ಅಪಾರ್ಟ್ ಮೆಂಟ್ ನೊಳಗಿನ ಬೊನ್ಸಾಯ್ ಬದುಕು..

ಅಪಾರ್ಟ್ ಮೆಂಟ್ ನೊಳಗಿನ ಬೊನ್ಸಾಯ್ ಬದುಕು..

ಜನಸಂಖ್ಯೆ ವಿಪರೀತವಾಗುತಿದ್ದಂತೆ ಸ್ವಂತ ಮನೆ ಬೇಕೆಂದು ಆಸೆ ಪಡುವ ಎಲ್ಲ ವ್ಯಕ್ತಿಗಳೂ ಮುಗಿಲೆತ್ತರಕ್ಕೇರುತ್ತಿರುವ ಭೂಮಿಯ ಬೆಲೆ ಕಂಡು ಆಗಸದಲ್ಲಿ ತಮ್ಮ ಸೈಟ್ ಗಳನ್ನ ಕೊಂಡುಕೊಳ್ಳುತ್ತಿದ್ದಾರೆ. ಸ್ವಲ್ಪ ಜಾಗ ಕಂಡರೆ ಸಾಕು,ಅಲ್ಲೊಬ್ಬ ಬಿಲ್ಡರ್ ನ ಉಗಮ. ಬೆಂಕಿಪೆಟ್ಟಿಗೆಯನ್ನು ಒಂದರ ಮೇಲೊಂದು ಇಡುವಂತೆ ಮನೆಗಳು. ತನ್ನ ಜಾಗ ಯಾವುದು ಅಂತ ಫ್ಲಾಟ್ ಕೊಂಡವನನ್ನು ಕೇಳಿದರೆ ಮುಗಿಲಿಗೆ ಕೈ ತೋರಿಸಿ ಯಾವುದೋ
ನಂಬರಿನ ಫ್ಲೋರ್ ಹೇಳುವನು. “ಮುಷ್ಟಿಯೊಳಗೆ ಸಮಷ್ಟಿ” ಎಂಬಂತೆ ಒಂದು ಕಾಂಪೌಂಡ್ ಒಳಗೆ ಎಲ್ಲವೂ ದೊರಕುವವು.ಈಜುಕೊಳ, ಒಳಾಂಗಣ ಕ್ರೀಡೆಗಳು, ಜಿಮ್, ಪಾರ್ಕಿಂಗ್ ಲಾಟ್..ಹೋಂ ಥಿಯೇಟರ್ ಗಳು..ಕಮ್ಯುನಿಟಿ ಹಾಲ್ಸ್…ಒಂದಾ ಎರಡಾ..!
ಆಫೀಸಿನ ದಾರಿಯಿಂದ ಮನೆವರೆಗೆ ಬಿಟ್ಟರೆ ಮನುಷ್ಯರು ಬೇರೆಲ್ಲೂ ಹೋಗಬೇಕೆಂದಿಲ್ಲ.ಎಲ್ಲವೂ ಕೂಗಳತೆ ದೂರ.ಮನೆಯೊಳಕ್ಕೇ ಇಂಟರ್ನೆಟ್ ಬಂದಿರುವುದರಿಂದ ಸಮಸ್ತ ವರದಿಯೂ ರೂಮೊಳಗೆ.
ನಿಧಾನವಾಗಿ ಭಾರತ ಅಮೇರಿಕಾ ಆಗುವತ್ತ?
ಊಟದ ಕೋಣೆ,ಅಡುಗೆ ಕೋಣೆ ಮತ್ತು ಹಜಾರ ಮೂರಕ್ಕೂ ನಡುವೆ ಗೋಡೆಗಳಿಲ್ಲ. ವಯಸ್ಸಾದವರು ನೆಮ್ಮದಿಯಾಗಿ ಕುಳಿತುಕೊಳ್ಳಲು ಜಗುಲಿಯೆಲ್ಲಿ?ಮಲಗುವ ಕೋಣೆಯಲ್ಲಿ ಕುಳಿತು ಕಿಟಕಿಯಿಂದ ಹೊರಗಗನವ ನೋಡಬೇಕಷ್ಟೆ…ಬಚ್ಚಲು ಕೋಣೆಯೊಳಗೆ ಯುರೋಪಿಯನ್ ಟಾಯ್ಲೆಟ್ಟು ….ಅಲ್ಲಿಯೂ ಅರಾಮಾಗಿ ಆಫೀಸಿನಲಿ ಕುಳಿತಂತೆ. ಪಕ್ಕದ ಮನೆಯವರಿಗೂ ನಮ್ಮ ಮನೆಗೂ ನಡುವೆ ಎಂಟಿಂಚು ಗೋಡೆ. ಅವರ ಮನೆಯಲ್ಲಿ ಅವತ್ತು ಯಾವುದರ ಪಲ್ಯ ಕೇಳಬೇಕೆಂದರೆ ಕಾಲಿಂಗ್ ಬೆಲ್ಲೇ ಬಡಿಯಬೇಕು. ಮಕ್ಕಳು ಆಟ ಆಡಬೇಕೆಂದರೆ ಆ ಕಡೆ ಲಿಫ್ಟು- ಈ ಕಡೆ ಮೆಟ್ಟಿಲು.ಮಧ್ಯೆ ಜಾಗ ಅವರಷ್ಟೆ.
ವಾಕಿಂಗಿಗೆ ಹೋಗೋಣ ಎಂದು ಗೇಟು ತೆಗೆದರೆ ರಸ್ತೆ. ಗಿಜಿಗುಟ್ಟುವ ಟ್ರಾಫಿಕ್ಕು. ಏಕಾಂಗಿತನದಂತೆ ಮುತ್ತುವ ಶಬ್ದಮಾಲಿನ್ಯ. ನೆರಳ ಸುಳಿವಿಲ್ಲದಂತೆ ಬಿಸಿಲ ಧಗೆ. ಉಸಿರಾಡದಂತೆ ಎಲ್ಲೆಲ್ಲೂ ಹೊಗೆ.

ವೀಕೆಂಡು ಬಂತೆಂದರೆ ಮಜಾ ಮಾಡಬೇಕೆಂಬಾಸೆ. ಸೇವ್.. ಸೇವ್ ಅಂತಲೇ ಶೇವ್ ಮಾಡುವ ಬಜಾರು. ಪ್ರಯಾಣ ಹೊರಟರೆ ಟ್ರಾಫಿಕ್ಕು ಜಾಮು.
ಯಾವ ಸ್ಥಳಕ್ಕೆ ಹೋದರೂ ದಿನವೆಲ್ಲಾ ಕಳೆದರೂ ಅಲ್ಲಿ ನಾವು ಪ್ರವಾಸಿಗರು ಮಾತ್ರ.
ಮತ್ತೆ ಅಪಾರ್ಟ್ ಮೆಂಟೊಳಗೆ ನಮ್ಮದೇ ಪ್ರಪಂಚದೊಳಗೆ.
ಹಾಗಾದರೆ ಹಕ್ಕಿಗಳು ಗೂಡು ಕಟ್ಟುವುದ ನೋಡುವುದು ಹೇಗೆ?
ಮೊಟ್ಟೆಗಳಿಗೆ ಕಾವು ನೀಡುವುದು, ಕಾಳು ನೀಡುವುದನ್ನು, ಮೀನಿನ ಈಜುವಿಕೆ.. ಮತ್ತಿತರ ವಿಸ್ಮಯಗಳನ್ನು ನೋಡುವುದು ಹೇಗಂದಿರಾ?
ಅದಕ್ಕಿದೆಯಲ್ಲಾ ಡಿಸ್ಕವರಿ ಚಾನೆಲ್ಲು,ಆನಿಮಲ್ ಪ್ಲಾನೆಟ್ಟು.
ಕೊನೆಗೂ ಅದೇ ಪ್ರಪಂಚ. ಡ್ರಾಯಿಂಗ್ ರೂಮಿನ ಇಪ್ಪತ್ತೊಂಬತ್ತಿಂಚಿನ ಟೀವಿಯೆ ನಮಗೆ ಜೂ, ಸಿನೆಮಾ ಹಾಲ್, ಪ್ರೇಕ್ಷಣೀಯ ಸ್ಥಳ ಎಲ್ಲಾ.
ನೀರ ಹರಿವಿನ ಜುಳುಜುಳು ಕೇಳಬೇಕೆಂದರೆ ಮನೆಯೊಳಗೇ ಡಿ.ಟಿ.ಎಸ್ಸು.
ಎಲ್ಲಾದಕ್ಕೂ ನಾವು ಪ್ರೇಕ್ಷಕರು.

ಆಳವಾಗಿ ಯಾವುದನ್ನೂ ಅನುಭವಿಸಲಾಗದ ಸಂವೇದನಾ ವಂಚಿತರು.

ಗಾಳ ಹಾಕಿ ಮೀನು ಹಿಡಿವ ಖುಶಿ, ಗೆಳೆಯರೆಲ್ಲಾ ಸೇರಿ ಶಾಲೆಗೆ ಹೋಗುವಾಗ ಭಾರಿ ಮಳೆಗೆ ಕೊಡೆ ಹಾರಿ ಹೋಗದ ಹಾಗೆ ಹಿಡಿವುದು, ಗದ್ದೆ ಬಯಲಿನ ನಡುವಿನ ಗೆರೆ ದಾರಿ,ಮಧ್ಯೆ ಮಧ್ಯೆ ನೀರ ಹರಿವಿಗಾಗಿ ಬಿಟ್ಟ ಜಾಗ, ಅಲ್ಲಿಂದ ಕಳ್ಳತನದಿ ನುಸುಳುವ ಮೀನ ಚಲನೆ, ನೀರು ಕುಡಿವ ಹಕ್ಕಿಗಳು, ಮೊದಲ ಮಳೆಯ ಮಣ್ಣಿನ ಘಮ , ಸಂಜೆಯಾದೊಡೆ ಅಜ್ಜಿಯ ವಿಸ್ಮಯ ಕತೆಗಳು, ಮನೆಯವರೆಲ್ಲಾ ಒಂದಾಗಿ ನೆಲದ ಮೇಲೆ ಕುಳಿತು ಊಟ ಮಾಡುವ ಸುಖ, ಒಂದೇ ಕೋಣೆಯಲ್ಲಿ ಮನೆಯವರೆಲ್ಲಾ ಹರಟುತ್ತಾ ಮಲಗುವುದು, ಬೆಳಿಗ್ಗೆ ಏಳುತ್ತಲೇ ಕಟ್ಟಿಗೆಯಿಂದ ಬಿಸಿಮಾಡಿದ ಹಂಡೆ ನೀರು, ಅಪ್ಪನ ಪೂಜೆ,ಮಂಗಳಾರತಿ ಸಮಯಕ್ಕೆ ಸರಿಯಾಗಿ ಕೂಗುವ ನಾಯಿ, ವಯಸ್ಸಾಗುತ್ತಾ ಆಗುತ್ತಾ ಅಪ್ಪನೆಡೆಗೆ ಭಯ ತೊಲಗಿ ಸ್ನೇಹ ಬೆಳೆವ ಪರಿ..

ಅಪಾರ್ಟ್ ಮೆಂಟ್ ನಲ್ಲಿ ಬೆಳೆವ ಚಿಕ್ಕ ಮಗು ಈ ವೇಗದ ಬದುಕಿನಲ್ಲಿ ಮಿತಿ ಮೀರಿದ ಜನಸಂಖ್ಯೆಯ ಲೋಕದಲ್ಲಿ ಅರಳಿ ನಿಲ್ಲುವ ಅರಳಿ ಮರವಾಗದೇ ಬೊನ್ಸಾಯ್ ಅರಳಿ ಮರವಾಗುತ್ತದಲ್ಲವಾ? ಸ್ವತಂತ್ರವಾಗಿ ಬೆಳೆವ ಪ್ರಕೃತಿಯೊಡನೆ ಸಾಮರಸ್ಯ ಬೆಳೆಸಿಕೊಳ್ಳುವುದ ಅರಿವ ವಿಸ್ಮಯಗಳೆಡೆಗೆ ಬೆರಗು ಕಂಗಳಿಂದ ನೋಡುವ, ತಮ್ಮ ಅನುಭವಗಳ ಮೂಲಕ ಕಲಿತುಕೊಳ್ಳುವ ಪ್ರಕೃತಿಯನ್ನು ಉಳಿಸಿ ಬೆಳೆಸುವ, ಬದುಕೇ ಸೋಜಿಗ ಎಂಬ ಭಾವನೆಗಳನ್ನು ಮಕ್ಕಳಿಗೆ ಮಿಸ್ ಮಾಡಿಸುತಿದ್ದೆವಾ?

ನಾವು ನೀವೆಲ್ಲರೂ ತಣ್ಣಗಿನ ಸಮಯದಲ್ಲಿ ಗಂಭೀರವಾಗಿ ಕುಳಿತು ಅಲೋಚಿಸಬೇಕಾದ ವಿಷಯವಿದು…!

Rating
No votes yet

Comments