" ಅಪರಿಚಿತ"(ಕಥೆ) ಭಾಗ 4

" ಅಪರಿಚಿತ"(ಕಥೆ) ಭಾಗ 4

 


      ರಾಮಾಂಜನೇಯ ಎಫ್ಐಆರ್ ಬರೆದು ಸಬ್ ಇನಸ್ಪೆಕ್ಟರ್ರ ಸಹಿ ಪಡೆದು ದೂರಿನ ಪ್ರತಿಮಾಡಿ ಎಸ್ಡಿಎಂ ನ್ಯಾಯಲಯಕ್ಕೆ ಮತ್ತು ಮೇಲಾಧಿಕಾರಿಗಳಿಗೆ ರವಾನಿಸಲು ಇಟ್ಟುಕೊಂಡು, ಎಫ್ಐಆರ್ ನ ಒಂದು ಪ್ರತಿಗೆ ಡೊಕೆಟ್ ಶೀಟ್ ಹೊದಿಸಿ ಅದರ ಮೇಲೆ ಪ್ರಕರಣದ ವಿವರಗಳನ್ನು ಬರೆದು ಒಂದು ಟ್ಯಾಗ್ನಿಂದ ಕಟ್ಟಿ ಅದರಲ್ಲಿ ಕೆಲವು ಬಿಳಿಹಾಳೆ ಮತ್ತು ಕಾರ್ಬನ್ ಪೇಪರ್ ಗಳನ್ನು ಇಟ್ಟು ಅದನ್ನು ಸಬ್ ಇನಸ್ಪೆಕ್ಟರ್ ರವರ ಟೇಬಲ್ ಮೇಲೆ ಇರಿಸಿದ. 
    
     ' ರಾಮಾಂಜನಿ ನಾನು ಹ್ಯಾಂಗೂ ಕುಮರಿ ಕಡೆಗೆ ಹೊಂಟೇನಿ, ಅವೊಂದೆರಡು ಅರ್ಜಿ ಇದ್ದವಲ್ಲ ಒಂದು ಚುರ್ಚಗುಂಡಿ ಲ್ಯಾಂಡ್ ಡಿಸ್ಪ್ಯೂಟ್ , ಹಂಗ ಸುಳಗೋಡು ನೇಮಯ್ಯ ತನ್ನ ಮನ್ಯಾಗ ರಾತ್ರಿ ಎಲ್ಲ ಇಸ್ಪೀಟು ಆಡಸ್ತಾನ ಅಂತ ಒಂದು ಗುಮಾನಿ ಅರ್ಜಿ ಬಂದದ್ವಲ್ಲ ಅವನ್ನೂ ಸಹ ಈ ಫೈಲ್ ಜೊತೆಗೆ ಇಡು, ಸಾಧ್ಯ ಆದರ ಅವುಗಳ ಬಗ್ಗೇನೂ ವಿಚಾರ ಮಾಡ್ಕೊಂಡು ಬರ್ತೇನಿ ' ಎಂದರು ಮಂಜಪ್ಪಗೌಡ.


     ' ಸರ್ ಈ ಕೇಸು ಅಷ್ಟು ಬೇಗ ಮುಗಿಯೋ ತರ ಕಾಣೋದಿಲ್ಲ ಒಳ್ಳೆ ರಗಳೆ ಕೇಸು ಇದ್ದಂಗ ಅದ ' ಎಂದ ರಾಮಾಂಜನಿ.


     ' ಇನ್ಕ್ವೆಸ್ಟ್ ಮುಗದ ಮ್ಯಾಲ ನಂದೇನದನೋ ಕೆಲಸ, ಮುಂದಿನ ಕೆಲಸ ಎಲ್ಲ ಅಲಿ ನೋಡಕೋತಾನ , ಹ್ಯಾಂಗೂ ಚುರ್ಚಗುಂಡಿನೂ ಆ ಕಡೇನ ಅದ ಅಲ್ಲಿಂದಲ್ಲಿಗೂ ಹೋಗಿ ಒಂದು ವಿಸಿಟ್ ಮಾಡಿ ವಿಚಾರಣೆ ಮಾಡ್ಕೊಂಡು ಬರ್ತೇನಿ . ಇನ್ನ ಆ ನೇಮಯ್ಯನ ಮನಿಗೆ ರಾತ್ರೀನ ಹೋಗಬೇಕು ಅರ್ಜಿ ವಿಚಾರ ಖರೆ ಇದ್ದರ ಮಗ ರೆಡ್ ಹ್ಯಾಂಡ್ ಆಗೆ ಸಿಗ್ತಾನ. ಹಂಗ ನೀ ಹೋಗಿ ಒಂದು ಕಾರ್ ನೋಡ್ಕೊಂಡು ಬಾ ' ಎಂದರು ಮಂಜಪ್ಪ ಗೌಡರು.


     ' ಸಾರ್ ನಾನು ಸ್ಟೇಟ್ಮೆಂಟ್ಸ್ ಹಾಕ್ತಾ ಇದೀನಿ ಪರಸಪ್ದ ಇಲ್ಲೆ ಇದ್ದಾನ ಅವನಿಗೆ ಹೋಗಿ ನೋಡ್ಕೊಂಡು ಬಾ ಅಂತೇನಿ ' ಎಂದ ರಾಮಾಂಜನೇಯ.


    ' ಏ ಅವ ಹುಷಾರಿಲ್ಲ ಅಂತ ರಜಾ ರಿಪೋರ್ಟ ಬರದಿಟ್ಟಾನಲ್ಲೊ ನೀನ ಒಂದ್ಹೆಜ್ಜಿ ಹೋಗಿ ಬಾ ' ಎಂದರು ಮಂಜಪ್ಪ ಗೌಡರು.


     ' ಸಾರ್ ಅವಂದೆಂಥಾ ಕಾಯಿಲೆ ಡೆಡ್ ಬಾಡಿ ವಾಚ್ಗೆ ಹೋಗಬೇಕಾಗ್ತದ ಅಂತ ಒಂದು ನೆವಾ, ಆಂಜನೇಯ ಡೆಡ್ ಬಾಡಿ ವಾಚ್ಗೆ ಹೋದ ಇವನ ಕಾಯಿಲೇನೂ ಹೋತು ' ಎಂದು ರಾಮಾಂಜನಿ ಪರಸಪ್ಪನ ಕಾಯಿಲೆ ಕುರಿತು ಲೇವಡಿ ಮಾಡಿದ. 


     ' ಏ ಪರಸಪ್ಪ ಒಂಚೂರು ಬಸ್ ಸ್ಟ್ಯಾಂಡ್ ಕಡಿಗೆ ಹೋಗಿ ಯಾವದರ ಒಂದು ಕಾರು ಗೊತ್ತು ಮಾಡಿಕೊಂಡು ಬಾ ' ಎಂದ ರಾಮಾಂಜನಿ.


     ' ನನ್ಮಗನ ನೀನೂ ನನಗ ಒಂಥರಾ ಆಫೀಸರ್ ಇದ್ಹಂಗ ಇದ್ದೀ ನೋಡು ' ಎಂದು ಗೊಣಗುತ್ತ ಪರಸಪ್ಪ ಹೊರಹೋದವನು ಮರಳಿ ಬಂದು


     ' ಸಾರ್ ! ಮಲ್ಲೇಶಿ , ಡ್ಯಾನಿಯಲ್ ಬೇರೆ ಟ್ರಿಪ್ಗೆ ಬುಕ್ ಆಗ್ಯಾರಂತ ರಫಿಕ್ ಗೆ ಬರೋಕ ಹೇಳೇನಿ ಹಿಂದಿನ ಭಾಡಿಗಿ ಹಣಾ ಕೊಟ್ಟಿಲ್ಲ ಅಂತ ಗೊಣಗಾಡಿದ ' ಎಂದ. ಆತನ ಹಿಂದೆಯೆ ಬಂದ ರಫಿಕ್ ಸಬ್ ಇನಸ್ಪೆಕ್ದರ್ ಕೊಠಡಿಯ ಬಾಗಿಲಲ್ಲಿ ನಿಂತರು ನಮಸ್ಕರಿಸಿದ.


     ' ಏನೋ ರಫಿ ! ಬಾರೋ ಇಲ್ಲೆ ,ಯಾವ ದುಡ್ಡೋ ನಿಂದು ನಾನು ಬಾಕಿ ಇಟಗೊಂಡಿರೋದು ?' ಎಂದರು.


     ' ಸಾರ್ ಈಗೊಂದು ಹದಿನೈದು ದಿನದ ಹಿಂದೆ ಕಾರಿಮಕ್ಕಿ ಕಡಿಗೆ ಹೋದಾಗಿಂದು ' ಎಂದ ರಫಿಕ್.


     ' ಅದು ಬಿಟ್ಟು ಬೇರೆ ಯಾವದರ ಬಾಕಿ ಇದ್ದರ ಹೇಳು ಒಂದನೆ ತಾರೀಕು ಆಗ್ಲಿ ಎಲ್ಲ ಚುಕ್ತಾ ಮಾಡ್ತೀನಿ, ನಮಗೇನು ಸರಕಾರದವ್ರು ಹದ್ನೈದು ದಿವಸಕ್ಕ ಸಂಬಳ ಕೊಡ್ತಾರೇನು ' ಎಂದರು ಮಂಜಪ್ಪ ಗೌಡರು.


     'ಸಾರ್ ನಿಮಗ್ಯಾಕ ಸಾರ್ ಸಂಬಳ ಎಂದ ' ರಫಿಕ್.


     ' ಏನೋ ಹಾಂಗಂದರ ನಮಗೇನು ಆಕಾಶದಿಂದ ದುಡ್ಡು ಉದುರ್ತಾವೇನು, ಏನೋ ಪರಸ ಹಿಂಗ ಅಂತಾನಿವ ' ಎಂದರು ಮಂಜಪ್ಪ ಗೌಡರು.


     ' ಅವ ಹೇಳೋದು ಸರಿ ಅದ ಸರ್ ' ಅಂದ ಪರಸಪ್ಪ.


     ' ಏನೋ ನೀ ಹೇಳೋದು ' ಎಂದರು ಮಂಜಪ್ಪ ಗೌಡ.


     ' ನೀವು ಲೋಕಲ್ ಜನ ಅಂತ ಅವರಿಗೆ ಕೇಸ್ ಹಾಕೋದಿಲ್ಲ ಮರ್ಸಿ ತೋರಸ್ತೀರಿ ಅದಕ ಅವ ಹಂಗ ಮಾತಾಡ್ತಾನ ' ಎಂದ ಪರಸಪ್ಪ.


     ' ಏನ ಸಾರ್ ಯಾವಾಗ ನಮ್ಮನ್ನ ಬಿಟ್ಟೀರಿ ನೀವು ಹೋದ ಮಳಗಾಲದ ಮುಂದ ಒಂದು ಕೇಸ್ ಹಾಕಿದ್ರಲ್ಲ ಮೊನ್ನೆ ಮೊನ್ನೆ ಇನ್ನೂ ಆ ಕೇಸ್ ಮುಗಿಸಿಕೊಂಡು ಬಂದೀನಿ ' ಎಂದ ರಫಿಕ್.


     ' ವರ್ಷಕ್ಕ ಒಂದ್ ಕೇಸು ಸಾಕೇನೋ, ಅದೂ ನೀನು ಭಾಡಿಗೆಗೆ ಬಂದವರ ಜೊತೆ ಜಗಳ ತಕ್ಕೊಂಡು ಬಂದು ಹಾಕಿಸಿ ಕೊಂಡದ್ದು ' ಎಂದ ಪರಸಪ್ಪ.


     ಮಂಜಪ್ಪ ಗೌಡರು ರಫಿಕ್ ಗೆ ಪ್ರಕರಣದ ವಿವರ ತಿಳಿಸಿ ' ವಾಪಸ್ ಬರಲಿಕ್ಕೆ ರಾತ್ರೀನೆ ಆಗತದ ' ಎಂದರು.


     ' ಹಂಗಾರ ನಾನೂ ಸ್ವಲ್ಪ ಇಲ್ಲೆ ಹೋಗಿ ಬರ್ತೀನಿ ಸಾರ್ ' ಎಂದ ರಫಿಕ್.


     ' ಲಗೂನ ಬಾ ಮತ್ತ ಲೇಟ್ ಮಾಡಬ್ಯಾಡ ಮತ್ತ ಹೊಳ್ಳಿ ಬರಲಿಕ್ಕೆ ಲೇಟಾಗ್ತದ ' ಎಂದರು ಮಂಜಪ್ಪ
ಗೌಡ.


     ' ಒಂದ ಹದ್ನೈದು ನಿಮಿಷದಾಗ ಸ್ವಲ್ಪ ಬ್ಲೋ ಚೆಕ್ ಅಪ್ ಮಾಡಿಸಿಕೊಂಡು ಬಂದು ಬಿಡ್ತೀನಿ ' ಎಂದು ರಫಿಕ್ ಹೊರಟು ಹೋದ.


                                                                         ***


     ಅಷ್ಟರಲ್ಲಿ ಸಬ್ ಇನಸ್ಪೆಕ್ಟರ್ ಕೊಠಡಿಯ ಎದುರು ಕಾರೆಮಕ್ಕಿಯ ಮಂಜಪ್ಪ ಕಾಣಿಸಿಕೊಂಡು ನಮಸ್ಕರಿಸಿದ. ತಲೆ ಎತ್ತಿ ನೋಡಿದ ಮಂಜಪ್ಪ ಗೌಡರು


     ' ಬಾ ಮಂಜಪ್ಪ ನನಗೂ ಏನೂ ಕೆಲಸ ಇಲ್ಲ ಅಂತ ಕಾಯ್ತಾ ಇದ್ದೆ, ಅಷ್ಟರಾಗ ನೀ ಬಂದಿ ನೋಡು ಏನ್ ಸಮಾಚಾರ ಹೇಳ್ ನಿನ್ನ ಕಥಿ ' ಎಂದರು.


     ' ಸಾರ್ ಅದು ನಮ್ಮ ಅಣ್ಣ ನಂಜಪ್ಪ ಬ್ಯಾಸಿಗಿ ಬೆಳಿಗೆ ನೀರು ಬಿಡ್ತಾ ಇಲ್ಲ ಅಂವಗ ಹೇಳಿ ಸ್ವಲ್ಪ ನೀರು ಬಿಡಿಸಿ ಕೊಡಬೇಕು ' ಎಂದ.


     ' ಆಯ್ತು ನಾಳೆ ಬಾ ಹೋಗು ಈಗ ಕಳಸೋಕೆ ಜನಾ ಯಾರೂ ಇಲ್ಲ ' ಎಂದ ಮಂಜಪ್ಪಗೌಡರು ಆತನ ದೂರು ಸ್ವೀಕರಿಸಿ ಅದರ ಮೇಲೆ ಸ್ವೀಕೃತಿ ಹಾಕಿ ಆತನ ಕೈಯಲ್ಲಿಯೆ ಕೊಟ್ಟು ' ರೈಟರ್ ಕೈಯಲ್ಲಿ ಕೊಡು 'ಎಂದರು.


     ತಮ್ಮ ಕೋಠಡಿಯಿಂದಲೆ ' ರಾಮಾಂಜನಿ ಆ ಅರ್ಜಿಗೆ ಅಂವಗ ಅಕ್ನಾಲೆಜಮೆಂಟ್ ಕೊಡು ' ಎಂದರು. ರೈಟರ್ ಆ ಅರ್ಜಿಗೆ ರಸೀದಿ ಬರೆದು ಸಬ್ ಇನಸ್ಪೆಕ್ಟರ್ ಕಡೆಗೆ ಸಹಿ ಹಾಕಿಸಿಕೊಂಡು ಬರುವಂತೆ ಕಳಿಸಿ ಕೊಟ್ಟ. ಮಂಜಪ್ಪ ಗೌಡರು ಅದಕ್ಕೆ ರುಜು ಮಾಡಿ ಮರಳಿ ಕಳಿಸಿದರು. ರಾಮಾಂಜಿನಿ ರಸೀದಿಯನ್ನು ಮಂಜಪ್ಪನಿಗೆ ನೀಡಿದ.


     ' ಸಾರ್ ನನಗ ರಸೀದಿ ಬ್ಯಾಡ ಒಬ್ಬರು ಪೋಲೀಸಿನವರನ್ನ ಕಳಿಸಿ ಕೊಡಿ ' ಎಂದ.


     ' ಬಿದ್ರಕಾನ್ ಕಾಡನ್ಯಾಗ ಯಾರೋ ಒಬ್ಬಂವ ಮರಕ್ಕ ನೇಣ್ಹಾಕ್ಕೊಂಡು ಸತ್ತ್ತಾನ , ಸಾಹೇಬ್ರು ಆ ಕೇಸಿನ ಬಗ್ಗೆ ಹೊಂಟಾರ, ಈಗ ಜನ ಯಾರೂ ಇಲ್ಲ ನಾಳೆ ಬೆಳ್ಳಗ್ಗೇನ ಒಬ್ಬರು ಪೋಲಿಸಿನವ್ರನ್ನ ನಿಮ್ಮೂರಿಗೆ ಕಳಿಸಿ ಕೊಡ್ತೀವಿ ' ಎಂದ ರಾಮಾಂಜನೇಯ.


     ತಮ್ಮ ಕೊಠಡಿಯಿಂದ ಹೊರಬಂದ ಮಂಜಪ್ಪ ಗೌಡರು ' ರಾಮಾಂಜನಿ ನೈಟ್ ಡ್ಯೂಟಿ ದಫೇದಾರ ಗಂಗಾಧರಯ್ಯಗ ಡೈರಿ ಚಾರ್ಜ ಬರದೇನಿ, ಅಂವಗ ಸ್ವಲ್ಪ ಬಂದು ಇರಲಿಕ್ಕೆ ಹೇಳು ' ಎಂದರು. ಅದೇ ಸಮಯಕ್ಕೆ ಠಾಣೆಯ ಒಳ ಬಂದ ಗಂಗಾಧರಯ್ಯ ಪಿಎಸ್ಐ ಹೇಳಿದ್ದನ್ನು ಕೇಳಿಸಿಕೊಂಡರು.


     ಮಂಜಪ್ಪ ಇನ್ನೂ ನಿಂತುದನ್ನು ಕಂಡ ಪಿಎಸ್ಐ ಮಂಜಪ್ಪ ಗೌಡರು ' ಏನೋ ರಾಮಾಂಜನಿ ಮಂಜಪ್ಪ ಇನ್ನೂ ನಿಂತಾನಲ್ಲೊ ' ಎಂದರು.


     ' ಏನಿಲ್ಲ ಸಾರ್ ಅಂವಗ ಇವತ್ತ ಜನಾ ಕಳಸ ಬೇಕಂತ ಅದಕ ನಿಂತಾನ ' ಎಂದ ರಾಮಾಂಜನಿ.


     ' ಏ ರಾಮಾಂಜನಿ ಪರಸಪ್ಪಗ ಒಂದ ಹೆಜ್ಜಿ ಹೋಗಿ ಬಾ ಅಂತ ಹೇಳು ' ಎಂದರು ಗಂಗಾಧರ.


     ' ಅಯ್ಯೋ ಅಂವ ಹೋಗೊ ಹಾಗಿಲ್ಲ ಸಾರ್ ಅಂವಗ ಹುಷಾರಿಲ್ಲಂತ ಎರಡು ದಿನಾ ರಜಾ ಬರದು ಇಟ್ಟಾನ ' ಎಂದ ರಾಮಾಂಜನಿ.


     ' ಏ ರಾಮಾಂಜನಿ ನಂಜಪ್ಪಗ ಒಂದು ನೋಟೀಸು ಬರಿ, ಮತ್ತ ಗಂಗಾಧರ ಸಾಹೇಬ್ರು ಹೇಳ್ಯಾರ ಅಂದ್ರ ಇಲ್ಲ ಅನ್ಲಿಕ್ಕೆ ಆಗ್ತದನು, ಏ ಮಂಜಪ್ಪ ಬಾ ಇಲ್ಲೆ ಅಲ್ಲೆ ಸರ್ಕಲ್ಲಗೆ ಹೋಗಿ ಒಂದು ವೆಹಿಕಲ್ ಮಾಡ್ಕೊಂಡು ಬಾ ' ಎಂದ ಪರಸಪ್ಪ.


     ಪರಸಪ್ಪನ ಮಾತು ಕೇಳಿಸಿಕೊಂಡ ಮಂಜಪ್ಪ ಗೌಡರು ' ಅಲ್ಲೋ ಗಂಗಾಧರ ನಾ ಇಲ್ಲೆ ಯೂಡಿ ಕೇಸಿಗೆ ವೆಹಿಕಲ್ ಮಾಡ್ಕೊಂಡು ಹೋಗೋಕ ಒದ್ದಾಡ್ತಾ ಇದೀನಿ, ಏನೋ ಈ ಪರಸಂದು ದರ್ಬಾರು ' ಎಂದರು.


     ' ಸಾರ್ ನಿಮಗ ಅವನ ವಿಷಯ ಗೊತ್ತಿಲ್ಲ ಅಂವ ಮಾಡೋ ಗತ್ತು ನೋಡೀದ್ರ ಅಂವ ಎಸ್ಪೀನೋ ಡೀಸಿನೋ ಆಗ ಬೇಕಿತ್ತು,  ತಪ್ಪಿ ಪೋಲೀಸ್ ಕೆಲಸಕ್ಕ ಬಂದಾನ ' ಎಂದರು ಗಂಗಾಧರ.


     ' ಅಲ್ಲ ಸಾರ್ ಹೋಗ್ಲಿ ಜನಾ ಇಲ್ಲ ಹೋಗಿ ಬರೋಣ ನಮ್ಮ ಮಂಜಪ್ಪನ ಕಷ್ದ ಕೇಳೋಣ ಅಂತಂದ್ರ ನೀವು ಹೀಂಗ ಮಾತಾಡ್ತೀರಿ, ಯಾರ್ನರ ಕಳಿಸಿಗೊಳ್ರಿ ' ಎಂದು ಪರಸಪ್ಪ ಸಿಟ್ಟಾದ. ದಫೇದಾರ ಗಂಗಾಧರ ತಮ್ಮ ಬಳಿ ಬಂದ ಮಂಜಪ್ಪನನ್ನು ಕುರಿತು


     ' ಇಲ್ಯಾಕ ಬಂದಿ ಮಂಜಪ್ಪ ಪರಸಪ್ಪ ಬರ್ತೇನಿ ಅಂದಾನ ಅವನ್ನ ಕರಕೊಂಡು ಹೋಗು ಈಗ ಕಳಸಲಿಕ್ಕೆ ಬೇರೆ ಜನಾ ಇಲ್ಲ ಅಂತ ಹೇಳ್ಲಿಲ್ಲ ನಿನಗ ' ಎಂದರು.


     ' ಸಾರ್ ನೀವು ಬೇರೆ ಜನ ಕಳಸದಿದ್ದರೂ ಪರವಾ ಇಲ್ಲ ಪರಸಪ್ಪನೋರ್ನ ಕಳಸಬ್ಯಾಡ್ರಿ ' ಎಂದು ಮಂಜಪ್ಪ ಕೋರಿಕೊಂಡ.


     ' ಗಂಗಾಧರ ಏನೋ ಇದು ಸ್ಠೇಶನ್ನಿಗೆ ಬರೋವ್ರೆಲ್ಲ ಜನ ಕಳಿಸೀದ್ರ ಸಾಕು ಖುಷಿಯಾಗಿ ಕರ್ಕೊಂಡು ಹೋಗ್ತಾರ, ಇದೇನೋ ಮಂಜಪ್ಪ ಹೀಂಗ ಹೇಳ್ತಾನ, ನನ್ನ ಸರ್ವಿಸ್ನ್ಯಾಗ ಇಂಥದನ್ನ ನಾನು ಕೇಳ್ತಿರೋದು ಇವತ್ತನ ನೋಡು ' ಎಂದು ಮಂಜಪ್ಪ ಗೌಡರು ಹಾಸ್ಯವಾಗಿ ಮಾತನಾಡಿದರು. 


     ' ಸಾರ್ ನಮ್ಮ ಪರಸಪ್ದ ಅಂದ್ರ ಒಂಥರಾ ಹೈಟೆಕ್ ಪೋಲೀಸ್ ಇದ್ಹಂಗ ಅವನ ಪ್ರಭಾವಳೀನ ಅಂಥಾದ್ದು ' ಎಂದ ರಾಮಾಂಜನಿ.


     ' ಏನೋ ಮಗನ ಹಾಂಗಂದ್ರ ' ಎಂದು ಪರಸಪ್ಪ ರೇಗಿದ.


     ' ಭಾಳ ಇಂಟರೆಸ್ಟಿಂಗ್ ಅದ ಬಿಡೋ ನಮ್ಮ ಪರಸನ ಕಥಿ ' ಎಂದರು ಮಂಜಪ್ಪ ಗೌಡ.


     ' ಎಲ್ಲಿ ಹೋದರೂ ನಮ್ಮ ಪರಸಪ್ಪ ಸಾಹೇಬರಿಗೆ ಭರ್ಜರಿ ಕೋಳಿ ಕಜ್ಜಾಯ ಆಗಬೇಕು ರಥದ ಏರ್ಪಾಡು ಇರಬೇಕು ಕಪ್ಪ ಕಾಣಿಕಿ ಇಡಬೇಕು ಹಂಗಿದ್ರ ಮಾತ್ರ ನಮ್ಮ ಮಹರಾಜರ ಸವಾರಿ ಹೊರಡೋದು ' ಎಂದ ರಾಮಾಂಜನಿ.


     ' ಏನೋ ಮಗನ ಏನೋ ಅದು ನೀ ಹೇಳೊದು ? ಮಾತಾಡೋಕು ಒಂದು ರೀತಿ ರಿವಾಜು ಇರಬೇಕು ಹ್ಯಾಂಗ್ ಮಾತಾಡ್ತಿ ನೋಡ್ ಹಂಗ. ನನ್ನ ಬಗ್ಗೆ ಒಂದರ ಕಂಪ್ಲೇಂಟ್ ಇದ್ದರ ಹೇಳಿ ಆಮ್ಯಾಲ ಮಾತಾಡು ' ಎಂದು ಪರಸಪ್ಪ ಮತ್ತೆ ಸಿಟ್ಟಾದ.


     ' ಪರಸ ನೀ ಇಲ್ಲಿಗೆ ಬಂದ ಮ್ಯಾಲ ಈ ಸೀಮ್ಯಾಗ ಕೋಳಿ ಸಂತಾನ ಕಡಿಮ್ಯಾಗಿ ಹೋತು, ಇನ್ನೊಂದೆರಡು ವರ್ಷ ನೀ ಇಲ್ಲೆ ಇದ್ರ ಕೋಳಿ ಸಂತಾನನ ನಿರ್ನಾಮ ಆಗಿ ಹೋಗತದ ' ಎಂದರು ಗಂಗಾಧರ.


     ಅವರ ಮಾತಿನಿಂದ ರೇಗಿದ ಪರಸಪ್ಪ ' ನಾವು ತಿನ್ನೊ ಕುಲದಾಗ ಹುಟ್ಟೇವಿ ತಿಂತೇವಿ, ನೀವು ತಿನಲಾರದವ್ರು ತಿನ್ನೋಕ ಸುರು ಮಾಡಿದ ಮ್ಯಾಲ ಹಿಂಗಾಗಿರೋದು ' ಎಂದು ಪರಸಪ್ಪ ಮರು ಏಟು ನೀಡಿದ.


     ' ಹೌದೇನೊ ಪರಸ ಗಂಗಾಧರನೂ ಕೋಳಿ ತಿಂತಾನೇನೊ ನನಗ ಗೊತ್ತ ಇರಲಿಲ್ಲ ನೋಡು ' ಎಂದು ಮಂಜಪ್ಪ ಗೌಡರು ಕೆಣಕಿದರು.


     ' ಮತ್ತೊಬ್ಬರು ಏನ್ ಮಾಡ್ತಾರ ಏನ್ ಬಿಡ್ತಾರ ಅದನ್ನೆಲ್ಲ ನಾವು ಆಡ್ಕೊಳ್ಳೊರಲ್ಲ, ಏನೋ ಕೆಲಸಕ್ಕ ಬಂದೇವಿ ನಾಲ್ಕ್ ಜನಕ್ಕ ಒಳ್ಳೇದು ಮಾಡಬೇಕು ಅನ್ನೋ ತತ್ವದವರು ನಾವು ' ಎಂದು ಪರಸಪ್ಪ ಅಸಹನೆ ವ್ಯಕ್ತ ಪಡಿಸಿದ.


     ' ಹೌದು ಹೌದು ನಿನ್ನ ಬಗ್ಗೆ ಮೊನ್ನೆ ಡೆಕ್ಕನ್ ಹೆರಾಲ್ಡ್ ನ್ಯಾಗ ಬಂದಿತ್ತು ನಾ ಓದಿದ್ದೆ ' ಎಂದು ರಾಮಾಂಜನಿ ಮತ್ತೆ ಕೆಣಕಿದ.


     ' ಹೌದಪ ನೀನು ಸರೀನ ಇರಭೌದು, ಆದರ ಮಂಜಪ್ಪ ನಿನ್ನ ಕಳಸ್ತೇವಿ ಅಂದರ ಯಾಕ ಬ್ಯಾಡ ಅಂತಾನ ಈ ವಿಷಯ ಹೇಳು ' ಎಂದರು ಗಂಗಾಧರ.


     ' ಅವನೊಬ್ಬ ತರಲೆ ಹೇಳ್ತಾನ ನೀವ್ ಕೇಳ್ರಿ ' ಎಂದ ಪರಸಪ್ದ.


     ' ಸಾರ್ ಅದರ ಗುಟ್ಟು ನಾ ಹೇಳ್ತೀನಿ, ಹೋದ ಸಲ ಮಳೆಗಾಲದಾಗ ಮಂಜಪ್ಪ ಇದ ತರಾ ನೀರಿನ ವ್ಯಾಜ್ಯ ತಂದಿದ್ದ,, ಆಗ ಪರಸನ್ನ ಆ ಅರ್ಜಿ ಬಗ್ಗೆ ಕಳಿಸಿತ್ತು, ಒಂದ ಸಲಕ ಪ್ರಕರಣ ಬಗೆ ಹರಿಲಿಲ್ಲ ಎರಡು ಮೂರು ಸಲ ಇವ ಹೋಗಿ ಬರಬೇಕಾತು. ಆವಾಗ ಮಂಜಪ್ಪ ಇಂವಗ ಕೋಳಿ ಕುಯ್ಸಿ ಕುಯ್ಸಿ ಸುಸ್ತಾಗಿ ಬಿಟ್ಟ ಅದಕ ಪರಸಪ್ಪನ್ನ ಕಳಸ ಬ್ಯಾಡ್ರಿ ಅಂತಾನ , ಹೌದಲ್ಲೊ ಮಂಜಪ್ಪ ಖರೆ ಹೇಳು ' ಎಂದ ರಾಮಂಜನಿ.


     ' ಏ ಸುಮ್ಮನಿರ್ರೋ ಪರಸ ಅಂಥಾವಲ್ಲ ವಿದ್ಯಾವಂತ ಬುದ್ಧ ಗಾಂಧಿ ಬಸವ ಅಂತ ಮಾತಾಡ್ತಾನ, ನೀವ ಅವನ್ನ ಸರಿಯಾಗಿ ತಿಳಕೊಂಡಿರಲಿಕ್ಕಿಲ್ಲ ' ಎಂದರು ಮಂಜಪ್ಪ ಗೌಡರು.


     ' ಅದೆಲ್ಲ ಬರೆ ಜನರ ತಲಿ ಮ್ಯಾಲ ಕೈ ಎಳಿಯಾಕ ಹೇಳೊ ಮಾತು ಅಸಲಿ ಹಕೀಕತ್ತ ಬ್ಯಾರೆ ಇರತದ ' ಎಂದ ರಾಮಂಜನಿ.


                                                                                                            ( ಮುಂದುವರಿದುದು )


 


 


 


 


 


 


 


 


 


 


 


 


 


 


 


 


 


 


 


 

Rating
No votes yet

Comments