ಅನ್ವೇಷಣೆ - ಭಾಗ ೯

ಅನ್ವೇಷಣೆ - ಭಾಗ ೯

ಅರ್ಜುನ್.... ಜಾನಕಿ ನಮ್ಮ ಸ್ವಂತ ಮಗಳಲ್ಲಪ್ಪ!!!

ಅಂಕಲ್ ಏನಿದು ಹೀಗೆ ಹೇಳುತ್ತಿದ್ದೀರ?

ಹೌದಪ್ಪಾ ಅರ್ಜುನ್... ನಮಗೆ ಮದುವೆಯಾಗಿ ಆರು ವರ್ಷವಾದರೂ ಮಕ್ಕಳಾಗಲಿಲ್ಲ, ನಂತರ ಒಂದು ಗಂಡು ಮಗು ಹುಟ್ಟಿತ್ತು.... ಆದರೆ ಅದು ಮೂರು ತಿಂಗಳ ಮಗುವಿದ್ದಾಗಲೇ ತೀರಿಕೊಂಡಿತು. ಆಗದೆ ಆಗದೆ ಮಗು ಆದಾಗಲೂ ಹೀಗೆ ಆಯಿತಲ್ಲ ಎಂದು ಬಹಳ ಬೇಸರವಾಯಿತು. ಮುಂದೆ ಮಕ್ಕಳಾದರೆ ತೊಂದರೆ ಎಂದು ಡಾಕ್ಟರ್ ಹೇಳಿದ ಮೇಲೆ ನಾವು ಮಗುವಿನ ಆಸೆ ಬಿಟ್ಟೆವು. ಒಮ್ಮೆ ಹೀಗೆ ಒಬ್ಬ ಸ್ನೇಹಿತನ ಜೊತೆ ಈ ಅನಾಥಾಶ್ರಮಕ್ಕೆ ಹೋಗಿದ್ದಾಗ ಅಲ್ಲಿ ಒಂದು ತಿಂಗಳ  ಮಗುವನ್ನು ಯಾರೋ ತಂದು ಬಿಟ್ಟು ಹೋಗಿದ್ದರು. ಆ ಮಗುವನ್ನು ನೋಡಿದರೆ ನನಗೆ ಬಿಟ್ಟು ಬರುವ ಮನಸಾಗಲಿಲ್ಲ.

ಕೂಡಲೇ ಮನೆಗೆ ಬಂದು ಇವಳನ್ನು ಕರೆದುಕೊಂಡು ಆಶ್ರಮಕ್ಕೆ ಹೋಗಿ ಮಗುವನ್ನು ತೋರಿಸಿದೆ. ಕೂಡಲೇ ಅವಳೂ ಸಹ ರೀ ಈ ಮಗುವನ್ನು ನಾವೇ ಸಾಕೋಣ ಎಂದು ಪಟ್ಟು ಹಿಡಿದು ಅನಾಥಾಶ್ರಮದಿಂದ ಕರೆದುಕೊಂಡು ಬಂದೆವು. ಆವಳೇನಮ್ಮಜಾನಕಿ. ಅವಳನ್ನು ನಮ್ಮ ಸ್ವಂತ ಮಗುವಿಗಿಂತ ಹೆಚ್ಚಾಗಿ ನೋಡಿಕೊಂಡಿದ್ದೆವು. ಅವಳ ಮದುವೆ ಹಾಗೆ ಮಾಡಬೇಕು ಹೀಗೆ ಮಾಡಬೇಕು, ಅವಳ ಸಂಸಾರವನ್ನು ಕಣ್ಣಾರೆ ನೋಡಬೇಕು, ಮೊಮ್ಮಕ್ಕಳನ್ನು ಎತ್ತಾಡಿಸಬೇಕು ಏನೆಲ್ಲಾ ಕನಸು ಕಂಡಿದ್ದೆ. ಎಲ್ಲವೂ ನುಚ್ಚು ನೂರಾಯಿತು ಎಂದು ಮತ್ತೆ ಕಣ್ಣಲ್ಲಿ ನೀರು ತುಂಬಿಕೊಂಡರು.

ಅವರು ಹೇಳಿದ ವಿಷಯ ಕೇಳಿದ ಕೂಡಲೇ ನನಗೆ ಎಲ್ಲೋ ಒಂದು ಸುಳಿವು ಸಿಕ್ಕಂತಾಯಿತು.... ಆದರೆ ಅದೇ ಎಂದು ನಿಖರವಾಗಿ ಹೇಳಲು ನನ್ನ ಬಳಿ ಯಾವುದೇ ಆಧಾರವಿರಲಿಲ್ಲ. ಅಂಕಲ್ ಈ ವಿಷಯಗಳು ಪೊಲೀಸರಿಗೆ ತಿಳಿದಿದೆಯ?

ಹಾ ಅರ್ಜುನ್... ಮೊದಲ ದಿನದ ವಿಚಾರಣೆಯಲ್ಲೇ ಇದೆಲ್ಲಾ ವಿಷಯಗಳನ್ನು ಪೊಲೀಸರಿಗೆ ತಿಳಿಸಿದ್ದೇನೆ. ಯಾಕಪ್ಪಾ ಏನಾಯ್ತು?

ಅಂಕಲ್.... ನನ್ನ ಊಹೆ ನಿಜವಾದರೆ, ಜಾನಕಿಯ ಅಸಲಿ ಸಂಬಂಧಿಕರೇ ಯಾರೋ ಈ ಕೊಲೆಯನ್ನು ಮಾಡಿರಬಹುದು ಎಂಬ ಅನುಮಾನ ಮೂಡುತ್ತಿದೆ. ಆದರೆ ಅದೇ ನಿಜ ಎಂದು ಹೇಳಲು ಸಾಧ್ಯವಿಲ್ಲ. ಇದೊಂದು ಅನುಮಾನ ಅಷ್ಟೇ.

ಏನಪ್ಪಾ ನೀನು ಹೇಳುತ್ತಿರುವುದು?

ಹೌದು ಅಂಕಲ್....ಬೇರೆ ಯಾವ ರೀತಿಯಲ್ಲೂ ಅವಳ ಮೇಲೆ ದ್ವೇಷ ಸಾಧಿಸುವವರು ಯಾರೂ ಇಲ್ಲ ಎಂದ ಮೇಲೆ.... ನನಗೇಕೋ ನನ್ನ ಊಹೆಯೇ ನಿಜ ಎಂದು ಅನಿಸುತ್ತಿದೆ. ಆದರೆ ಎಂದೋ ಇಪ್ಪತ್ತೈದು ವರ್ಷದ ಕೆಳಗೆ ಜಾನಕಿಯನ್ನು ಅನಾಥಾಶ್ರಮದ ಬಳಿ ಬಿಟ್ಟು ಹೋದವರನ್ನು ಹೇಗೆ ಪತ್ತೆ ಹಚ್ಚುವುದು? ಅವರಿಂದ ಮಾಹಿತಿ ಹೇಗೆ ಸಂಗ್ರಹಿಸುವುದು?

ಅಂಕಲ್ ನಾನು ಯಾವುದಕ್ಕೂ ಒಂದು ಸಲ ಆ ಅನಾಥಾಶ್ರಮದ ಬಳಿ ಹೋಗಿ ವಿಚಾರಿಸಿ ನೋಡುತ್ತೇನೆ.

ಇಲ್ಲಪ್ಪ ಅರ್ಜುನ್ ಈಗ ಆ ಅನಾಥಾಶ್ರಮ ಇಲ್ಲ. ಆ ಅನಾಥಾಶ್ರಮ ನಡೆಸುತ್ತಿದ್ದ ಮಹಿಳೆಗೆ ಆರ್ಥಿಕ ಸಹಾಯ ದೊರೆಯದೆ ಆಕೆ ಆಶ್ರಮವನ್ನು ಮುಚ್ಚಿ ಈಗ ಮೈಸೂರಿನಲ್ಲಿ ನೆಲೆಸಿದ್ದಾರೆ. ಆಗಾಗ್ಗೆ ಜಾನಕಿಯನ್ನು ನೋಡಿ ಹೋಗಲು ಬರುತ್ತಿರುತ್ತಾರೆ. ಜಾನಕಿ ಒಬ್ಬಳೇ ಎಂದಲ್ಲ, ಅವರ ಆಶ್ರಮದಲ್ಲಿ ಬೆಳೆದವರೆಲ್ಲ ಇವತ್ತು ಒಳ್ಳೆಯ ಸ್ಥಿತಿಯಲ್ಲಿದ್ದಾರೆ. ಇಲ್ಲಿ ಬಂದಾಗ ಒಮ್ಮೆ ಅವರನ್ನೆಲ್ಲಾ ಮಾತಾಡಿಸಿಕೊಂಡು ಹೋಗುವುದು ಪರಿಪಾಠ. ಜಾನಕಿಯ ಅಂತ್ಯಸಂಸ್ಕಾರದ ಸಮಯದಲ್ಲಿ ಅವರೂ ಬಂದಿದ್ದರು. ನಿನ್ನನ್ನು ಭೇಟಿ ಮಾಡಿಸುವಷ್ಟರಲ್ಲಿ ಅವರು ಹೊರಟು ಬಿಟ್ಟರು.

ಅರ್ಜುನ್ ಇಷ್ಟಕ್ಕೂ ಇದೆಲ್ಲಾ ಆಗುವ ಕೆಲಸವೇ? ಅದು ಹೇಗೆ ನೀನು ಜಾನಕಿಯ ಸಂಬಂಧಿಯವರನ್ನು ಹುಡುಕುತ್ತೀಯ? ಹುಟ್ಟಿದ ಒಂದೇ ತಿಂಗಳಲ್ಲಿ ಮಗುವನ್ನು ತಂದು ಅನಾಥಾಶ್ರಮದ ಮುಂದೆ ಮಲಗಿಸಿ ಹೋದವರನ್ನು ಹೇಗೆ ಕಂಡು ಹಿಡಿಯುತ್ತೀಯ? ಅವರಿಂದ ಯಾವ ಮಾಹಿತಿ ಸಂಗ್ರಹಿಸುತ್ತೀಯ? ಅರ್ಜುನ್.... ನಿನ್ನ ಹಿತೈಷಿಯಾಗಿ ಒಂದು ಮಾತು ಹೇಳಲಾ? ಜಾನಕಿ ಹೇಗಿದ್ದರೂ ಮತ್ತೆ ವಾಪಸ್ ಬರುವುದಿಲ್ಲ. ಆ ಸತ್ಯವನ್ನು ನಾವು ಅಂಗೀಕರಿಸಲೇಬೇಕು. ಅಂಥದ್ದರಲ್ಲಿ ಅನಾವಶ್ಯಕವಾಗಿ ನೀನೇಕೆ ತೊಂದರೆಗೆ ಸಿಲುಕುತ್ತೀಯ.

ಅಂಕಲ್.... ನೀವೂ ಸಹಾ ಹೀಗೇ ಹೇಳುತ್ತೀರಾ? ನಿಮಗೆಲ್ಲ ಯಾಕೆ ನನ್ನ ಸಂಕಟ ಅರ್ಥ ಆಗುತ್ತಿಲ್ಲ. ಜಾನಕಿಗೋಸ್ಕರ ಅಲ್ಲದಿದ್ದರೂ ಮುಂದೆ ಬೇರೆ ಯಾರಿಗೂ ಈ ರೀತಿಯ ಸಂದರ್ಭ ಬರಬಾರದು. ಅದಕ್ಕೋಸ್ಕರವಾದರೂ ನಾನು ಆ ಕೊಲೆಗಡುಕರನ್ನು ಕಂಡು ಹಿಡಿದೇ ಹಿಡಿಯುತ್ತೇನೆ.  ನಾನಿನ್ನು ಹೊರಡುತ್ತೇನೆ ಎಂದು ಆಚೆ ಬಂದು ಮನೆಗೆ ಫೋನ್ ಮಾಡಿ ನಾನು ಮೈಸೂರಿಗೆ ಹೊರಡುತ್ತಿದ್ದೇನೆ ಎಂದು ಹೇಳಿ ಆಶ್ರಮದ ಮಹಿಳೆ ವೀಣಾದೇವಿಗೆ ಕರೆ ಮಾಡಿದಾಗ ಅವರು ಬೆಂಗಳೂರಲ್ಲೇ ಇರುವುದಾಗಿ ಹೇಳಿ ಮೊದಲು ಆಶ್ರಮ ಇದ್ದ ಜಾಗದಲ್ಲಿ ಭೇಟಿ ಆಗುವುದಾಗಿ ತಿಳಿಸಿ ಕರೆ ಕಟ್ ಮಾಡಿದರು.

ವೀಣಾ ದೇವಿಯವರು ಸುಮಾರು ಅರವತ್ತರ ಪ್ರಾಯದವರು. ನಾನು ಜಾನಕಿಯನ್ನು ಮದುವೆ ಆಗಬೇಕಿದ್ದ ಹುಡುಗ ಎಂದು ತಿಳಿದ ಕೂಡಲೇ ನನ್ನನ್ನು ತಬ್ಬಿಕೊಂಡು ಕಣ್ಣೀರು ಹಾಕಿದರು. ಅವರನ್ನು ಸಮಾಧಾನ ಪಡಿಸಿ ಜಾನಕಿ ಬಗ್ಗೆ ಮಾಹಿತಿ ಬೇಕೆಂದು ತಿಳಿಸಿದಾಗ, ತಮಗೆ ಗೊತ್ತಿರುವ ವಿಷಯ ತಿಳಿಸುತ್ತೇನೆ ಎಂದು ಹೇಳಿದರು.

ಇಪ್ಪತ್ತೈದು ವರ್ಷದ ಕೆಳಗೆ ಒಂದು ದಿನ ಬೆಳಿಗ್ಗೆ ನಮ್ಮ ಆಶ್ರಮದ ಬಾಗಿಲಿನ ಮುಂದೆ ಒಂದು ಬಟ್ಟೆಯಲ್ಲಿ ಇಡೀ ದೇಹ ಮುಚ್ಚಿ ಮುಖ ಮಾತ್ರ ತೆರೆದಂತೆ ಜಾನಕಿಯನ್ನು ಮಲಗಿಸಿ ಹೋಗಿದ್ದರು. ಆಗ ಜಾನಕಿ ಕೇವಲ ಒಂದು ತಿಂಗಳ ಹಸುಗೂಸು. ನಮ್ಮ ಆಶ್ರಮದಲ್ಲಿ ಇದ್ದ ಮಕ್ಕಳಲ್ಲೇ ಅತಿ ಚಿಕ್ಕ ಕೂಸು ಜಾನಕಿ. ಆದ್ದರಿಂದ ಜಾನಕಿ ಎಲ್ಲರಿಗೂ ಅಚ್ಚುಮೆಚ್ಚು ಆಗಿಬಿಟ್ಟಳು. ಎಲ್ಲ ಮಕ್ಕಳು ಸದಾಕಾಲ ಜಾನಕಿಯ ಸುತ್ತಲೇ ಇರುತ್ತಿದ್ದರು. ಅಷ್ಟರಲ್ಲಿ ನಿಮ್ಮ ಮಾವನವರು ಜಾನಕಿಯನ್ನು ಕರೆದುಕೊಂಡು ಹೋಗುತ್ತೇವೆ ಎಂದಾಗ ನಮಗೆಲ್ಲಾ ಅತೀವ ದುಃಖವಾಯಿತು.... ಆದರೆ ಅವಳಾದರೂ ಚೆನ್ನಾಗಿರುತ್ತಾಳಲ್ಲ ಎಂದು ಆ ಮಗುವನ್ನು ಅವರಿಗೆ ಕೊಟ್ಟೆವು. ಆ ನಂತರದಲ್ಲಿ ವಾರಕ್ಕೊಮ್ಮೆ ನಾನು ಅವರ ಮನೆಗೆ ಹೋಗುವುದು ಇಲ್ಲ ಅವರೇ ಇಲ್ಲಿ ಬಂದು ಮಗುವನ್ನು ತೋರಿಸುತ್ತಿದ್ದರು. ಅದೇನೋ ಗೊತ್ತಿಲ್ಲ, ಜಾನಕಿಯನ್ನು ಸ್ವಲ್ಪ ಹೆಚ್ಚೇ ಎನಿಸುವಷ್ಟು ಹಚ್ಚಿಕೊಂಡಿದ್ದೆ. ಈಗ ಜಾನಕಿ ಇಲ್ಲ ಎಂಬ ವಿಷಯ ನನ್ನ ಕೈಲಿ ಅರಗಿಸಿಕೊಳ್ಳಲಾಗುತ್ತಿಲ್ಲ ಅರ್ಜುನ್ ಎಂದು ಭಾವುಕರಾದರು.

Rating
No votes yet

Comments