ಅನ್ವೇಷಣೆ ‍ ಭಾಗ‌ ೩

ಅನ್ವೇಷಣೆ ‍ ಭಾಗ‌ ೩

ಜಾನಕಿಯ ಪರಿಚಯ ಮಾಡಿಸಿ ನಿತಿನ್ ಮತ್ತು ಅವನ ಪತ್ನಿ ಯಾರೋ ಕರೆದರೆಂದು ಅವರ ಬಳಿ ಆಶೀರ್ವಾದ ತೆಗೆದುಕೊಳ್ಳಲು ಹೋದರು. ಅವರು ಹೋದ ಮೇಲೆ ನಾವಿಬ್ಬರೂ ಅಲ್ಲೇ ಇದ್ದ ಕುರ್ಚಿಗಳಲ್ಲಿ ಕುಳಿತೆವು. ಮದುವೆ ನಡೆದಿದ್ದು ವಧುವಿನ ಮನೆಯಲ್ಲೇ ಆದ್ದರಿಂದ ಮನೆಯ ಮುಂದೆ ಚಪ್ಪರ ಹಾಕಿಸಿದ್ದರು. ಎದುರುಗಡೆ ಜಿಟಿ ಜಿಟಿ ಎಂದು ಸುರಿಯುತ್ತಿದ್ದ ಸೋನೆ ಮಳೆ, ಪಕ್ಕದಲ್ಲಿ ಜಾನಕಿ ಆಹಾ ಅದೊಂದು ವರ್ಣನಾತೀತ ಅನುಭವ. ಸ್ವಲ್ಪ ಹೊತ್ತು ಜಾನಕಿ ನಮ್ಮ ಹುಡುಗರಿಗೆಲ್ಲ ಬೈದು ನಂತರ ಮಾಮೂಲಿ ಮಾತುಕತೆಗೆ ಬಂದೆವು.

ಜಾನಕಿ ವಧುವಿನ ಗೆಳತಿ ಅಷ್ಟೇ ಅಲ್ಲದೆ ದೂರದ ಸಂಬಂಧಿಯೂ ಆಗಿದ್ದಳು. ಜಾನಕಿಯ ಸ್ವಂತ ಊರು ಸಕಲೇಶಪುರವೇ ಆದರೂ ಈಗ ಅಲ್ಲಿ ಅಜ್ಜಿ ತಾತ ಮಾತ್ರ ಇದ್ದು, ಅಪ್ಪ ಅಮ್ಮ ಬೆಂಗಳೂರಿನಲ್ಲೇ ಸೆಟಲ್ ಆಗಿರುವುದಾಗಿ ತಿಳಿಸಿದಳು. BE ಮುಗಿಸಿದ ಮೇಲೆ ಒಂದು ಕಾಲೇಜಿನಲ್ಲಿ ಪಾರ್ಟ್ ಟೈಮ್ ಲೆಕ್ಚರರ್ ಆಗಿ ಕೆಲಸ ಮಾಡುತ್ತಿರುವುದಾಗಿ ತಿಳಿಸಿದಳು.

ನಾನು ತಕ್ಷಣ ಯಾಕೆ ಲೆಕ್ಚರರ್? ಯಾವುದಾದರೂ ಸಾಫ್ಟ್ವೇರ್ ಕಂಪನಿಯಲ್ಲಿ ಕೆಲಸ ಮಾಡಬಹುದಿತ್ತಲ್ಲವ ಎಂದು ಕೇಳಿದ್ದಕ್ಕೆ... ತನಗೆ ಸಾಫ್ಟ್ವೇರ್ ಎಂದರೆ ಅಸಹ್ಯ... ಹಗಲು ರಾತ್ರಿ ಎನ್ನದೆ ಯಾವುದೋ ವಿದೇಶೀ ಕಂಪನಿಗಳಿಗೆ ಗುಲಾಮರ ಹಾಗೆ ಕೆಲಸ ಮಾಡುವುದು ತನಗಿಷ್ಟ ಇಲ್ಲ ಎಂದು ತಿಳಿಸಿದಳು.

ಅವಳು ಹೇಳಿದ್ದು ಕೇಳಿ ನಾನೂ ಒಂದು ಸಾಫ್ಟ್ವೇರ್ ಕಂಪನಿಯಲ್ಲಿ ಕೆಲಸ ಮಾಡುತ್ತಿರುವುದಾಗಿ ಹೇಳಲು ಮುಜುಗರವಾಯಿತು... ಆದರೂ ಅವಳಿಗೆ ನಾನು ನಿತಿನ್ ಒಂದೇ ಕಂಪನಿಯಲ್ಲಿ ಕೆಲಸ ಮಾಡುವುದು ಗೊತ್ತಿದ್ದರಿಂದ ಸುಳ್ಳು ಹೇಳಲು ಸಾಧ್ಯವಿರಲಿಲ್ಲ. ಅವಳು ಸಾಫ್ಟ್ವೇರ್ ಇಂಜಿನಿಯರ್ ಗಳಿಗೆ ಬೈಯ್ಯುತ್ತಿದರೆ ನಾನು ಸುಮ್ಮನೆ ಏನೂ ಮಾತಾಡದೆ ಕೇಳಿಸಿಕೊಳ್ಳುತ್ತಿದ್ದೆ.

ಬೆಂಗಳೂರಿಗೆ ಯಾವಾಗ ಈ IT ಕಾಲಿಟ್ಟಿತೋ ಸರ್ವನಾಶ ಆಗೋಯ್ತು ಬೆಂಗಳೂರು. ಮುಂಚೆ ಎಷ್ಟು ಚೆನ್ನಾಗಿತ್ತು. ಎಲ್ಲೆಡೆ ಹಸಿರು ತುಂಬಿಕೊಂಡು, ಜಾಸ್ತಿ ಟ್ರಾಫಿಕ್ ಇಲ್ಲದೆ, ಅನುಕೂಲಕ್ಕೆ ತಕ್ಕ ಹಾಗೆ ಸೈಟ್ಗಳು ಸಿಗುತ್ತಿದ್ದವು, ಮಾಲಿನ್ಯ ಹೆಚ್ಚಿರಲಿಲ್ಲ, ಮನೆ ಬಾಡಿಗೆಗಳು ಕಮ್ಮಿ ಇದ್ದವು, ದಿನನಿತ್ಯದ ಬಳಕೆಯ ವಸ್ತುಗಳು ಕಮ್ಮಿ ಇದ್ದವು, ಎಲ್ಲಕ್ಕಿಂತ ಮುಖ್ಯವಾಗಿ ಕನ್ನಡಕ್ಕೆ ಪ್ರಾಮುಖ್ಯತೆ ಹೆಚ್ಚಿತ್ತು. ಅದೇ ಈ IT ಎಂಬ ಪೆಡಂಭೂತ ಯಾವಾಗ ಬೆಂಗಳೂರಿಗೆ ಕಾಲಿಟ್ಟಿತೋ ಇದ್ದಕ್ಕಿದ್ದ ಹಾಗೆ ಎಲ್ಲ ದರಗಳು ಮುಗಿಲು ಮುಟ್ಟಿದವು. ಓದಲೆಂದು ಇಲ್ಲಿಗೆ ಬಂದ ಹೊರರಾಜ್ಯದ ಜನಗಳು ಇಲ್ಲೇ ಕೆಲಸ ಸಂಪಾದಿಸಿ ಇಲ್ಲೇ ಸೆಟಲ್ ಆದರು.. ಬರೀ ಸೆಟಲ್ ಆದರೆ ಪರವಾಗಿಲ್ಲ....ಕನ್ನಡ ಕಲಿಯದೇ ತಮ್ಮ ಭಾಷೆಯಲ್ಲೇ ವ್ಯವಹರಿಸುತ್ತಿದ್ದಾರೆ...

ಸಾಫ್ಟ್ವೇರ್ ಇಂಜಿನಿಯರ್ ಗಳಿಗೇನು ಕಡಿಮೆ,ಚೆನ್ನಾಗಿ ಸಂಪಾದಿಸುತ್ತಾರೆ ಎಷ್ಟೇ ದರ ಏರಿದರು ಕೊಂಡುಕೊಳ್ಳುತ್ತಾರೆ ಎಂದುಕೊಂಡು ಎಲ್ಲದರ ದರಗಳು ಹೆಚ್ಚಾದವು. ಬೆಂಗಳೂರಿನಲ್ಲಿ ಸೈಟ್ ಗಳೇ ಇಲ್ಲದಾದವು...ಮರಗಳು ಮಾಯವಾದವು, ಮಾಲಿನ್ಯ ಹೆಚ್ಚಾಯಿತು, ಬೆಂಗಳೂರಿನ ವಿಸ್ತೀರ್ಣ ಹೆಚ್ಚಾಯಿತು, ಎರಡು ಮೂರು ಸಾವಿರ ಇದ್ದ ಮನೆ ಬಾಡಿಗೆಗಳು ಹತ್ತು ಹನ್ನೆರೆಡು ಸಾವಿರ ದಾಟಿದವು... BE ಬಿಟ್ಟು ಬೇರೆ ಓದಿದವರಿಗೆ ಬೆಲೆ ಇಲ್ಲದಾಯಿತು, ಬೇರೆ ಓದು ಓದಿದವರಿಗೆ ಹೆಣ್ಣು ಕೊಡಲು ಹಿಂಜರಿಯಲು ಶುರುವಾಯಿತು.... ಮಧ್ಯಮ ವರ್ಗ ಮತ್ತು ಬಡ ಕುಟುಂಬದವರು ಜೀವನ ನಡೆಸುವುದು ದುಸ್ತರವಾಯಿತು.... ಸ್ವಲ್ಪ ದಿವಸ Recession ಬಂದು ಸಾಫ್ಟ್ವೇರ್ ಇಂಜಿನಿಯರ್ ಗಳ ದುರಹಂಕಾರ ಕಮ್ಮಿ ಆಗಿತ್ತು... ಆದರೆ ಮತ್ತೆ ಯಾವಾಗ ಸರಿ ಹೋಯಿತೋ ಇವರು ಮೆರೆಯುವುದು ಜಾಸ್ತಿ ಆಯಿತು.

ಅರ್ಜುನ್ ನಿಮಗೆ ಗೊತ್ತಾ ಮಲೆನಾಡಿನ ಕಡೆ ಹುಡುಗರು ಪಾಪ ಹುಡುಗಿಯರು ಇವರುಗಳನ್ನು ಒಪ್ಪದೇ ಕೊನೆಗೆ ಯಾವುದೋ ಅನಾಥಾಶ್ರಮದ ಹುಡುಗಿಯರನ್ನು ಮದುವೆ ಆಗುತ್ತಿದ್ದಾರೆ, ಇಲ್ಲವ ಆಜನ್ಮ ಬ್ರಹ್ಮಚಾರಿಗಳಾಗಿ ಇರುತ್ತಿದ್ದಾರೆ. ಮೂವತ್ತು ಮೂವತ್ತೈದು ಕಳೆದರೂ ಮದುವೆಗಳು ಆಗುತ್ತಿಲ್ಲ... ಏಕೆಂದರೆ ಹುಡುಗಿಯರು ತಾವು ಮದುವೆ ಆಗುವ ಹುಡುಗ ಸಾಫ್ಟ್ವೇರ್ ಇಂಜಿನಿಯರ್ ಆಗಿರಬೇಕು, ತಿಂಗಳಿಗೆ ಐವತ್ತು ಸಾವಿರ ಸಂಪಾದಿಸಬೇಕು ಎಂದು ಕೇಳುತ್ತಾರೆ. ಅವರ ಅಪ್ಪ ಅಮ್ಮಂದಿರು ಹೀಗೆ ಹೇಳಿದ್ದರೆ ಇವರೆಲ್ಲ ಹುಟ್ಟುತ್ತಲೇ ಇರಲಿಲ್ಲ ಎಂಬ ವಿಷಯ ಇವರ ತಲೆಗಳಿಗೆ ಹೋಗುವುದೇ ಇಲ್ಲ.

ನನಗೆ ಎಷ್ಟು ಕೋಪ ಬರುತ್ತೆ ಎಂದರೆ, ನಾನು ಬಹಳಷ್ಟು ಸಲ ದೇವರಲ್ಲಿ ಬೇಡಿಕೊಂಡಿದ್ದೇನೆ... ಈ ಬಾರಿ Recession ಬಂದರೆ ಹತ್ತು ವರ್ಷ ಸರಿ ಹೋಗಬಾರದು. ಆಗ ಈ ಸಾಫ್ಟ್ವೇರ್ ಇಂಜಿನಿಯರ್ ಗಳಿಗೆ ಬುದ್ಧಿ ಬರುತ್ತದೆ ಎಂದು ಒಂದೇ ಉಸಿರಿನಲ್ಲಿ ಹೇಳಿ ಸುಮ್ಮನಾದಳು....

ನಾನು ಸಮರ್ಥಿಸಿಕೊಳ್ಳಲು ವಿಫಲನಾಗಿದ್ದೆ.... ಏಕೆಂದರೆ ಅವಳು ಹೇಳಿದ್ದರಲ್ಲಿ ಎಳ್ಳಷ್ಟೂ ತಪ್ಪಿರಲಿಲ್ಲ... ಅವಳು ವಾಸ್ತವವನ್ನೇ ಮಾತಾಡಿದ್ದಳು... ಇರಲಿ ಸುಮ್ಮನೆ ಪರೀಕ್ಷಿಸೋಣ ಎಂದು... ಒಂದು ವೇಳೆ ನಿಮ್ಮನ್ನು ಮದುವೆ ಆಗುವ ಹುಡುಗ ಸಾಫ್ಟ್ವೇರ್ ಇಂಜಿನಿಯರ್ ಆಗಿದ್ದರೆ ಏನು ಮಾಡುತ್ತೀರಿ ಎಂದು ಕೇಳಿದೆ.

ಅದಕ್ಕವಳು....ಖಂಡಿತ ನಾನು ಒಬ್ಬ ಸಾಫ್ಟ್ವೇರ್ ಇಂಜಿನಿಯರ್ ಹುಡುಗನನ್ನು ಮದುವೆ ಆಗುವುದಿಲ್ಲ... ಸರ್ಕಾರಿ ಕೆಲಸ ಮಾಡುವ ಒಬ್ಬ ಗುಮಾಸ್ತನನ್ನು ಬೇಕಾದರೆ ಮದುವೆ ಆಗಿಬಿಡುತ್ತೇನೆ ಆದರೆ ಸಾಫ್ಟ್ವೇರ್ ಇಂಜಿನಿಯರ್ ನನ್ನು ಮಾತ್ರ ಮದುವೆ ಆಗುವುದಿಲ್ಲ ಎಂದು ಖಡಾಖಂಡಿತವಾಗಿ ಹೇಳಿದಳು...

ನಾನು ಮನಸಿನಲ್ಲೇ ಓಹೋ ಹಾಗಿದ್ದರೆ ಯಾವುದಾದರೂ ಸರ್ಕಾರಿ ಕಛೇರಿಯಲ್ಲಿ ಕೆಲಸ ಹುಡುಕಬೇಕು ಎಂದುಕೊಂಡು ಸುಮ್ಮನೆ ನಕ್ಕೆ.  ಜಾನಕಿ ಅವರೇ ದಯವಿಟ್ಟು ಇನ್ನು ಆ ವಿಷಯ ಬಿಟ್ಟು ಮಾಮೂಲಿ ವಿಷಯ ಮಾತಾಡೋಣವೇ.... ನೀವು ಬೈದಿರುವ ಬೈಗುಳದಿಂದ ಸುಧಾರಿಸಿಕೊಳ್ಳಲು ನನಗೆ ಕನಿಷ್ಠ ಪಕ್ಷ ಎಂದರೂ ಎರಡು ವಾರ ಬೇಕಾಗುತ್ತದೆ ಎಂದಿದ್ದಕ್ಕೆ ಅವಳೂ ನಕ್ಕು ಸರಿ ಸರಿ ಎಂದು, ನನ್ನ ವಿಷಯ, ನಮ್ಮ ಕುಟುಂಬದ ವಿಷಯ ನನ್ನ ಹವ್ಯಾಸಗಳು, ಸ್ನೇಹಿತರು ಎಲ್ಲವೂ ಕೇಳಿ ತಿಳಿದುಕೊಂಡಳು.

ನಾವು ಸಮಯದ ಪರಿವೇ ಇಲ್ಲದೆ ಮಾತಾಡುತ್ತಿದ್ದೆವು... ಅಷ್ಟರಲ್ಲಿ ಆಚೆ ಹೋಗಿದ್ದ ಸ್ನೇಹಿತರು ಬಂದು ನಾನು ಜಾನಕಿ ಜೊತೆ ಮಾತಾಡುತ್ತಿರುವುದು ನೋಡಿ ಒಬ್ಬೊಬ್ಬರೂ ಹಲ್ಲು ಮಸೆಯುತ್ತಿದ್ದರು, ಅವರ ಹೊಟ್ಟೆಯಲ್ಲಿ ಹೊತ್ತಿದ್ದ ಕಿಚ್ಚಿನ ವಾಸನೆ ನನ್ನ ಮೂಗಿಗೆ ಬಡಿದು, ಇನ್ನು ಹೆಚ್ಚು ಹೊತ್ತು ಇಲ್ಲೇ ಇದ್ದಾರೆ ಆ ಕಿಚ್ಚಿನಲ್ಲೇ ನನ್ನನ್ನು ಸುಟ್ಟು ಹಾಕುತ್ತಾರೆ ಎಂದು ಗೊತ್ತಾಗಿ... ಅಲ್ಲಿಂದ ಹೊರಡೋಣ ಎಂದುಕೊಂಡೆ.... ಹೊರಡುವ ಮುನ್ನ ಜಾನಕಿಯ ಮೊಬೈಲ್ ನಂಬರ್ ಕೇಳೋಣ ಎಂದುಕೊಂಡೆ... ಆದರೆ ಇಷ್ಟೆಲ್ಲಾ ಬೈದ ಮೇಲೆ ಇವಳು ನನಗೆ ಸಿಗುತ್ತಾಳ.... ಸುಮ್ಮನೆ ಮೊಬೈಲ್ ನಂಬರ್ ತೆಗೆದುಕೊಂಡು ಏನು ಪ್ರಯೋಜನ ಎಂದುಕೊಳ್ಳುತ್ತಿದ್ದೆ....

ಅಷ್ಟರಲ್ಲಿ ಅವಳೇ, ಅರ್ಜುನ್ ನಿಮ್ಮ ಮೊಬೈಲ್ ನಂಬರ್ ಕೊಡಿ.... ಬೆಂಗಳೂರಿಗೆ ಬಂದ ಮೇಲೆ ಮತ್ತೆ ಯಾವಾಗಲಾದರೂ ಬೈಯ್ಯಬೇಕೆಂದರೆ ಕರೆಯುತ್ತೇನೆ... ಏಕೆಂದರೆ ಬೇರೆ ಯಾರಾದರು ಆಗಿದ್ದರೆ ಇಷ್ಟು ಹೊತ್ತಿಗೆ ನನ್ನನ್ನು ಹೊಡೆದು ಬಿಡುತ್ತಿದ್ದರು... ಆದರೆ ನೀವು ಎಷ್ಟೇ ಬೈದರು ಸುಮ್ಮನಿದ್ದರಲ್ಲ ಎಂದು ನಕ್ಕಳು...

ಆಹಾ.... ರೊಟ್ಟಿ ಜಾರಿ ತುಪ್ಪಕ್ಕೆ ಬಿದ್ದಂತಾಯಿತು ಎಂದುಕೊಂಡು ಇಬ್ಬರೂ ಪರಸ್ಪರ ನಂಬರ್ ಬದಲಾಯಿಸಿಕೊಂಡು ಹೊರಡುವ ಹೊತ್ತಿಗೆ ನಿತಿನ್ ಮತ್ತು ಅವನ ಪತ್ನಿ ಅಲ್ಲಿಗೆ ಬಂದು ಎನ್ರಪ್ಪ.... ಮದುವೆ ಆಗಿರುವುದು ನಮ್ಮಿಬ್ಬರಿಗೋ? ನಿಮ್ಮಿಬ್ಬರಿಗೋ? ಆ ಪಾಟಿ ಮಾತಾಡುತ್ತಿದ್ದೀರಿ ಎಂದು ರೇಗಿಸಿದರು. 

Rating
No votes yet