ್ದೀರಾ ಎಂದು ಗೊತ್ತಿರಲಿಲ್ಲ... ಬನ್ನಿ ಮನೆಗೆ ಹೋಗೋಣ ಎಂದು ಅವರನ್ನು ಜೊತೆಮಾಡಿಕೊಂಡು ಅವರು ಇದ್ದ ರಹಸ್ಯವಾದ ಜಾಗಕ್ಕೆ ಹೋದೆವು. ಅಪ್ಪ ಅಮ್ಮ ಮತ್ತು ಜಾನಕಿಯ ಅಪ್ಪ ಅಮ್ಮ ಜಾನಕಿಯ ದೊಡ್ಡಪ್ಪನ ಮನೆಯಲ್ಲಿ ಇದ್ದರು. ಅಲ್ಲಿಂದ ಅವರನ್ನು ಕರೆದುಕೊಂಡು ಮನೆಗೆ ಬಂದು ನಡೆದ ವಿಷಯವನ್ನೆಲ್ಲಾ ವಿವರವಾಗಿ ತಿಳಿಸಿದಾಗ... ಎಲ್ಲರ ಕಣ್ಣಲ್ಲೂ ನೀರು ತುಂಬಿತ್ತು.

ಜಾನಕಿಗೂ ಎಲ್ಲರನ್ನೂ ನೋಡಿ ದುಃಖ ತಡೆಯಲಾಗದೆ ಭಾವುಕಳಾಗಿದ್ದಳು. ಎಲ್ಲರೂ ಕೂಡಿ ಮಾತಾಡುತ್ತಿದ್ದರು, ನಾನು ಆಚೆ ಬಂದು ತ್ರಿವಿಕ್ರಂಗೆ ಕರೆ ಮಾಡಿದಾಗ ಅವರು ಕರೆ ಸ್ವೀಕರಿಸಲಿಲ್ಲ. ಅರ್ಧ ಗಂಟೆಯ ನಂತರ ಅವರೇ ಕರೆ ಮಾಡಿದರು. ಅರ್ಜುನ್, ನೀನು ಕರೆ ಮಾಡಿದಾಗ ನಾನು ಚೆನ್ನೈ ಪೋಲಿಸ್ ಕಮಿಷನರ್ ಆಫೀಸಿನಲ್ಲಿದ್ದೆ. ಸೆಲ್ವಂನನ್ನು ಕರ್ನಾಟಕ ಪೋಲಿಸ್ ಗೆ ಹಸ್ತಾಂತರಿಸುವ ಫಾರ್ಮಾಲಿಟಿ ನಡೆಯುತ್ತಿತ್ತು. ಅಲ್ಲಿಂದ ಒಪ್ಪಿಗೆ ಸಿಕ್ಕಿದೆ. ಇಂದು ರಾತ್ರಿ ಅವನನ್ನು ಬೆಂಗಳೂರಿಗೆ ಕರೆದುಕೊಂಡು ಬರುತ್ತಿದ್ದೇವೆ. ಅಲ್ಲಿ ಬಂದ ಮೇಲೆ ಅವನನ್ನು ಕೋರ್ಟಿಗೆ ಕರೆದುಕೊಂಡು ಹೋಗಿ ನಂತರ ವಿಚಾರಣೆ ನಡೆಸುತ್ತೇವೆ. ಬಹುಶಃ ಇದೆಲ್ಲಾ ಇನ್ನೊಂದು ವಾರ ಆಗುತ್ತದೆ. ಯಾವುದಕ್ಕೂ ನಾನು ಅಲ್ಲಿ ಬಂದ ಮೇಲೆ ನಿನಗೆ ಫೋನ್ ಮಾಡುತ್ತೇನೆ ಎಂದು ಕರೆ ಕಟ್ ಮಾಡಿದರು.

ಎರಡು ದಿನದ ನಂತರ ಕರೆಮಾಡಿದ ತ್ರಿವಿಕ್ರಂ ಅರ್ಜುನ್, ನೆನ್ನೆ ಸೆಲ್ವಂನನ್ನು ಕೋರ್ಟಿಗೆ ಹಾಜರು ಪಡಿಸಿದ್ದೆವು. ಇದೊಂದು ಜಟಿಲವಾದ ಕೇಸ್ ಆದ್ದರಿಂದ ಜಡ್ಜ್ ಕೂಡಲೇ ವಿಚಾರಣೆ ನಡೆಸುವಂತೆ ಆದೇಶ ನೀಡಿದ್ದಾರೆ. ಬಹುಷಃ ಇವತ್ತು ನಾಳೆ ವಿಚಾರಣೆ ನಡೆಸಿದ ಮೇಲೆ ನಮಗೆ ಮೂಲ ಕಾರಣ ತಿಳಿಯಬಹುದು.

ಓಹ್ ಹೌದಾ ಸರ್.... ಆದಷ್ಟು ಬೇಗ ಅವನಿಗೆ ಶಿಕ್ಷೆ ಕೊಡಿಸುವಂತೆ ಮಾಡಿ ಸರ್, ಮತ್ತೆ ಯಾರಿಗೂ ಅವನು ಈ ರೀತಿ ಅನ್ಯಾಯ ಮಾಡಬಾರದು.

ಜಾನಕಿ ಮತ್ತೆ ವಾಪಸ್ ಬಂದ ಸಂದರ್ಭದಲ್ಲಿ ಎಲ್ಲರೂ ಸಂಭ್ರಮದಲ್ಲಿ ತೇಲಿ ಹೋಗಿದ್ದರು. ನಿಂತು ಹೋಗಿದ್ದ ಮದುವೆಗೆ ಮತ್ತೆ ಚಾಲನೆ ನೀಡಿದ್ದರು. ಅಪ್ಪ ಹೋಗಿ ಹತ್ತಿರದಲ್ಲಿ ಒಳ್ಳೆಯ ಮಹೂರ್ತ ನಿಗದಿ ಪಡಿಸಿಕೊಂಡು ಬಂದಿದ್ದರು. ಪತ್ರಿಕೆಗಳನ್ನು ಮುದ್ರಣಕ್ಕೆ ಕೊಟ್ಟಿದ್ದರು. ವಾರದ ಹಿಂದಿನವರೆಗೂ ಬಿಕೋ ಎನ್ನುತ್ತಿದ್ದ ಮನೆ ಮತ್ತು ಮನಸುಗಳು ಇಂದು ಗರಿಗೆದರಿ ನಲಿದಾಡುತ್ತಿತ್ತು.

ಮನೆಗೆ ಎಲ್ಲಾ ಸಂಬಂಧಿಗಳು ಬಂದು ಜಾನಕಿಯನ್ನು ಮಾತಾಡಿಸಿಕೊಂಡು ಹೋಗುತ್ತಿದ್ದರು. ಎಲ್ಲರಿಗೂ ಜಾನಕಿ ಮರಳಿ ಬಂದದ್ದು ಅತೀವ ಸಂತಸ ತಂದಿತ್ತು. ಎಲ್ಲರಲ್ಲೂ ನವೋತ್ಸಾಹ ತುಂಬಿತ್ತು. ಜಾನಕಿಯ ತಂದೆ ಮದುವೆಗೆ ಅದೇ ಛತ್ರವನ್ನು ಮಾತಾಡಿ ಬಂದಿದ್ದರು. ಸರಿಯಾಗಿ ಒಂದು ತಿಂಗಳ ನಂತರ ದಿನಾಂಕ ನಿಗದಿಯಾಗಿತ್ತು.

ಎರಡು ದಿನದ ನಂತರ ಮತ್ತೆ ನಾನು ಮತ್ತು ಜಾನಕಿ ಇಬ್ಬರೂ ಕೆಲಸಕ್ಕೆ ಹೋಗಲು ಪ್ರಾರಂಭಿಸಿದೆವು. ಅಂದೇ ಮಧ್ಯಾಹ್ನ ತ್ರಿವಿಕ್ರಂ ಅವರಿಂದ ಕರೆ ಬಂತು. ಅರ್ಜುನ್....ಸಂಜೆ ಒಮ್ಮೆ ಸ್ಟೇಷನ್ ಕಡೆ ಬನ್ನಿ ನಿಮ್ಮ ಬಳಿ ಮಾತಾಡಬೇಕು.

ಸರ್ ಖಂಡಿತ... ನಾನೇ ನಿಮಗೆ ಕರೆ ಮಾಡೋಣ ಎಂದಿದ್ದೆ. ಆದರೆ ನೀವು ಬ್ಯುಸಿ ಇರುತ್ತೀರ ಎಂದು ಕರೆ ಮಾಡಲಿಲ್ಲ. ಇವತ್ತಿನಿಂದ ಆಫೀಸಿಗೆ ಬರಲು ಶುರುಮಾಡಿದ್ದೇನೆ. ಸಂಜೆ ಮನೆಗೆ ಹೋಗುವಾಗ ಬಂದು ಹೋಗುತ್ತೇನೆ ಸರ್.

ಅಂದು ಸಂಜೆ ಬೇಗನೆ ಆಫೀಸಿನಿಂದ ಹೊರಟು ಸ್ಟೇಷನ್ ಬಳಿ ಹೋದರೆ ತ್ರಿವಿಕ್ರಂ ಇರಲಿಲ್ಲ. ಕರೆ ಮಾಡಿದಾಗ, ಇಲ್ಲ ಅರ್ಜುನ್ ಒಂದು ಅರ್ಜೆಂಟ್ ಕೇಸ್ ಬಂದಿತ್ತು. ನಾನು ಆಚೆ ಬಂದಿದ್ದೇನೆ. ನಾನೇ ಬಿಡುವಾದಾಗ ನಿಮಗೆ ಕರೆ ಮಾಡುತ್ತೇನೆ.

ಹಾಗೇ ಆಗಲಿ ಸರ್ ಎಂದು ಕರೆ ಕಟ್ ಮಾಡಿ ಮನೆಗೆ ಬಂದರೆ ಆಶ್ಚರ್ಯ ಕಾದಿತ್ತು. ವೀಣಾದೇವಿಯವರು ಮನೆಗೆ ಬಂದಿದ್ದರು. ಜೊತೆಯಲ್ಲಿ ಜಾನಕಿ ಮತ್ತು ಅವರ ಅಪ್ಪ ಅಮ್ಮ ಸಹ ಬಂದು ನಗುನಗುತ್ತಾ ಮಾತಾಡುತ್ತಿದ್ದರು. ನಾನು ಬಂದಿದ್ದು ನೋಡಿ.... ಅರ್ಜುನ್ ಅಂತೂ ಸಾಧಿಸಿಬಿಟ್ಟೆ.... ಅಂದು ನೀನೇನಾದರೂ ಈ ಕೇಸಿನ ಬಗ್ಗೆ ಆಸಕ್ತಿ ವಹಿಸದೆ ಇದ್ದಿದ್ದರೆ ಏನಾಗುತ್ತಿತ್ತೋ. ಮೊದಮೊದಲು ನಾನು ಇದು ಸಾಧ್ಯವ ನಿನ್ನ ಕೈಯಿಂದ ಎಂದುಕೊಂಡಿದ್ದೆ. ಆದರೆ ನಿನ್ನ ಪ್ರೀತಿ ನಿಮ್ಮಿಬ್ಬರನ್ನು ಮತ್ತೆ ಒಂದು ಮಾಡಿತು.

ಮೇಡಂ... ನಿಜ ಹೇಳಬೇಕೆಂದರೆ ಎಲ್ಲಾ ಕ್ರೆಡಿಟ್ ಇನ್ಸ್ಪೆಕ್ಟರ್ ತ್ರಿವಿಕ್ರಂ ಅವರಿಗೆ ಸೇರಬೇಕು. ಅವರು ವಿಶೇಷ ಮುತುವರ್ಜಿ ವಹಿಸಿ ಈ ಕೇಸನ್ನು ಬಗೆಹರಿಸಿದರು. ನಾನೊಬ್ಬನೇ ಆಗಿದ್ದಿದರೆ ಖಂಡಿತ ಇಷ್ಟು ಬೇಗ ಜಾನಕಿ ನನಗೆ ಸಿಗುತ್ತಿರಲಿಲ್ಲ ಎಂದು ಜಾನಕಿ ಕಡೆ ನೋಡಿದೆ. ಜಾನಕಿ ಒಂದು ನಗೆ ಬೀರಿದಳು. 

ಹಾಗೇ ಮದುವೆ ಅದೂ ಇದೂ ಮಾತಾಡುತ್ತಿದ್ದಾಗ ತ್ರಿವಿಕ್ರಂ ಕರೆ ಬಂತು. ಆಚೆ ಬಂದು ಕರೆ ಸ್ವೀಕರಿಸಿ ಸರ್ ಹೇಳಿ ಎಂದಿದ್ದಕ್ಕೆ... ಅರ್ಜುನ್.... ಸೆಲ್ವಂ ವಿಷಯ ನಾವಂದುಕೊಂಡಷ್ಟು ಬೇಗ ಮುಗಿಯುವ ಲಕ್ಷಣಗಳು ಕಾಣುತ್ತಿಲ್ಲ. ಅವನು ಬಹಳ ದೊಡ್ಡ ದೊಡ್ಡ ವ್ಯಕ್ತಿಗಳ ಜೊತೆ ಸಂಪರ್ಕ ಇಟ್ಟುಕೊಂಡಿದ್ದಾನೆ ಎನಿಸುತ್ತದೆ. ಇಂದು ನಾನು ಸೆಲ್ವಂ ವಿಚಾರಣೆಗೆಂದು ತೆರಳುತ್ತಿದ್ದಾಗ ಕಮಿಷನರ್ ಆಫೀಸಿನಿಂದ ಕರೆ ಬಂದು ನೀನು ಈ ಕೂಡಲೇ ಈ ಕೇಸ್ ಡ್ರಾಪ್ ಮಾಡಿ ಇನ್ನೊಂದು ಕೇಸ್ ತೆಗೆದುಕೊಳ್ಳಬೇಕೆಂದು ಒತ್ತಡ ಹೇರಿದರು. ನಾನೆಷ್ಟೇ ಸಮಜಾಯಿಷಿ ಕೊಡಲು ಪ್ರಯತ್ನಿಸಿದರೂ ಅದು ಸಾಧ್ಯವಾಗಲಿಲ್ಲ.

ಸರ್.... ಇದೇನು ಹೀಗೆ ಹೇಳುತ್ತಿದ್ದೀರ....

ಅರ್ಜುನ್ ನೀನೇನೂ ಚಿಂತೆ ಮಾಡಬೇಡ. ಮಿನಿಸ್ಟರ್ ನನಗೆ ಬಹಳ ಬೇಕಾದವರು. ಮುಂಚೆಯೂ ಈ ಕೇಸಿನಲ್ಲಿ ಅವರೇ ತಾನೇ ನಮಗೆ ಸಹಾಯ ಮಾಡಿದ್ದು. ಅವರು ಊರಿನಲ್ಲಿಲ್ಲ, ನಾಳೆ ಬೆಳಿಗ್ಗೆ ಬರುತ್ತಿದ್ದಾರೆ. ನಾನು ನಾಳೆ ಅವರನ್ನು ಭೇಟಿ ಮಾಡಿ ಈ ಕೇಸಿನಲ್ಲಿ ನನ್ನನ್ನೇ ಮುಂದುವರಿಸುವಂತೆ ಕಮಿಷನರ್ ಗೆ ಹೇಳಿಸುತ್ತೇನೆ. ನೀವು ಆರಾಮಾಗಿರಿ... ಅವನಿಗೆ ಶಿಕ್ಷೆ ಕೊಡಿಸುವವರೆಗೂ ನಾನು ಈ ಕೇಸ್ ಬಿಟ್ಟು ಹೋಗುವುದಿಲ್ಲ.

ಸರ್... ನೀವು ಅಷ್ಟು ಭರವಸೆ ಕೊಟ್ಟಿರಲ್ಲ ಅಷ್ಟು ಸಾಕು. ಸರ್ ನಿಮ್ಮ ಕಾಳಜಿಗೆ ಅನಂತ ಧನ್ಯವಾದಗಳು

ಅರ್ಜುನ್.... ಈ ಕೇಸ್ ವೃತ್ತಿಪರವಾಗಿಯೂ ನನಗೆ ಬಹಳ ಮುಖ್ಯವಾದ ಕೇಸ್. ಇಷ್ಟು ಜಟಿಲವಾದ ಕೇಸ್ ನನ್ನ ಸರ್ವೀಸಿನಲ್ಲಿ ನಾನು ಯಾವತ್ತೂ ಹ್ಯಾಂಡಲ್ ಮಾಡಿರಲಿಲ್ಲ. ಅವನು ಯಾವ ಕಾರಣಕ್ಕೆ ಇಷ್ಟೆಲ್ಲಾ ಮಾಡಿದ ಎಂದು ನನಗೂ ಕುತೂಹಲ ಕಾಡುತ್ತಿದೆ. ನೋಡೋಣ ಏನಾಗುತ್ತದೋ ಎಂದು.... ಸರಿ ಅರ್ಜುನ್ ಬೈ.

Rating
No votes yet