ಅನ್ವೇಷಣೆ ಭಾಗ ೬
ಪೋಲಿಸ್ ಸ್ಟೇಶನ್ ಗೆ ಹೋಗಿ ಬಂದು ಒಂದು ವಾರ ಆಗಿತ್ತು. ಜಾನಕಿ ಕಾಣೆಯಾದಾಗಿನಿಂದ ಆಫೀಸಿಗೆ ಹೋಗಿರಲಿಲ್ಲ. ಇನ್ನೂ ಮನೆಯಲ್ಲೇ ಇದ್ದರೆ ಜಾನಕಿಯ ನೆನಪುಗಳು ಕಾಡುತ್ತಲೇ ಇರುತ್ತದೆ. ಆಫೀಸಿಗೆ ಹೋದರೆ ಸ್ವಲ್ಪ ವ್ಯತ್ಯಾಸ ಇರುತ್ತದೆ ಎಂದು ನಿರ್ಧರಿಸಿ ಆಫೀಸಿಗೆ ಬಂದಿದ್ದೆ. ಬಂದು ಒಂದು ಗಂಟೆ ಆಗಿತ್ತು ಅಷ್ಟೇ, ಅಷ್ಟರಲ್ಲಿ ಪೋಲಿಸ್ ಇನ್ಸ್ಪೆಕ್ಟರ್ ಕರೆ ಮಾಡಿದರು. ಅವರು ಹೇಳಿದ ವಿಷಯ ಕೇಳಿ ಕಣ್ಣು ಕತ್ತಲಾಯಿತು. ಮತ್ತೆ ಕಣ್ಣು ಬಿಟ್ಟಾಗ ಅಲ್ಲೇ ಸೋಫಾದ ಮೇಲೆ ಮಲಗಿದ್ದೆ. ಸುತ್ತಲೂ ಟೀಮ್ ಸದಸ್ಯರು ನಿಂತಿದ್ದರು. ಯಾಕೆ ಅರ್ಜುನ್ ಏನಾಯ್ತು?
ನನಗೆ ಏನೂ ಮಾತಾಡಲು ಆಗದೆ, ನಾನು ಮತ್ತೆ ಬರುತ್ತೇನೆ ಎಂದು ಹೇಳಿ ಮನೆಯ ಕಡೆ ಹೊರಟೆ. ಮನೆಗೆ ಬಂದವನೇ ಅಪ್ಪ ನನ್ನ ಜೊತೆ ಬನ್ನಿ ಎಂದು ಅಪ್ಪನನ್ನು ಕರೆದುಕೊಂಡು ಸ್ಟೇಷನ್ ಕಡೆ ಹೊರಟೆ. ಮಾರ್ಗಮಧ್ಯದಲ್ಲಿ ಅಪ್ಪ ಕೇಳಿದರು... ಯಾಕೋ ಅರ್ಜುನ್ ಏನಾಯ್ತೋ ಇದ್ದಕ್ಕಿದ್ದಂತೆ ಆಫೀಸಿನಿಂದ ಬಂದು ಈಗ ಪೋಲಿಸ್ ಸ್ಟೇಶನ್ ಗೆ ಕರೆದೊಯ್ಯುತ್ತಿದ್ದೀಯ? ಏನು ವಿಷಯ? ಇನ್ಸ್ಪೆಕ್ಟರ್ ಏನಾದರೂ ಫೋನ್ ಮಾಡಿದ್ದರ?
ಅಪ್ಪನ ಪ್ರಶ್ನೆಗಳಿಗೆ ಉತ್ತರಿಸುವ ಧೈರ್ಯ ಸಾಲಲಿಲ್ಲ...ಅಪ್ಪ ಅಲ್ಲೇ ಹೋಗೋಣ ಬನ್ನಿ ಎಂದು ಸೀದಾ ಸ್ಟೇಷನ್ ಗೆ ಬಂದಾಗ, ಇನ್ಸ್ಪೆಕ್ಟರ್ ನಮಗೇ ಕಾಯುತ್ತಾ ನಿಂತಿದ್ದರು. ನಮ್ಮನ್ನು ಕಂಡ ಕೂಡಲೇ ಅರ್ಜುನ್ ಯಾಕೆ ಫೋನ್ ಕಟ್ ಮಾಡಿಬಿಟ್ಟಿರಿ? ಬನ್ನಿ ಎಂದು ಕೂಡಿಸಿದರು.
ಅಪ್ಪ ಕೂಡಲೇ, ಯಾಕೆ ಸರ್ ಏನಾಯ್ತು? ಜಾನಕಿಯ ವಿಷಯ ಏನಾದರೂ ತಿಳಿಯಿತ?
ನೋಡಿ, ನಿಮಗೆ ಈ ವಿಷಯ ಹೇಗೆ ಹೇಳಬೇಕೋ ತಿಳಿಯುತ್ತಿಲ್ಲ. ನೀವು ಸ್ವಲ್ಪ ಧೈರ್ಯ ತಂದುಕೊಳ್ಳಿ. ನೆನ್ನೆ ರಾತ್ರಿ ಊರ ಹೊರಗಿರುವ ಹೈವೇ ಪಕ್ಕದ ಪೊದೆಯೊಂದರಲ್ಲಿ ಅರ್ಧಂಬರ್ಧ ಸುಟ್ಟಿರುವ ಹೆಣ್ಣಿನ ಶವ ಒಂದು ದೊರೆತಿದೆ.
ಇನ್ಸ್ಪೆಕ್ಟರ್ ಶವ ಎಂದು ಹೇಳುತ್ತಿದ್ದ ಹಾಗೆ ನನ್ನ ಗುಂಡಿಗೆ ಜೋರಾಗಿ ಹೊಡೆದುಕೊಳ್ಳಲು ಶುರುವಾಯಿತು. ನನಗೆ ಅರಿವಿಲ್ಲದಂತೆ ಜೋರಾಗಿ ಇಲ್ಲ ಅದು ಜಾನಕಿ ಅಲ್ಲ, ಅದು ಬೇರೆ ಯಾರದೋ ಆಗಿರುತ್ತದೆ... ಇಲ್ಲ ಇಲ್ಲ ಎಂದು ಕೂಗಿಕೊಂಡೆ. ತಕ್ಷಣ ಅಪ್ಪ ನನ್ನ ಕೈಯನ್ನು ಹಿಡಿದು ಅರ್ಜುನ್... ಅರ್ಜುನ್ ಸಮಾಧಾನ ಮಾಡಿಕೋ.... ಮೊದಲು ಅವರು ಹೇಳೋದನ್ನು ಪೂರ್ತಿಯಾಗಿ ಕೇಳೋಣ ಕೂತ್ಕೋ ಎಂದು ಬಲವಂತವಾಗಿ ನನ್ನ ಕೈ ಹಿಡಿದು ಕೂಡಿಸಿದರು.
ಅರ್ಜುನ್.... ಅದು ಜಾನಕಿಯದ್ದೋ ಇಲ್ಲವೋ ಎಂದು ನಮಗೆ ಗೊತ್ತಿಲ್ಲ. ಈ ಒಂದು ತಿಂಗಳಲ್ಲಿ ಯಾವುದೂ ಹುಡುಗಿ ನಾಪತ್ತೆ ಆಗಿರುವ ಪ್ರಕರಣ ದಾಖಲಾಗಿಲ್ಲ. ಕಾಣೆಯಾಗಿರುವುದು ಜಾನಕಿ ಮಾತ್ರ. ಅಷ್ಟಕ್ಕೇ ಅದು ಜಾನಕಿ ಎಂದು ಹೇಳಲು ಸಾಧ್ಯವಿಲ್ಲ. ಜಾನಕಿ ಅಷ್ಟೇ ಅಲ್ಲ ಅದು ಯಾರದು ಎಂದು ಗುರುತಿಸಲು ಸಾಧ್ಯವಾಗದ ಹಾಗೆ ಮುಖ ಪೂರ್ತಿಯಾಗಿ ಸುಟ್ಟು ಹೋಗಿದೆ. ಇಂಥಹ ಸಂದರ್ಭಗಳಲ್ಲಿ ಕಂಟ್ರೋಲ್ ರೂಂ ನವರು ಎಲ್ಲಾ ಸ್ಟೇಷನ್ ಗೂ ಮೆಸೇಜ್ ಕಳಿಸುತ್ತಾರೆ. ಆಯಾ ವ್ಯಾಪ್ತಿಯಲ್ಲಿ ಯಾವುದಾದರೂ ನಾಪತ್ತೆ ಪ್ರಕರಣ ದಾಖಲಾಗಿದ್ದಾರೆ ಪತ್ತೆ ಹಚ್ಚಲು ಸುಲಭ ಎಂದು.
ನಮ್ಮ ಸ್ಟೇಷನ್ ನಲ್ಲಿ ದಾಖಲಾಗಿರುವುದು ಜಾನಕಿಯ ಕೇಸ್ ಮಾತ್ರ. ಹಾಗಾಗಿ ನಾನು ನಿಮ್ಮನ್ನು ಬರಲು ಹೇಳಿದೆ. ನೀವು ಒಮ್ಮೆ ಬಂದು ಅವರ ಬಟ್ಟೆಗಳನ್ನು ಪತ್ತೆ ಹಚ್ಚಿದರೆ ನಮ್ಮ ಕೆಲಸ ಸುಲಭ ಆಗುತ್ತದೆ. DNA ಪರೀಕ್ಷೆ ಎಲ್ಲಾ ನಂತರದಲ್ಲಿ ಮಾಡುತ್ತೇವೆ, ಅದೆಲ್ಲಾ ಆದ ಮೇಲಷ್ಟೇ ಖಚಿತವಾಗಿ ಯಾರ ಶವ ಎಂದು ಹೇಳಬಹುದು. ನಮ್ಮ ಮೊದಲ ಹಂತದ ಪರೀಕ್ಷೆಗಾಗಿ ಈ ಬಟ್ಟೆ ಗುರುತಿಸುವ ಕೆಲಸ ಅಷ್ಟೇ. ಹೋಗೋಣವೇ?
ಸರ್....ಅಂದು ಬೆಳಿಗ್ಗೆ ಜಾನಕಿ ಯಾವ ಬಟ್ಟೆ ಹಾಕಿದ್ದಳು ಎಂದು ನಮಗೆ ಗೊತ್ತಿಲ್ಲ, ಬಹುಷಃ ಈ ವಿಷಯದಲ್ಲಿ ಜಾನಕಿಯ ಅಪ್ಪ ಅಮ್ಮನ ಸಹಾಯ ತೆಗೆದುಕೊಂಡರೆ ಔಚಿತ್ಯ ಎನಿಸುತ್ತದೆ ಎಂದು ಅಪ್ಪ ಸಲಹೆ ನೀಡಿದರು.
ಹೌದು ನಿಮ್ಮ ಸಲಹೆ ಸರಿ. ಆದರೆ ಈ ವಿಷಯ ಜಾನಕಿಯ ಮನೆಯವರಿಗೆ ಹೇಗೆ ತಿಳಿಸುವುದು ಎಂದು ತಿಳಿಯದೆ ನಿಮ್ಮನ್ನು ಕರೆಸಿದೆ. ನೀವೇ ಅವರಿಗೆ ಫೋನ್ ಮಾಡಿ ವಿಕ್ಟೋರಿಯಾ ಆಸ್ಪತ್ರೆಗೆ ಕರೆದುಕೊಂಡು ಬನ್ನಿ. ನಾನು ಅಲ್ಲಿಗೆ ಹೋಗಿರುತ್ತೇನೆ. ನೀವು ಬಂದು ಗುರುತಿಸಿದ ಮೇಲೆ ಪೋಸ್ಟ್ ಮಾರ್ಟಂ ಗೆ ಕಳುಹಿಸುತ್ತೇನೆ. ದಯವಿಟ್ಟು ಬೇಗ ಕರೆದುಕೊಂಡು ಬನ್ನಿ. ಏಕೆಂದರೆ ಈಗಾಗಲೇ ಪ್ರಾಣ ಹೋಗಿ ಮೂರು ದಿನದ ಮೇಲೆ ಆಗಿದೆ.
ಎಷ್ಟೇ Positive ಆಗಿ ಯೋಚಿಸಬೇಕೆಂದರೂ ಬರೀ ಕೆಟ್ಟ ಯೋಚನೆಗಳೇ ಬರುತ್ತಿದ್ದವು. ಅದು ಜಾನಕಿಯ ಶವ ಆಗಿರಬಾರದು ಆಗಿರಬಾರದು ಎಂದು ಅದೆಷ್ಟು ಸಲ ದೇವರಲ್ಲಿ ಬೇಡಿದ್ದೇನೋ ಗೊತ್ತಿಲ್ಲ. ಜಾನಕಿಯ ತಂದೆಯನ್ನು ಕರೆದುಕೊಂಡು ವಿಕ್ಟೋರಿಯ ಆಸ್ಪತ್ರೆ ಬಳಿ ಬಂದು ಒಳಗೆ ಹೋಗಲು ಧೈರ್ಯ ಸಾಲದೇ ಅಪ್ಪ ನೀವು ಅವರು ಒಳಗೆ ಹೋಗಿ ಬನ್ನಿ ನಾನು ಇಲ್ಲೇ ಇರುತ್ತೇನೆ ಎಂದು ಗೇಟ್ ಬಳಿ ನಿಂತು ಕೊಂಡೆ.
ಅಪ್ಪ ಮತ್ತು ಜಾನಕಿಯ ತಂದೆ ಒಳಗೆ ಸುಮಾರು ಎರಡು ಗಂಟೆ ಆಗಿತ್ತು ಇನ್ನೂ ಅವರ ಸುಳಿವು ಇರಲಿಲ್ಲ, ಒಳಗೆ ಹೋಗಲು ಧೈರ್ಯವೂ ಸಾಲುತ್ತಿರಲಿಲ್ಲ. ಅಲ್ಲಿಯೇ ಶತಪಥ ಹಾಕುತ್ತಿದ್ದಾಗ ಒಳಗಿನಿಂದ ಅಪ್ಪ ಒಬ್ಬರೇ ಹೊರಬರುತ್ತಿದ್ದರು. ಕೂಡಲೇ ಓಡಿ ಅವರ ಬಳಿ ಹೋಗಿ ಅಪ್ಪ ಅದು ಜಾನಕಿಯ ದೇಹ ಅಲ್ಲ ಅಲ್ಲವೇನಪ್ಪ. ಅದು ಬೇರೆ ಯಾರದ್ದೋ ಶವ ತಾನೇ. ನಾನು ಮುಂಚೆಯೇ ಹೇಳಿರಲಿಲ್ಲವ... ಅದು ಖಂಡಿತ ಜಾನಕಿ ಆಗಿರಲು ಸಾಧ್ಯವಿಲ್ಲ ಎಂದು....... ಅದು ಸರಿ ಜಾನಕಿಯ ಅಪ್ಪ ಎಲ್ಲಿ?
ಅರ್ಜುನ್.... ಬಾ ಕೂತ್ಕೋ ಎಂದು ಅಲ್ಲೇ ಪಾರ್ಕಿನಲ್ಲಿದ್ದ ಕಲ್ಲಿನ ಬೆಂಚಿನ ಮೇಲೆ ನನ್ನನ್ನು ಕೂಡಲು ಹೇಳಿ ನನ್ನ ಹೆಗಲ ಮೇಲೆ ಕೈ ಹಾಕಿ..... ಅರ್ಜುನ್ ಅದು ಜಾನಕಿಯ ಬಟ್ಟೆಯೇ ಎಂದು ಅವರಪ್ಪ ಹೇಳಿದರು ಕಣೋ. ಅಷ್ಟೇ ಅಲ್ಲದೆ ಅವಳ ಬಲಗೈಯ ಮುಂಗೈ ಮೇಲೆ ಇರುವ ಮಚ್ಚೆ ಸಹ ಅದು ಜಾನಕಿಯದ್ದೆ ಎಂದು ಹೇಳಿದರು ಕಣೋ.... ಆದರೂ, DNA ರಿಪೋರ್ಟ್ ಬಂದ ಮೇಲೆ ಅದು ನಿಖರವಾಗಿ ತಿಳಿಯುವುದು ಕಣೋ. ನಾಡಿದ್ದು DNA ರಿಪೋರ್ಟ್ ಬರುತ್ತೆ ಎಂದು ಹೇಳಿದ್ದಾರೆ. ಪಾಪ ಜಾನಕಿಯ ತಂದೆ ಆ ನೋವನ್ನು ತಾಳಲಾಗದೆ ಅಲ್ಲೇ ದುಃಖಿಸುತ್ತಾ ಕೂತಿದ್ದಾರೆ.
ನಾನು ಎಷ್ಟೇ ಬಲವಂತ ಮಾಡಿದರೂ ಅವರು ಅಲ್ಲಿಂದ ಕದಲುತ್ತಿಲ್ಲ. ಜಾನಕಿಯ ತಾಯಿಗೆ ಹೇಗೆ ಈ ವಿಷಯ ತಿಳಿಸುವುದು ಎಂದು ಗೋಳಾಡುತ್ತಿದ್ದಾರೆ, ಅವರ ಸಂಕಟ ನೋಡಲು ನನ್ನ ಕೈಲಾಗದೆ ಆಚೆ ಬಂದೆ.
ಅಪ್ಪ.... ಜಾನಕಿಗೆ ಏನೂ ಆಗಿಲ್ಲ, ಅದು ೧೦೦% ಜಾನಕಿ ಆಗಿರುವುದಿಲ್ಲ. ಬೇಕಾದರೆ DNA ಬಂದ ಮೇಲೆ ನಿಮಗೆ ಗೊತ್ತಾಗುತ್ತದೆ. ಈ ಪೊಲೀಸರು ಜಾನಕಿಯನ್ನು ಹುಡುಕಲು ಸಾಧ್ಯವಾಗದೆ ಯಾವುದೋ ಒಂದು ಶವವನ್ನು ಜಾನಕಿಯದ್ದು ಎಂದು ಹೇಳುತ್ತಿದ್ದಾರೆ. ನೀವು ಇರಿ ನಾನು ಜಾನಕಿಯ ತಂದೆಯನ್ನು ನಾನು ಕರೆದುಕೊಂಡು ಬರುತ್ತೇನೆ ಎಂದು ಒಳಗಡೆ ಹೋಗಿ ಜಾನಕಿಯ ತಂದೆಗೆ ಸಮಾಧಾನ ಮಾಡಿ ಕರೆದುಕೊಂಡು ಬಂದೆ.
Comments
ಉ: ಅನ್ವೇಷಣೆ ಭಾಗ ೬
ಹ್ಮ್!! ಈಗ ಪ್ರತಿಕ್ರಿಯಿಸುವಂತಿಲ್ಲ. ಮುಂದಿನ ಕಂತು ಬರಲಿ!!