ಅಪ್ಪನ ದುಡ್ಡು ಅಮ್ಮನ ಸೀರೆ..... (1)

ಅಪ್ಪನ ದುಡ್ಡು ಅಮ್ಮನ ಸೀರೆ..... (1)

ಅಪ್ಪನ ದುಡ್ಡು ಅಮ್ಮನ ಸೀರೆ.....
ಇದೇನಿದು ಅಪ್ಪನ ದುಡ್ಡು ಅಮ್ಮನ ಸೀರೆ ಅಂತ ಆಶ್ಚರ್ಯ ಆಗ್ತಾ ಇದೆಯಾ? ಇದು ಹಳೇ ಕಾಲದ ಒಗಟು. "ಅಪ್ಪನ ದುಡ್ಡು ಎಣಿಸಲಾಗದು...ಅಮ್ಮನ ಸೀರೆ ಮಡಿಚಲಾಗದು " ಒಗಟು ಬಿಡಿಸಿ ಹೇಳೆ ಅಂತ ಯಾರಾದ್ರೂ ಕೇಳಿದಾಗ ತಲೆ ಇಡೀ ಕೆರಕೊಂಡು, ಉತ್ತರ ಸಿಗದೆ ಪರದಾಡಿದ್ರು ಕೂಡ ಸೋಲು ಒಪ್ಪಿಕೊಳ್ಳಲು ತಯಾರಿಲ್ಲದೆ, ಇದೆಂತ ಒಗಟು, ಇದ್ರಲ್ಲಿ ಹುರುಳಿಲ್ಲ ತಿರುಳಿಲ್ಲ ಅಂತ ಒಗಳು ಕೇಳಿದವರ ಹತ್ತಿರ ಜಗಳ ಮಾಡಿದ್ದು ಉಂಟು. ಆದ್ರೂ ಎಷ್ಟೋ ಒಗಟುಗಳನ್ನು ಬಿಡಿಸಿದ್ರು, ಎಷ್ಟೋ ಒಗಟುಗಳನ್ನು ಕೇಳಿದ್ರು, ಮನಸಲ್ಲಿ ತುಂಬಾ ಅಚ್ಚು ಒತ್ತಿ ನಿಂತ ಒಗಟಿದು. ಉತ್ತರ ತುಂಬಾ  ಸುಲಭ......"ಆಕಾಶ ಅಮ್ಮನ ಸೀರೆ ತರಹ ಅದನ್ನು ಮಡಿಚಲಿಕ್ಕೆ ಆಗುವುದಿಲ್ಲ. ಆಕಾಶದಲ್ಲಿನ ನಕ್ಷತ್ರಗಳು ಅಪ್ಪನ ದುಡ್ಡಿನ ತರಹ, ಎಣಿಸಿ ಮುಗಿಸ್ಲಿಕ್ಕೆ ಆಗೋದಿಲ್ಲ. ಇದು ಒಗಟಿನ ಒಂದು ಅರ್ಥ. ಈ ಒಗಟುಗಳೇ ಹೀಗೆ. ಬಿಡಿಸೀದಷ್ಟು ಕಗ್ಗಂಟು. ಇನ್ನೊಂದು ರೀತಿಯಲ್ಲಿ ಹೇಳಬೇಕು ಅಂದ್ರೆ, ಅಮ್ಮನ  ಮನಸ್ಸು ಆಕಾಶದಷ್ಟೆ ವಿಶಾಲ. ಅದಕ್ಕೆ ಕೊನೆ ಮೊದಲಿಲ್ಲ. ಅದನ್ನು ಮಡಿಚಿ ಪುಟ್ಟದಾಗಿ ಬೊಗಸೆಯಲ್ಲಿ ಇಟ್ಟು ಆ ಪ್ರೀತಿಯನ್ನು ಅಳಿಯಲು ಸಾಧ್ಯ ಇಲ್ಲ. ಅದೇ ರೀತಿಯಲ್ಲಿ ಅಪ್ಪ ಬದುಕಿನುದ್ದಕ್ಕೂ ತಂದು ಕೊಡೋ ಸ್ಟಾರ್‌ಗಳಿಗೆ ಲೆಕ್ಕ ಇಲ್ಲ. ಚಿಕ್ಕ ಮಕ್ಕಳಿಗೆ ಶಾಲೆಯಲ್ಲಿ ಟೀಚರ್ ಪುಸ್ತಕದಲ್ಲಿ ಸ್ಟಾರ್ ಹಾಕಿದ್ರು ಅಂದ್ರೆ ಅದೇ ಮಕ್ಕಳಿಗೆ ದೊಡ್ಡ ಖುಷಿ. 'ಅಮ್ಮ, ನನಗೆ ಇವತ್ತು ಟೀಚರ್ 2 ಸ್ಟಾರ್ ಕೊಟ್ಟಿದಾರೆ' ಅಂತ ಹೇಳುತ್ತಾ, ಪುಸ್ತಕ ತೋರಿಸುವ ಮಗುವಿನ ಮುಖದ ಖುಷಿ ಸವಿಯಾಲಿಕ್ಕೆ ಭಾರೀ ಚಂದ. ಅಂತಹ ಎಷ್ಟೋ ಸ್ಟಾರ್‌ಗಳನ್ನು ಅಪ್ಪ ಬದುಕಿನ ಉದ್ದಕ್ಕೂ ಬೆನ್ನು ತಟ್ಟಿ, ಪ್ರೋತ್ಸಾಹ ಕೊಟ್ಟು ಬದುಕಿನ ಹಲವು ಘಟ್ಟಗಳಲ್ಲಿ ಜೊತೆ ನಿಂತು ಕೊಟ್ಟಿರುತ್ತಾರೆ.

ಪ್ರಾಚೀನ ಕಾಲದಿಂದಲೂ, ಗೃಹಸ್ತಾಶ್ರಮಕ್ಕೆ ಬಹಳ ಪ್ರಾಧಾನ್ಯತೆ. ಗಂಡ, ಮನೆ ಮಕ್ಕಳು ಅಂತ ಬದುಕು ಸಾಗಿಸೊದ್ರಲ್ಲಿ 18, 250 ದಿನಗಳು ಕಳೆದೆ ಹೋಗಿರುತ್ತದೆ.   ಮತ್ತೆ ಅದೇ ಸಂಸಾರ ಚಕ್ರ ತಿರುಗುತ್ತಾ ಇರುತ್ತದೆ...... ಮಗಳು ಅಮ್ಮನಾಗುತ್ತಾಳೆ, ಮಗ ಅಪ್ಪನಾಗುತ್ತಾನೆ..... ಮತ್ತೆ ಅದೇ ವಿಶಾಲ ಪ್ರೀತಿಯ ಆಗರ, ಅದೇ ನಕ್ಷತ್ರಗಳ ಸರಮಾಲೆಯ ಲೆಕ್ಕಾಚಾರ....ಎಂದಿಗೆ ನಮ್ಮ ಮಕ್ಕಳಿಗೆ ಪ್ರೀತಿಯ ಧಾರೆ ಎರೆದು, ಮಕ್ಕಳ ಒಳ್ಳೆ ಕಾರ್ಯಗಳಿಗೆ ಪ್ರೋತ್ಸಾಹ ಕೊಟ್ಟು ನಮಗಿಂತ ಒಂದು ಹೆಜ್ಜೆ ಮುಂದೆ ಹೋಗಲು ಅನುವು ಮಾಡಿ ಕೊಡುತ್ತೇವೋ , ಅಂದಿಗೆ ಸಂಸಾರದಲ್ಲಿನ ಜೀವನ ಸಾರ್ಥಕ.  

ಅಮ್ಮನ ಸೀರೆ ಮಡಿಚಲಾಗದು....

ಅಪ್ಪನ ದುಡ್ಡು ಎಣಿಸಲಾಗದು.....

ಒಬ್ಬರ ಪ್ರೀತಿ ಹೊತ್ತು ಹೊತ್ತಿಗೆ ಉಣಬಡಿಸಿ, 

ಜೀವನದ ಮೌಲ್ಯಗಳ ಕಲಿಸಿದರೆ, 

ಮತ್ತೊಬ್ಬರ ಶಿಸ್ತು, ಜೀವನ ಪೂರ್ತಿ , 

ಛಲದಿಂದ ದುಡಿದು ತಿನ್ನೋ ರೀತಿ ಕಲಿಸಿ, 

ಬಾಳಿನ ಗುರಿಯೆಡೆಗೆ, ಹೆಮ್ಮೆಯಿಂದ ನಡೆವ ,

ಪಥವ ತೋರಿ ಬೆಳೆಸುತಿದೆ ,

ಆಕಾಶ ಇರುವುದಕ್ಕೆ ನಕ್ಷತಕ್ಕೆಬೆಲೆ, 

ನಕ್ಷತ್ರ ಇರುವುದಕ್ಕೆ ಆಕಾಶಕ್ಕೆ ನೆಲೆ, 

ಇದು ಬಿಡಿಸಲಾಗದ ಒಗಟು, 

ಆಕಾಶ - ನಕ್ಷತ್ರಗಳ ನಂಟು. 

ಒಂದನು ಬಿಟ್ಟು ಒಂದಿರಲಾರದು, 

ಜೊತೆ ಸೇರಿ ಬಾಳುತ್ತ , 

ಹಲವು  ಭೂಮಿಗಳ ಆಶ್ರಯ ದಾತ ಎನಿಸಿಕೊಂಡಿರುವರು. 

                                - ಗೀತಾ ಪ್ರದೀಪ್

Rating
Average: 5 (2 votes)