ಅನ್ವೇಷಣೆ ಭಾಗ ೨೯

ಅನ್ವೇಷಣೆ ಭಾಗ ೨೯

ಮನೆಯಲ್ಲಿ ಮದುವೆಯ ಕೆಲಸಗಳು ಭರದಿಂದ ಸಾಗಿದ್ದವು. ನಾನು ಮಾತು ಜಾನಕಿ ಇಬ್ಬರೂ ಹೆಚ್ಚು ಕಡಿಮೆ ಒಂದು ತಿಂಗಳು ಆಫೀಸಿಗೆ ಸರಿಯಾಗಿ ಹೋಗಿರಲಿಲ್ಲವಾದ್ದರಿಂದ ಮದುವೆಗೆ ಹೆಚ್ಚು ದಿನ ರಜೆ ತೆಗೆದುಕೊಳ್ಳಲು ಸಾಧ್ಯವಿರಲಿಲ್ಲ. ವಾರಾಂತ್ಯವೂ ಸೇರಿ ಐದು ದಿನ ರಜೆ ಮಾತ್ರ ಸಿಕ್ಕಿತ್ತು. ಮದುವೆಯ ಶಾಪಿಂಗ್ ಎಲ್ಲ ಮುಂಚೆಯೇ ಆಗಿದ್ದರಿಂದ ಅದ್ಯಾವುದರ ತಲೆನೋವು ಇರಲಿಲ್ಲ. ಕೇವಲ ಪತ್ರಿಕೆ ಹಂಚುವ ಕೆಲಸ ಒಂದು ಬಾಕಿ ಉಳಿದಿತ್ತು ಅಷ್ಟೇ.

ಎರಡು ದಿನ ಕಳೆದು ತ್ರಿವಿಕ್ರಂ ಕರೆ ಮಾಡಿ, ಅರ್ಜುನ್ ಮಿನಿಸ್ಟರ್ ಜೊತೆ ಮಾತಾಡಿ ಸೆಲ್ವಂ ಕೇಸನ್ನು ಮತ್ತೆ ನನಗೆ ವಹಿಸುವಂತೆ ಕಮಿಷನರ್ ಗೆ ಹೇಳಿಸಿದ್ದೇನೆ. ಆದರೆ ಈಗ ನನಗೆ ಒಪ್ಪಿಸಿರುವ ಕೇಸನ್ನು ಮುಗಿಸಿದ ಮೇಲಷ್ಟೇ ಸೆಲ್ವಂ ಕೇಸನ್ನು ತೆಗೆದುಕೊಳ್ಳಬೇಕೆಂದು ಹೇಳಿದ್ದಾರೆ. ಅಲ್ಲಿಯವರೆಗೂ ಸೆಲ್ವಂ ಪೋಲೀಸರ ಕಸ್ಟಡಿಯಲ್ಲಿ ಇರುತ್ತಾನೆ. ನಾನು ಇಪ್ಪತ್ತು ದಿನ ಬೆಳಗಾವಿಗೆ ಹೋಗುತ್ತಿದ್ದೇನೆ. ಅಲ್ಲಿಂದ ಬಂದ ಮೇಲೆ ಸೆಲ್ವಂನನ್ನು ವಿಚಾರಣೆ ಮಾಡುತ್ತೇನೆ.

ಸರ್.... ನೀವು ಬರುವ ಟೈಮ್ ಗೆ ಸರಿಯಾಗಿ ನನ್ನ ಮದುವೆ ಇರುತ್ತದೆ.

ಅರ್ಜುನ್.... ನಾನು ಖಂಡಿತ ನಿಮ್ಮ ಮದುವೆಗೆ ಬರುತ್ತೇನೆ, ಅದರ ಬಗ್ಗೆ ಏನೂ ಯೋಚಿಸಬೇಡ. ನಾನು ಎಲ್ಲೇ ಇದ್ದರೂ ನಿಮ್ಮ ಮದುವೆ ಮಾತ್ರ ತಪ್ಪಿಸಿಕೊಳ್ಳುವುದಿಲ್ಲ. ಬಹುಶಃ ನಿಮ್ಮ ಮದುವೆ  ಆದ ಮೇಲೆಯೇ ಸೆಲ್ವಂ ಕೇಸ್ ವಿಚಾರಣೆ ಎನಿಸುತ್ತದೆ. ಇರಲಿ.... ಬಡ್ಡಿ ಮಗಂಗೆ ಅಷ್ಟು ದಿನ ಆರಾಮಾಗಿ ಇರುವ ಸೌಲಭ್ಯ ಸಿಕ್ಕಂತಾಯಿತು. ಎಂಥೆಂಥ ದೊಡ್ಡ ದೊಡ್ಡ ದೇಶದ್ರೋಹಿಗಳೇ ವರ್ಷಗಟ್ಟಲೆ ಸರ್ಕಾರಿ ಕೂಳು ತಿಂದಿದ್ದಾರೆ... ಇವನೂ ಸ್ವಲ್ಪ ದಿನ ತಿನ್ನಲಿ ಬಿಡಿ....

ಹ್ಮ್.... ಸರಿ ಸರ್, ಹಾಗಿದ್ದರೆ ನಾನು ಮದುವೆ ಮುಗಿಯುವವರೆಗೂ ಸೆಲ್ವಂ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ ಎಂದು ಕರೆ ಕಟ್ ಮಾಡಿ, ವಿಷಯವನ್ನು ಜಾನಕಿಗೆ ಮತ್ತು ಮನೆಯಲ್ಲಿ ತಿಳಿಸಿದೆ. ಎಲ್ಲರಿಗೂ ಮದುವೆಯ ಮುಂಚೆ ಈ ಕೇಸ್ ನಿರ್ಧಾರ ಆಗಿ ಹೋಗಿದ್ದರೆ ಚೆನ್ನಾಗಿರುತ್ತಿತ್ತು ಎಂದೆನಿಸಿದರೂ ನಮ್ಮ ಕೈಯಲ್ಲಿ ಏನೂ ಇರಲಿಲ್ಲ. ಹೇಗಿದ್ದರೂ ಬಂಧಿಸಿಯಂತೂ ಆಗಿದೆ.... ಹ್ಮ್ .... ಆಗಲಿ ನೋಡೋಣ...

ತ್ರಿವಿಕ್ರಂ ವಿಚಾರಣೆ ಮುಂದೆ ಹೋದ ಮೇಲೆ, ನಾವೆಲ್ಲಾ ಮದುವೆಯ ಗಲಾಟೆಯಲ್ಲಿ ಮುಳುಗಿ ಸೆಲ್ವಂ ವಿಷಯವನ್ನು ಮರೆತೇ ಬಿಟ್ಟೆವು. ದಿನ ಕಳೆದಂತೆಲ್ಲಾ ಇಬ್ಬರಲ್ಲೂ ಹೊಸ ಉತ್ಸಾಹ ಮೂಡತೊಡಗಿತ್ತು. ಆದರೆ ಎಲ್ಲೋ ಮನದ ಮೂಲೆಯಲ್ಲಿ ಮದುವೆ ದಿನ ಹತ್ತಿರ ಬರುತ್ತಿದ್ದಂತೆ ಮತ್ತೇನು ಅನಾಹುತ ಆಗುತ್ತದೋ ಎಂಬ ಭಯ ಕಾಡುತ್ತಿದ್ದಂತೂ ಸುಳ್ಳಲ್ಲ. ಎಲ್ಲಿ ಸೆಲ್ವಂ ಕಡೆಯವರು ಬರುತ್ತಾರೋ, ಮತ್ತೇನು ಅನಾಹುತ ಮಾಡುತ್ತಾರೋ ಎಂಬ ದಿಗಿಲು ಕಾಡುತ್ತಿತ್ತು. ಇದೆ ವಿಷಯವನ್ನು ತ್ರಿವಿಕ್ರಂ ಬಳಿ ಹೇಳಿದಾಗ... ಅರ್ಜುನ್ ನೀನೇನೂ ಚಿಂತಿಸಬೇಡ, ಸೆಲ್ವಂನನ್ನು ಇಲ್ಲಿಗೆ ಕರೆದುಕೊಂಡು ಬಂದಾಗಿನಿಂದ ನಿಮ್ಮ ಮನೆಯ ಬಳಿ ಸದಾ ಕಾಲ ಒಬ್ಬ ಪೇದೆಗೆ ಗಮನ ಇಟ್ಟಿರಲು ಹೇಳಿದ್ದೇನೆ. ನೀನು ಯಾವುದೇ ರೀತಿಯ ಭಯ ಪಡಬೇಕಾಗಿಲ್ಲ. ನಿನ್ನ ಪಾಡಿಗೆ ನೀನು ಮದುವೆಯ ಕಡೆ ಗಮನ ಕೊಡು ಎಂದು ಅಭಯ ಕೊಟ್ಟರು.

ನೋಡನೋಡುತ್ತಿದ್ದಂತೆ ಮದುವೆಯ ದಿನ ಬಂದೇ ಬಿಟ್ಟಿತ್ತು. ಹಿಂದಿನ ಮತ್ತದೇ ಕರಾಳ ನೆನಪುಗಳು ಕಾಡುತ್ತಿದ್ದರೂ, ತ್ರಿವಿಕ್ರಂ ಕೊಟ್ಟ ಭರವಸೆ ಧೈರ್ಯವಾಗಿರುವಂತೆ ಮಾಡಿತು. ಅಂದು ಸಂಜೆ ಛತ್ರಕ್ಕೆ ಹೋಗಿ ಎಲ್ಲಾ ಸಿದ್ಧ ಮಾಡಿಕೊಳ್ಳುತ್ತಿದ್ದ ಹಾಗೆ ತ್ರಿವಿಕ್ರಂ ಬಂದರು. ಬಂದವರೇ ಇಬ್ಬರಿಗೂ ಆಶೀರ್ವಾದ ಮಾಡಿ... ಅರ್ಜುನ್ ಈ ಸಂದರ್ಭದಲ್ಲಿ ನಿನಗೊಂದು ಶುಭ ಸುದ್ದಿ. ಸೆಲ್ವಂ ವಿಚಾರಣೆ ಹೆಚ್ಚು ಕಡಿಮೆ ಮುಗಿಯಿತು. ಸಧ್ಯಕ್ಕೆ ಇಷ್ಟು ಮಾಹಿತಿ ಇಟ್ಟುಕೊಳ್ಳಿ. ಉಳಿದದ್ದನ್ನು ನೀವು ಮದುವೆ ಕಾರ್ಯಕ್ರಮಗಳೆಲ್ಲ ಮುಗಿಸಿಕೊಂಡು ಒಂದು ದಿನ ಸ್ಟೇಷನ್ ಗೆ ಬನ್ನಿ ವಿವರವಾಗಿ ಮಾತಾಡೋಣ.

ಸರ್.... ಇದೇನಿದು, ಮದುವೆ ಆದ ಮೇಲೆ ವಿಚಾರಣೆ ಶುರು ಆಗಬಹುದು ಎಂದಲ್ಲವೇ ನೀವು ಹೇಳಿದ್ದು. ಅದು ಹೇಗೆ ಇಷ್ಟು ಬೇಗ ಎಲ್ಲ ಮುಗಿಯಿತು?

ಅರ್ಜುನ್... ಈಗ ಅದೆಲ್ಲಾ ಏಕೆ? ನೀವು ಆರಾಮಾಗಿ ಬನ್ನಿ, ಮಾತಾಡೋಣ. ವಿವಾಹ ಮಹೋತ್ಸವದ ಹಾರ್ದಿಕ ಶುಭಾಶಯಗಳು. ನಾನು ನಾಳೆ ಸೆಲ್ವಂ ವಿಚಾರವಾಗಿ ಮಧುರೈ ಮತ್ತು ಚೆನ್ನೈಗೆ ಹೋಗಬೇಕಿದೆ. ನಾನು ಇನ್ನೊಂದು ಹತ್ತು ದಿವಸ ಆದ ಮೇಲೆ ಸಿಗುತ್ತೇನೆ. ಬೈ ಎಂದು ಹೊರಟರು.

ಅಂತೂ ಮದುವೆ ಸಮಾರಂಭ ಅಂದುಕೊಂಡದ್ದಕ್ಕಿಂತ ಅದ್ದೂರಿಯಾಗಿ ನೆರವೇರಿತು. ಜಾನಕಿ ಅಂತೂ ಆನಂದದಿಂದ ನಲಿದಾಡುತ್ತಿದ್ದಳು. ಅವಳ ಆ ಸಂತೋಷ ಪುಟ್ಟ ಮಗುವಿನ ಹಾಗಿತ್ತು. ಬೆಟ್ಟದಂತಿದ್ದ ಸಮಸ್ಯೆ ಮಂಜಿನಂತೆ ಕರಗಿ ಹೋಗಿದ್ದು ನನಗಿನ್ನೂ ನಂಬಲೇ ಆಗುತ್ತಿರಲಿಲ್ಲ ... ಜಾನಕಿ ಕಾಣೆಯಾಗಿದ್ದು, ಕೊಲೆಯಾಗಿದ್ದು, ಅವಳು ಅನಾಥೆ ಎಂದು ತಿಳಿದಿದ್ದು, ಮಾಟ ಮಾಡಿದ್ದು, ಕೇರಳಕ್ಕೆ ಹೋಗಿದ್ದು, ಅಲ್ಲಿಂದ ಮಧುರೈ ಅಲ್ಲಿಂದ ಚೆನ್ನೈ, ಮುರುಗನ್, ಸೆಲ್ವಂ, ನನ್ನ ಅಪಹರಣ, ಮತ್ತೆ ಜಾನಕಿ ಸಿಕ್ಕಿದ್ದು, ಅಲ್ಲಿಂದ ತಪ್ಪಿಸಿಕೊಂಡು ಬಂದಿದ್ದು, ಭಾಸ್ಕರನ್, ಸೆಲ್ವಂನನ್ನು ಬಂಧಿಸಿದ್ದು, ಈಗ ಮದುವೆ ಆಗಿದ್ದು ಎಲ್ಲವೂ ಒಳ್ಳೆ ಸಿನೆಮಾ ಶೈಲಿಯಲ್ಲಿ ನಡೆದು ಹೋಯಿತು.

ಇನ್ನು ಇದೆಲ್ಲಾ ನಡೆದಿದ್ದಕ್ಕೆ ಮೂಲ ಕಾರಣ ಏನೆಂದು ತಿಳಿದುಬಿಟ್ಟರೆ, ಈ ಘಟನೆಗೆ ಒಂದು ತಿಲಾಂಜಲಿ ಹಾಕಿದ ಹಾಗಾಗತ್ತೆ. ತ್ರಿವಿಕ್ರಂ ಮತ್ತೆ ಮಧರೈ ಮತ್ತು ಚೆನ್ನೈಗೆ ಹೋಗಿದ್ದಾರೆ ಎಂದರೆ....ಇದರ ಹಿಂದೆ ಇನ್ನೂ ಯಾರಾದರೂ ಇದ್ದಾರ??

ಮದುವೆ ಮುಗಿದು ನಾಲ್ಕು ದಿನ ಆಗಿತ್ತು, ಎಲ್ಲ ಬಂಧುಗಳು ಹೊರಟಿದ್ದರು. ಜಾನಕಿ ಈಗ ನಮ್ಮ ಮನೆಯ ದೀಪ ಬೆಳಗುವ ಸೊಸೆಯಾಗಿದ್ದಳು. ಎಲ್ಲವೂ ಹೊಸದಾಗಿತ್ತು. ಮತ್ತೆ ಕೆಲಸಕ್ಕೆ ಹೊರಡಲು ಶುರುಮಾಡಿದ್ದೆವು. ಎಲ್ಲಾ ಮುಗಿಯಿತು ಎಂದುಕೊಂಡರೂ ಸೆಲ್ವಂ ವಿಷಯ ಮಾತ್ರ ಕೊರೆಯುತ್ತಲೇ ಇತ್ತು. ಒಮ್ಮೆ ತ್ರಿವಿಕ್ರಂಗೆ ಕರೆ ಮಾಡೋಣ ಎಂದುಕೊಂಡು ತ್ರಿವಿಕ್ರಂಗೆ ಕರೆ ಮಾಡಿದರೆ, ಅರ್ಜುನ್ ಇವತ್ತು ರಾತ್ರಿ ನಾನು ಇಲ್ಲಿಂದ ಹೊರಡುತ್ತಿದ್ದೇನೆ, ನಾಳೆ ಸಂಜೆ ನೀನು ಸ್ಟೇಷನ್ ಗೆ ಬಾ ಎಂದು ಹೇಳಿ ಕರೆ ಕಟ್ ಮಾಡಿದರು.

ಮರುದಿನ ಸಂಜೆ ಆಫೀಸಿನಿಂದ ಹೊರಡುವಾಗ ಸ್ಟೇಷನ್ ಗೆ ಹೋದಾಗ ತ್ರಿವಿಕ್ರಂ ನನಗಾಗಿಯೇ ಕಾಯುತ್ತಾ ಕುಳಿತಿದ್ದರು. ಬನ್ನಿ ಅರ್ಜುನ್.... ಹೇಗಿದೆ ಮದುವೆ ಲೈಫ್ ಎಂದು ಬರಮಾಡಿಕೊಂಡರು.

ಹಾ ಸರ್ ಚೆನ್ನಾಗಿದೆ.... ಎಲ್ಲಾ ಸುಸೂತ್ರವಾಗಿ ನಡೆಯುತ್ತಿದೆ. ಈ ಸೆಲ್ವಂ ವಿಚಾರ ಒಂದು ಮುಗಿದುಬಿಟ್ಟರೆ, ಎಲ್ಲಾ ಮರೆತು ಹೊಸ ಜೀವನ ಶುರುಮಾಡಬಹುದು.

ನಿಜ... ಅರ್ಜುನ್, ಸೆಲ್ವಂ ವಿಷಯ ನಾವು ಅಂದುಕೊಂಡದ್ದಕ್ಕಿಂತ ಬಹಳ ಜಟಿಲವಾಗಿದೆ... ತೆಗೆದರೆ ನಿಮ್ಮ ಘಟನೆ ಒಂದು ಕಮರ್ಷಿಯಲ್ ಸಿನೆಮಾ ಆಗಿಬಿಡುತ್ತದೆ. ಅಷ್ಟು ಇಂಟೆರೆಸ್ಟಿಂಗ್ ಆಗಿದೆ. ವಿಚಾರಣೆ ಮಾಡುತ್ತಿದ್ದ ಹಾಗೆ ಸೆಲ್ವಂ ಹೇಳಿದ ವಿಷಯಗಳು ಕೇಳಿ ನನಗೆ ಶಾಕ್ ಹೊಡೆದಂತೆ ಆಗುತ್ತಿತ್ತು. ಪ್ರತಿಯೊಂದು ವಿಷಯವೂ ಆಘಾತಕಾರಿಯಾಗಿದ್ದವು. ಸೆಲ್ವಂ ಸಾಮಾನ್ಯವಾದ ಮನುಷ್ಯನಲ್ಲ... ಬಹಳ ಡೇಂಜರಸ್ ಮನುಷ್ಯ, ಅದಕ್ಕೆ ಅವನಿಗೆ ಬಹಳ ದೊಡ್ಡ ದೊಡ್ಡ ವ್ಯಕ್ತಿಗಳ ಪರಿಚಯ ಇರುವುದು.

ಈಗಾಗಲೇ ಅವನ ಮೇಲೆ ದಕ್ಷಿಣ ಭಾರತ ಎಲ್ಲಾ ರಾಜ್ಯಗಳಲ್ಲೂ ಸುಮಾರು ಕೇಸ್ ಗಳಿವೆ. ಆದರೆ ಯಾವುದರಲ್ಲೂ ಸರಿಯಾದ ಸಾಕ್ಷಿ ಪುರಾವೆಗಳಿಲ್ಲದೆ ಎಲ್ಲ ಕೇಸ್ ಗಳೂ ನಿರ್ಜೀವವಾಗಿದ್ದವು. ಇದೊಂದೇ ಕೇಸಿನಲ್ಲಿ ಅವನ ಬಗ್ಗೆ ಎಲ್ಲಾ ರೀತಿಯ ದಾಖಲೆ ಮತ್ತು ಸಾಕ್ಷಿಗಳು ಇವೆ. ಈಗಾಗಲೇ ನಾವು ಕೇರಳದಲ್ಲಿ ಬಂಧಿಸಿದವರು ಮತ್ತು ಮುರುಗನ್ ಅಪ್ರೂವರ್ ಆಗಿದ್ದರಿಂದ ಒಂದು ಹಂತದ ಸಾಕ್ಷಿಗಳು ಸಿಕ್ಕಂತಾಯಿತು. ಇನ್ನು ಕೋರ್ಟಿಗೆ ಹಾಜರು ಪಡಿಸಿದಾಗ ನಿಮ್ಮ ಮತ್ತು ಜಾನಕಿಯ ಹೇಳಿಕೆ ಮೇಲೆ ಅವನಿಗೆ ಶಿಕ್ಷೆ ಕೊಡಿಸುವುದು ಸುಲಭದ ಮಾತು. ಒಟ್ಟಿನಲ್ಲಿ ಒಂದು ಕ್ಲಿಷ್ಟವಾದ ಕೇಸ್ ಮುಗಿದಂತಾಗುತ್ತದೆ.

ಸರ್ ... ಅದೆಲ್ಲಾ ಸರಿ, ಆದರೆ ಅವನು ಏಕೆ ಇದೆಲ್ಲಾ ಮಾಡಿದ ಎಂದೇ ನೀವು ಹೇಳುತ್ತಿಲ್ಲ.

ಹೇಳುತ್ತೇನೆ ಅರ್ಜುನ್... ಅದೊಂದು ದೊಡ್ಡ ಕಥೆ.

Rating
No votes yet