ಅನ್ವೇಷಣೆ ಭಾಗ ೪

ಅನ್ವೇಷಣೆ ಭಾಗ ೪

ಅಂದು ರಾತ್ರಿ ಅಲ್ಲಿಂದ ಹೊರಡುವಾಗ ಯಾಕೋ ಮನಸು ಬಹಳ ಭಾರವಾಗಿತ್ತು... ಜಾನಕಿಯನ್ನು ಮತ್ತೆ ನೋಡಬಹುದು ಎಂದು ಗೊತ್ತಿದ್ದರೂ ಅದೇನೋ ಗೊತ್ತಿಲ್ಲ ಮತ್ತೆ ಅವಳನ್ನು ನೋಡುವುದೇ ಇಲ್ಲವೇನೋ, ಮಾತಾಡುವುದೇ ಇಲ್ಲವೇನೋ ಎಂಬ ಭಾವನೆ ಬಹಳ ಕಾಡುತ್ತಿತ್ತು. ಅವಳಿಗೂ ಇದೆ ಭಾವನೆ ಕಾಡುತ್ತಿರುತ್ತದ ಎನಿಸಿದರೂ ಮಧ್ಯಾಹ್ನ ಅವಳಾಡಿದ ಮಾತುಗಳು ನೆನಪಿಗೆ ಬಂದು ಖಂಡಿತ ಅವಳಿಗೆ ಈ ರೀತಿ ಎಲ್ಲ ಅನಿಸಲು ಸಾಧ್ಯವೇ ಇಲ್ಲ ಎಂದು ಅವಳ ಕಡೆ ನೋಡಿದೆ.

ಅವಳು ತನ್ನ ಸ್ನೇಹಿತೆಯ ಜೊತೆ ಮಾತಾಡುವುದರಲ್ಲಿ ಮಗ್ನಳಾಗಿದ್ದಳು. ನಿತಿನ್ ನಮ್ಮೆಲ್ಲರನ್ನೂ ಕಾರಿನಲ್ಲಿ ಕೂಡಿಸಿ ಕಾರು ಹೊರಟ ಮೇಲೆ ಅವನು ಒಳಗೆ ಹೋದ. ಅಷ್ಟರಲ್ಲಿ ಫೋನ್ಗೆ ಒಂದು ಮೆಸೇಜ್ ಬಂತು. ಖಂಡಿತ ಇದು ಜಾನಕಿಯದ್ದೆ ಆಗಿರುತ್ತದೆ ಎಂದುಕೊಂಡು ಫೋನ್ ತೆಗೆದು ನೋಡಿದರೆ ಅವಳೇ ಮಾಡಿದ್ದಳು. Happy Journey ಎಂದಷ್ಟೇ ಇತ್ತು. ತಕ್ಷಣ ನನ್ನ ಒಳಮನಸ್ಸು ಎಚ್ಚರಿಸಿತು... ಮಗನೆ ಏಣಿಯನ್ನು ನೇರವಾಗಿ ಕೊನೆಯ ಮೆಟ್ಟಿಲು ಹತ್ತಲು ಪ್ರಯತ್ನಿಸಬೇಡ ಬೀಳುವ ಸಾಧ್ಯತೆ ಹೆಚ್ಚಿರುತ್ತದೆ... ಒಂದೊಂದೇ ಮೆಟ್ಟಿಲು ಏರು... ಇದು ಮೊದಲನೇ ಮೆಟ್ಟಿಲು ಎಂದುಕೋ ಎಂದು ಹೇಳಿತು.

ನಾನು ಅದಕ್ಕೆ Thank You ಎಂದು ಉತ್ತರಿಸಿ ಫೋನ್ ಒಳಗಿಟ್ಟುಕೊಂಡೆ. ಕಾರು ಅಲ್ಲಿಂದ ಹೊರಟ ಕೂಡಲೇ ಸ್ನೇಹಿತರು ಶುರು ಮಾಡಿದರು. ಏನಪ್ಪಾ ನಂಬಿಕೆದ್ರೋಹಿ ನಮ್ಮೆಲ್ಲರಿಗೂ ಅವಳು ಪೋಲಿಸ್ ಮಗಳು ಹಾಗೆ ಹೀಗೆ ಎಂದೆಲ್ಲಾ ಕಥೆ ಕಟ್ಟಿ ನೀನು ನಿನ್ನ ಪ್ರೇಮದ ಸೇತುವೆ ಕಟ್ಟಿಬಿಟ್ಟೆಯಲ್ಲ ಎಂದು ಎಲ್ಲರೂ ಸೇರಿ ಬೆನ್ನ ಮೇಲೆ ಗುದ್ದಿದರು. ಅಯ್ಯೋ ಹಾಗೆಲ್ಲ ಏನಿಲ್ಲಪ್ಪ ಸುಮ್ಮನೆ ಮಾತಾಡುತ್ತಿದ್ದೆ ಅಷ್ಟೇ ಎಂದು ಮಾತನ್ನು ಸಾಗಹಾಕಿ ಮದುವೆಯ ಬಗ್ಗೆ ಮಾತು ಶುರುವಿಟ್ಟುಕೊಂಡೆವು.

ಸ್ವಲ್ಪ ಹೊತ್ತಿನ ನಂತರ ನನಗೆ ನಿದ್ರೆ ಬರುತ್ತಿದೆ ಎಂದು ಸುಳ್ಳು ಹೇಳಿ ಮಲಗಿದಂತೆ ನಟಿಸಿ ಜಾನಕಿಯ ಬಗ್ಗೆ ಯೋಚಿಸಲು ಶುರುಮಾಡಿದೆ. ಮನಸಿನ ತುಂಬಾ ಅವಳೇ ತುಂಬಿಕೊಂಡಿದ್ದಳು, ಅವಳ ಮಾತು, ಅವಳ ನಡೆ ನುಡಿ, ಅವಳ ಸೌಂದರ್ಯ.... ಹಾ.... ಮದುವೆ ಎಂದಾದರೆ ಅವಳನ್ನೇ ಎಂದು ನಿರ್ಧರಿಸಿಕೊಂಡುಬಿಟ್ಟಿದ್ದೆ.... ಆದರೆ ಅವಳಿಗೆ ಸಾಫ್ಟ್ವೇರ್ ಇಂಜಿನಿಯರ್.... ಅವಳಿಗೆ ಕೆಲಸ ಏನು... ಏನು ಬೇಕಾದರೂ ಬಿಡಬಲ್ಲೆ ಎಂಬ ನಿರ್ಧಾರವನ್ನೂ ಮಾಡಿಬಿಟ್ಟಿದ್ದೆ.

ಬೆಂಗಳೂರಿಗೆ ವಾಪಸ್ ಬಂದ ಮೇಲೆ ಯಾವಾಗ್ಯಾವಾಗ ಅವಳನ್ನು ನೋಡುತ್ತೇನೋ, ಮಾತಾಡಿಸುತ್ತೇನೋ ಎಂದು ಮನಸು ಚಡಪಡಿಸುತ್ತಿತ್ತು. ಹೇಗಿದ್ದರೂ ಫೋನ್ ನಂಬರ್ ಇದೆ... ಫೋನ್ ಮಾಡೋಣ ಎಂದುಕೊಂಡೆ... ಆದರೆ ಮರುಕ್ಷಣದಲ್ಲೇ, ನಾನಾಗೆ ನಾನು ಫೋನ್ ಮಾಡಿದರೆ ಎಲ್ಲಿ ಅವಳು ತಪ್ಪು ತಿಳಿಯುತ್ತಾಳೋ ಎಂದುಕೊಂಡು ಸುಮ್ಮನಾದೆ... ಆದರೆ ಅಷ್ಟರಲ್ಲೇ ಅವಳೇ ಕರೆ ಮಾಡಿದಳು.... ಆ ಒಂದು ಕ್ಷಣಕ್ಕೆ ನಾನು ಭೂಮಿಯಿಂದ ಒಂದು ಅಡಿ ಮೇಲಕ್ಕೆ ತೇಲುತ್ತಿದ್ದೆ...

ಮತ್ತೆ ಕೆಳಕ್ಕೆ ಬಂದು ಫೋನ್ ರಿಸೀವ್ ಮಾಡಿ ಹಾಯ್ ಜಾನಕಿ ಎಂದೆ. ಅವಳು ಹಾಯ್ ಅರ್ಜುನ್, ನಿನಗೆ ಬೈಯ್ಯಬೇಕು ಎನಿಸುತ್ತಿದೆ ಯಾವಾಗ ಸಿಗುತ್ತೀಯ ಎಂದಳು. ಯಾವಾಗಲಾದರೂ ಸರಿ ಎಂದೆ... ಅವಳು ನಗುತ್ತಾ ಹಾಗೇನಿಲ್ಲ ಸುಮ್ಮನೆ ಕರೆ ಮಾಡಿದೆ ಅಷ್ಟೇ.... ನೆನ್ನೆ ಸಿಕ್ಕಾಪಟ್ಟೆ ಬೈದುಬಿಟ್ಟೆ ಎನಿಸುತ್ತದೆ... ಸಾರಿ ಕಣೋ.... ಮತ್ತೆ ಯಾವಾಗ ಸಿಗುತ್ತೀಯ ಎಂದಳು.

ಹುಡುಗಿಯರು ಸಿಕ್ಕಾಪಟ್ಟೆ ಫಾಸ್ಟ್ ಇದಾರಪ್ಪ.... ನಾನು ಅವಳನ್ನು ಹೇಗೆ ಕರೆಯಲಿ ಎಂದು ಆಲೋಚಿಸುತ್ತಿರುವಾಗಲೇ ಅವಳು ಏಕವಚನದಲ್ಲಿ ಕರೆದಿದ್ದಾಳೆ...ಹ್ಮ್... ಸರಿ ಸರಿ ಎಂದುಕೊಂಡು ಯಾವಾಗಲಾದರೂ ಸರಿ ಎಂದೆ.

ಅಲ್ಲಪ್ಪಾ ನೀವು ಸಾಫ್ಟ್ವೇರ್ ಇಂಜಿನಿಯರ್ ಗಳು ಹಗಲು ರಾತ್ರಿ ಕೆಲಸ ಮಾಡುತ್ತಿರುತ್ತೀರ... ನಿಮಗೆಲ್ಲಿ ಪುರುಸೊತ್ತು ಇರುತ್ತದೆ ಎಂದು ಗೇಲಿ ಮಾಡಿದಳು...

ನಾನು, ಜಾನೂ.... ಪ್ಲೀಸ್ ಎಂದೆ.

ಅದಕ್ಕವಳು,ಜಾನೂ..... ಹ್ಮ್.... ಓಕೆ ಎಂದು ನಕ್ಕು ಸರಿ ಶನಿವಾರ ಸಾಯಂಕಾಲ ಟೌನ್ ಹಾಲ್ ನಲ್ಲಿ ಒಂದು ನಾಟಕ ಇದೆ ಹೋಗೋಣವೆ ಎಂದಳು... ನನಗೆ ನಾಟಕ ಎಂದರೆ ಅಲರ್ಜಿ.... ಆದರೂ ಇವಳಿಗೋಸ್ಕರ ಏನೆಲ್ಲಾ ಅಭ್ಯಾಸ ಮಾಡಿಕೊಳ್ಳಬೇಕಲ್ಲಪ್ಪ ಎಂದುಕೊಂಡು ಸರಿ ಹೋಗೋಣ ಎಂದು ಹೇಳಿ ಕರೆ ಕಟ್ ಮಾಡಿದೆ.

ನನ್ನ ಜೀವನದಲ್ಲಿ ಎಂದೂ ನಾನು ನಾಟಕ ನೋಡಿಲ್ಲ, ಆದರೆ ಇವಳಿಗೋಸ್ಕರ ನೋಡಲೇಬೇಕಲ್ಲ.... ಏನು ಮಾಡುವುದು ಎಂದುಕೊಂಡು ಶನಿವಾರಕ್ಕಾಗಿ ಕಾಯುತ್ತಿದ್ದೆ. ಪ್ರತಿದಿನ ಅವಳೇ ದಿನಕ್ಕೆ ಎರಡು ಸಲ ಕರೆ ಮಾಡಿ ಮಾತಾಡುತ್ತಿದ್ದಳು. ಶನಿವಾರ ಮಿಸ್ ಮಾಡಬೇಡ ಎಂದು ನೆನಪಿಸುತ್ತಿದ್ದಳು.

ಶನಿವಾರ ಬಂದೆ ಬಿಟ್ಟಿತು. ಸರಿಯಾಗಿ ಸಂಜೆ ಐದು ಗಂಟೆಗೆ ಟೌನ್ ಹಾಲ್ ಬಳಿ ಬರಲು ಹೇಳಿದ್ದಳು. ಅದರಂತೆಯೇ ೪.೪೫ ಕ್ಕೇ ಟೌನ್ ಹಾಲ್ ಬಳಿ ಬಂದು ಕಾಯುತ್ತಿದ್ದೆ. ನಾನು ಹೋಗಿ ಐದು ನಿಮಿಷಕ್ಕೆ ಅವಳೂ ಬಂದಳು. ಬಂದವಳೇ ನೋಡಪ್ಪಾ ಒಂದು ಹುಡುಗಿ ಕರೆದರೆ ಸಮಯಕ್ಕೆ ಮುಂಚೆಯೇ ಬಂದು ಬಿಡುತ್ತಾರೆ ಈ ಹುಡುಗರು... ಅದೇ ಬೇರೆ ಯಾರಾದರೂ ಕರೆದರೆ ಅಪ್ಪಿ ತಪ್ಪಿ ಸಮಯಕ್ಕೆ ಬರುವುದಿಲ್ಲ ಎಂದು ಛೇಡಿಸಿದಳು.

ಅಯ್ಯೋ ಜಾನು.... ಹಾಗೆಲ್ಲ ಏನೂ ಇಲ್ಲ...ಮನೆಯಲ್ಲಿ ಏನೂ ಕೆಲಸ ಇರಲಿಲ್ಲ... ಹಾಗಾಗಿ ಬೇಗ ಬಂದೆ ಅಷ್ಟೇ... ಮತ್ತೆ ಯಾವುದಿದು ನಾಟಕ? ಎಷ್ಟು ಹೊತ್ತು ಇರತ್ತೆ?

 

ಯಾಕೋ ನಾಟಕ ಎಂದರೆ ಇಷ್ಟ ಇಲ್ವಾ? ಮತ್ತೆ ಕೇಳಿದಾಗ ಬರ್ತೀನಿ ನೋಡ್ತೀನಿ ಅಂತೆಲ್ಲಾ ಬಡಾಯಿ ಕೊಚ್ಚುತ್ತಿದ್ದೆ.... ನನಗೆ ಗೊತ್ತು ನಿನಗೆ ನಾಟಕ ಎಲ್ಲಾ ಇಷ್ಟ ಇಲ್ಲ ಎಂದು. ನಿತಿನ್ ನಿನ್ನ ಬಗ್ಗೆ ಎಲ್ಲಾ ವಿಷಯ ಹೇಳಿದ್ದಾನೆ. ಸುಮ್ಮನೆ ನಿನ್ನನ್ನು ಪರೀಕ್ಷಿಸೋಣ ಎಂದು ನಾಟಕ ಎಂದು ಹೇಳಿದೆ. ನಡಿ ಮಲ್ಲೇಶ್ವರ ಮಂತ್ರಿ ಮಾಲ್ ಗೆ ಹೋಗಿ ಯಾವುದಾದರೂ ಸಿನೆಮಾ ನೋಡೋಣ ಎಂದಳು.

ಅರೇ.... ಈ ನಿತಿನ್ ಎಲ್ಲಾ ವಿಷಯ ಹೇಳಿಬಿಟ್ಟಿದ್ದಾನೆ.... ಅದು ಸರಿ ಅವನಾಗೇ ಇವಳ ಬಳಿ ಹೇಳಿದ್ದಾನ... ಅಥವಾ ಅವಳೇ ನನ್ನ ಬಗ್ಗೆ ಕೇಳಿದ್ದಾಳ.... ಅವನಾಗೇ ಹೇಳಿದ್ದರೆ ಪರವಾಗಿಲ್ಲ... ಇವಳಾಗೇ ಕೇಳಿದ್ದರೆ ಏನು ಕಾರಣ ಇರಬಹುದು? ಅವಳು ನನ್ನನ್ನು ಇಷ್ಟ ಪಡುತ್ತಿದ್ದಾಳ? ಇಲ್ಲವಾದರೆ ನನ್ನ ವಿಷಯಗಳನ್ನೆಲ್ಲ ಏಕೆ ಕೇಳಿ ತಿಳಿದುಕೊಳ್ಳುತ್ತಾಳೆ... ಉತ್ತರ ಸಿಗದ ನೂರೆಂಟು ಪ್ರಶ್ನೆಗಳು ಒಂದೇ ಸಲ ಕಾಡಲು ಆರಂಭಿಸಿದವು. ಇರಲಿ ಆಮೇಲೆ ನಿತಿನ್ ಬಳಿ ಕೇಳಿ ತಿಳಿದುಕೊಳ್ಳೋಣ ಎಂದು ಮಲ್ಲೇಶ್ವರದ ಕಡೆ ಗಾಡಿ ತಿರುಗಿಸಿದೆ.

ಬಚ್ಚನ್ ಸಿನಿಮಾ ನೋಡಿಕೊಂಡು ಮಾಲ್ ನಲ್ಲಿ ಸ್ವಲ್ಪ ಹೊತ್ತು ತಿರುಗಾಡಿಕೊಂಡು ಊಟ ಮಾಡಿ ಹೊರಡುವ ಹೊತ್ತಿಗೆ ಒಂಭತ್ತು ಗಂಟೆ ಆಗಿತ್ತು. ಜಾನಕಿಯನ್ನು ಮನೆಯ ಬಳಿ ಡ್ರಾಪ್ ಮಾಡಿ ಮನೆಗೆ ಬಂದು ಸೀದಾ ಮಲಗಲು ಹೋದೆ. ಅಂದು ಇಡೀ ರಾತ್ರಿ ಮನಸು ತೇಲುತ್ತಿತ್ತು... ಜಾನಕಿಯೊಡನೆ ಕಳೆದ ಆ ಸಂಜೆ ನನ್ನ ಜೀವನದಲ್ಲಿ ಎಂದೂ ಮರೆಯದಂಥಹ ಸಂಜೆ ಆಗಿತ್ತು....

Rating
No votes yet

Comments

Submitted by ಗಣೇಶ Fri, 12/19/2014 - 00:02

ಜಯಂತರೆ, ಉಳಿದ ೩ ಕಂತು ಓದಿದೆ. ನಾಗೇಶರ ನೆನಪಾಯಿತು...ಅವರ "ಪರಿಭ್ರಮಣ" ದಂತೆ ತಮ್ಮ ಅನ್ವೇಷಣೆಯೂ ಮುಂದುವರೆಯುತ್ತಿದೆ. :) ಕತೆ ಸೂಪರ್ ಆಗಿದೆ. ಮುಂದುವರೆಸಿ..