ಅನ್ವೇಷಣೆ ಭಾಗ ೨
ಒಂದು ವಾರದ ನಂತರ ಸ್ಟೇಷನ್ ನಿಂದ ಅಪ್ಪನ ಮೊಬೈಲ್ ಗೆ ಕರೆ ಬಂದಿದ್ದರಿಂದ ಅಪ್ಪ ನನ್ನನ್ನು ಸ್ಟೇಷನ್ ಗೆ ಕರೆದುಕೊಂಡು ಹೋದರು. ಕರೆದ ಕೂಡಲೇ ಬಂದಿದ್ದಕ್ಕೆ ಇನ್ಸ್ಪೆಕ್ಟರ್ ಅಪ್ಪನಿಗೆ ಧನ್ಯವಾದಗಳನ್ನು ತಿಳಿಸಿ ನನ್ನನ್ನು ವಿಚಾರಣಾ ಕೊಠಡಿಗೆ ಕರೆದುಕೊಂಡು ಹೋದರು. ನನ್ನ ಎದುರಿನಲ್ಲಿ ಕುಳಿತ ಇನ್ಸ್ಪೆಕ್ಟರ್ ಬ್ರಹ್ಮಾವರ್ ನನ್ನ ಕಡೆ ನೋಡಿ... ಮಿ. ಅರ್ಜುನ್ ನಾನು ಮೊದಲೇ ಹೇಳಿದ ಹಾಗೆ ನಿಮ್ಮ ಮನಸಿಗೆ ನೋವುಂಟು ಮಾಡುವ ಯಾವುದೇ ಉದ್ದೇಶ ನಮಗಿಲ್ಲ, ಆದರೆ ನಮ್ಮ ಕೆಲಸ ನಾವು ಮಾಡಬೇಕಾಗಿರುವುದರಿಂದ ಈ ವಿಚಾರಣೆ ನಮಗೆ ಬಹಳ ಮುಖ್ಯ. ನೀವು ನಮಗೆ ಸಹಕರಿಸುತ್ತೀರ ಎಂದು ಭಾವಿಸುತ್ತಾ.... ದಯವಿಟ್ಟು ಜಾನಕಿ ಬಗ್ಗೆ ನಿಮಗೆ ಏನೇನು ತಿಳಿದಿದೆಯೋ ಎಲ್ಲವನ್ನೂ ತಿಳಿಸುತ್ತೀರಾ?
ಜಾನಕಿಯ ಹೆಸರು ಕೇಳುತ್ತಿದ್ದ ಹಾಗೆ ದುಃಖ ಒತ್ತರಿಸಿಕೊಂಡು ಬಂದರೂ ತಡೆದುಕೊಂಡು, ಸರ್ ಹೇಳುತ್ತೀನಿ ಸರ್... ಜಾನಕಿಯನ್ನು ನಾನು ಮೊದಲು ಭೇಟಿ ಮಾಡಿದಾಗಿನಿಂದ ಎಲ್ಲವೂ ಹೇಳುತ್ತೇನೆ.
ಸರ್....ಈಗ ಎರಡು ವರ್ಷದ ಹಿಂದೆ, ನಾನು ನನ್ನ ಸ್ನೇಹಿತರು ಮತ್ತೊಬ್ಬ ಸ್ನೇಹಿತನ ಮದುವೆಗೆಂದು ಸಕಲೇಶಪುರಕ್ಕೆ ಹೋಗಿದ್ದೆವು ಸರ್. ಅಲ್ಲೇ ಸರ್ ನಾನು ಜಾನಕಿಯನ್ನು ಮೊದಲು ಭೇಟಿ ಮಾಡಿದ್ದು.
------------------------------------------------------------------------------------------------------------------------------------------
ಲೋ ಮಗಾ ಈ ನನ್ಮಗ ವೆಂಕಿಗೆ ಬಡಕೊಂಡೆ...ಮಳೆಗಾಲದಲ್ಲಿ ಮದುವೆ ಮಾಡಿಕೊಳ್ಳಬೇಡ ಎಂದು...ಕೇಳಲಿಲ್ಲ, ಈಗ ನೋಡು ಮದುವೆ ಮನೆಯಲ್ಲಿ ಎಣಿಸಿದರೂ ೫೦ ಮಂದಿ ಇಲ್ಲ... ನನ್ಮಗ ಅಂತೂ ಹೆಣ್ಣಿನ ಮನೆಯವರಿಗೆ ಊಟದ ಖರ್ಚು ಮಿಗಿಸಿಬಿಟ್ಟ. ಎಷ್ಟಾದರೂ ಲವ್ ಮಾಡಿ ಮದುವೆ ಆಗುತ್ತಿದ್ದಾನೆ ಹುಡುಗ... ಅದಕ್ಕೆ ಹೆಣ್ಣಿನ ಮನೆಯವರಿಗೆ ಎಷ್ಟು ಸಾಧ್ಯವೋ ಅಷ್ಟು ಉಳಿಸುತ್ತಿದ್ದಾನೆ...
ಅದಿರ್ಲಿ ಮಗ... ಬೆಂಗಳೂರಿಂದ ಇಲ್ಲಿಯವರೆಗೂ ಬಂದಿದ್ದೇವೆ, ಆಚೆ ಎಲ್ಲಾದರೂ ಸುತ್ತಾಡೋಣ ಎಂದರೆ ಮಳೆ... ಹೋಗಲಿ ಇಲ್ಲೇ ಟೈಮ್ ಪಾಸ್ ಮಾಡೋಣ ಎಂದರೆ ಜನವೇ ಇಲ್ಲ.... ಹೋಗಲಿ ಯಾರಾದರೂ ಹುಡುಗಿಯರು ಇದ್ದಿದ್ದರೆ ಅಟ್ಲೀಸ್ಟ್ ಲೈನ್ ಆದರೂ ಹೊಡೆಯಬಹುದಿತ್ತು.... ಆದರೆ ಇಲ್ಲಿ ಎಲ್ಲಾ...... ಎನ್ನುತ್ತಿರುವಾಗಲೇ ಮದುವೆ ಹೆಣ್ಣಿನ ಜೊತೆ ಅವಳು ಬಂದಳು..... ಮೊದಲ ನೋಟದಲ್ಲೇ ಅವಳ ಮೇಲೆ ಲವ್ ಆಗುವಷ್ಟು ಸುಂದರಿ ಏನು ಆಗಿರಲಿಲ್ಲ.... ಆದರೆ ಒಂದೆರೆಡು ಬಾರಿ ಗಮನವಿಟ್ಟು ನೋಡಿದರೆ ತೆಗೆದುಹಾಕುವಂಥಹ ಹುಡುಗಿಯೂ ಆಗಿರಲಿಲ್ಲ....
ಅಲ್ಲಿಯವರೆಗೂ ಬ್ಲಾಕ್ ಅಂಡ್ ವೈಟ್ ಸಿನೆಮಾದ ಹಾಗಿದ್ದ ಮದುವೆ ಮನೆಗೆ ಇದ್ದಕ್ಕಿದ್ದಂತೆ ಈಸ್ಟ್ಮನ್ ಕಲರ್ ಹೊಡೆದ ಹಾಗಾಗಿತ್ತು. ಆ ಹುಡುಗಿಯ ಜೊತೆ ಇನ್ನೊಂದಿಬ್ಬರು ಹುಡುಗಿಯರು ಇದ್ದರು. ಮದುವೆ ಮನೆಯಲ್ಲಿ ಇರುವಷ್ಟು ಹೊತ್ತು ಟೈಮ್ ಪಾಸ್ ಗ್ಯಾರಂಟಿ ಎಂದುಕೊಂಡು ಯಾರ್ಯಾರಿಗೆ ಯಾರ್ಯಾರು ಎಂದು ಮಾತಾಡಿಕೊಂಡೆವು.... ಆದರೆ ವಿಪರ್ಯಾಸ ಎಂದರೆ ಎಲ್ಲರೂ ಒಂದೇ ಹುಡುಗಿಯ ಮೇಲೆ ಕಣ್ಣಿಟ್ಟಿದ್ದರು... ನಾನು ಕಣ್ಣಿಟ್ಟಿದ್ದ ಹುಡುಗಿಗೆ ಕಣ್ಣಿಟ್ಟಿದ್ದರು.... ಸರಿ ನೋಡೋಣ ಎಲ್ಲರೂ ಒಟ್ಟಿಗೆ ಪ್ರಯತ್ನ ಪಡೋಣ, ಯಾರು ಮೊದಲು ಆ ಹುಡುಗಿಯ ಜೊತೆ ಸ್ನೇಹ ಮಾಡುತ್ತಾರೆ ಎಂದು ಮುನ್ನುಗ್ಗಲು ಸನ್ನದ್ಧರಾದೆವು.
ಅಷ್ಟರಲ್ಲಿ ಮದುವೆ ಆಗುತ್ತಿದ್ದ ನಮ್ಮ ಸ್ನೇಹಿತನಿಗೆ ನಮ್ಮ ಪ್ಲಾನ್ ಗೊತ್ತಾಗಿತ್ತು... ಹೇಗೆಂದರೆ, ಮುಂಚೆ ಅವನೂ ಸಹ ಇದೇ ಕೆಲಸ ಮಾಡುತ್ತಿದ್ದನಲ್ಲವೇ..... ಹಾಗಾಗಿ ಅವನು ಹಸೆಮಣೆ ಮೇಲಿಂದಲೇ ನಮಗೆ ಕಣ್ಸನ್ನೆಯಲ್ಲೇ ಬೇಡ ಬೇಡ ಎಂದು ಹೇಳುತ್ತಿದ್ದ. ಆದರೆ ನಮ್ಮಲ್ಲಿ ಅಷ್ಟು ಒಳ್ಳೆಯ ಹುಡುಗರು ಯಾರೂ ಇರಲಿಲ್ಲವಲ್ಲ....!!
ಮದುವೆ ಹುಡುಗ ನಿತಿನ್ ನನ್ನನ್ನು ಕರೆದು ಪಕ್ಕದಲ್ಲಿ ಕೂಡಿಸಿಕೊಂಡು ಕಿವಿಯಲ್ಲಿ ಉಸುರಿದ, ಲೋ ಮಕ್ಳಾ.... ಬೇಡ ಕಣ್ರೋ.... ನಮ್ ನಮ್ ಮದ್ವೇಲೂ ನಿಮ್ಮ ಚಾಳಿ ಬಿಡಲ್ವ....? ಅವರ ಮನೆಯವರಿಗೆ ಗೊತ್ತಾದರೆ ನನ್ನ ಮರ್ಯಾದೆ ಹೋಗತ್ತೆ ಕಣೋ... ಪ್ಲೀಸ್ ಮಗಾ ನೀನೆ ಏನಾದರೂ ಹೇಳಿ ಸುಮ್ಮನಾಗಿಸೋ....ನಿಮಗೆ ಟೈಮ್ ಪಾಸ್ ಆಗುತ್ತಿಲ್ಲ ಎಂದರೆ ನಾನು ಕಾರ್ ಅರೇಂಜ್ ಮಾಡುತ್ತೀನಿ, ಸುತ್ತಾಡಿಕೊಂಡು ಬನ್ನಿ.... ಇಲ್ಲಿ ಮಾತ್ರ ಏನೂ ಮಾಡ್ಬೇಡ್ರೋ ಎಂದು ಗೋಗರೆದ....
ನನಗೂ ಅಯ್ಯೋ ಪಾಪ ಎನಿಸಿ ಸರಿ ಮಗಾ, ಹಾಗಿದ್ರೆ ಒಂದು ಡೀಲ್.... ಮದುವೆ ಆದ ಮೇಲೆ ಅಲ್ಲಿ ರೆಡ್ ಕಲರ್ ಸೀರೆ ಉಟ್ಟುಕೊಂಡು ನಿಂತಿದ್ದಾಳಲ್ಲ ಅವಳನ್ನು ನನಗೆ ಪರಿಚಯ ಮಾಡಿಸಬೇಕು... ಹಾಗಿದ್ದಲ್ಲಿ ನಾನು ಅವರನ್ನು ತಡೆಯುತ್ತೇನೆ, ಇಲ್ಲಾಂದರೆ ನಿನ್ನಿಷ್ಟ ನೋಡಪ್ಪಾ....
ಲೋ... ಅವಳು ನನ್ನ ಹೆಂಡತಿಯ ಫ್ರೆಂಡ್ ಕಣೋ, ನನಗೇ ಸರಿಯಾಗಿ ಪರಿಚಯ ಇಲ್ಲ... ಇನ್ನು ನಿನಗೆ ಹೇಗೆ ಪರಿಚಯ ಮಾಡಿಸಲಿ... ಅದೆಲ್ಲ ಆಗಲ್ಲ...
ಹೌದಾ ಸರಿ ಬಿಡಪ್ಪಾ ಹಾಗಿದ್ದರೆ.... ನಮ್ಮ ಹುಡುಗರ ಬಗ್ಗೆ ನಿನಗೆ ಗೊತ್ತೇ ಇದೆ, ಅವರು ಸೀದಾ ಹುಡುಗಿಯ ಬಳಿಯೇ ಹೋಗಿ ಮಾತಾಡಿಬಿಡುತ್ತಾರೆ ... ಅದೂ ಅಲ್ಲದೆ ಎಲ್ಲರೂ ಅವಳೊಬ್ಬಳ ಮೇಲೆಯೇ ಕಣ್ಣಿಟ್ಟಿದ್ದಾರೆ....ನಾವೇನೋ ಮದುವೆ ಮುಗಿಸಿಕೊಂಡು ಹೊರಟು ಬಿಡುತ್ತೇವೆ, ಆಮೇಲೆ ನಿನ್ನ ಮರ್ಯಾದೆ ಏನಾಗುತ್ತದೆ... ಒಮ್ಮೆ ಯೋಚಿಸಿ ನೋಡು....
ನನ್ನ ಮಾತು ರಾಮಬಾಣದಂತೆ ಅವನ ಕಿವಿಯೊಳಗೆ ಹೊಕ್ಕಿ ಮೆದುಳಿಗೆ ಘಾಸಿ ಮಾಡಿತ್ತು... ಸರೀನಪ್ಪ ಮದುವೆ ಆದ ಮೇಲೆ ನಾನು ಅವಳನ್ನು ಪರಿಚಯ ಮಾಡಿಸುತ್ತೇನೆ... ಮೊದಲು ಅವರನ್ನು ಸುಮ್ಮನಿರಲು ಹೇಳು ಎಂದ.
ನಾನು ಅಲ್ಲಿಂದ ಎದ್ದು ಬಂದು ಎಲ್ಲರಿಗೂ ಒಂದು ಸಣ್ಣ ಸುಳ್ಳು ಹೇಳಿದೆ. ಆ ಹುಡುಗಿಯ ಅಪ್ಪ ಪೋಲಿಸ್ ಸಬ್ ಇನ್ಸ್ಪೆಕ್ಟರ್ ಎಂದೂ, ಬಹಳ ಸ್ಟ್ರಿಕ್ಟ್ ಆಫೀಸರ್ ಎಂದೂ ಹೇಳಿದೆ. ಕೂಡಲೇ ಎಲ್ಲಾ ಹುಡುಗರ ಉತ್ಸಾಹ ಬಿಸಿಲಲ್ಲಿ ಇಟ್ಟ ಮಂಜುಗಡ್ಡೆಯ ಹಾಗೆ ಕರಗಿ ಹೋಯಿತು. ನಾನು ಮಾತ್ರ ಮದುವೆ ಆದ ಕೂಡಲೇ ಅವಳೊಡನೆ ಮಾತಾಡಲು ಉತ್ಸುಕನಾಗಿ ಕಾಯುತ್ತಿದ್ದೆ. ತಾಳಿ ಕಟ್ಟುವ ಸಮಯಕ್ಕೆ ಎಲ್ಲಾ ಹುಡುಗರು ಮಂಟಪದ ವೇದಿಕೆ ಮೇಲೆ ಹೋಗಿ ಹುಡುಗನನ್ನು ರೇಗಿಸುತ್ತಿದ್ದೆವು, ಆ ಪಕ್ಕದಲ್ಲಿ ಹುಡುಗಿ ಮನೆಯವರು ಹುಡುಗಿಯನ್ನು ರೇಗಿಸುತ್ತಿದ್ದರು...
ನಾನು ಮಾತ್ರ ಅವಳನ್ನೇ ಕಣ್ಣಿನಲ್ಲಿ ಕಣ್ಣಿಟ್ಟು ನೋಡುತ್ತಿದ್ದೆ, ಮೊದಮೊದಲು ಟೈಮ್ ಪಾಸ್ ಗಾಗಿ ಅವಳನ್ನು ಮಾತಾಡಿಸೋಣ ಎಂದುಕೊಂಡಿದ್ದವನಿಗೆ ಅದೇನಾಯಿತೋ ಗೊತ್ತಿಲ್ಲ, ವೇದಿಕೆ ಇಳಿದು ಕೆಳಗೆ ಬರುವಷ್ಟರಲ್ಲಿ ಅವಳ ಮೇಲೆ ಪ್ರೀತಿ ಉಂಟಾಗಿತ್ತು...!! ಊಟ ಮುಗಿದ ಮೇಲೆ ನಿತಿನ್ ಊರು ಸುತ್ತಲು ಕಾರ್ ಅರೇಂಜ್ ಮಾಡಿದ್ದ, ಆದರೆ ನಾನು ಬರುವುದಿಲ್ಲ ನೀವೆಲ್ಲ ಹೋಗಿಬನ್ನಿ ಎಂದು ಎಲ್ಲರನ್ನೂ ಕಳುಹಿಸಿ ನಿತಿನ್ ಜೊತೆ ಮಾತಾಡುತ್ತಾ ಕುಳಿತಿದ್ದಾಗ... ಅಲ್ಲಿಗೆ ನವ ವಧು ಮತ್ತು ಆ ಕೆಂಪು ಸೀರೆ ಹುಡುಗಿ ಬಂದರು.
ಕೆಂಪು ಸೀರೆ ಹುಡುಗಿ ನನ್ನ ಕಡೆ ನೋಡಿ ಮಿ. ಸ್ವಲ್ಪ ಇಲ್ಲಿ ಬರುತ್ತೀರಾ ಎಂದು ಕರೆದಳು, ನಾನು ಒಮ್ಮೆ ಹಿಂದೆ ಮುಂದೆ ನೋಡಿ ನನ್ನನ್ನೇ ಕರೆಯುತ್ತಿರುವುದು ಎಂದು ಖಚಿತಪಡಿಸಿಕೊಂಡು, ನಿತಿನ್ ಮುಖವನ್ನೊಮ್ಮೆ ನೋಡಿದೆ... ಅವನಾಗಲೇ ನನ್ನನ್ನು ಮರೆತು ಅವಳ ಹೆಂಡತಿಯ ಜೊತೆ ಮಾತಿಗಿಳಿದಿದ್ದ. ಧೈರ್ಯ ಮಾಡಿ ಎದ್ದು ಅವಳ ಬಳಿ ಹೋಗಿ ಏನೆಂದು ಕೇಳಿದ್ದಕ್ಕೆ...
ಅಲ್ರೀ, ನಿಮ್ಮ ಮಾತು ಯಾವಾಗಲೂ ಇದ್ದಿದ್ದೆ, ಪಾಪ ಅವರು ಈಗಷ್ಟೇ ಮದುವೆ ಆಗಿದ್ದಾರೆ.... ಅವರನ್ನು ಮಾತಾಡಲು ಬಿಡಬಾರದ? ಅಲ್ರೀ ಅದೇನು ಸಿಟಿ ಹುಡುಗರು ನೀವು... ಮದುವೆ ಮಂಟಪದಲ್ಲಿ ನಿಂತು ಹಾಗೆಲ್ಲ ಕಿರುಚಾಡುತ್ತಾ ಇದ್ರಿ? ನೀವು ಸಿಟಿಲಿ ಹೀಗೆ ಮಾಡುತ್ತೀರಾ ಎಂದಳು...
ನನಗೆ ಅವಳ ಯಾವ ಮಾತುಗಳು ಕಿವಿಗೆ ಬೀಳುತ್ತಿರಲಿಲ್ಲ, ನಾನು ಅವಳ ಮುದ್ದಾದ ಮುಖವನ್ನೇ ನೋಡುತ್ತಾ ಸುಮ್ಮನೆ ತಲೆ ಆಡಿಸುತ್ತಾ ಹೂ... ಹೂ... ಎನ್ನುತ್ತಾ ನಿಂತಿದ್ದೆ. ನನ್ನ ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡ ನಿತಿನ್ ತನ್ನ ಪತ್ನಿಗೆ ಹೇಳಿ ಮಧ್ಯದಲ್ಲಿ ಕಳಿಸಿದ. ಅವರು ಮಧ್ಯದಲ್ಲಿ ಬಂದಿದ್ದರಿಂದ ಆ ಕೆಂಪು ಸೀರೆ ಹುಡುಗಿ ತನ್ನ ಮಾತಿಗೆ ಬ್ರೇಕ್ ಹಾಕಿದಳು. ಅಷ್ಟರಲ್ಲಿ ನಿತಿನ್ ಸಹ ಎದ್ದು ಬಂದು... ಹಲೋ ಇವನು ಅರ್ಜುನ್ ಎಂದು ಆ ಕೆಂಪು ಸೀರೆಯ ಹುಡುಗಿಗೆ ಪರಿಚಯಿಸಿದ. ಆ ಹುಡುಗಿ ತನ್ನ ಹೆಸರು ಜಾನಕಿ ಎಂದು, ನಿತಿನ್ ಪತ್ನಿಯ ಆಪ್ತ ಗೆಳತಿ ಎಂದು ಹೇಳಿಕೊಂಡಳು.
ಜಾನಕಿ.... ವಾವ್.... ಎಷ್ಟು ಚೆಂದವಾದ ಹೆಸರು... ಸೀತಾದೇವಿಯ ಹೆಸರು....