ಅನ್ವೇಷಣೆ ಭಾಗ ೫

ಅನ್ವೇಷಣೆ ಭಾಗ ೫

ಆ ದಿನದ ನಂತರ ನಮ್ಮಿಬ್ಬರ ನಡುವಿನ ಅಂತರ ಕಮ್ಮಿ ಆಗಿತ್ತು. ದಿನಗಳು ಕಳೆದಂತೆ ನಮ್ಮ ಸ್ನೇಹ ಪ್ರೀತಿಯಾಗಿ ಮಾರ್ಪಾಡಾಗಲು ಹೆಚ್ಚು ದಿನ ತೆಗೆದುಕೊಳ್ಳಲಿಲ್ಲ.... ಮೊದಮೊದಲು ನನ್ನ ಕೆಲಸದ ಬಗ್ಗೆ ಅವಳಿಗೆ ಸ್ವಲ್ಪ ಅಸಮಾಧಾನ ಇದ್ದರೂ ನಂತರ ಹೊಂದಿಕೊಂಡಿದ್ದಳು. ಇಬ್ಬರ ಪ್ರೀತಿ ಪಕ್ವವಾದಂತೆ, ಆದಷ್ಟು ಬೇಗ ಮದುವೆ ಮಾಡಿಕೊಳ್ಳುವ ಬಗ್ಗೆ ಯೋಚನೆ ನಡೆಸಿದೆವು. ಇಬ್ಬರೂ ನಮ್ಮ ನಮ್ಮ ಮನೆಯಲ್ಲಿ ನಮ್ಮ ಇಷ್ಟವನ್ನು ತಿಳಿಸಿದೆವು... ಅವರೂ ನಮ್ಮ ಪ್ರೀತಿಗೆ ಯಾವುದೇ ಪ್ರತಿರೋಧ ತೋರದೆ ಒಪ್ಪಿಕೊಂಡು ಆದಷ್ಟು ಬೇಗ ಮಹೂರ್ತ ಇಡಿಸಿಬಿಡೋಣ ಎಂದು ತೀರ್ಮಾನ ನಡೆಸಿದರು.

ಇನ್ನೇನು ಎಲ್ಲಾ ಸುಸೂತ್ರವಾಗಿ ನಡೆಯುತ್ತಿದೆ ಎಂದುಕೊಳ್ಳುವಷ್ಟರಲ್ಲೇ ಒಂದು ದಿನ ಜಾನಕಿಯ ಮನೆಯಿಂದ ಫೋನ್ ಬಂತು, ಜಾನಕಿಯನ್ನು ಆಸ್ಪತ್ರೆಗೆ ಅಡ್ಮಿಟ್ ಮಾಡಿದ್ದೇವೆ ಬನ್ನಿ ಎಂದು. ನಮಗೆಲ್ಲ ಬಹಳ ಗಾಭರಿ ಆಗಿ ಕೂಡಲೇ ಆಸ್ಪತ್ರೆಗೆ ಧಾವಿಸಿ ವಿಷಯ ಏನೆಂದು ವಿಚಾರಿಸಿದಾಗ ರಾತ್ರಿಯಿಂದ ಇದ್ದಕ್ಕಿದ್ದ ಹಾಗೆ ವಿಪರೀತ ವಾಂತಿ ಮಾಡಿಕೊಳ್ಳುತ್ತಿದ್ದಾಳೆ.... ಎರಡು ಸಲ ವಾಂತಿಯ ಜೊತೆ ರಕ್ತವೂ ಬಂತು. ಅದಕ್ಕೆ ಗಾಭರಿಯಾಗಿ ಆಸ್ಪತ್ರೆಗೆ ಸೇರಿಸಿದೆವು. ಆದರೆ ಎಲ್ಲಾ ಪರೀಕ್ಷೆ ಮುಗಿದ ಮೇಲೆ ಡಾಕ್ಟರ್ ಹೇಳುತ್ತಿದ್ದಾರೆ ಅವರ ದೇಹದಲ್ಲಿ ಯಾವುದೇ ಬದಲಾವಣೆ ಇಲ್ಲ.... ಏಕೆ ಈ ರೀತಿ ವಾಂತಿ ಆಗುತ್ತಿದೆ ಎಂದು ತಿಳಿಯುತ್ತಿಲ್ಲ... ಇವತ್ತು ಪೂರ್ತಿ observation ನಲ್ಲಿರಲಿ... ಆಮೇಲೆ ನೋಡೋಣ ಎಂದಿದ್ದಾರೆ.

ಈಗ ಹೇಗಿದೆ?

ಈಗ ಸ್ವಲ್ಪ ಕಮ್ಮಿ ಆಗಿದೆ, ಸಧ್ಯಕ್ಕೆ ಮಲಗಿದ್ದಾಳೆ.

ನಾನು ಒಳಗೆ ಹೋಗಿ ನೋಡಿದರೆ ಅವಳ ಮುಖ ನೋಡಿ ಕರುಳು ಕಿತ್ತು ಬಂದಂತೆ ಆಯಿತು. ಒಂದೇ ದಿನದಲ್ಲಿ ಅವಳ ಮುಖದಲ್ಲಿದ್ದ ಕಾಂತಿ ಮಾಯವಾಗಿತ್ತು. ವಿಪರೀತ ಸುಸ್ತಿನಿಂದ ಒಳ್ಳೆ ನಿದ್ರೆಯಲ್ಲಿದ್ದಳು....ಅವಳ ಪಕ್ಕಕ್ಕೆ ಹೋಗಿ ಹಣೆಯನ್ನು ಸವರಿ ಅವಳ ಕೈಯನ್ನು ನನ್ನ ಕೈಯಲ್ಲಿ ತೆಗೆದುಕೊಂಡೆ. 

ನನ್ನ ಸ್ಪರ್ಶವಾಗುತ್ತಿದ್ದಂತೆ ನಿದ್ರೆಯಿಂದ ಎಚ್ಚೆತ್ತ ಜಾನಕಿ, ನನ್ನನ್ನು ನೋಡಿ ಅರ್ಜುನ್...ಯಾಕೋ ವಿಪರೀತ ಸುಸ್ತಾಗುತ್ತಿದೆ ಕಣೋ...ಯಾರೋ ನನ್ನ ಮೈಯೆಲ್ಲಾ ಹಿಂಡಿದಂತೆ ಆಗುತ್ತಿದೆ. ಕೈ ಕಾಲುಗಳಲ್ಲಿ ಶಕ್ತಿಯೇ ಇಲ್ಲದಂತೆ ಆಗುತ್ತಿದೆ ಕಣೋ.... ಯಾಕೋ ಇದ್ದಕ್ಕಿದ್ದಂತೆ ಹೀಗೆ ಆಗುತ್ತಿದೆ... ನನಗೇನೂ ಆಗಿಲ್ಲ ತಾನೇ.... ನನಗೆ ಇಷ್ಟು ಬೇಗ ಸಾಯಲು ಇಷ್ಟ ಇಲ್ಲ ಕಣೋ....

ಹೇ ಜಾನೂ... ಯಾಕೆ ಏನೇನೋ ಮಾತಾಡುತ್ತಿದ್ದೀಯ? ನಿನಗೆ ಏನೂ ಆಗಿಲ್ಲ... ಏನೋ Food poison ಆಗಿದೆ ಅಷ್ಟೇ... ಅಷ್ಟಕ್ಕೇ ಯಾಕೆ ಸಾಯುವ ಮಾತೆಲ್ಲ ಆಡುತ್ತೀಯ.... ನಾನಿರುವಾಗ ನಿನ್ನನ್ನು ಅದು ಹೇಗೆ ಸಾಯಲು ಬಿಡುತ್ತೀನಿ ಎಂದು ಅವಳ ಹಣೆಗೆ ಒಂದು ಮುತ್ತಿಟ್ಟೆ. ಅವಳೂ ನನ್ನ ಕೈಗೆ ಮುತ್ತಿಟ್ಟಳು.

ಎರಡು ದಿನ ಆಸ್ಪತ್ರೆಯಲ್ಲಿದ್ದು ಮೂರನೇ ದಿನ ಡಿಸ್ಚಾರ್ಜ್ ಮಾಡಿಕೊಂಡು ಮನೆಗೆ ಬಂದರು. ಆದರೆ ಅದೇಕೋ ಅಂದಿನಿಂದ ಪದೇ ಪದೇ ಅವಳಿಗೆ ಆರೋಗ್ಯ ತಪ್ಪಲು ಶುರುವಾಯಿತು. ಎಂತೆಂಥಹ ದೊಡ್ಡ ದೊಡ್ಡ ಡಾಕ್ಟರ್ ಗಳ ಬಳಿ ಹೋದೆವು, ಏನೆಲ್ಲಾ ಚೆಕಪ್ ಮಾಡಿಸಿದರೂ ಅವಳಿಗೆ ಏನೂ ಆಗಿಲ್ಲ...ಏನೋ ಊಟದಲ್ಲಿ ವ್ಯತ್ಯಾಸ ಆಗಿರಬಹುದು ಎಂದಷ್ಟೇ ಹೇಳುತ್ತಿದ್ದರು. ಜಾನಕಿ ಮಾತ್ರ ದಿನೇ ದಿನೇ ಕೃಶಳಾಗುತ್ತಿದ್ದಳು. ಆದಷ್ಟು ಬೇಗ ಮದುವೆ ಮಾಡಿದರೆ ಎಲ್ಲಾ ಸರಿಹೋಗಬಹುದೇನೋ ಎಂದುಕೊಂಡು ಮದುವೆಯ ದಿನಾಂಕವನ್ನು ನಿಗದಿಪಡಿಸಿದರು.

ಅದೇನು ಕಾಕತಾಳೀಯವೋ ಗೊತ್ತಿಲ್ಲ, ಮದುವೆಯ ದಿನ ನಿಗದಿಪಡಿಸಿದ ಮೇಲೆ ಜಾನಕಿಯ ಮುಖದಲ್ಲಿ ಮತ್ತೆ ಗೆಲುವು ಕಂಡಿತು. ಅವಳ ಆರೋಗ್ಯ ಸ್ಥಿತಿಯಲ್ಲೂ ಸುಧಾರಣೆ ಕಂಡಿತು. ಎಲ್ಲರಿಗೂ ಒಂದು ರೀತಿಯ ನಿರಾಳವಾಯಿತು. ಈ ಕೆಲಸ ಮೊದಲೇ ಮಾಡಿದ್ದಿದ್ದರೆ ಮೊದಲೇ ಜಾನಕಿ ಸರಿಹೋಗುತ್ತಿದ್ದಳೇನೋ.... ಇರಲಿ ಆದದ್ದೆಲ್ಲಾ ಒಳಿತೇ ಆಯಿತು ಎಂದುಕೊಂಡು ಮದುವೆಯ ಕೆಲಸಗಳನ್ನು ಭರದಿಂದ ಸಿದ್ಧ ಮಾಡುತ್ತಿದ್ದೆವು. ಮದುವೆಯ ದಿನ ಹತ್ತಿರವಾದಂತೆಲ್ಲ ಜಾನಕಿ ಹೊಸ ಹುರುಪಿನಿಂದ ಕಂಗೊಳಿಸುತ್ತಿದ್ದಳು.

ನೋಡನೋಡುತ್ತಿದ್ದಂತೆ ಮದುವೆಯ ದಿನ ಹತ್ತಿರ ಬಂದೇ ಬಿಟ್ಟಿತು. ನಮ್ಮಿಬ್ಬರ ಶಾಪಿಂಗನ್ನು ಇಬ್ಬರೂ ಒಟ್ಟಿಗೆ ಹೋಗಿ ಮುಗಿಸಿದ್ದೆವು. ಸ್ನೇಹಿತರನ್ನು ಒಟ್ಟಿಗೆ ಹೋಗಿ ಆಹ್ವಾನಿಸಿದೆವು. ಇನ್ನೇನು ಸತಿ ಪತಿಗಳಾಗುವ ದಿನ ಹತ್ತಿರ ಬಂದಂತೆ ಇಬ್ಬರಲ್ಲೂ ಅದೊಂದು ರೀತಿಯ ಪುಳಕ ಉಂಟಾಗಿತ್ತು. ಕಡೆಗೂ ಆ ದಿನ ಬಂದೇ ಬಿಟ್ಟಿತು. ವರಪೂಜೆಯ ಹಿಂದಿನ ದಿನ ಬೆಳಿಗ್ಗೆ ನಾವು ಛತ್ರಕ್ಕೆ ಹೋಗಲು ಎಲ್ಲಾ ಸಿದ್ಧತೆಗಳನ್ನು ಮಾಡುತ್ತಿದ್ದೆವು. ಅಷ್ಟರಲ್ಲಿ ಜಾನಕಿಯ ತಾಯಿ ನನ್ನ ಮೊಬೈಲ್ ಗೆ ಕರೆ ಮಾಡಿದರು.

ಅರ್ಜುನ್.... ಸ್ವಲ್ಪ ಜಾನಕಿಯನ್ನು ಬೇಗನೆ ಮನೆಗೆ ಕಳುಹಿಸಪ್ಪ.... ನಾಳೆ ಮದುವೆ ಇಟ್ಟುಕೊಂಡು ಇನ್ನು ನಿಮ್ಮ ಮನೆಯಲ್ಲಿ ಏನು ಮಾಡುತ್ತಿದ್ದಾಳೆ ಅವಳು... ಎಲ್ಲಿ ಅವಳಿಗೆ ಫೋನ್ ಕೊಡು ಎಂದರು.

ಅತ್ತೆ.... ಏನು ಹೇಳುತ್ತಿದ್ದೀರಿ? ಜಾನಕಿ ಇಲ್ಲಿಗೆ ಬಂದೇ ಇಲ್ಲ.... ಒಂದು ವೇಳೆ ಬಂದರೆ ನಾನು ಕಳುಹಿಸುತ್ತೇನೆ. ಅವಳ ಮೊಬೈಲ್ ಗೆ ಕರೆ ಮಾಡಬೇಕಿತ್ತು. ಅದು ಸರಿ ಈಗ್ಯಾಕೆ ಅವಳು ನಮ್ಮ ಮನೆಗೆ ಹೊರಟಳು... ಮನೆಯಲ್ಲಿ ಅಷ್ಟು ಕೆಲಸ ಇಟ್ಟುಕೊಂಡು.... ಸ್ವಲ್ಪಾನೂ ಜವಾಬ್ದಾರಿ ಇಲ್ಲ... ಅತ್ತೆ ನೀವಾದರೂ ಸ್ವಲ್ಪ ಹೇಳಿ ಎಂದು ನಗುತ್ತಾ ಹೇಳಿದೆ.

ಅದಕ್ಕವರು... ಇಲ್ಲ ಅರ್ಜುನ್ ಅವಳ ಮೊಬೈಲ್ ಸ್ವಿಚ್ ಆಫ್ ಎಂದು ಬರುತ್ತಿದೆ. ಅದೂ ಅಲ್ಲದೆ ಅವಳು ಹೊರಟು ಆಗಲೇ ಹೆಚ್ಚು ಕಡಿಮೆ ನಾಲ್ಕು ತಾಸು ಕಳೆದಿದೆ. ಬೆಳಿಗ್ಗೆ ಎಂಟಕ್ಕೆ ಸ್ನಾನ ಮಾಡಿ ಹೊರಟವಳು. ತಿಂಡಿ ಸಹ ತಿನ್ನಲಿಲ್ಲ. ಕೇಳಿದ್ದಕ್ಕೆ ನಿಮ್ಮ ಮನೆಯಲ್ಲೇ ತಿನ್ನುತ್ತೇನೆ ಎಂದು ಹೊರಟಳು. ಅವಳ ಸ್ನೇಹಿತರ ನಂಬರ್ ಯಾವುದಾದರೂ ಇದ್ದರೆ ಫೋನ್ ಮಾಡಿ ನೋಡಪ್ಪ ಒಂದು ಸಲ.

ಅಷ್ಟೇ ಸರ್.... ಅದಾದ ಮೇಲೆ ಎಲ್ಲ ನಿಮಗೆ ಗೊತ್ತೇ ಇದೆ.... ಸರ್ ಇಂದಿಗೆ ಜಾನಕಿ ನಾಪತ್ತೆಯಾಗಿ ಇಪ್ಪತ್ತು ದಿನಗಳು ಕಳೆದಿದೆ. ಅವಳು ಎಲ್ಲಿ ಹೋದಳು, ಏತಕ್ಕೆ ಹೋದಳು ಒಂದು ವಿಷಯವೂ ಗೊತ್ತಿಲ್ಲ. ದಯವಿಟ್ಟು ನನ್ನ ಜಾನಕಿಯನ್ನು ನನಗೆ ಹುಡುಕಿಕೊಡಿ ಎಂದು ಮಾತು ಮುಗಿಸುವಾಗ ಗಂಟಲು ಉಬ್ಬಿ ಬಂದಿತು.

ನೋಡಿ ಮಿ. ಅರ್ಜುನ್ ಸಮಾಧಾನ ಮಾಡಿಕೊಳ್ಳಿ.... ನಾವು ನಮ್ಮ ಪ್ರಯತ್ನ ಮಾಡುತ್ತಲೇ ಇದ್ದೀವಿ, ಜಾನಕಿ ಕಾಣೆಯಾದ ದಿನದಿಂದ ನಮ್ಮ ಪ್ರಯತ್ನ ನಿರಂತರವಾಗಿ ಸಾಗುತ್ತಲೇ ಇದೆ. ಆದರೆ ವಿಪರ್ಯಾಸ ಎಂದರೆ ಈ ಕೇಸಿನಲ್ಲಿ ನಮಗೆ ಯಾವುದೇ ಒಂದು ಸುಳಿವೂ ಸಹ ಇಲ್ಲ, ಜಾನಕಿಯ ಮೊಬೈಲ್ ಸ್ವಿಚ್ ಆಫ್ ಆಗಿರುವುದರಿಂದ ಎಲ್ಲಿರಬಹುದು ಎಂದೂ ಸಹ ನಮಗೆ ಹುಡುಕಲು ಆಗುತ್ತಿಲ್ಲ. ಆದರೆ ನೀವೇನೂ ಗಾಭರಿ ಬೀಳಬೇಡಿ, ನಿಮ್ಮ ಜಾನಕಿಯನ್ನು ಸೇಫ್ ಆಗಿ ತಂದು ನಿಮಗೊಪ್ಪಿಸುವ ಜವಾಬ್ದಾರಿ ನಮ್ಮದು. ನೀವು ಧೈರ್ಯ ಕಳೆದು ಕೊಳ್ಳಬೇಡಿ. ನಾನು ಆದಷ್ಟು ಬೇಗ ನಿಮಗೆ ಒಳ್ಳೆಯ ಸುದ್ದಿ ತಿಳಿಸುತ್ತೇನೆ. ನೀವಿನ್ನು ಹೊರಡಬಹುದು.

Rating
No votes yet

Comments